ಕೊರೊನಾ (Corona) ಇಡೀ ಜಗತ್ತು, ದೇಶವನ್ನು ಬಾಧಿಸಿತ್ತು. ಆಗಿನ್ನೂ ವ್ಯಾಕ್ಸಿನ್ ಆಗಲಿ, ಯಾವುದೇ ಔಷಧಿಗಳಾಗಲಿ ಇರಲಿಲ್ಲ. ಇಂತಹ ವೇಳೆ ಕೊರೊನಾದ ಜ್ವರದ ನಿಯಂತ್ರಣಕ್ಕೆ ಡೊಲೋ ಮಾತ್ರೆ ಬಹಳಷ್ಟು ಮಂದಿಯ ಜೀವವನ್ನು ಉಳಿಸಿತ್ತು. ಕೊರೋನಾ ಸಂದರ್ಭದಲ್ಲಿ ಜೀವಾಮೃತವಾಗಿದ್ದ ಡೋಲೋ 650 ಮಾತ್ರೆ (Dolo 650 Pill) ಬಳಕೆ ಯಥೇಚ್ಛವಾಗಿಯೇ ಇತ್ತು. ಅಂದಿನಿಂದ ಇಂದಿನವರೆಗೂ ಡೋಲೋ ಮಾತ್ರೆ ತಯಾರಿಕಾ ಕಂಪನಿ (Dolo Pill Manufacturing Company) ಲಾಭದಲ್ಲಿಯೇ ಮುಂದುವರೆದಿದೆ.
ಡೋಲೋ ಮಾತ್ರೆಯಿಂದ ಗಳಿಸಿದ ಲಾಭ?
ಡೋಲೋ 650 ಮಾತ್ರೆಯ ತಯಾರಿಕಾ ಕಂಪೆನಿಯೇ ಮೈಕ್ರೋ ಲ್ಯಾಬ್ಸ್. ಇದರ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರೇ ದಿಲೀಪ್ ಸುರಾನಾ. ಕೊರೋನಾ ವೇಳೆ ಮೈಕ್ರೋ ಲ್ಯಾಬ್ಸ್ ಕೋಟಿ ಕೋಟಿ ಆದಾಯ ಗಳಿಸಿತ್ತು. ಸುಮಾರು 400 ಕೋಟಿ ರೂ. ಲಾಭವನ್ನು ಮೈಕ್ರೋ ಲ್ಯಾಬ್ಸ್ ಗಳಿಸಿತ್ತು.
ಬಂಗಲೆಯ ಬೆಲೆ ಎಷ್ಟು?
ಮೈಕ್ರೋ ಲ್ಯಾಬ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ದಿಲೀಪ್ ಸುರಾನಾ ಅವರು ಬೆಂಗಳೂರಿನಲ್ಲಿ ಬೃಹತ್ ಬಂಗಲೆಯನ್ನು ಖರೀದಿಸಿದ್ದು, ಇದರ ಬೆಲೆ ಕೇಳಿದರೆ ಆಶ್ಚರ್ಯವಾಗುವುದಂತು ಸತ್ಯ. ಹೌದು ಅವರು ಸುಮಾರು 66 ಕೋಟಿ ರೂ. ಬೆಲೆ ಬಾಳುವ ಬೃಹತ್ ಬಂಗಲೆಯನ್ನು ಖರೀದಿಸಿದ್ದಾರೆ. ಇದು ಬೆಂಗಳೂರು ನಗರದಲ್ಲೇ ಹೆಚ್ಚು ದುಬಾರಿಯ ಆಸ್ತಿಯಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಆನ್‌ಲೈನ್ ಮಾರುಕಟ್ಟೆಯಲ್ಲಿ 2 ತಿಂಗಳಲ್ಲಿ 25 ಪಟ್ಟು ಆರ್ಡರ್ ಪಡೆದ ONDC!
ಎಷ್ಟು ಅಡಿ ವಿಸ್ತಾರ ಹೊಂದಿದೆ?
12,043 ಚದರ ಅಡಿ ವಿಸ್ತಾರ ಹೊಂದಿರುವ ಭೂಮಿಯಲ್ಲಿ 8373 ಚದರ ಅಡಿ ಜಾಗದಲ್ಲಿ ಈ ಬಂಗಲೆಯನ್ನು ನಿರ್ಮಿಸಲಾಗಿದೆ. ದಿಲೀಪ್ ಸುರಾನಾ ಅವರು ಜಿಜಿ ರಾಜೇಂದ್ರ ಕುಮಾರ್, ಸಾಧನಾ ಮತ್ತು ಮನು ಗೌತಮ್ ಅವರಿಂದ ಆಸ್ತಿಯನ್ನು ಖರೀದಿಸಲಾಗಿದೆ. ಒಪ್ಪಂದದ ಛಾಪಾ ಕಾಗದಕ್ಕಾಗಿಯೇ 3.36 ಕೋಟಿ ರೂ. ಪಾವತಿಸಿದ್ದಾರೆ. ಸುರಾನಾ ಅವರ ತಂದೆ ಜಿಸಿ ಖುರಾನಾ ಅವರು ಹಿತ ಮಿತವಾದ ಬದುಕನ್ನು ನಡೆಸುತ್ತಿದ್ದುರಿಂದ ಸತತ 20 ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ಇದೀಗ ಕೋಟ್ಯಾಂತರ ರೂ. ಬೆಲೆಬಾಳುವ ಬಂಗಲೆಯ ಮಾಲೀಕರಾಗಿದ್ದಾರೆ.
ಕೊರೊನಾ ಮೊದಲು ಮಾರಾಟವಾಗುತ್ತಿದ್ದದ್ದು ಎಷ್ಟು?
ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ದಿಲೀಪ್ ಸುರಾನಾ ಮತ್ತು ಅವರ ಕಂಪನಿ ಮೈಕ್ರೋ ಲ್ಯಾಬ್ಸ್ ಡೋಲೋ -650 ಅನ್ನು ಮಾರಾಟ ಮಾಡಿತು. ಇದರಿಂದ ಬದುಕಿನ ಅದೃಷ್ಟವೇ ಬದಲಾಯಿತು. ಊಹಿಸಲಾರದಷ್ಟು ಮೈಕ್ರೋ ಲ್ಯಾಬ್ಸ್ ಲಾಭವನ್ನು ತನ್ನದಾಗಿಸಿಕೊಂಡಿತು.
ವರದಿಗಳ ಪ್ರಕಾರ, ಕಂಪನಿಯು 2020ರಲ್ಲಿ ಡೋಲೋ -650 ಅನ್ನು ಮಾತ್ರ ಮಾರಾಟ ಮಾಡುವ ಮೂಲಕ 400 ಕೋಟಿ ರೂ. ಗಳಿಸಿತು. ಸಾಂಕ್ರಾಮಿಕ ರೋಗವು ಜಗತ್ತನ್ನು ಬಾಧಿಸುವ ಮೊದಲು ಕಂಪನಿಯು 7.5 ಕೋಟಿ ಬೆಲೆಯ ಡೋಲೋಗಳನ್ನು ಮಾರಾಟ ಮಾಡುತ್ತಿತ್ತು,
ಮಾರಾಟ ದ್ವಿಗುಣಗೊಂಡಿದ್ದು ಯಾವಾಗ?
ಆದಾಗ್ಯೂ, ಕೊರೊನಾ ವೈರಸ್ ಸಮಯದಲ್ಲಿ ಡೋಲೋ -650 ಮಾತ್ರೆಯ ಮಾರಾಟವು ದ್ವಿಗುಣಗೊಂಡಿತು. ಮಾರ್ಚ್ 2019 ಮತ್ತು ಮಾರ್ಚ್ 2021ರ ನಡುವೆ ಲಾಭವು ಶೇಕಡಾ 244 ರಷ್ಟು ಏರಿಕೆಯಾಗಿದೆ. ಇಂದು ಸುರಾನ ಕುಟುಂಬದ ನಿವ್ವಳ ಮೌಲ್ಯವು ಸುಮಾರು 26,000 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.
ದಿಲೀಪ್ ಸುರಾನಾ ಮತ್ತು ಅವರ ಕಂಪನಿ ಮೈಕ್ರೋ ಲ್ಯಾಬ್ಸ್ ಬೆಳವಣಿಗೆ
ದಿಲೀಪ್ ಸುರಾನಾ ಅವರ ತಂದೆ ಜಿ.ಸಿ ಖುರಾನಾ 1973ರಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದವರು. ವೃತ್ತಿಯಲ್ಲಿ ಅಕೌಂಟೆಂಟ್ ಆಗಿದ್ದ ಅವರು ದೆಹಲಿ ಮೂಲದ ಕಂಪನಿಯೊಂದರಲ್ಲಿ ವಿತರಕರಾಗಿ ಸೇವೆ ಸಲ್ಲಿಸಿದರು. ತದನಂತರ ಅವರೇ ಸ್ವತಃ ಕೇವಲ ಐದು ಉತ್ಪನ್ನಗಳೊಂದಿಗೆ ಮೈಕ್ರೋ ಲ್ಯಾಬ್ಸ್ ಅನ್ನು ಕಟ್ಟಿದರು. ತಂದೆಯ ಕೆಲಸಕ್ಕೆ ಹೆಗಲಾಗಲೆಂದು ದಿಲೀಪ್ ಸುರಾನಾ ಅವರು 1983ರಲ್ಲಿ ಮೈಕ್ರೋ ಲ್ಯಾಬ್ಸ್‍ನಲ್ಲಿ ಕೆಲಸ ಮಾಡಲು ಶುರುಮಾಡಿದರು. ಇದೀಗ ಈ ಕಂಪನಿಯನ್ನು ಪ್ಯಾನ್-ಇಂಡಿಯಾ ಕಂಪೆನಿಯನ್ನಾಗಿ ಮಾಡಿದ ಕೀರ್ತಿ ದಿಲೀಪ್ ಅವರಿಗೆ ಸಲ್ಲುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ