Cardless ATM: ಇನ್ಮುಂದೆ ಕಾರ್ಡ್ ಇಲ್ಲದೆಯೂ ಎಟಿಎಂನಿಂದ ಹಣ ಪಡೆಯಬಹುದು! ಇದು ಹೇಗೆ ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ

ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಕಾರ್ಡ್‌ ಹೊಂದಿರುವವರು ತಮ್ಮ ಡೆಬಿಟ್ ಕಾರ್ಡ್‌ಗಳಿಲ್ಲದೆಯೂ ತಮ್ಮ ಫೋನ್‌ಗಳ ಮೂಲಕ ನಗದು ಹಿಂಪಡೆಯಬಹುದು. ಕಾರ್ಡುದಾರರು ಹೆಚ್ಚಾಗಿ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇತ್ತೀಚಿಗಷ್ಟೇ ಮುಕ್ತಾಯವಾಗಿರುವ ಭಾರತೀಯ ರಿಸರ್ವ್ ಬ್ಯಾಂಕಿನ (RBI) ಮಾನಿಟರಿ ಪಾಲಿಸಿ ಕಮಿಟಿಯು (Monetary Policy Committee) ಕೆಲ ಮಹತ್ವದ ನಿರ್ಧಾರಗಳನ್ನು ಮಾಡಿರುವುದಾಗಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ (Governor) ಶಕ್ತಿಕಾಂತ್‌ ದಾಸ್ (Shaktikant Das) ಅವರು ಇಂದು, ಭಾರತದ ಎಲ್ಲಾ ಬ್ಯಾಂಕ್‌ಗಳಾದ್ಯಂತ (Bank) ಎಲ್ಲಾ ಎಟಿಎಂಗಳಲ್ಲಿ (ATM) ಕಾರ್ಡ್‌ರಹಿತ (Card Less) ನಗದು ಹಿಂಪಡೆಯುವಿಕೆಯ (Cash withdrawal) ಸೌಲಭ್ಯ ಲಭ್ಯವಾಗುವಂತೆ ಆರ್‌ಬಿಐ ಪ್ರಸ್ತಾಪಿಸಿದೆ ಎಂದು ಘೋಷಿಸಿದ್ದಾರೆ. ಈ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೂರು ದಿನಗಳ ಕಾಲ ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿರುವ ನಿರ್ಧಾರಗಳ ಬಗ್ಗೆ ಆರ್‌ಬಿಐ ಗವರ್ನರ್ ಪ್ರಕಟಿಸಿದರು. ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ಅಥವಾ ಯುಪಿಐ (UPI) ಮೂಲಕ ಈ ಸೌಲಭ್ಯವನ್ನು ಲಭ್ಯವಾಗುವಂತೆ ಮಾಡಲು ಉದ್ದೇಶಿಸಲಾಗಿದೆ ಎಂದು ದಾಸ್ ಹೇಳಿದ್ದಾರೆ.

  ಎಲ್ಲಾ ಬ್ಯಾಂಕ್‌ಗಳಲ್ಲಿ ಈ ಸೌಲಭ್ಯ

  “ಪ್ರಸ್ತುತ ಎಟಿಎಂ ಮೂಲಕ ಕಾರ್ಡ್ ರಹಿತವಾಗಿ ನಗದು ಹಿಂಪಡೆಯುವ ಸೌಲಭ್ಯವು ಕೆಲವು ಬ್ಯಾಂಕ್‌ಗಳಿಗೆ ಮಾತ್ರ ಸೀಮಿತವಾಗಿದೆ. ಯುಪಿಐ ಅನ್ನು ಬಳಸಿಕೊಂಡು ಎಲ್ಲಾ ಬ್ಯಾಂಕ್‌ಗಳು ಮತ್ತು ಎಟಿಎಂ ನೆಟ್‌ವರ್ಕ್‌ಗಳಲ್ಲಿ ಕಾರ್ಡ್‌ ಇಲ್ಲದೆಯೇ ನಗದು ಹಿಂಪಡೆಯುವ ಸೌಲಭ್ಯವನ್ನು ಲಭ್ಯವಾಗುವಂತೆ ಮಾಡಲು ಪ್ರಸ್ತಾಪಿಸಲಾಗಿದೆ” ಎಂದು ಶಕ್ತಿಕಾಂತ್‌ ದಾಸ್ ಪ್ರಕಟಣೆ ವೇಳೆ ಹೇಳಿದ್ದಾರೆ.

  ಕಾರ್ಡ್ ವಂಚನೆ ತಡೆಯಲು ಸಹಾಯಕ

  "ವಹಿವಾಟುಗಳ ಸುಲಭತೆಯನ್ನು ಹೆಚ್ಚಿಸುವುದರ ಜೊತೆಗೆ, ಅಂತಹ ವಹಿವಾಟುಗಳಿಗೆ ಭೌತಿಕ ಕಾರ್ಡ್‌ಗಳ ಅಗತ್ಯವಿಲ್ಲದಿರುವುದು ಕಾರ್ಡ್ ಸ್ಕಿಮ್ಮಿಂಗ್, ಕಾರ್ಡ್ ಕ್ಲೋನಿಂಗ್ ಇತ್ಯಾದಿಗಳಂತಹ ವಂಚನೆಗಳನ್ನು ತಡೆಯಲು ಸಹಾಯ ಮಾಡುತ್ತದೆ" ಎಂದು ಆರ್‌ಬಿಐ ಗವರ್ನರ್ ಈ ಸಂದರ್ಭದಲ್ಲಿ ನುಡಿದಿದ್ದಾರೆ. ಆರ್‌ಬಿಐ ನಿಯಂತ್ರಿತ ಸಂಸ್ಥೆಗಳಲ್ಲಿ ಗ್ರಾಹಕ ಸೇವಾ ಮಾನದಂಡಗಳನ್ನು ಆರ್‌ಬಿಐ ಪರಿಶೀಲಿಸಲಿದೆ ಎಂದು ಶಕ್ತಿಕಾಂತ್‌ ದಾಸ್ ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು.

  ಇದನ್ನೂ ಓದಿ: Gold Price: ಆಭರಣ ಪ್ರಿಯರ ಪಾಲಿಗೆ ಶುಭವಾಗದ ಶುಕ್ರವಾರ! ಇಂದು ದುಬಾರಿಯಾಯ್ತು ಚಿನ್ನ-ಬೆಳ್ಳಿ

  ಪರಿಶೀಲನೆಗೆ ಸಮಿತಿ ಸ್ಥಾಪನೆ

  ಇನ್ನು ಸೇವಾ ಪ್ರಕ್ರಿಯೆಗೆ ಸಂಬಂಧಿಸಿದಂತೆ "ಆವಿಷ್ಕಾರಗಳು, ಉತ್ಪನ್ನಗಳು ಹಾಗೂ ಸೇವೆಗಳು, ಡಿಜಿಟಲ್ ಉಪಸ್ಥಿತಿ ಮತ್ತು ವಿವಿಧ ಸೇವಾ ಪೂರೈಕೆದಾರರ ಹೊರಹೊಮ್ಮುವಿಕೆ ಆಳವಾದ ಕಾರಣ ಈಗ ಕಂಡುಬರುತ್ತಿರುವ ಹಲವು ರೂಪಾಂತರದ ದೃಷ್ಟಿಯಿಂದ, ಎಲ್ಲಾ ಆರ್‌ಬಿಐ ನಿಯಂತ್ರಿತ ಎಲ್ಲ ಘಟಕಗಳಲ್ಲಿ ಗ್ರಾಹಕ ಸೇವೆಯ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಲು ಸಮಿತಿಯೊಂದನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ'' ಎಂದು ಆರ್‌ಬಿಐ ಎಂಪಿಸಿ ಸಭೆಯ ಪ್ರಕಟಣೆಯ ಸಂದರ್ಭದಲ್ಲಿ ಶಕ್ತಿಕಾಂತ್‌ ದಾಸ್ ಹೇಳಿದರು.

  ಕಾರ್ಡ್ ಇಲ್ಲದೆ ನಗದು ಪಡೆಯುವುದೆಂದರೇನು..?

  ಸಾಮಾನ್ಯವಾಗಿ ನಾವು ಎಟಿಎಂಗಳಿಂದ ಹಣ ಪಡೆಯಬೇಕೆಂದರೆ ನಮ್ಮ ಬಳಿ ಇರುವ ಕಾರ್ಡ್‌ ಬಳಸಿ ಪಡೆಯುತ್ತೇವೆಯಲ್ಲವೇ..? ಆದರೆ ಹೆಸರೇ ಸೂಚಿಸುವಂತೆ, ಕಾರ್ಡ್‌ರಹಿತ ನಗದು ಹಿಂಪಡೆಯುವ ಸೌಲಭ್ಯವು ಎಟಿಎಂಗಳಿಂದ ಹಣವನ್ನು ಹಿಂಪಡೆಯುವಾಗ ಬ್ಯಾಂಕ್ ಗ್ರಾಹಕರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಅಗತ್ಯವಿರುವುದಿಲ್ಲ. ಈ ವ್ಯವಸ್ಥೆಯು ಈಗಾಗಲೇ ವಿವಿಧ ಬ್ಯಾಂಕ್‌ಗಳಲ್ಲಿ ಲಭ್ಯವಿದೆ ಮತ್ತು ಇದನ್ನು ಮುಖ್ಯವಾಗಿ ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹಲವಾರು ಜನರು ಎಟಿಎಂಗಳಿಗೆ ಹೋಗಲು ಹಿಂಜರಿಯುತ್ತಿರುವುದನ್ನು ಗಮನದಲ್ಲಿರಿಸಿಕೊಂಡು ಪರಿಚಯಿಸಲಾಯಿತು.

  ಫೋನ್‌ಗಳ ಮೂಲಕ ವರ್ಗಾವಣೆ

  ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಕಾರ್ಡ್‌ ಹೊಂದಿರುವವರು ತಮ್ಮ ಡೆಬಿಟ್ ಕಾರ್ಡ್‌ಗಳಿಲ್ಲದೆಯೂ ತಮ್ಮ ಫೋನ್‌ಗಳ ಮೂಲಕ ನಗದು ಹಿಂಪಡೆಯಬಹುದು. ಕಾರ್ಡುದಾರರು ಹೆಚ್ಚಾಗಿ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ ಮತ್ತು ಅವರು ತಮ್ಮ ಡೆಬಿಟ್ ಕಾರ್ಡ್‌ಗಳನ್ನು ಹೊಂದಿಲ್ಲದಿದ್ದರೆ ಎಟಿಎಂಗಳಲ್ಲಿ ಹಣವನ್ನು ಹಿಂಪಡೆಯಲು ವಿನಂತಿಯನ್ನು ಸಲ್ಲಿಸಬೇಕಾಗುತ್ತದೆ.

  ಮೊಬೈಲ್ ಪಿನ್ ಅಗತ್ಯ

  ತಜ್ಞರ ಪ್ರಕಾರ, ಈ ವ್ಯವಸ್ಥೆಯು ಎಟಿಎಂಗಳಲ್ಲಿ ಆಗಬಹುದಾದ ವಂಚನೆಗಳನ್ನು ತಡೆಯುತ್ತದೆ. ಏಕೆಂದರೆ, ಈ ವಿಧಾನದಲ್ಲಿ ನಗದು ಹೊರಬರಲು ಮೊಬೈಲ್ ಪಿನ್ ಅನ್ನು ಬಳಸಬೇಕಾಗುತ್ತದೆ, ಕಾರ್ಡ್‌ಲೆಸ್ ನಗದು ಹಿಂಪಡೆಯುವ ವ್ಯವಸ್ಥೆಯು ತನ್ನ ಈ ಕೆಲಸವನ್ನು ನಿರ್ವಹಿಸಲು ಯುಪಿಐ ಸೌಲಭ್ಯವನ್ನು ಬಳಸುತ್ತದೆ.

  ಇನ್ಸ್ಟಂಟ್ ಮನಿ ಟ್ರಾನ್ಸ್‌ಫರ್‌ ರಚಿಸುವ ಮೂಲಕ ರವಾನೆದಾರರಿಂದ ಸೇವಾ ಕಾರ್ಯವು ನಿರ್ವಹಿಸಲ್ಪಡುತ್ತದೆ, ಇದು ಫಲಾನುಭವಿಯ ಮೊಬೈಲ್ ಸಂಖ್ಯೆಯನ್ನು ಮಾತ್ರ ಬಳಸಿಕೊಂಡು ಹಣವನ್ನು ವರ್ಗಾಯಿಸಲು ಅನುಮತಿಸುತ್ತದೆ.

  20 ಸಾವಿರ ರೂಪಾಯಿವರೆಗೆ ಮಿತಿ

  ಎಟಿಎಂಗಳಿಂದ ನಮಗೆಂದೇ ಹಣ ಹೊರತೆಗಯಲು ಸಹ ಕಾರ್ಡ್ ರಹಿತ ನಗದು ಸೌಲಭ್ಯವನ್ನು ಬಳಸಬಹುದು. ಆದರೂ, ಹೆಚ್ಚಿನ ಬ್ಯಾಂಕ್‌ಗಳು ಇನ್ನೂ ಈ ಸೌಲಭ್ಯವನ್ನು ಹೊಂದಿಲ್ಲ ಮತ್ತು ದೈನಂದಿನ ವಹಿವಾಟಿಗೂ ಮಿತಿ ಇರುವುದನ್ನು ಗಮನಿಸಬಹುದು. ಈ ಮಿತಿಯು ನಿರ್ದಿಷ್ಟ ಬ್ಯಾಂಕ್ ನೀಡುವ ಸೌಲಭ್ಯಗಳ ಪ್ರಕಾರ ಇದ್ದು ಅದು 10,000 ರೂ. ನಿಂದ 20,000 ರೂ. ವರೆಗೆ ಇರುತ್ತದೆ.

  ಇದನ್ನೂ ಓದಿ: Marriage Season ಶುರು.. 40 ದಿನದಲ್ಲಿ 40 ಲಕ್ಷ ಮದುವೆಗಳು! ಎಷ್ಟು ಲಕ್ಷ ಕೋಟಿ ಬ್ಯುಸಿನೆಸ್ ಗೊತ್ತಾ?

  ಕೆಲವು ಬ್ಯಾಂಕುಗಳು ಪ್ರಸ್ತುತ ತನ್ನ ಗ್ರಾಹಕರಿಂದ ಹೆಚ್ಚುವರಿ ವಹಿವಾಟು ಶುಲ್ಕವನ್ನು ವಿಧಿಸುತ್ತವೆ. ಹಾಗಾಗಿ, ಆರ್‌ಬಿಐನ ಈ ಹೊಸ ಘೋಷಣೆಯೊಂದಿಗೆ, ಹೆಚ್ಚಿನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಈ ಸೇವೆಯನ್ನು ಒದಗಿಸಲು ಇದರಲ್ಲಿ ಸೇರಿಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ.
  Published by:Annappa Achari
  First published: