ದೇಶದ ಆರ್ಥಿಕತೆಗೆ (Economy Of The Country) ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿರುವ ಹಲವು ಉದ್ಯಮಗಳಿವೆ. ಜನಸಾಮಾನ್ಯರಿಗೆ ಉದ್ಯೋಗ ನೀಡುವ, ದೇಶದ ಖಜಾನೆ ಭರ್ತಿ ಮಾಡುವ, ಸಾಧನೆ ಶಿಖರದಲ್ಲಿ ನಿಲ್ಲುವ ಅನೇಕ ಉದ್ಯಮಿಗಳು ನಮ್ಮ ಮಧ್ಯೆ ಹಲವರಿಗೆ ಮಾದರಿಯಾಗಿದ್ದಾರೆ. ಈ ಲೇಖನದ ಸಾಧಕರು ಕೂಡ ಯಶಸ್ಸಿನ ಉತ್ತುಂಗದಲ್ಲಿರುವ ಸಾಧಕರು. ಅಣ್ಣ-ತಮ್ಮ ಇಬ್ಬರೂ ಬೆಳೆಸಿದ ಈ ಕಂಪೆನಿ ಬ್ರ್ಯಾಂಡ್ (Company Brand) ಆಗುವುದರ ಜೊತೆ ಬಹುಕೋಟಿ ವ್ಯವಹಾರವಾಗಿದೆ ಕೂಡ. ವಿಜಯ್ ಮಲ್ಯ ಅವರಿಂದ ದೈತ್ಯ ಕಂಪೆನಿಯನ್ನು ಖರೀದಿಸಿ ಅದನ್ನು ಇಂದು ಅತ್ಯುತ್ತಮ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ಸಹೋದರರ ಪೇಂಟಿಂಗ್ ಕಂಪೆನಿಯ ಯಶೋಗಾಥೆ
ಕುಲದೀಪ್ ಸಿಂಗ್ ಧಿಂಗ್ರಾ ಮತ್ತು ಗುರ್ಬಚನ್ ಸಿಂಗ್ ಧಿಂಗ್ರಾ ಇಬ್ಬರು ಸಹೋದರರು. ಅವರು ಭಾರತದ ಅತಿದೊಡ್ಡ ಪೇಂಟ್ ಕಂಪನಿ ಮತ್ತು ದೇಶದ ಬ್ರ್ಯಾಂಡ್ ಪೇಂಟ್ ಕಂಪೆನಿಗಳಲ್ಲಿ ಮುಖ್ಯವಾಗಿರುವ ಬರ್ಜರ್ ಪೇಂಟ್ಸ್ ಕಂಪೆನಿಯ ಒಡೆಯರು.
ವಿಜಯ್ ಮಲ್ಯ ಅವರ UB ಗ್ರೂಪ್‌ನಿಂದ ಖರೀದಿ
90 ರ ದಶಕದಲ್ಲಿ ಪಾನೀಯ ಉದ್ಯಮಿ ವಿಜಯ್ ಮಲ್ಯ ಅವರ UB ಗ್ರೂಪ್‌ನಿಂದ ಈ ಉದ್ಯಮವನ್ನು ಇಬ್ಬರೂ ಸಹೋದರರು ಖರೀದಿಸಿದ್ದರು. ಆ ವೇಳೆ ಇದು ತುಂಬಾ ಸಣ್ಣ ಮೊತ್ತದ ಉದ್ಯಮವಾಗಿತ್ತು.
ಇದನ್ನೂ ಓದಿ: ಈ ರೀತಿ ವ್ಯವಸಾಯ ಮಾಡಿದರೆ ರೈತರ ಆರ್ಥಿಕ ಸ್ಥಿತಿ ಬದಲಾಗುತ್ತೆ, ತಿಂಗಳಿಗೆ ಲಕ್ಷಗಟ್ಟಲೇ ಆದಾಯವೂ ಬರುತ್ತೆ!
ಆದರೆ ಈಗ ಬರ್ಜರ್ ಪೇಂಟ್ಸ್ ದೇಶದ ದೊಡ್ಡ ಪೇಂಟ್ ಕಂಪೆನಿಯಾಗಿ ಹೊರಹೊಮ್ಮಿದ್ದು, ಬರೋಬ್ಬರಿ 56,000 ಕೋಟಿ ರೂಪಾಯಿಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳದೊಂದಿಗೆ ಅದರ ವಿಭಾಗದಲ್ಲಿ ಎರಡನೇ ಅತಿ ದೊಡ್ಡ ಕಂಪೆನಿಯಾಗಿ ಸ್ಥಾನ ಪಡೆದಿದೆ.
ತಲಾ $3.1 ಬಿಲಿಯನ್ ಸಂಪತ್ತು ಹೊಂದಿರುವ ಸಿಂಗ್ ಬ್ರದರ್ಸ್
ಇಬ್ಬರೂ ಸಹೋದರರು ಕಂಪೆನಿ ಏಳಿಗೆಗಾಗಿ ಶ್ರಮಿಸುತ್ತಿದ್ದು, ಕುಲದೀಪ್ ಬರ್ಜರ್ ಪೇಂಟ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರೆ ಗುರ್ಬಚನ್ ಸಿಂಗ್ ಉಪಾಧ್ಯಕ್ಷರಾಗಿದ್ದಾರೆ.
ಕಂಪೆನಿಯ ಬೆಳವಣಿಗೆ ಈ ಇಬ್ಬರೂ ಸಹೋದರರನ್ನು ಬಿಲಿಯನೇರ್‌ನನ್ನಾಗಿಸಿದ್ದು, 2023 ರಲ್ಲಿ ಇವರಿಬ್ಬರು ತಲಾ ರೂ 25,000 ಕೋಟಿ ($3.1 ಬಿಲಿಯನ್) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.
ತಾತನ ಕಾಲದಿಂದಲೂ ಪೇಂಟ್ ಅಂಗಡಿಯೇ ಕುಟುಂಬದ ಕಸುಬು
ಪೇಂಟ್ ವ್ಯಾಪಾರದ ಅನುಭವ ಈ ಸಹೋದರರ ಕುಟುಂಬಕ್ಕೆ ಇತ್ತು. ಅವರ ತಾತ ಕೂಡ ಇದೇ ವ್ಯಾಪಾರವನ್ನು ಮಾಡುತ್ತಿದ್ದರು. ಹೀಗಾಗಿ ಈ ವ್ಯಾಪಾರದ ಕಲೆ ಎಂಬುದು ಸಹೋದದರಿಗೆ ರಕ್ತದಿಂದಲೇ ಬಂದಿದೆ.
ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಇಬ್ಬರು ಸಹೋದರರ ಕುಟುಂಬ ಮೊದಲಿಗೆ 1898 ರಲ್ಲಿ ಪಂಜಾಬ್‌ನ ಅಮೃತಸರದಲ್ಲಿ ತಮ್ಮ ಮೊದಲ ಪೇಂಟ್ ಅಂಗಡಿಯನ್ನು ಪ್ರಾರಂಭಿಸಿತ್ತು.
ವರ್ಷದಿಂದ ವರ್ಷಕ್ಕೆ ವ್ಯಾಪಾರ ದ್ವಿಗುಣಗೊಳ್ಳುತ್ತಲೇ ಇತ್ತು. 1970ರ ಹೊತ್ತಿಗೆ, ಪೇಂಟ್ ಅಂಗಡಿ ವರ್ಷಕ್ಕೆ 10 ಲಕ್ಷ ರೂ ಆದಾಯಗಳಿಸುವ ಮಟ್ಟಕ್ಕೆ ಬಂದಿತು. ಹೀಗೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಂತೆ ಅವರು 1980 ರ ದಶಕದಲ್ಲಿ ಸೋವಿಯತ್ ಒಕ್ಕೂಟಕ್ಕೆ ಅತಿದೊಡ್ಡ ಬಣ್ಣ ರಫ್ತುದಾರರಾಗಿ ಹೊರ ಹೊಮ್ಮಿದರು.
ಅಂಗಡಿಯಿಂದ ತಮ್ಮ ಪೇಂಟ್ ಕಂಪೆನಿಯನ್ನು ಎಂಎನ್‌ಸಿ ಕಂಪನಿಯಾಗಿ ಮಾಡುವತ್ತ ಸಹೋದರರು ಚಿತ್ತ ಹರಿಸಿದರು. ನಂತರ ವಿಜಯ್ ಮಲ್ಯ ಅವರ ಯುಬಿ ಗ್ರೂಪ್‌ಗೆ ಸೇರಿದ ಬರ್ಜರ್ ಪೇಂಟ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರ ಮಾಡಿದರು.
ಮಲ್ಯ ಅವರ ಪರಿಚಯಸ್ಥನಾಗಿದ್ದ ಬಾಲ್ಯದ ಗೆಳೆಯನ ಮೂಲಕ ವಿಜಯ್ ಮಲ್ಯ ಜೊತೆ ಮಾತುಕತೆ ನಡೆಸಲು ಅವಕಾಶ ಸಿಕ್ಕಿತು. ಈ ಸುವರ್ಣಾವಕಾಶವನ್ನು ಬಳಸಿಕೊಂಡ ಇಬ್ಬರು ಕಂಪೆನಿ ಖರೀದಿಸಿ ಅದರ ಗೆಲುವಿಗೆ ಶ್ರಮಿಸಿದರು.
ವಿಶ್ವದಾದ್ಯಂತ ಛಾಪು ಮೂಡಿಸಿದ ಕಂಪನಿ
ಇಬ್ಬರ ಪರಿಶ್ರಮಕ್ಕೆ ಸಾಕ್ಷಿಯಾಗಿ ಕೇವಲ ಭಾರತದಲ್ಲಿ ಮಾತ್ರವಲ್ಲದೆ ರಷ್ಯಾ, ಪೋಲೆಂಡ್, ನೇಪಾಳ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವಾರು ದೇಶಗಳಲ್ಲಿ ಬರ್ಜರ್ ಪೇಂಟ್ ಕಂಪನಿ ಕೆಲಸ ಮಾಡುತ್ತಿದೆ.
ಕೋಲ್ಕತ್ತಾ , ಪಶ್ಚಿಮ ಬಂಗಾಳದಲ್ಲಿ ಪ್ರಧಾನ ಕಚೇರಿ ಹೊಂದಿದೆ. ಈ ಮೂಲಕ ಭಾರತದ ಶ್ರೀಮಂತ ಕುಟುಂಬದಲ್ಲಿ ಈ ಸಹೋದರರ ಕುಟುಂಬ ಒಂದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ