ಬಜೆಟ್ 2020 (Budget 2020) ರಲ್ಲಿ ಪರಿಚಯಿಸಲಾದ ಆದಾಯ ತೆರಿಗೆ ಕ್ರಮ (Tax Rules) ಗಳು ತೆರಿಗೆದಾರರಿಗೆ ವಿನಾಯಿತಿಯನ್ನು ನೀಡುತ್ತಿದ್ದರೂ ತೆರಿಗೆದಾರರು (Tax Payers) ಅದರಿಂದ ಅಷ್ಟೊಂದು ಸಂಪ್ರೀತರಾಗಿಲ್ಲ. ಹೀಗಾಗಿ ಮುಂಬರುವ ಕೇಂದ್ರ ಬಜೆಟ್ 2023 (Budget 2023) ರಲ್ಲಿ ತೆರಿಗೆ ವಿನಾಯಿತಿಗಳಲ್ಲಿ ಕೇಂದ್ರವು ಏನಾದರೂ ಬದಲಾವಣೆ ಮಾಡಲಿದೆಯೇ ಎಂಬುದು ಜನಸಾಮಾನ್ಯರ ನಿರೀಕ್ಷೆಯಾಗಿದೆ. 2023 ಕೇಂದ್ರ ಬಜೆಟ್ನಲ್ಲಿ ದರ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರಸರಕಾರ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಜನಸಾಮಾನ್ಯರಿಗೆ ಹೆಚ್ಚು ಸಹಕಾರಿಯಾಗಿರುವ ಬಜೆಟ್ ಇದಾಗಿರಬೇಕು ಎಂಬುದು ಕೇಂದ್ರದ ನಿಲುವಾಗಿದೆ.
ಪ್ರಸ್ತುತ ಖರ್ಚುವೆಚ್ಚಗಳಿಗೆ ಹೋಲಿಸಿದರೆ ತೆರಿಗೆ ವಿನಾಯಿತಿ ಕಡಿಮೆ ಇದೆ
ಆದಾಯ ತೆರಿಗೆ ಕಾಯ್ದೆ 1961 ರ ಪ್ರಕಾರ ಹಲವಾರು ವಿನಾಯಿತಿಗಳನ್ನು ತೆರಿಗೆದಾರರಿಗೆ ಒದಗಿಸುತ್ತಿದೆ. ಆದರೆ ಈ ವಿನಾಯಿತಿಗಳ ದರವು ಪ್ರಸ್ತುತ ಜೀವನ ಮಟ್ಟಕ್ಕೆ ಹೋಲಿಸಿದರೆ ತುಂಬಾ ಕಡಿಮೆ ಇದೆ. ಈ ಸಂಬಂಧಿತವಾಗಿ ಸರಕಾರ ಪರಿಗಣಿಸಬಹುದು ಎನ್ನಲಾದ ಕೆಲವೊಂದು ವಿನಾಯಿತಿಗಳು ಈ ಕೆಳಗಿನಂತಿದೆ
ಸಂಬಳ ಮತ್ತು ಪಿಂಚಣಿ ಆದಾಯದಿಂದ ಪ್ರಮಾಣಿತ ಕಡಿತ
ಸಂಬಳ ಪಡೆಯುವ ಅಥವಾ ಪಿಂಚಣಿಗೆ ಅರ್ಹವಾಗಿರುವ ವ್ಯಕ್ತಿಗಳಿಗೆ ನೀಡುವ ರಿಯಾಯಿತಿ ಇದಾಗಿದೆ. ಸಾರಿಗೆ ಭತ್ಯೆಯ ವಿನಾಯಿತಿ ಮತ್ತು ವಿವಿಧ ವೈದ್ಯಕೀಯ ವೆಚ್ಚಗಳ ಮರುಪಾವತಿಗೆ ಬದಲಾಗಿ ಇದನ್ನು ಬಜೆಟ್ 2018 ರಲ್ಲಿ ಪರಿಚಯಿಸಲಾಯಿತು. FY 2021-22 ಗಾಗಿ, ಪ್ರಮಾಣಿತ ಕಡಿತದ ಮಿತಿಯು 50,000 ರೂ ಆಗಿದೆ.
ಸರಕಾರ ಆದ್ಯತೆ ನೀಡಬಹುದು ಎಂಬ ಆಶಯ
ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರವು ನವೆಂಬರ್ 2022 ರಲ್ಲಿ 5.9% ಗೆ ಮಧ್ಯಮವಾಗಿದ್ದರೆ, ಸೆಪ್ಟೆಂಬರ್ 2019 ರಲ್ಲಿ 4% ಇದ್ದು 2022 ರ ಸೆಪ್ಟೆಂಬರ್ನಲ್ಲಿ 7.4% ರಷ್ಟು ಗರಿಷ್ಠ ಮಟ್ಟದಲ್ಲಿತ್ತು. ಜೀವನ ವೆಚ್ಚದಲ್ಲಿ ಹೆಚ್ಚಳ ಹಾಗೂ ಸಂಬಳ ಪಡೆಯುವ ತೆರಿಗೆದಾರರು ವೆಚ್ಚಗಳಿಗೆ ಕಡಿತ ಪಡೆಯಲು ಸಾಧ್ಯವಿಲ್ಲದ ಕಾರಣ ಪ್ರಮಾಣಿತ ಕಡಿತವನ್ನು ಹೆಚ್ಚಿಸಲು ಸರ್ಕಾರವು ಆದ್ಯತೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.
ತೆರಿಗೆ ಕಾಯ್ದೆ 80 ಸಿ ಗೃಹ ಭತ್ಯೆ
ಮನೆಯ ಖರ್ಚುಗಳಲ್ಲಿನ ಉಳಿತಾಯವನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಲೈಫ್ ಇನ್ಶೂರೆನ್ಸ್, ಪ್ರಾವಿಡೆಂಟ್ ಫಂಡ್, ಉಳಿತಾಯ ಯೋಜನೆಗಳು, ಮನೆಯ ಸಾಲದಲ್ಲಿನ ಮರುಪಾವತಿಗೆ ಕೊಡುಗೆಗಳಲ್ಲಿ ಕಾಯ್ದೆಯ 80 ಸಿ ಯ ಪ್ರಕಾರ 150,000 ದವರೆಗೆ ವಿನಾಯಿತಿಯನ್ನು ಅನುಮತಿಸಲಾಗಿದೆ.
ಈ ಮಿತಿಯಲ್ಲಿ ಹೆಚ್ಚಿನ ಪ್ರಮಾಣವನ್ನು ಪಿಎಫ್ಗೆ ನೀಡುವ ಕೊಡುಗೆಗಳು ಹಾಗೂ ಗೃಹ ಸಾಲದ ಮರುಪಾವತಿಯ ಮೂಲಕ ವಿನಿಯೋಗಿಸಲಾಗುತ್ತದೆ. 150,000 ರೂಪಾಯಿಗಳ ಈ ಮಿತಿಯನ್ನು ಕೊನೆಯ ಬಾರಿಗೆ ಆರ್ಥಿಕ ವರ್ಷ 2014-15 ರಲ್ಲಿ ಪರಿಷ್ಕರಿಸಲಾಗಿದೆ. ಆದ್ದರಿಂದ, ಪ್ರಸ್ತುತ ಕೇಂದ್ರ ಬಜೆಟ್ನಲ್ಲಿ ಇದನ್ನು 2,50,000 ರೂ.ಗೆ ಪರಿಷ್ಕರಿಸಲು ಸರ್ಕಾರ ಪರಿಗಣಿಸುವ ನಿರೀಕ್ಷೆಯಿದೆ ಎಂದು ಊಹಿಸಲಾಗಿದೆ.
ತೆರಿಗೆ ಕಾಯ್ದೆ 80 ಸಿಸಿಡಿ ರಾಷ್ಟ್ರೀಯ ಪಿಂಚಣಿ ಯೋಜನೆ
ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಗೆ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಂತಹ) ಕೊಡುಗೆಗಳಿಗೆ ಕಡಿತವನ್ನು ಅನುಮತಿಸಲಾಗಿದೆ.ವಿಭಾಗ 80CCD ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅಥವಾ ಅಟಲ್ ಪಿಂಚಣಿ ಯೋಜನೆ (APY) ಗೆ ಕೊಡುಗೆಗಳ ಕಡಿತಗಳಿಗೆ ಸಂಬಂಧಿಸಿದೆ.
ಇದನ್ನೂ ಓದಿ: ಈ ಬಾರಿಯ ಬಜೆಟ್ ಭಾರತೀಯ ಚಿಲ್ಲರೆ ವಲಯದ ಅವಶ್ಯಕತೆಗಳನ್ನು ಪೂರೈಸುತ್ತಾ? ಏನಂತಾರೆ ತಜ್ಞರು?
NPS ಗೆ ಉದ್ಯೋಗದಾತರು ನೀಡಿದ ಕೊಡುಗೆಗಳು ಸಹ ಈ ವಿಭಾಗದ ಅಡಿಯಲ್ಲಿ ಬರುತ್ತವೆ. NPS ಕೇಂದ್ರ ಸರ್ಕಾರದಿಂದ ಅಧಿಸೂಚಿತ ಪಿಂಚಣಿ ಯೋಜನೆಯಾಗಿದೆ. ಪಿಂಚಣಿದಾರರು ಪಿಂಚಣಿ ಯೋಜನೆಗೆ ಸ್ವಂತ ಕೊಡುಗೆಗಾಗಿ ಸೆಕ್ಷನ್ 80CCD(1B) ಅಡಿಯಲ್ಲಿ 50,000 ರೂ.ಗಳ ಹೆಚ್ಚುವರಿ ಕಡಿತವನ್ನು ಮಾತ್ರ ಪಡೆಯಲು ಸಾಧ್ಯವಾಗುತ್ತದೆ. ಕೆಲವು ಸ್ಪಷ್ಟವಾದ ಪ್ರಯೋಜನವನ್ನು ಒದಗಿಸಲು, ಸರ್ಕಾರವು ವೈಯಕ್ತಿಕವಾಗಿ ಈ ಮಿತಿಯನ್ನು ಹೆಚ್ಚಿಸುವುದನ್ನು ಮರುಪರಿಶೀಲಿಸಬಹುದು
ತೆರಿಗೆ ಕಾಯ್ದೆ 80 ಡಿ ವೈದ್ಯಕೀಯ ವಿಮೆಯಲ್ಲಿನ ವಿನಾಯಿತಿಗಳಲ್ಲಿ ಹೆಚ್ಚಳ
ಸೆಕ್ಷನ್ 80D ಅಡಿಯಲ್ಲಿ ಯಾವುದೇ ವರ್ಷದಲ್ಲಿ ಪಾವತಿಸಿದ ವೈದ್ಯಕೀಯ ವಿಮಾ ಪ್ರೀಮಿಯಂಗಳಿಗೆ ತಮ್ಮ ಒಟ್ಟು ಆದಾಯದಿಂದ ವಿನಾಯಿತಿ ಪಡೆಯಬಹುದು. ಈ ವಿನಾಯಿತಿ ಉನ್ನತ ಆರೋಗ್ಯ ಯೋಜನೆಗಳು ಮತ್ತು ಗಂಭೀರ ಅನಾರೋಗ್ಯದ ಯೋಜನೆಗಳಿಗೆ ಸಹ ಲಭ್ಯವಿದೆ.ಸೆಕ್ಷನ್ 80Dm ಅಡಿಯಲ್ಲಿ ಅನುಮತಿಸಲಾದ ವಿನಾಯಿತಿ ಆರ್ಥಿಕ ವರ್ಷದಲ್ಲಿ 25,000 ರೂ. ಹಿರಿಯ ನಾಗರಿಕರಿಗೆ, ವಿನಾಯಿತಿ ಮಿತಿಯನ್ನು 50,000 ರೂ ಗೆ ಹೆಚ್ಚಿಸಲಾಗಿದೆ.
ಸಾಂಕ್ರಾಮಿಕದ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆಗಳಿಗೆ ಇರುವ ವೆಚ್ಚಗಳು ಅಧಿಕವಾಗಿದೆ. ಹೀಗಾಗಿ ಹೆಚ್ಚಿನ ಕವರೇಜ್ ಮತ್ತು ಹೆಚ್ಚಿನ ಪ್ರೀಮಿಯಂಗಳೊಂದಿಗೆ ಆರೋಗ್ಯ ವಿಮಾ ಯೋಜನೆಗಳನ್ನು ಆರಿಸಿಕೊಳ್ಳುವುದು ಮುಖ್ಯವಾಗಿದೆ. ಈ ಮಿತಿಗಳನ್ನು ಹೆಚ್ಚಿಸಿದರೆ ಪ್ರತಿಯೊಬ್ಬರಿಗೂ ಇದು ಪ್ರಯೋಜನಕಾರಿಯಾಗುವುದರಲ್ಲಿ ಸಂಶಯವಿಲ್ಲ.
ಮಕ್ಕಳ ಶಿಕ್ಷಣ ಭತ್ಯೆಯಲ್ಲಿ ಹೆಚ್ಚಳ
ಮಕ್ಕಳ ಶಿಕ್ಷಣ ಭತ್ಯೆ ಹಾಗೂ ಹಾಸ್ಟೆಲ್ ಖರ್ಚುವೆಚ್ಚಗಳಿಗಾಗಿ ತಿಂಗಳಿಗೆ ರೂ 100 ರಿಂದ ರೂ 300 ಅನ್ನು ನಿಗದಿಪಡಿಸಲಾಗಿದೆ. ಈ ಮಿತಿಗಳನ್ನು ಆಗಸ್ಟ್ 1997 ರಲ್ಲಿ ಹೊಂದಿಸಲಾಗಿದ್ದು ಇಲ್ಲಿಯವರೆಗೆ ಹೀಗೆಯೇ ಇದೆ. ಪ್ರಸ್ತುತ ದಿನದಲ್ಲಿ ಶಾಲಾ ಶುಲ್ಕಗಳು ಹಾಗೂ ಹಾಸ್ಟೆಲ್ ಶುಲ್ಕಗಳು ಏರಿಕೆಯಾಗಿರುವುದರಿಂದ ಪ್ರಸ್ತುತ ಮಿತಿಗಳನ್ನು ಪರಿಷ್ಕರಿಸಬೇಕಾಗಿರುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ 2023 ರ ಬಜೆಟ್ ಸೂಕ್ತ ಮಾರ್ಪಾಡುಗಳನ್ನು ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಸ್ವಯಂ ನಿವೇಶನ ಆಸ್ತಿಗೆ ಪಾವತಿಸಿದ ಬಡ್ಡಿಯಲ್ಲಿನ ಕಡಿತ
ಆರ್ಥಿಕ ವರ್ಷ 2014-15 ರಲ್ಲಿ ಹೌಸಿಂಗ್ ಲೋನ್ನಲ್ಲಿನ ಸ್ವಯಂ ಆಸ್ತಿಯ ಬಡ್ಡಿಯ ದರ ವಿನಾಯಿಯಿ ಮಿತಿಯನ್ನು ರೂ 2,00,000 ಕ್ಕೆ ಹೊಂದಿಸಲಾಗಿದೆ. ಹೆಚ್ಚಿದ ಬಡ್ಡಿದರಗಳಲ್ಲಿ ನಿವೇಶನ ಲೋನ್ಗಳು ಪ್ರಸ್ತುತ ದಿನಗಳಲ್ಲಿ ಹೆಚ್ಚಾಗಿದೆ.
ಕಾಯ್ದೆಯಲ್ಲಿನ ಷರತ್ತುಗಳಿಗೆ ತೆರಿಗೆದಾರರು ಒಳಪಟ್ಟರೆ ಮಾತ್ರವೇ ಹೆಚ್ಚುವರಿ ವಿನಾಯಿತಿಯಾಗಿ ರೂ 1,50,000 ಬಡ್ಡಿ ವಿನಾಯಿತಿಯನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಮಿತಿಯನ್ನು ಕನಿಷ್ಟ ಪಕ್ಷ ರೂ 3,00,000 ಕ್ಕೆ ಏರಿಸುವುದರಿಂದ ತೆರಿಗೆದಾರರಿಗೆ ಕೊಂಚವಾದರೂ ಸಹಕಾರಿಯಾಗಬಹುದು. ಮನೆ ಆಸ್ತಿಯಿಂದ ರೂ 2,00,000 ದ ಮಿತಿಯನ್ನು ತೆಗೆದುಹಾಕುವುದು ಮಾರ್ಪಡಿಸಬಹುದಾದ ಮತ್ತೊಂದು ಸಂಬಂಧಿತ ಪರಿಹಾರವಾಗಿದೆ.
ಇತರ ದೇಶಗಳಲ್ಲಿ ತೆರಿಗೆ ವಿನಾಯಿತಿ ಹೇಗಿದೆ?
ತೆರಿಗೆ ವಿನಾಯಿತಿ ಎಂಬುದು ತೆರಿಗೆದಾರರಿಗೆ ಕೊಂಚ ನಿರಾಳತೆಯನ್ನು ನೀಡುತ್ತದೆ. ಇದೇ ರೀತಿ ತೆರಿಗೆ ವಿನಾಯಿತಿ ನೀಡಿರುವ ಇತರ ದೇಶಗಳಿಗೆ ಹೋಲಿಸಿದಾಗ ಭಾರತದಲ್ಲಿ ತೆರಿಗೆದಾರರಿಗೆ ವಿನಾಯಿತಿಗಳ ಪ್ರಮಾಣ ಬಹಳ ಕಡಿಮೆ ಎಂದು ಅನ್ನಿಸದಿರದು.
ಸಿಂಗಾಪುರ್ ಹಾಗೂ ಜರ್ಮನಿಯಲ್ಲಿನ ತೆರಿಗೆ ವಿನಾಯಿತಿಗಳು
ಸಿಂಗಾಪುರ್ ಹಾಗೂ ಜರ್ಮನಿಯಂತಹ ದೇಶಗಳು ತೆರಿಗೆದಾರರಿಗೆ ಸಾಕಷ್ಟು ತೆರಿಗೆ ವಿನಾಯಿತಿಗಳನ್ನು ಒದಗಿಸುತ್ತಿವೆ. ಸಿಂಗಾಪುರವು ಮಕ್ಕಳ ಭತ್ಯೆಯನ್ನು ಪ್ರತಿ ಮಗುವಿಗೆ ಎಸ್ಜಿಡಿ4,000 ದಂತೆ ನಿಗದಿಪಡಿಸಿದರೆ ಅಲವಂಬಿತ ಪೋಷಕ ಭತ್ಯೆ ಎಸ್ಜಿಡಿ9000 ವಿದೆ ಹಾಗೂ ಸಂಗಾತಿ ಭತ್ಯೆ ಎಸ್ಜಿಡಿ2,000 ಎಂಬುದಾಗಿ ನಿಗದಿಪಡಿಸಿದೆ.
ಜರ್ಮನಿ ಮಕ್ಕಳ ಭತ್ಯೆಯಾಗಿ ಪ್ರತಿ ಮಗುವಿಗೆ EUR227.50 ಅನ್ನು ನಿಗದಿಪಡಿಸಿದ್ದು ಶಾಲಾ ಶುಲ್ಕದಲ್ಲಿ 30% ವಿನಾಯಿತಿಯನ್ನು ಒದಗಿಸಿದೆ. ಪ್ರಸ್ತುತ ಹಣದುಬ್ಬರ ಹಾಗೂ ಜೀವನ ವೆಚ್ಚಗಳಿಗೆ ಸಂಬಂಧಿಸಿದಂತೆ ಈ ಮಿತಿಗಳು ಹೆಚ್ಚು ಪ್ರಯೋಜನಕಾರಿಯಾಗಿವೆ.
ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಒದಗಿಸಿರುವ ಪ್ರಯೋಜನಗಳು
ಇದಲ್ಲದೆ ಹೆಚ್ಚಿನ ದೇಶಗಳು ಸ್ಟ್ಯಾಂಡರ್ಡ್ ಡಿಡಕ್ಶನ್/ವೈಯಕ್ತಿಕ ಭತ್ಯೆಯನ್ನು ಪ್ರತಿ ವ್ಯಕ್ತಿಗೆ ಒದಗಿಸುತ್ತಿದ್ದು ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗೆ ಕೂಡ ಉಂಟಾಗುವ ಖರ್ಚುವೆಚ್ಚಗಳಿಗೆ ವಿನಾಯಿತಿ ಕ್ಲೈಮ್ ಮಾಡುವ ಅನುಮತಿಯನ್ನೊದಗಿಸಿದೆ.
ತೆರಿಗೆ ಮಿತಿಯನ್ನು ರೂ 2.5 ಲಕ್ಷದಿಂದ ರೂ 5 ಲಕ್ಷಕ್ಕೆ ಏರಿಕೆ ಮಾಡಲು ಆಗ್ರಹ
ಭಾರತದಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಪ್ರಸ್ತುತ ರೂ 2.5 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಆದಾಗ್ಯೂ, ಸೆಕ್ಷನ್ 87A ಅಡಿಯಲ್ಲಿ ಲಭ್ಯವಿರುವ ರಿಯಾಯಿತಿ ಆಯ್ಕೆಯಿಂದಾಗಿ ರೂ 5 ಲಕ್ಷದವರೆಗಿನ ಆದಾಯವು ಪ್ರಾಯೋಗಿಕವಾಗಿ ತೆರಿಗೆ ಮುಕ್ತವಾಗಿದೆ. ಆದರೆ 5 ಲಕ್ಷದವರೆಗಿನ ವೈಯಕ್ತಿಕ ತೆರಿಗೆದಾರರ ತೆರಿಗೆ ಹೊಣೆಗಾರಿಕೆ ಹೆಚ್ಚಾಗುತ್ತದೆ. ಹೀಗಾಗಿ ತೆರಿಗೆ ಮಿತಿಯನ್ನು ರೂ 2.5 ಲಕ್ಷದಿಂದ ರೂ 5 ಲಕ್ಷಕ್ಕೆ ಏರಿಸಬೇಕೆಂಬುದು ತೆರಿಗೆದಾರರ ಬಹುದಿನಗಳ ಬೇಡಿಕೆಯಾಗಿದೆ.
ಹಣಕಾಸು ಸಚಿವಾಲಯಕ್ಕೆ ಮಿತಿ ಹೆಚ್ಚಿಸಲು ಪ್ರಸ್ತಾವನೆ
ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ASSOCHAM) ಯೂನಿಯನ್ ಬಜೆಟ್ 2023 ರಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ರೂ 5 ಲಕ್ಷಕ್ಕೆ ಹೆಚ್ಚಿಸಲು ಹಣಕಾಸು ಸಚಿವಾಲಯಕ್ಕೆ ಪ್ರಸ್ತಾಪಿಸಿದೆ. ಇದರಿಂದ ಹೆಚ್ಚಿನ ಆದಾಯದ ಲಭ್ಯತೆ ಇರುತ್ತದೆ ಹಾಗೂ ಆರ್ಥಿಕತೆಯಲ್ಲಿ ಚೇತರಿಕೆಯನ್ನುಂಟು ಮಾಡುವ ವಿಧಾನವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ