ಬಿಟ್‌ಕಾಯಿನ್‌ನ (Bitcoin) ಮೌಲ್ಯದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ನವೆಂಬರ್ನಲ್ಲಿ ತಲುಪಿದ್ದ ದಾಖಲೆಯ ಮಟ್ಟದಿಂದ ಶೇಕಡಾ 50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ದಾಖಲೆಯ ಮಟ್ಟವನ್ನು ತಲುಪಿದ ಬಿಟ್ಕಾಯಿನ್ ಅಲ್ಲಿಂದ ಕೆಳಗೆ ಇಳಿದು, ಬಿಟ್‌ಕಾಯಿನ್‌ನ ಮೌಲ್ಯವು $ 31,000 (£ 25,140) ಕ್ಕಿಂತ ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತದ ಸ್ಟಾಕ್ ಮಾರುಕಟ್ಟೆಗಳು (Stock Market) ಕೂಡ ಕುಸಿದಿರುವುದರಿಂದ ಮಾರುಕಟ್ಟೆ ಮೌಲ್ಯದಿಂದ ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿಯ (Crypto Currency) ಕುಸಿತವು ಸಹ ಭಾರಿ ಮಟ್ಟದಲ್ಲಿ ದಾಖಲಾಗುತ್ತಿದೆ. ಪ್ರಮುಖ ಯುರೋಪಿಯನ್, ಏಷ್ಯನ್ ಮತ್ತು ಯುಎಸ್ ಸೂಚ್ಯಂಕಗಳು ಸಹ ಮತ್ತೆ ಇಳಿಕೆ ಕಂಡಿವೆ. ಕ್ರಿಪ್ಟೋಕರೆನ್ಸಿಯ ಕುಸಿತವು ಪದೇ ಪದೇ ಸಂಭವಿಸುತ್ತಿರುವುದರಿಂದ ಹೆಚ್ಚಿನ ಹೂಡಿಕೆದಾರರು ಡಾಲರ್‌ನಂತಹ ಸುರಕ್ಷಿತ ಜಾಗಗಳಿಗೆ ಅಪಾಯಕಾರಿ ಸ್ವತ್ತುಗಳಿಂದ ಕಾಲ್ಕೀಳುತ್ತಿದ್ದಾರೆ.
ಹೂಡಿಕೆಯ ಬಗ್ಗೆ ಹೆಚ್ಚು ಜಾಗರೂಕರಾಗುತ್ತಿರುವ ಹೂಡಿಕೆದಾರರು
ಇತ್ತೀಚಿನ ಜಪಾನ್‌ನ ನಿಕ್ಕಿ ಸೂಚ್ಯಂಕವು 2.5%ರಷ್ಟು ಕುಸಿದಿದ್ದರೆ, ಲಂಡನ್‌ನ FTSE 100 2%ಕ್ಕಿಂತ ಹೆಚ್ಚು ಕುಸಿದಿದೆ. ಯುಎಸ್ನಲ್ಲಿ, ಡೌ ಸುಮಾರು 2%ನಷ್ಟು S&P 500 3.2% ಮತ್ತು ನಾಸ್ಡಾಕ್ 4.3%ನಷ್ಟು ಕುಸಿದಿದೆ ಮತ್ತು ಉಬರ್ ಕಂಪನಿ ಸಹ ನೆಲಕಚ್ಚಿದೆ. ಹೂಡಿಕೆದಾರರು ಹೂಡಿಕೆಯ ಬಗ್ಗೆ ಹೆಚ್ಚು ಜಾಗರೂಕರಾಗುತ್ತಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಾಹಕ ದಾರಾ ಖೋಸ್ರೋಶಾಹಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ ನಂತರ ಕಂಪನಿಯ ಷೇರುಗಳು 11% ಕ್ಕಿಂತ ಹೆಚ್ಚು ಇಳಿಕೆ ಕಂಡಿವೆ.
"ಮಾರುಕಟ್ಟೆಯು ಭೂಕಂಪನ ಬದಲಾವಣೆಯನ್ನು ಅನುಭವಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ ಮತ್ತು ಅದಕ್ಕೆ ಅನುಗುಣವಾಗಿ ನಾವು ಪ್ರತಿಕ್ರಿಯಿಸಬೇಕಾಗಿದೆ" ಎಂದು ಅವರು ಹೇಳಿದ್ದಾರೆ. " ಉಬರ್ನಲ್ಲಿನ ಸರಾಸರಿ ಉದ್ಯೋಗಿಗಳು ಕೇವಲ 30 ವರ್ಷಕ್ಕಿಂತ ಮೇಲ್ಪಟ್ಟವರು, ಇದರರ್ಥ ನೀವು ಸುದೀರ್ಘ ಮತ್ತು ಅಭೂತಪೂರ್ವ ಬುಲ್ ರನ್‌ನಲ್ಲಿ ನಿಮ್ಮ ವೃತ್ತಿಜೀವನವನ್ನು ಕಳೆದಿದ್ದೀರಿ. ಈ ಮುಂದಿನ ಅವಧಿಯು ವಿಭಿನ್ನವಾಗಿರುತ್ತದೆ ಮತ್ತು ಇದಕ್ಕೆ ವಿಭಿನ್ನ ವಿಧಾನದ ಅಗತ್ಯವಿರುತ್ತದೆ." ಎಂದಿದ್ದಾರೆ.
ಡಿಜಿಟಲ್ ಕರೆನ್ಸಿಯಂತಹ ಅಪಾಯಕಾರಿ ಸ್ವತ್ತುಗಳ ಮಾರಾಟ
ಮಾರುಕಟ್ಟೆಯ ಅನಿಶ್ಚಿತತೆಯ ಸಮಯದಲ್ಲಿ ಸಾಂಪ್ರದಾಯಿಕ ಹೂಡಿಕೆದಾರರು ಡಿಜಿಟಲ್ ಕರೆನ್ಸಿಯಂತಹ ಅಪಾಯಕಾರಿ ಸ್ವತ್ತುಗಳನ್ನು ಮಾರಾಟ ಮಾಡುತ್ತಾರೆ ಮತ್ತು ತಮ್ಮ ಹಣವನ್ನು ಸುರಕ್ಷಿತ ಹೂಡಿಕೆಗೆ ವರ್ಗಾಯಿಸುತ್ತಾರೆ. ಕ್ರಿಪ್ಟೋಕರೆನ್ಸಿ ಮಾರುಕಟ್ಟೆಗಳಲ್ಲಿನ ಚಲನೆಗಳು ಹೆಚ್ಚು ವ್ಯಾಪಕವಾದ ಪ್ರವೃತ್ತಿಗಳನ್ನು ಅನುಸರಿಸುತ್ತಿವೆ, ಏಕೆಂದರೆ ವೃತ್ತಿಪರ ಹೂಡಿಕೆದಾರರು, ಹೆಡ್ಜ್ ಫಂಡ್‌ಗಳು ಮತ್ತು ಹಣ ವ್ಯವಸ್ಥಾಪಕರು, ಒಂದು ಕಾಲದಲ್ಲಿ ವೈಯಕ್ತಿಕ ಹೂಡಿಕೆದಾರರು ಮತ್ತು ಉತ್ಸಾಹಿಗಳ ಡೊಮೇನ್ ಆಗಿದ್ದ ವ್ಯಾಪಾರದಲ್ಲಿ ಹೆಚ್ಚು ಸಕ್ರಿಯರಾಗುತ್ತಾರೆ.
ಬಿಟ್‌ಕಾಯಿನ್ ಮೌಲ್ಯ ಎಷ್ಟಿದೆ
ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯ ಸುಮಾರು ಮೂರನೇ ಒಂದು ಭಾಗವನ್ನು ಹೊಂದಿರುವ ಬಿಟ್‌ಕಾಯಿನ್, ಒಟ್ಟು $570 ಬಿಲಿಯನ್ ಮೌಲ್ಯವನ್ನು ಹೊಂದಿದೆ, ಅದರ ಬೆಲೆ ಕೊನೆಯ ದಿನದಲ್ಲಿ 10%ಕ್ಕಿಂತ ಹೆಚ್ಚು ಮತ್ತು ಕಳೆದ ವಾರದಲ್ಲಿ 20%ಕ್ಕಿಂತ ಹೆಚ್ಚು ಕುಸಿತ ಕಂಡಿದೆ.
ಇದನ್ನೂ ಓದಿ: Explained: ದಿಢೀರ್ ಆಗಿ ಕ್ರಿಪ್ಟೋ ಮಾರುಕಟ್ಟೆ ಕುಸಿಯುತ್ತಿರುವುದೇಕೆ ಗೊತ್ತೇ? ಇಲ್ಲಿದೆ ಕಾರಣ
Ethereum, ವಿಶ್ವದ ಎರಡನೇ ಅತಿದೊಡ್ಡ ಕ್ರಿಪ್ಟೋಕರೆನ್ಸಿ, ಕಳೆದ ವಾರದಲ್ಲಿ 20%ಕ್ಕಿಂತ ಹೆಚ್ಚು ಮೌಲ್ಯದಲ್ಲಿ ಕುಸಿದಿದೆ. ಕಳೆದ ವಾರ ಯುಸ್, ಯುಕೆ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಪ್ರಪಂಚದಾದ್ಯಂತದ ಕೇಂದ್ರ ಬ್ಯಾಂಕ್‌ಗಳು ಏರುತ್ತಿರುವ ಬೆಲೆಗಳನ್ನು ನಿಭಾಯಿಸಲು ಪ್ರಯತ್ನಿಸುತ್ತಿರುವಾಗ ಬಡ್ಡಿದರಗಳನ್ನು ಹೆಚ್ಚಿಸಿವೆ.
ಷೇರುಮಾರುಕಟ್ಟೆ ಕುಸಿತ ಕಂಡಾಗ ಬಿಟ್ ಕಾಯಿನ್ ದರಕೂಡ ಕುಸಿತ ಕಂಡಿದೆ
US ಫೆಡರಲ್ ರಿಸರ್ವ್ ತನ್ನ ಪ್ರಮುಖ ಸಾಲದ ದರವನ್ನು ಅರ್ಧ ಶೇಕಡಾವಾರು ಪಾಯಿಂಟ್‌ನಿಂದ ಹೆಚ್ಚಿಸಿದೆ, ಇದು 20 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಅದರ ಅತಿದೊಡ್ಡ ದರ ಏರಿಕೆಯಾಗಿದೆ. ಹಣದುಬ್ಬರ ಮತ್ತು ಹೆಚ್ಚಿನ ಎರವಲು ವೆಚ್ಚವು ಜಾಗತಿಕ ಆರ್ಥಿಕ ಬೆಳವಣಿಗೆಯ ಮೇಲೆ ಪ್ರಮುಖ ಪರಿಣಾಮ ಬೀರಬಹುದು ಎಂದು ಕೆಲವು ಹೂಡಿಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಉಕ್ರೇನ್‌ನ ಯುದ್ಧವು ವಿಶ್ವ ಆರ್ಥಿಕತೆಯ ಮೇಲೆ ಬೀರುವ ಪರಿಣಾಮದ ಬಗ್ಗೆ ಸಹ ಹೂಡಿಕೆದಾರರು ಚಿಂತಿತರಾಗಿದ್ದಾರೆ. ಯಾವಾಗೆಲ್ಲ ಷೇರುಮಾರುಕಟ್ಟೆ ಕುಸಿದಿದೆಯೋ ಆಗ ಬಿಟ್ ಕಾಯಿನ್ ದರಕೂಡ ಕುಸಿತ ಕಂಡಿದೆ.
ಇದನ್ನೂ ಓದಿ: Indian Rupees: ಡಾಲರ್ ಎದುರು ದಾಖಲೆಯ ಕುಸಿತ ಕಂಡ ರೂಪಾಯಿ ಮೌಲ್ಯ!
ಇದರಮಧ್ಯೆ, ಕಳೆದ ವರ್ಷದಲ್ಲಿ ಬಿಟ್‌ಕಾಯಿನ್ ಎಲ್ ಸಾಲ್ವಡಾರ್ ಮತ್ತು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನಲ್ಲಿ ಕಾನೂನುಬದ್ಧವಾಗಿದೆ. ಎಲ್ ಸಾಲ್ವಡಾರ್ ಯುಎಸ್ ಡಾಲರ್ ಜೊತೆಗೆ ಎಲ್ಲಾ ವಹಿವಾಟುಗಳಲ್ಲಿ ಕ್ರಿಪ್ಟೋಕರೆನ್ಸಿಯನ್ನು ಬಳಸಲು ಗ್ರಾಹಕರಿಗೆ ಅವಕಾಶ ನೀಡುವುದಾಗಿ ಹೇಳಿದ್ದರಿಂದ, ಅಂತರಾಷ್ಟ್ರೀಯ ಹಣಕಾಸು ನಿಧಿಯು ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ