ಆಸ್ತಿ ಸಂಬಂಧಿತ ನಿಯಮಗಳು ಮತ್ತು ಕಾನೂನುಗಳಿಗೆ ಸಂಬಂಧಿಸಿದಂತೆ ಜನರಿಗೆ ಹತ್ತಾರು ಗೊಂದಲ, ಅನುಮಾನ, ಪ್ರಶ್ನೆ ಹೀಗೆ ಸಾಮಾನ್ಯ ಮಾಹಿತಿ ಕೊರತೆ ಇರುತ್ತದೆ. ಈ ಮಾಹಿತಿ ಕೊರತೆಯಿಂದಾಗಿಯೇ ಕೆಲವು ಆಸ್ತಿ (Property )ಸಂಬಂಧಿತ ವಿವಾದಗಳು ಸಂಭವಿಸುತ್ತವೆ. ಹೀಗಾಗಿ ಕೆಲ ಅಡಚಣೆಗಳು, ವಿವಾದವನ್ನು ತಪ್ಪಿಸಿಕೊಳ್ಳಲು ಆಸ್ತಿ ಸಂಬಂಧಿತ ನಿಯಮಗಳು ಮತ್ತು ಕಾನೂನುಗಳ ಬಗ್ಗೆ ಸಾಮಾನ್ಯ ತಿಳುವಳಿಕೆಯನ್ನು ಹೊಂದಿರುವುದು ಅವಶ್ಯಕ. ಅದರಲ್ಲಿಯೂ ಪೂರ್ವಜರ ಆಸ್ತಿ (Ancestral Property) ವಿಚಾರದಲ್ಲಿ ಹಲವು ಗೊಂದಲುಗಳು ಇರುತ್ತದೆ. ಹೌದು, ಪೂರ್ಜಜರ ಆಸ್ತಿಯನ್ನು ಮಾರಾಟ ಮಾಡುವುದು ತುಂಬಾ ಸುಲಭದ ಮಾತಲ್ಲ. ಇದಕ್ಕೂ ಹತ್ತಾರು ಕಾನೂನು (Law) ಕಟ್ಟುಪಾಡುಗಳಿರುತ್ತವೆ. ಹಾಗಾದರೆ ಪೂರ್ವಜರ ಆಸ್ತಿ ಮಾರಾಟ ಮಾಡುವಾಗ ತೆಗೆದುಕೊಳ್ಳಬೇಕಾದ ಕಾನೂನು ಕ್ರಮಗಳೇನು? ಪೂರ್ವಜರ ಆಸ್ತಿಯನ್ನು ಹೇಗೆ ಮತ್ತು ಯಾರ ಒಪ್ಪಿಗೆಯೊಂದಿಗೆ ಮಾರಾಟ ಮಾಡಬಹುದು? ಎಂಬುದನ್ನು ಇಲ್ಲಿ ತಿಳಿಯೋಣ.
ಪೂರ್ವಜರ ಆಸ್ತಿ ಎಂದರೇನು?:
ಪೂರ್ವಜರಿಂದ ಬಂದ ಯಾವುದೇ ಆಸ್ತಿಯನ್ನು ಪೂರ್ವಜರ ಆಸ್ತಿ ಎಂದು ಕರೆಯಲಾಗುತ್ತದೆ. ಆಸ್ತಿಯನ್ನು ನಾವು ನಮ್ಮ ದೇಶದಲ್ಲಿ ಎರಡು ವರ್ಗವನ್ನಾಗಿ ವಿಭಜಿಸುತ್ತೇವೆ. ಮೊದಲನೆಯದು ವ್ಯಕ್ತಿಯು ಸ್ವತಃ ಖರೀದಿಸಿದ ಅಥವಾ ಉಡುಗೊರೆ, ದೇಣಿಗೆ ಅಥವಾ ಯಾರೊಬ್ಬರಿಂದಲಾದರು ಹಕ್ಕುಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಪಡೆದಿರುವುದು. ಅಂತಹ ಆಸ್ತಿಯನ್ನು ಸ್ವಯಂ ಸ್ವಾಧೀನಪಡಿಸಿಕೊಂಡ ಆಸ್ತಿ ಎಂದು ಕರೆಯಲಾಗುತ್ತದೆ.
ಎರಡನೇಯದಾಗಿ ಪೂರ್ವಿಕರ ಆಸ್ತಿ. ಪೂರ್ವಜರ ಆಸ್ತಿಯು ಒಬ್ಬರ ಪೂರ್ವಜರಿಗೆ ಸೇರಿದ ಮತ್ತು ತಲೆಮಾರುಗಳ ಮೂಲಕ ಹಾದುಹೋಗುವ ಯಾವುದೇ ಆಸ್ತಿಯಾಗಿದೆ. ಪೂರ್ವಜರ ಆಸ್ತಿಗಳನ್ನು ಅವರ ವಿತ್ತೀಯ ಪ್ರಯೋಜನಗಳಿಗಾಗಿ ಮಾತ್ರವಲ್ಲದೆ ಅವರ ಭಾವನಾತ್ಮಕ ಮೌಲ್ಯಕ್ಕೂ ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ರೀತಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಪೂರ್ವಜರ ಆಸ್ತಿಯ ವರ್ಗದಲ್ಲಿ ಇರಿಸಲಾಗುತ್ತದೆ. ಸ್ವಯಂ ಸ್ವಾಧೀನಪಡಿಸಿಕೊಂಡ ಆಸ್ತಿಗೆ ಹೋಲಿಸಿದರೆ ಪೂರ್ವಜರ ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದ ಕಾನೂನುಗಳು ಸ್ವಲ್ಪ ಕಠಿಣವಾಗಿವೆ ಎನ್ನಬಹುದು.
ಇದನ್ನೂ ಓದಿ: Budget 2023: ಈ ಬಜೆಟ್‌ನಲ್ಲಿ ಮತ್ತಷ್ಟು ಸ್ಮಾರ್ಟ್ ಆಗುತ್ತಾ ಸಿಟಿಗಳು? ಹೆಚ್ಚಿದ ನಿರೀಕ್ಷೆ!
ಪೂರ್ವಜರ ಆಸ್ತಿಯನ್ನು ಎಷ್ಟು ತಲೆಮಾರುಗಳು ಪಡೆಯಬಹುದು?:
ಪೂರ್ವಜರ ಆಸ್ತಿಯ ಮೇಲೆ ಕುಟುಂಬದ ನಾಲ್ಕು ತಲೆಮಾರುಗಳ ಹಕ್ಕು ಇರುತ್ತದೆ. ನಾಲ್ಕನೇ ತಲೆಮಾರಿನವರೆಗೂ ಆಸ್ತಿ ಅವಿಭಜಿತವಾಗಿ ಉಳಿಯಬೇಕೆಂಬುದು ಒಂದೇ ಷರತ್ತು. ಅಂತಹ ಪೂರ್ವಿಕರ ಆಸ್ತಿಯ ವಿಷಯಕ್ಕೆ ಬಂದರೆ, ಮಗನಿಗೆ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುವ ಹಕ್ಕು ಹುಟ್ಟಿನಿಂದಲೇ ಬರುತ್ತದೆ. ಹೀಗಾಗಿ, ಮಗ ದೂರವಾಗಿದ್ದರೂ ಅಥವಾ ಪಿತ್ರಾರ್ಜಿತವಾಗಿದ್ದರೂ ಸಹ, ಆಸ್ತಿಯ ಹಕ್ಕು ಮಾನ್ಯವಾಗಿರುತ್ತದೆ.
ಪೂರ್ವಿಕರ ಆಸ್ತಿಯನ್ನು ಮಾರಾಟ ಮಾಡಲು ಯಾರ ಅನುಮತಿ ಬೇಕು?:
ಈ ಆಸ್ತಿಯನ್ನು ಮಾರಾಟ ಮಾಡಲು ನಿರ್ಧಾರ ತೆಗೆದುಕೊಳ್ಳಬೇಕಾದರೆ, ಯಾವುದೇ ವ್ಯಕ್ತಿಯ ವೈಯಕ್ತಿಕ ಒಪ್ಪಿಗೆಯ ಆಧಾರದ ಮೇಲೆ ಈ ಆಸ್ತಿಯನ್ನು ಮಾರಾಟ ಮಾಡಲಾಗುವುದಿಲ್ಲ. ಮೇಲೆ ಹೇಳಿದಂತೆ ಪೂರ್ವಜರ ಆಸ್ತಿಯ ಮೇಲೆ ಕುಟುಂಬದ ನಾಲ್ಕು ತಲೆಮಾರುಗಳ ಹಕ್ಕು ಇರುತ್ತದೆ. ಹೀಗಾಗಿ ಪೂರ್ವಜರ ಆಸ್ತಿಯನ್ನು ಮಾರಾಟ ಮಾಡಲು, ಪ್ರತಿ ಪಾಲುದಾರರ (ಹೆಣ್ಣುಮಕ್ಕಳನ್ನು ಒಳಗೊಂಡಿರುವ) ಒಪ್ಪಿಗೆ ಅಗತ್ಯ. ಎಲ್ಲಾ ಹಕ್ಕುದಾರರು ಆಸ್ತಿ ಮಾರಾಟಕ್ಕೆ ಒಪ್ಪಿಗೆ ನೀಡಿದಾಗ, ಕಾನೂನು ವಿಧಾನಗಳ ಪ್ರಕಾರ ಪೂರ್ವಜರ ಆಸ್ತಿಯನ್ನು ಒಬ್ಬರು ಮಾರಾಟ ಮಾಡಬಹುದು.
ನೀವು ಊರಿನಲ್ಲಿ ಪೂರ್ವಜರ ಆಸ್ತಿ ಹೊಂದಿದ್ದು ಅದನ್ನು ಮಾರಾಟ ಮಾಡಬೇಕು ಎಂದರೆ ನಿಮ್ಮೊಬ್ಬರ ನಿರ್ಧಾರ ಇಲ್ಲಿ ಪರಿಗಣನೆಗೆ ಬರುವುದಿಲ್ಲ. ಬದಲಾಗಿ ಆಸ್ತಿಯ ಎಲ್ಲಾ ಹಕ್ಕುದಾರರ ನಿರ್ಧಾರವೂ ಬೇಕಾಗುತ್ತದೆ. ಒಂದೊಮ್ಮೆ ಪೂರ್ವಜರ ಆಸ್ತಿಯನ್ನು ಅದಕ್ಕೆ ಸಂಬಂಧಿಸಿದ ಪಕ್ಷಗಳ ಒಪ್ಪಿಗೆ ಅಥವಾ ಸಮಾಲೋಚನೆಯಿಲ್ಲದೆ ಮಾರಾಟ ಮಾಡಿದರೆ, ಈ ಬಗ್ಗೆ ಕಾನೂನು ಕ್ರಮಕ್ಕೆ ಮುಂದಾಗಬಹುದು. ಈ ಬಗ್ಗೆ ನ್ಯಾಯಾಲಯದಿಂದ ನೋಟಿಸ್ ಸಹ ಕಳುಹಿಸಬಹುದು. ಈ ಕಾನೂನು ಕ್ರಮದ ಮೂಲಕ ಆಸ್ತಿಯ ಮಾರಾಟಕ್ಕೆ ತಡೆ ವಿಧಿಸಬಹುದು ಅಥವಾ ಮಾರಾಟವನ್ನು ರದ್ದುಗೊಳಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ