ಮೈಕ್ರೋಸಾಫ್ಟ್ (Microsoft) ಬಿಲೇನಿಯರ್ ಬಿಲ್ ಗೇಟ್ಸ್ (Bill Gates) ಮತ್ತೊಮ್ಮೆ ಪ್ರೀತಿಯಲ್ಲಿ (Love) ಬಿದ್ದಿದ್ದಾರೆ. ದಿವಂಗತ ಮಾಜಿ ಒರೇಕಲ್ (Oracle) ಸಿಇಒ ಮಾರ್ಕ್ ಹರ್ಡ್‌ರ ಪತ್ನಿ ಪೌಲಾ ಹರ್ಡ್ (Paula Hurd) ಹಾಗೂ ಗೇಟ್ಸ್ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಬಿಲ್ ಗೇಟ್ಸ್ ಹಾಗೂ ಪೌಲಾ ಹಾರ್ಡ್ ಡೇಟಿಂಗ್ ಮಾಡುತ್ತಿರುವುದು ಇದೀಗ ಜಗಜ್ಜಾಹೀರವಾಗಿದ್ದು, ಆಕೆ ಇನ್ನೂ ಬಿಲ್ ಗೇಟ್ಸ್ ಮಕ್ಕಳನ್ನು ಭೇಟಿ ಮಾಡಿಲ್ಲ ಎಂದು ಪೀಪಲ್ ಮ್ಯಾಗಜೀನ್ ವರದಿ ಮಾಡಿದೆ. ಮಾರ್ಕ್ ಹರ್ಡ್ 2019ರಲ್ಲಿ ನಿಧನರಾಗಿದ್ದರು. ಬಿಲ್ ಗೇಟ್ಸ್ 2021ರ ಆಗಸ್ಟ್‌ನಲ್ಲಿ ಪತ್ನಿ ಮೆಲಿಂಡಾ ಫ್ರೆಂಚ್ ಗೇಟ್ಸ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ.
ಇಬ್ಬರ ನಡುವೆ ನಿಕಟತೆ ಏರ್ಪಟ್ಟಿದೆ
ಬಿಲ್ ಗೇಟ್ಸ್ ಹಾಗೂ ಪೌಲಾ ಹಾರ್ಡ್ ಪರಸ್ಪರ ನಿಕಟರಾಗಿದ್ದು, ಬಿಟ್ಟಿರಲಾಗದಂತಹ ಬಂಧ ಅವರಿಬ್ಬರ ನಡುವೆ ಏರ್ಪಟ್ಟಿದೆ ಎಂದು ನವಜೋಡಿಗಳ ಸ್ನೇಹಿತರೊಬ್ಬರು ಡೈಲಿ ಮೇಲ್‌ಗೆ ತಿಳಿಸಿದ್ದಾರೆ.
ಟೆನಿಸ್ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿದ್ದ ಜೋಡಿ
67 ರ ಹರೆಯದ ಬಿಲ್ ಗೇಟ್ಸ್ ಹಾಗೂ 60 ರ ಹರೆಯದ ಹರ್ಡ್ ಇಬ್ಬರೂ ಕಳೆದ ತಿಂಗಳು ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಪಂದ್ಯಾವಳಿಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಟೆನ್ನಿಸ್ ಪ್ರೇಮಿಗಳಾಗಿದ್ದು ಮಾರ್ಚ್ 2022 ರಲ್ಲಿ ಇಂಡಿಯನ್ ವೆಲ್ಸ್ ಟೆನಿಸ್ ಪಂದ್ಯಾವಳಿಯ WTA ಸೆಮಿಫೈನಲ್ ಪಂದ್ಯದಲ್ಲಿ ಜೊತೆಯಾಗಿ ಕುಳಿತುಕೊಂಡು ಪಂದ್ಯವನ್ನು ಎಂಜಾಯ್ ಮಾಡುತ್ತಿದ್ದುದು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದು, ಇವರಿಬ್ಬರ ನಡುವಿನ ಪ್ರೀತಿ ಬಹಿರಂಗಗೊಂಡಿತ್ತು.
ಗುರುತು ಮರೆಮಾಡಿದ್ದ ಪೌಲಾ ಹರ್ಡ್ಸ್
ನಗರದ ಖ್ಯಾತ ಒಪೆರಾ ಹೌಸ್‌ನ ಮುಂದೆ ಇಬ್ಬರೂ ಜೊತೆಯಾಗಿ ನಿಂತು ಫೋಟೋಗಳಿಗೆ ಫೋಸ್ ನೀಡಿದ್ದರು. ಆ ಸಮಯದಲ್ಲಿ ಬಿಲ್ ಗೇಟ್ಸ್ ಜೊತೆಗೆ ಇದ್ದದ್ದು ಹರ್ಡ್ಸ್ ಎಂಬುದು ವರದಿಯಾಗಿರಲಿಲ್ಲ. ಹರ್ಡ್ಸ್ ತಮ್ಮ ಗುರುತನ್ನು ಬಹಿರಂಗಪಡಿಸದೇ ಇದ್ದುದರಿಂದ ರಹಸ್ಯ ಮಹಿಳೆಯೊಂದಿಗೆ ಸಿಡ್ನಿಯ ನಗರಗಳಲ್ಲಿ ಗೇಟ್ಸ್ ಓಡಾಟ ಎಂಬ ಶೀರ್ಷಿಕೆ ನೀಡಿ ಪತ್ರಿಕೆಗಳು ಸುದ್ದಿ ಮಾಡಿದ್ದವು.
ಒಂದು ವರ್ಷದಿಂದ ಡೇಟಿಂಗ್ ನಡೆಸುತ್ತಿರುವ ಗೇಟ್ಸ್ ಹಾಗೂ ಪೌಲಾ
ಹಿರಿಯ ಲವ್ಬರ್ಡ್ಸ್ ಹತ್ತಿರ ಹತ್ತಿರ ಒಂದು ವರ್ಷದಿಂದ ಇಬ್ಬರೂ ಜೊತೆಯಾಗಿ ಓಡಾಡಿಕೊಂಡಿದ್ದು ಆಕೆಯನ್ನು ಯಾವಾಗಲೂ ಮಿಸ್ಟರಿ ವುಮನ್ (ರಹಸ್ಯ ಮಹಿಳೆ) ಎಂದೇ ಉಲ್ಲೇಖಿಸಲಾಗುತ್ತಿದೆ. ಆದರೆ ಅವರಿಬ್ಬರ ಪ್ರೇಮ ಸಂಬಂಧದಲ್ಲಿ ಯಾವುದೇ ರಹಸ್ಯವಿಲ್ಲ ಹಾಗೂ ತುಂಬಾ ರೊಮ್ಯಾಂಟಿಕ್ ಸಂಬಂಧದಲ್ಲಿ ಇಬ್ಬರೂ ಆಪ್ತರಾಗಿದ್ದಾರೆ ಎಂದು ಸ್ನೇಹಿತರೊಬ್ಬರು ಸುದ್ದಿಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಗೇಟ್ಸ್ ವಿಚ್ಛೇದನ
ಬಿಲ್ ಗೇಟ್ಸ್ ಹಾಗೂ ಮಾಜಿ ಪತ್ನಿ ಮೆಲಿಂಡಾ ಫ್ರೆಂಚ್ ಗೇಟ್ಸ್ ತಮ್ಮ ವಿಚ್ಛೇದವನ್ನು ಖಾತ್ರಿಪಡಿಸಿದ ಎರಡು ವರ್ಷಗಳ ನಂತರ ಹರ್ಡ್ ಹಾಗೂ ಗೇಟ್ಸ್‌ರ ಪ್ರಣಯ ಅನುಬಂಧ ಸುದ್ದಿಯಾಗಿದೆ.
ಗೇಟ್ಸ್ ದಂಪತಿ 27 ವರ್ಷಗಳ ವೈವಾಹಿಕ ಜೀವನವನ್ನು ಮೇ 2021ರಲ್ಲಿ ಕೊನೆಗೊಳಿಸಿದ್ದರು. ಅದೇ ವರ್ಷ ಆಗಸ್ಟ್‌ನಲ್ಲಿ ಕಾನೂನು ಸಮ್ಮತವಾಗಿ ಬೇರ್ಪಟ್ಟರು. ಮೆಲಿಂಡಾ ಗೇಟ್ಸ್ ಮಾಜಿ ಟೆಲಿವಿಶನ್ ರಿಪೋರ್ಟರ್ ಜಾನ್ ಡು ಪ್ರಿ ಯೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.
ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗಿರುವ ಪೌಲಾ ಹಾರ್ಡ್
ಪೌಲಾ ಹಾರ್ಡ್ ಅವರ ಪತಿ ಮಾರ್ಕ್ ಹರ್ಡ್ 2019 ರಲ್ಲಿ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದಾರೆ. ತದನಂತರ ಒಂಟಿಯಾಗಿರುವ ಪೌಲಾ ಹಾರ್ಡ್ ಈವೆಂಟ್ ಪ್ಲಾನರ್, ಸಂಘಟಕಿಯಾಗಿ ಹಾಗೂ ಪರೋಪಕಾರಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ