ದೆಹಲಿ: ಪ್ರತಿ ವರ್ಷ ಫೆಬ್ರವರಿ 1 ರಂದು ಭಾರತೀಯ ಬಜೆಟ್ (Budget 2023) ಎಂದು ಕರೆಯಲ್ಪಡುವ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸುತ್ತಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ 2023-2024 ರ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ (NDA Government) ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಈ ಬಾರಿಯ ಬಜೆಟ್ ಯಾವಾಗ ಮತ್ತು ಎಷ್ಟೊತ್ತಿಗೆ ಘೋಷಣೆಯಾಗುತ್ತದೆ ಎಂಬ ಮಾಹಿತಿಗಳು ಈಗಾಗ್ಲೇ ಗೊತ್ತಿದೆ. ಆದರೆ ಹಲವರಿಗೆ ಬಜೆಟ್‌ಗೆ ಸಂಬಂಧಪಟ್ಟ ಕೆಲ ಆಸಕ್ತಿದಾಯಕ ವಿಚಾರಗಳ ಬಗ್ಗೆ ಇನ್ನೂ ತಿಳಿದಿಲ್ಲ. ಹಾಗಾದರೆ ಬಜೆಟ್ ಕುರಿತಾದ ಕೆಲ ಇಂಟರೆಸ್ಟಿಂಗ್ ವಿಚಾರಗಳು ನಿಮಗಾಗಿ ಇಲ್ಲಿವೆ.
ಕೇಂದ್ರ ಬಜೆಟ್‌ನ ಆಸಕ್ತಿದಾಯಕ ಸಂಗತಿಗಳು
* ಈಸ್ಟ್ ಇಂಡಿಯಾ ಕಂಪನಿಯ ರಾಜಕಾರಣಿ ಮತ್ತು ಅರ್ಥಶಾಸ್ತ್ರಜ್ಞ ಜೇಮ್ಸ್ ವಿಲ್ಸನ್ ಬ್ರಿಟಿಷ್ ಕ್ರೌನ್ಗೆ ಬಜೆಟ್ ಅನ್ನು ಪ್ರಸ್ತಾಪಿಸಿದರು. ನವೆಂಬರ್ 26, 1947 ರಂದು, ಹಣಕಾಸು ಸಚಿವ ಆರ್.ಕೆ.ಷಣ್ಮುಖಂ ಚೆಟ್ಟಿ ಅವರು ನಮ್ಮ ಭಾರತದ ಮೊದಲ ಬಜೆಟ್ ಅನ್ನು ಮಂಡಿಸಿದರು.
* ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಕೇಂದ್ರ ಬಜೆಟ್ ಮಂಡಿಸಿದ ಮೊದಲ ಮಹಿಳೆ. ಇವರು 1970-71ರ ಹಣಕಾಸು ವರ್ಷಕ್ಕೆ ಕೇಂದ್ರ ಬಜೆಟ್ ಮಂಡಿಸಿದ್ದರು. ಕೇಂದ್ರ ಬಜೆಟ್ ಮಂಡಿಸಿದ ಎರಡನೇ ಮಹಿಳೆ ನಿರ್ಮಲಾ ಸೀತಾರಾಮನ್.
* ಹಣಕಾಸು ವರ್ಷ 1973-74ರ ಬಜೆಟ್ ಅನ್ನು ಆಗಿನ ಹಣಕಾಸು ಸಚಿವ ಯಶವಂತರಾವ್ ಬಿ. ಚವಾಣ್ ಅವರು ಮಂಡಿಸಿದರು ಮತ್ತು 550 ಕೋಟಿ ರೂಪಾಯಿಗಳ ಹೆಚ್ಚಿನ ಬಜೆಟ್ ಕೊರತೆಯಿಂದಾಗಿ ಅದನ್ನು 'ಕಪ್ಪು ಬಜೆಟ್' ಎಂದು ಕರೆಯಲಾಗಿತ್ತು.
* ಯೂನಿಯನ್ ಬಜೆಟ್ ಅನ್ನು 1955 ರವರೆಗೆ ಇಂಗ್ಲಿಷ್‌ನಲ್ಲಿ ಮಾತ್ರ ವಿತರಿಸಲಾಯಿತು. ನಂತರ ಕೇಂದ್ರ ಸರ್ಕಾರವು ಬಜೆಟ್ ದಾಖಲೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಮುದ್ರಿಸಲು ನಿರ್ಧರಿಸಿತು.
* ಮೊದಲು ಬ್ರಿಟಿಷರು 1924 ರಲ್ಲಿ ಕೇಂದ್ರ ಬಜೆಟ್‌ನ ಜೊತೆಗೆ ರೈಲ್ವೆ ಬಜೆಟ್ ಅನ್ನು ಪ್ರಾರಂಭಿಸಿದರು. ಅಂದರೆ ಹಿಂದೆ ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು.
ಆದರೆ ಸುಮಾರು 92 ವರ್ಷಗಳ ಹಳೆಯ ಪದ್ಧತಿಗೆ ಅಂತ್ಯ ಹಾಡಿದ ಕೇಂದ್ರ ಸರ್ಕಾರವು 2016ರಲ್ಲಿ ಈ ಎರಡೂ ಬಜೆಟ್ ಅನ್ನು ವಿಲೀನಗೊಳಿಸಿತು.
ರೈಲು ಬಜೆಟ್ ಸಂಯೋಜನೆಯಾಗಿದ್ದು ಹೇಗೆ?
ಅರುಣ್ ಜೇಟ್ಲಿ ಅವರು ಮೋದಿ ಆಡಳಿತದ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸುತ್ತಿರುವಾಗ ಕೇಂದ್ರ ಬಜೆಟ್ ಅನ್ನು ರೈಲ್ವೆ ಬಜೆಟ್‌ನೊಂದಿಗೆ ಸಂಯೋಜಿಸುವ ಕಲ್ಪನೆಯನ್ನು ಮುಂದಿಟ್ಟರು.
ಇದರ ನಂತರ, ಬಜೆಟ್‌ಗಳ ವಿಲೀನವನ್ನು ತನಿಖೆ ಮಾಡಲು ಸಮಿತಿಯನ್ನು ಸ್ಥಾಪಿಸಲಾಯಿತು. ಅರುಣ್ ಜೇಟ್ಲಿ ಅವರು 2017 ರಲ್ಲಿ ಮೊದಲ ಜಂಟಿ ಬಜೆಟ್ ಅನ್ನು ಮಂಡಿಸಿದರು.
ಉದಾರೀಕರಣಕ್ಕೆ ನಾಂದಿ
* ಹಣಕಾಸು ವರ್ಷ 1991-92 ರಲ್ಲಿ ಆಗಿನ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರು ಮಂಡಿಸಿದ ಬಜೆಟ್ ಅನ್ನು 'ದಿ ಎಪೋಚಲ್ ಬಜೆಟ್' ಎಂದು ಕರೆಯಲಾಗುತ್ತದೆ. ಈ ಬಜೆಟ್ ರಾಷ್ಟ್ರದ ಆರ್ಥಿಕ ಉದಾರೀಕರಣಕ್ಕೆ ನಾಂದಿ ಹಾಡಿತಲ್ಲದೇ, ಭಾರತವನ್ನು ಶಾಶ್ವತವಾಗಿ ಬದಲಾಯಿಸಿದ ಬಜೆಟ್ ಆಗಿದೆ.
* ಯೂನಿಯನ್ ಬಜೆಟ್ ಮಂಡನೆಯ ದಿನಾಂಕ ಮತ್ತು ಸಮಯವನ್ನು 1999 ರಲ್ಲಿ ನಿಗದಿಪಡಿಸಲಾಯಿತು. ಬ್ರಿಟಿಷರ ಆಳ್ವಿಕೆಯ ಉದ್ದಕ್ಕೂ ವಾಡಿಕೆಯಂತೆ ಫೆಬ್ರವರಿಯ ಅಂತಿಮ ದಿನದಂದು ಸಂಜೆ ಐದು ಗಂಟೆಗೆ ಕೇಂದ್ರ ಬಜೆಟ್ ಅನ್ನು ಮಂಡಿಸಲಾಗುತ್ತಿತ್ತು.
ಸಮಯದ ಬದಲಾವಣೆ
ಆದರೆ 1999 ರಲ್ಲಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಕೇಂದ್ರ ಬಜೆಟ್ ಮಂಡನೆ ಸಮಯವನ್ನು 5 ಗಂಟೆಯಿಂದ ಬೆಳಗ್ಗೆ 11 ಗಂಟೆಗೆ ಬದಲಾಯಿಸಿದರು. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2017 ರಲ್ಲಿ ಅದೇ ಸಮಯದಲ್ಲಿ ಬಜೆಟ್ ಮಂಡನೆಯ ದಿನಾಂಕವನ್ನು ಫೆಬ್ರವರಿ 1 ಕ್ಕೆ ಬದಲಾಯಿಸಿದರು.
ಇದನ್ನೂ ಓದಿ: Union Budget 2023 LIVE: ಸಂಸತ್ ಭವನಕ್ಕೆ ಬಂದ ಹಣಕಾಸು ಸಚಿವೆ, ಕೇವಲ ಕ್ಷಣಗಳಲ್ಲಿ ಸಂಪುಟ ಸಭೆ
* ಬಜೆಟ್ ಅನ್ನು 1950 ರವರೆಗೆ ರಾಷ್ಟ್ರಪತಿ ಭವನದಲ್ಲಿಯೇ ಮುದ್ರಿಸಲಾಗುತ್ತಿತ್ತು. ಆದರೆ 1950 ರಲ್ಲಿ ಬಜೆಟ್ ಸೋರಿಕೆಯಾಯಿತು. ಅದರ ನಂತರ ಸರ್ಕಾರವು ಬಜೆಟ್‌ನ ಮುದ್ರಣವನ್ನು ರಾಷ್ಟ್ರಪತಿ ಭವನದಿಂದ ಮಿಂಟೋ ರಸ್ತೆಯಲ್ಲಿರುವ ಮುದ್ರಣಾಲಯಕ್ಕೆ ವರ್ಗಾಯಿಸಿತು.
* ಬಜೆಟ್ ಅನ್ನು ಈ ಹಿಂದೆ ಬಜೆಟ್ ಬ್ರೀಫ್‌ಕೇಸ್‌ನಲ್ಲಿ ಸಾಗಿಸಲಾಗುತ್ತಿತ್ತು. ಆದರೆ 2019 ರಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಮಾಣಿತ ಬಜೆಟ್ ಬ್ರೀಫ್‌ಕೇಸ್ ಅನ್ನು ಸಾಂಪ್ರದಾಯಿಕ 'ಬಹಿ ಖಾತಾ' ಜೊತೆಗೆ ರಾಷ್ಟ್ರೀಯ ಲಾಂಛನದೊಂದಿಗೆ ಬದಲಾಯಿಸಿದರು.
* ಬಜೆಟ್ ಮಂಡನೆಯಾಗುವ ಕೆಲವು ದಿನಗಳ ಮೊದಲು ನಡೆಯುವ ಧಾರ್ಮಿಕ ಕ್ರಿಯೆಯಲ್ಲಿ ಹಣಕಾಸು ಸಚಿವರು ಹಲ್ವಾವನ್ನು ಸಚಿವಾಲಯದ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳಿಗೆ ನೀಡುವ ಪದ್ಧತಿ ಕೂಡ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ