ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಫೆಬ್ರವರಿ 1 ರಂದು ಬಜೆಟ್ (budget) ಮಂಡಿಸಲಿದ್ದಾರೆ ಹಾಗೂ ಪ್ರತಿಯೊಂದು ಕ್ಷೇತ್ರಗಳೂ ಬಜೆಟ್‌ನಿಂದ ಕೆಲವೊಂದು ಸೌಲಭ್ಯಗಳನ್ನು ಎದುರು ನೋಡುತ್ತಿವೆ. ಆರೋಗ್ಯ ಕ್ಷೇತ್ರ (Health Sector) ಹಾಗೂ ಉತ್ಪಾದನಾ ವಲಯಗಳು ಕೂಡ ಮುಂಬರುವ ಬಜೆಟ್‌ನಿಂದ ಕೊಡುಗೆ ಪಡೆದುಕೊಳ್ಳಬಹುದು ಎಂಬ ನಿರೀಕ್ಷೆಯನ್ನಿಟ್ಟುಕೊಂಡಿವೆ. ಆರೋಗ್ಯ ಕ್ಷೇತ್ರವು ಇನ್ನಷ್ಟು ಅತ್ಯಾಧುನಿಕ ಉಪಕರಣಗಳನ್ನು ಆಸ್ಪತ್ರೆ (Hospital) , ಆರೋಗ್ಯ (Health) ಸಂಸ್ಥೆಗಳಲ್ಲಿ ಅಳವಡಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು, ಕೈಗೆಟಕುವ ವೈದ್ಯಕೀಯ ಸೇವೆಯನ್ನು ಪ್ರತಿಯೊಬ್ಬರಿಗೂ ಒದಗಿಸುವ ಇರಾದೆಯನ್ನು ಹೊಂದಿದೆ. ಹಾಗಾಗಿ ಈ ಬಾರಿಯ ಬಜೆಟ್ ಕ್ಷೇತ್ರದ ಅಭಿವೃದ್ದಿಗೆ ಪೂರಕವಾಗಿರಬಹುದು ಎಂಬ ಆಶಯವನ್ನಿಟ್ಟುಕೊಂಡಿದೆ.
2023 ರ ಬಜೆಟ್‌ನ ಮೇಲೆ ಹೆಚ್ಚಿದ ನಿರೀಕ್ಷೆ
ಆರೋಗ್ಯ ಕ್ಷೇತ್ರವು ಸಂಶೋಧನೆ ಹಾಗೂ ಕೆಲವೊಂದು ಅಭಿವೃದ್ಧಿ ಯೋಜನೆಗಳಿಗಾಗಿ ಮೂಲಸೌಕರ್ಯಗಳಲ್ಲಿ ಹೆಚ್ಚಿನ ವೆಚ್ಚವನ್ನು ಹೂಡಿಕೆ ಮಾಡುವ ಇರಾದೆ ಹೊಂದಿದೆ. ಹಾಗಾಗಿ ಈ ಬಾರಿಯ ಬಜೆಟ್‌ನಿಂದ ಆರೋಗ್ಯ ಸೌಲಭ್ಯಗಳ ಉನ್ನತಿಗಾಗಿ ನಿಧಿ ಬಿಡುಗಡೆಯಾದರೆ ಅದನ್ನು ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳ ನಿರ್ಮಾಣ ಅಥವಾ ಆಮದಿಗೆ ಬಳಸಿಕೊಳ್ಳಬಹುದು ಎಂಬುದು ರೂಬಿ ಹಾಲ್ ಕ್ಲಿನಿಕ್‌ನ ಮುಖ್ಯ ಹಣಕಾಸು ಅಧಿಕಾರಿ ಜ್ಯೋತಿ ಪ್ರಕಾಶ್ ಮಹಾಪಾತ್ರ ಹೇಳಿಕೆಯಾಗಿದೆ.
ಗುಣಮಟ್ಟದ ಔಷಧ, ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳು
ಕೋವಿಡ್-19 ಸಾಂಕ್ರಾಮಿಕವು ದುರ್ಬಲ ಆರೋಗ್ಯ ವ್ಯವಸ್ಥೆಗಳ ಸ್ಥಿತಿಯನ್ನು ಬಹಿರಂಗಗೊಳಿಸಿದೆ. ಹಾಗಾಗಿ ಅತ್ಯಾಧುನಿಕ ಸೌಲಭ್ಯಗಳು ಮತ್ತು ಉನ್ನತ ಮಟ್ಟದ ಔಷಧಗಳ ಮೇಲೆ ಹೂಡಿಕೆ ಮಾಡುವ ಗುರಿ ಹೊಂದಿದೆ ಎಂದು ಜ್ಯೋತಿ ಪ್ರಕಾಶ್ ತಿಳಿಸಿದ್ದಾರೆ.
ಕೋವಿಡ್ ಲಸಿಕೆ ಉತ್ಪಾದನೆ ಹಾಗೂ ಔಷಧಗಳ ತಯಾರಿಕೆಯಲ್ಲಿ ಪ್ರಾಮುಖ್ಯತೆ ಗಳಿಸಿರುವ ಆರೋಗ್ಯ ಕ್ಷೇತ್ರವು ಉತ್ತಮ ಧನಸಹಾಯ, ಆರ್ & ಡಿ ನಿರ್ದಿಷ್ಟ ನೀತಿಗಳು ಮತ್ತು ಔಷಧಿಗಳ ಮೇಲಿನ ತೆರಿಗೆ ವಿನಾಯಿತಿಗಳನ್ನು ಎದುರು ನೋಡುತ್ತಿದೆ ಎಂದು ಮಿಂಟ್ ಬಿಡಿಆರ್ ಗ್ರೂಪ್‌ನ ವ್ಯವಹಾರ ಅಭಿವೃದ್ಧಿ ನಿರ್ದೇಶಕ ರಹೀಲ್ ಶಾ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಈ ಬಜೆಟ್‌ನಲ್ಲಿ ಮತ್ತಷ್ಟು ಸ್ಮಾರ್ಟ್ ಆಗುತ್ತಾ ಸಿಟಿಗಳು? ಹೆಚ್ಚಿದ ನಿರೀಕ್ಷೆ!
ತಜ್ಞರ ಅನಿಸಿಕೆ ಏನು?
ಕೋವಿಡ್ ಅಲ್ಲದೆಯೇ ಇನ್ನಿತರ ಮಾರಣಾಂತಿಕ ಕಾಯಿಲೆಗಳಿಗೆ ಅತ್ಯಾಧುನಿಕ ಸೌಲಭ್ಯಗಳ ಅವಶ್ಯಕತೆ ಇದ್ದು 2023 ರ ಬಜೆಟ್ ಈ ದಿಸೆಯಲ್ಲಿ ಸಹಕಾರಿಯಾಗಿರಬಹುದು ಎಂಬ ನಿರೀಕ್ಷೆ ಇದೆ ಎಂದು ರಹೀಲ್ ತಿಳಿಸಿದ್ದಾರೆ.
ಇನ್ನು ತಜ್ಞರು ಕೂಡ ಇದೇ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು, ಸಾರ್ವಜನಿಕ ಆರೋಗ್ಯದ ಮೇಲಿನ ವೆಚ್ಚಗಳನ್ನು ತುರ್ತಾಗಿ ಪರಿಶೀಲಿಸಬೇಕು ಎಂಬ ಸೂಚನೆಯನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಆರ್ಥಿಕ ವರ್ಷ 24 ರಲ್ಲಿ ಭಾರತವು ಆರ್ಥಿಕ ಕುಸಿತವನ್ನು ಎದುರಿಸುವ ನಿರೀಕ್ಷೆಯೊಂದಿಗೆ ಉತ್ಪಾದನಾ ಉದ್ಯಮ ವಲಯ 2023 ರ ಬಜೆಟ್‌ನಿಂದ ಯಾವೆಲ್ಲಾ ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.
ಹೂಡಿಕೆ ಭತ್ಯೆಯನ್ನು ಪರಿಚಯಿಸಬೇಕು
ದಿ ಫ್ರಾಗ್ರನ್ಸ್ ಪೀಪಲ್‌ನ ಸಂಸ್ಥಾಪಕ ಡಾ ದೀಪಕ್ ಜೈನ್, ಮುಂಬರುವ ಬಜೆಟ್‌ನಲ್ಲಿ ಯಂತ್ರೋಪಕರಣಗಳ ಉದ್ಯಮವನ್ನು ವೇಗಗೊಳಿಸಲು ಸಬ್ಸಿಡಿಗಳು ಮತ್ತು ಯೋಜನೆಗಳನ್ನು ಪರಿಚಯಿಸುವುದರ ಜೊತೆಗೆ ಹೂಡಿಕೆ ಭತ್ಯೆಯನ್ನು ಪರಿಚಯಿಸಬೇಕು ಎಂದು ವಿನಂತಿಸಿದ್ದಾರೆ.
ಕಸ್ಟಮ್ಸ್ ಸುಂಕ ತೆಗೆದುಹಾಕಬೇಕು
ಭಾರತದಲ್ಲಿನ ಮರುಬಳಕೆ ಉದ್ಯಮ ಅಪೆಕ್ಸ್ ಅಧ್ಯಕ್ಷರಾದ ಸಂಜಯ್ ಮೆಹ್ತಾ ಮೆಟಲ್ ವಸ್ತುಗಳ ಮೇಲಿರುವ ಕಸ್ಟಮ್ಸ್ ಸುಂಕವನ್ನು ತೆಗೆದುಹಾಕಬೇಕು ಎಂದು ತಿಳಿಸಿದ್ದಾರೆ. ಪ್ರಮುಖ ಕಚ್ಚಾವಸ್ತುವಾಗಿ ಬಳಕೆಯಾಗುವ MSME ವಲಯಕ್ಕೆ ಕಸ್ಟಮ್ಸ್ ಸುಂಕ ತೀವ್ರ ಹೊಡೆತವನ್ನು ನೀಡುತ್ತಿದೆ ಎಂಬುದು ಸಂಜಯ್ ಅಭಿಪ್ರಾಯವಾಗಿದೆ.
ಸ್ಥಳೀಯ ತಯಾರಕರಿಗೆ ಪ್ರೋತ್ಸಾಹ
ವುಡನ್‌ಸ್ಟ್ರೀಟ್‌ನ ಸಿಇಒ ಲೋಕೇಂದ್ರ ಸಿಂಗ್ ರಣಾವತ್ ಕೂಡ 2023 ರ ಬಜೆಟ್‌ನ ಮೇಲೆ ಉತ್ಪಾದನಾ ವಲಯ ಕೊಂಚ ನಿರೀಕ್ಷೆಯನ್ನಿಟ್ಟುಕೊಂಡಿದೆ ಎಂದು ತಿಳಿಸಿದ್ದು ಸ್ಥಳೀಯ ತಯಾರಕರಿಗೆ ಪ್ರೋತ್ಸಾಹ ನೀಡುವಂತಹ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ನವೀನ ಮಾದರಿಯ ತಂತ್ರಜ್ಞಾನಗಳನ್ನು ಅನುಸರಿಸಿ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಗಳಿಗೆ ಬಹುಮಾನಗಳನ್ನು ಘೋಷಿಸಬೇಕು ಹಾಗೂ ಆ ಸಂಸ್ಥೆಗಳ ಕೆಲಸವನ್ನು ಗುರುತಿಸುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ