ಕೋವಿಡ್ ನಂತರ ಹೆಚ್ಚಿನ ಜನರ ಮನಸ್ಥಿತಿ, ಜೀವನ ಶೈಲಿ ಬದಲಾಗಿದೆ. ನಗರಗಳಲ್ಲಿ ಕೈ ತುಂಬಾ ಸಂಬಳ ಗಳಿಸುತ್ತಿದ್ದ ಅದೆಷ್ಟೋ ಸಾಫ್ಟ್‌ವೇರ್ (Software Engineer) ಉದ್ಯೋಗಿಗಳು ಹಳ್ಳಿಗಳತ್ತಾ ಮರಳಿ ವೈವಿಧ್ಯಮಯ ಕೃಷಿ ತಂತ್ರಗಳನ್ನು (Diversified Farming Technique) ಅನುಸರಿಸಿಕೊಂಡು ನೆಮ್ಮದಿಯ ಜೀವನದೊಂದಿಗೆ ಸಂಪಾದನೆ ಮಾಡುತ್ತಿದ್ದಾರೆ. ನಗರಕ್ಕಿಂತ ಹಳ್ಳಿಯ ಹಸಿರು ವಾತಾವರಣವೇ ಉತ್ತಮ ಎಂಬುದು ಇವರುಗಳ ಅನಿಸಿಕೆಯಾಗಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಿಲ್ಲಿಯೂ ಕೂಡ ಅದೆಷ್ಟೋ ಜನರು ಸಿಟಿಯ ಉದ್ಯೋಗ (Job) ತೊರೆದು ಹಳ್ಳಿಗಳಲ್ಲಿ ಕೈ ಕೆಸರಾದರೆ ಬಾಯಿ ಮೊಸರು ಎಂಬ ತತ್ವಕ್ಕೆ ಬದ್ಧರಾಗಿ ಜೀವನ ನಡೆಸುತ್ತಿದ್ದಾರೆ. ಚೀನಾದ ಹೆಬೈ ಪ್ರಾಂತ್ಯದ ಕ್ಯಾಂಗ್‌ಝೌನಲ್ಲಿರುವ ಸುನಿಂಗ್ ಕೌಂಟಿಯಲ್ಲಿ ಕೃಷಿಮಾಡಿಕೊಂಡಿರುವ 33 ರ ಹರೆಯದ ಜಾಂಗ್ ಶಾಶಾ ಇದಕ್ಕೆ ಉತ್ತಮ ಉದಾಹರಣೆ.
ಚೀನಾದ ಹೆಬೈ ನಗರದಲ್ಲಿ ಡಿಸೈನಿಂಗ್ ವೃತ್ತಿಮಾಡುತ್ತಿದ್ದ ಶಾಶಾ ಅದ್ಯಾಕೋ ಕೈ ತುಂಬಾ ಸಂಬಳ ನೀಡುತ್ತಿದ್ದ ಉದ್ಯೋಗ ತೊರೆದು ಹಳ್ಳಿಗೆ ಮರಳಿದರು. ಆದರೆ ತಮ್ಮ ಜೀವನದಲ್ಲಿ ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಇದಾಗಿದೆ ಎಂದು ಶಾಶಾ ಹೇಳುತ್ತಾರೆ.
ಕೃಷಿಯಲ್ಲಿ ಮೂಡಿದ ಆಸಕ್ತಿ
ಹೊಸ ಆಲೋಚನೆ ಹಾಗೂ ತಂತ್ರಜ್ಞಾನದ ಪರಿಚಯವಿರುವ ಅನೇಕ ಯುವಕರು ತಮ್ಮ ಊರುಗಳಿಗೆ ಮರಳಿ ಕೃಷಿಯನ್ನು ಆಯ್ಕೆಮಾಡಿಕೊಂಡು ಅಲ್ಲಿ ನವೀನ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗುತ್ತಿದ್ದಾರೆ. 2013 ರಲ್ಲಿ ಕಾಲೇಜಿನಿಂದ ಪದವಿ ಪಡೆದ ನಂತರ ಶಾಶಾ, ಲ್ಯಾಂಗ್‌ಫಾಂಗ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತದನಂತರ ಇಲ್ಲಿನ ವೃತ್ತಿ ತೊರೆದ ಜಾಂಗ್ ಶಾಶಾ ತನ್ನ ಗೆಳೆಯನ ತವರು ಗ್ರಾಮವಾದ ಕ್ಸಿಕ್ಸಿನ್‌ಜುವಾಂಗ್‌ಗೆ ತೆರಳಲು ನಿರ್ಧರಿಸಿದರು. ಅಲ್ಲಿಗೆ ಹೋದ ನಂತರ ಶಾಶಾರಿಗೆ ಕೃಷಿಯಲ್ಲಿ ಆಸಕ್ತಿ ಮೂಡಿತು.
ಜಾಂಗ್ 2015 ರಲ್ಲಿ ತನ್ನ ಕೆಲಸವನ್ನು ತೊರೆದ ಶಾಶಾ ಮತ್ತು ಸುನಿಂಗ್‌ನಲ್ಲಿರುವ ಗ್ರೀನ್ ಗಾರ್ಡನ್ ವೆಜಿಟೇಬಲ್ ಪ್ರೊಫೆಷನಲ್ ಕೋಆಪರೇಟಿವ್‌ನಲ್ಲಿ ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆಸಲಾರಂಭಿಸಿದರು.
ಪತಿಯಿಂದ ಬೆಂಬಲ
ತಮ್ಮ ಗೆಳೆಯನನ್ನೇ ವಿವಾಹವಾದ ಶಾಶಾ, ದಂಪತಿಗಳಿಬ್ಬರು ಜೊತೆಯಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ನಿರ್ಧಾರ ಮಾಡಿದರು. ತಮ್ಮ ಅತ್ತೆ ಮಾವನ ಸಹಾಯದಿಂದ ಕೃಷಿಯ ಕುರಿತು ಮೂಲ ಜ್ಞಾನವನ್ನು ಪಡೆದುಕೊಂಡ ಶಾಶಾ, ತಮ್ಮ ಪತಿಯೊಂದಿಗೆ ಸೇರಿಕೊಂಡು ನವೀನ ಪ್ರಾವಿಣ್ಯತೆಯೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡರು.
ಕೃಷಿ ಸಸ್ಯಗಳು ನನ್ನ ಮಕ್ಕಳು
ಬೆಳೆ, ಸಸ್ಯ, ಬೀಜಗಳು ನನ್ನ ಮಕ್ಕಳಂತೆ ಎಂದು ಹೇಳುವ ಶಾಶಾ ಅವನ್ನು ಬಿಟ್ಟು ನಾನಿರುವುದಿಲ್ಲ, ಅಂತೆಯೇ ಅವುಗಳು ಕೂಡ ನನ್ನನ್ನು ಬಿಟ್ಟು ಇರುವುದಿಲ್ಲ ಎಂದು ಭಾವಪರವಶರಾಗಿ ಮಾತನಾಡುತ್ತಾರೆ. ಉತ್ತಮ ಮೊಳಕೆಗಳ ಅಗತ್ಯವು ಹೆಚ್ಚುತ್ತಿರುವ ಕಾರಣ, ಹೊಸ ಪ್ರಭೇದಗಳನ್ನು ಬೆಳೆಯಲು ಹೆಚ್ಚಿನ ಸಾಮರ್ಥ್ಯವಿದೆ ಎಂಬುದನ್ನು ಶಾಶಾ ಮನಗಂಡರು.
ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸುವ ಶಾಶಾ, ಉನ್ನತ ಮಟ್ಟದ ಹಸಿರು ಮನೆಗಳನ್ನು ತೆರೆದರು ಹಾಗೂ ನಿಖರವಾದ ಬೀಜಗಳೊಂದಿಗೆ ಸ್ವಯಂಚಾಲಿತ ಮೊಳಕೆ ವಿಧಾನವನ್ನು ಪರಿಚಯಿಸಿದರು.
ಹಸಿರುಮನೆಗಳು ಸುಮಾರು 30 ಮಿಲಿಯನ್ ಸಸಿಗಳನ್ನು ಇರಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದು ಟೊಮ್ಯಾಟೊ, ಸೌತೆಕಾಯಿಗಳು, ಸೆಲರಿ ಮತ್ತು ಎಲೆಕೋಸು ಸೇರಿದಂತೆ 50 ವಿಧಗಳಲ್ಲಿ 12 ರೀತಿಯ ತರಕಾರಿಗಳನ್ನು ಶಾಶಾ ಬೆಳೆಸುತ್ತಾರೆ. ಅದೇ ರೀತಿ ಉತ್ತಮ ಫಸಲು ನೀಡುವ 20 ಹೊಸ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಭೇದಗಳನ್ನು ಶಾಶಾ ಪರಿಚಯಿಸಿದ್ದಾರೆ.
ಮೊಳಕೆ ಬೀಜಗಳಿಗೆ ಉತ್ತಮ ಬೇಡಿಕೆ
ಸಸಿಗಳನ್ನು ಬೆಳೆಸುವ ಪೇಟೆಂಟ್ ಅನ್ನು ಹೊಂದಿರುವ ಶಾಶಾ, ಒಂಭತ್ತು ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಆಕೆ ಬೆಳೆಸುವ ಸಸಿಗಳ ಬೀಜಗಳಿಗೆ ಹೆಚ್ಚಿನ ಬೇಡಿಕೆ ಇದ್ದು ವಿಶ್ವದಾದ್ಯಂತ ಗ್ರಾಹಕರನ್ನು ಶಾಶಾ ಹೊಂದಿದ್ದಾರೆ.
ಇವರಿಂದ ಬಿತ್ತನೆ ಬೀಜಗಳನ್ನು ಪಡೆದ ಗ್ರಾಹಕರು ಯಶಸ್ಸುಗಳಿಸಿದ ನಂತರ ಇನ್ನಿತರರಿಗೆ ಶಾಶಾ ಅವರ ಕೃಷಿ ವಿಧಾನಗಳನ್ನು ಪರಿಚಯಿಸುತ್ತಾರೆ. ಹೀಗೆ ಶಾಶಾ ಹೆಚ್ಚಿನ ಗ್ರಾಹಕರನ್ನು ಹೊಂದಿದ್ದಾರೆ ಹಾಗೂ ಖ್ಯಾತಿಯನ್ನು ಗಳಿಸಿದ್ದಾರೆ.
ರೈತರಿಗೆ ನೆರವು
ಇದಲ್ಲದೆ ಶಾಶಾ 600 ರೈತರೊಂದಿಗೆ ಕೆಲಸ ಮಾಡುತ್ತಿದ್ದು ಅವರಿಗೆ ಬೇಕಾದ ನೆರವು ಹಾಗೂ ತರಬೇತಿಗಳನ್ನು ನೀಡುತ್ತಾರೆ. ರೈತರು ಹಾಗೂ ಶಾಶಾ ಸೇರಿ ಸಹಕಾರಿ ಸಂಘಗಳನ್ನು ನಡೆಸುತ್ತಿದ್ದು ತಮ್ಮ ತರಕಾರಿಗಳನ್ನು ನಾಟಿ ಮಾಡಲು ಆದ್ಯತೆ ನೀಡುವ ಇತರ ರೈತರಿಗೆ ಸಹಕಾರಿ ಸಂಘದಿಂದ ರಿಯಾಯಿತಿಯನ್ನು ನೀಡುತ್ತಾರೆ ಮತ್ತು ತಾಂತ್ರಿಕ ಮಾರ್ಗದರ್ಶನವನ್ನೂ ಪಡೆಯಬಹುದು ಎಂದು ಶಾಶಾ ತಿಳಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ