ಫೆಬ್ರುವರಿ 1 (February) ಕ್ಕೆ ಘೋಷಣೆಯಾಗಲಿರುವ ಕೇಂದ್ರ ಬಜೆಟ್ (Union Budget) ಗೆ ತಯಾರಿ ನಡೆಯುತ್ತಿವೆ. ಯಾವ ಕ್ಷೇತ್ರಕ್ಕೆ, ಯಾವ ವರ್ಗಕ್ಕೆ ಏನೆಲ್ಲಾ ಕೊಡುಗೆಗಳು ಸಿಗುತ್ತವೆ ಎಂಬುದರ ಬಗ್ಗೆಯೂ ನಿರೀಕ್ಷೆಗಳು ಹೆಚ್ಚಾಗಿವೆ. ಈ ಮಧ್ಯೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಧ್ಯಮ ವರ್ಗದ ಜನರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್ ರೂಪಿಸುವುದಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಮಧ್ಯಮ ವರ್ಗದವರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿದೆ ಎಂದಿರುವ ನಿರ್ಮಲಾ ಸೀತಾರಾಮನ್, "ನಾನು ಮಧ್ಯಮ ವರ್ಗಕ್ಕೆ ಸೇರಿದವಳು. ಈ ದೇಶದ ಮಧ್ಯಮ ವರ್ಗದ ಜನತೆಯ ಕಷ್ಟ ಸುಖ, ಒತ್ತಡಗಳೆಲ್ಲವೂ ನನಗೆ ಗೊತ್ತು.
"ಮಧ್ಯಮ ವರ್ಗದವರಿಗೆ ಹೊಸ ತೆರಿಗೆ ಹೇರಿಲ್ಲ"
ನಾನು ಸಹ ಅದನ್ನು ಅನುಭವಿಸಿದ್ದೇನೆ. ಹೀಗಾಗಿ, ಮೋದಿ ಸರ್ಕಾರವು ತನ್ನ ಯಾವುದೇ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನತೆಯ ಮೇಲೆ ಯಾವುದೇ ಹೊಸ ತೆರಿಗೆಯನ್ನು ಈವರೆಗೆ ಹೇರಿಲ್ಲ. ಈ ಬಾರಿ ಮಧ್ಯಮ ವರ್ಗದ ಜನರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್ ರೂಪಿಸುವುದಾಗಿ" ತಿಳಿಸಿದ್ದಾರೆ.
"ನಾನು ಯಾವಾಗಲೂ ಮಧ್ಯಮ ವರ್ಗದ ಪ್ರತಿನಿಧಿ"
"ಮಧ್ಯಮ ವರ್ಗದ ಜನತೆ ಯಾವ ಒತ್ತಡದಲ್ಲಿ ಬದುಕುತ್ತಿದ್ದಾರೆ ಎಂಬ ಅರಿವು ನನಗೆ ಇದೆ. ನನ್ನನ್ನು ನಾನು ಯಾವಾಗಲೂ ಮಧ್ಯಮ ವರ್ಗದ ಪ್ರತಿನಿಧಿ ಎಂದೇ ಭಾವಿಸುವೆ. ಹೀಗಾಗಿ, ಮಧ್ಯಮ ವರ್ಗಕ್ಕೆ ಯಾವುದೇ ಹೊಸ ತೆರಿಗೆಯನ್ನೂ ವಿಧಿಸೋದಿಲ್ಲ ಎಂದು ನಮ್ಮ ಸರ್ಕಾರ ಭರವಸೆ ನೀಡುತ್ತಿದೆ. ಅದಲ್ಲದೆ ವರ್ಷಕ್ಕೆ 5 ಲಕ್ಷ ರೂ.ವರೆಗೆ ಹಣ ಸಂಪಾದನೆ ಮಾಡುವವರಿಗೂ ಯಾವುದೇ ಆದಾಯ ತೆರಿಗೆ ವಿಧಿಸಿಲ್ಲ" ಎಂದು ಎಂದ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದನ್ನೂ ಓದಿ: ದೇಶದ 'ಶ್ರೀಮಂತ ರೈತ'ರಿಗೆ ಈ ಬಾರಿ ಬೀಳುತ್ತಾ ತೆರಿಗೆ ಹೊರೆ? ಕೇಂದ್ರ ಸರ್ಕಾರಕ್ಕೆ ತಜ್ಞರು ನೀಡಿದ ಸಲಹೆಯೇನು?
ದೇಶದ 27 ನಗರಗಳಲ್ಲಿ ಮೆಟ್ರೋ ಸೇವೆ
"ಮಧ್ಯಮ ವರ್ಗದವರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುತ್ತಾರೆ ಮತ್ತು ಜನರಿಗೆ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದೇಶದ 27 ನಗರಗಳಲ್ಲಿ ಮೆಟ್ರೋ ಸೇವೆಯನ್ನೂ ಆರಂಭಿಸಿದ್ದೇವೆ. ಬಹಳಷ್ಟು ಮಧ್ಯಮ ವರ್ಗದ ಜನರು ಉದ್ಯೋಗದ ಹುಡುಕಾಟದಲ್ಲಿ ನಗರಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಮತ್ತು ನಾವು ಸ್ಮಾರ್ಟ್ ಸಿಟಿಗಳ ಗುರಿಯತ್ತ ಗಮನಹರಿಸುತ್ತಿದ್ದೇವೆ. ಮಧ್ಯಮ ವರ್ಗಕ್ಕಾಗಿ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಸೀತಾರಾಮನ್ ಹೇಳಿದರು.
ಹೆಚ್ಚಿದ ಬಜೆಟ್ ನಿರೀಕ್ಷೆಗಳು
ದೇಶದ ಜನಸಂಖ್ಯೆಯ ಬಹುಪಾಲು ಭಾಗವನ್ನು ಒಳಗೊಂಡಿರುವ ಭಾರತದ ಮಧ್ಯಮ ವರ್ಗವು ಫೆಬ್ರವರಿ 1 ರಂದು ಮುಂಬರುವ ಬಜೆಟ್‌ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಇದು 2024 ರ ಸಾರ್ವತ್ರಿಕ ಚುನಾವಣೆಯ ಮೊದಲು ಆಡಳಿತ ಸರ್ಕಾರದ ಕೊನೆಯ ಪೂರ್ಣ ಬಜೆಟ್ ಆಗಿರುವುದರಿಂದ, ನಿರೀಕ್ಷೆಗಳು ಹೆಚ್ಚಾಗಿ ಆರೋಗ್ಯ, ಉದ್ಯೋಗಗಳ ಮತ್ತು ತೆರಿಗೆ ಪರಿಹಾರದ ಸುತ್ತ ಕೇಂದ್ರೀಕೃತವಾಗಿವೆ.
ಫೆಬ್ರುವರಿ 1 ರಂದು ಕೇಂದ್ರ ಬಜೆಟ್ ಮಂಡನೆ
ಫೆಬ್ರುವರಿ 1 ರಂದು ಕೇಂದ್ರ ಬಜೆಟ್ ಮಂಡನೆ ಆಗಲಿದೆ. 2023-24ನೇ ಸಾಲಿನ ಬಜೆಟ್ ಮಂಡನೆಗೆ ಕೇಂದ್ರ ವಿತ್ತ ಸಚಿವಾಲಯ ಎಲ್ಲ ರೀತಿಯ ಸಿದ್ದತೆಗಳನ್ನೂ ನಡೆಸ್ತಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಸರ್ಕಾರಕ್ಕೆ ಸವಾಲಾಗುತ್ತಾ ಬೇಡಿಕೆ ಪೂರೈಕೆ?
ಇತ್ತ ಹದಗೆಡುತ್ತಿರುವ ಜಾಗತಿಕ ಆರ್ಥಿಕ ವಾತಾವರಣವು FY24 ರಲ್ಲಿ ಭಾರತದ GDP ಬೆಳವಣಿಗೆಯನ್ನು ಕುಂಠಿತಗೊಳಿಸಬಹುದಾದ್ದರಿಂದ, ಮೇಲೆ ತಿಳಿಸಲಾದ ಎಲ್ಲಾ ಬೇಡಿಕೆಗಳನ್ನು ಪೂರೈಸಲು ಸರ್ಕಾರಕ್ಕೆ ಸಾಧ್ಯವಾಗದೇ ಇರಬಹುದು ಎನ್ನಲಾಗಿದೆ.
ವಿತ್ತೀಯ ಕೊರತೆಯು ಈಗಾಗಲೇ ವಿಸ್ತರಿಸಲ್ಪಟ್ಟಿದೆ ಮತ್ತು ಚಾಲ್ತಿ ಖಾತೆ ಕೊರತೆ (ಸಿಎಡಿ) ಒಂಭತ್ತು ವರ್ಷಗಳ ಗರಿಷ್ಠ ಮಟ್ಟದಲ್ಲಿದೆ, ತಜ್ಞರು ಬಜೆಟ್‌ನಲ್ಲಿ ಕಡಿಮೆ ವೆಚ್ಚವನ್ನು ನಿರೀಕ್ಷಿಸುತ್ತಿದ್ದು, ಕೆಲವು ಉತ್ಪನ್ನಗಳ ಮೇಲೆ ಕಸ್ಟಮ್ಸ್ ಸುಂಕ ಹೆಚ್ಚಳದ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ