ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ (Bihar Jamui District) 27.6 ಟನ್ ಖನಿಜಯುಕ್ತ ಅದಿರು ಸೇರಿದಂತೆ ಸುಮಾರು 222.88 ಮಿಲಿಯನ್ ಟನ್ಗಳಷ್ಟು ಚಿನ್ನದ ನಿಕ್ಷೇಪವಿದೆ ಎಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಸಮೀಕ್ಷೆ (Geological Survey of India ) ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು (Bihar Governmen ಈ ಭಾರತದ ಅತಿದೊಡ್ಡ ಚಿನ್ನದ ನಿಕ್ಷೇಪ ಎಂದು ಕರೆಯಲ್ಪಡುವ (India's Largest Gold Reserve) ಅನ್ವೇಷಣೆಗೆ ಅನುಮತಿ ನೀಡಲು ನಿರ್ಧರಿಸಿದೆ. ಈಮೂಲಕ ಭಾರತದಲ್ಲಿ ಅತ್ಯಂತ ಬೃಹತ್ ಚಿನ್ನದ ನಿಕ್ಷೇಪವೊಂದು ಮುನ್ನೆಲೆಗೆ ಬರುವ ದಿನಗಳು ಹತ್ತಿರವಾಗಿವೆ.
ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಜಮುಯಿಯಲ್ಲಿ ಚಿನ್ನದ ನಿಕ್ಷೇಪಗಳ ಅನ್ವೇಷಣೆಗಾಗಿ GSI ಮತ್ತು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (NMDC) ಸೇರಿದಂತೆ ಅನ್ವೇಷಣೆಯಲ್ಲಿ ತೊಡಗಿರುವ ಏಜೆನ್ಸಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಮ್ ಗಣಿ ಆಯುಕ್ತ ಹರ್ಜೋತ್ ಕೌರ್ ಬಮ್ಹ್ರಾ ಅವರು ತಿಳಿಸಿದ್ದಾರೆ.
ಕಳೆದ ವರ್ಷವೇ ಮಾಹಿತಿ ನೀಡಿದ್ದ ಪ್ರಲ್ಹಾದ್ ಜೋಶಿ! ಕಳೆದ ವರ್ಷ ಕೇಂದ್ರ ಗಣಿ ಸಚಿವ ಪ್ರಲ್ಹಾದ್ ಜೋಶಿ ಅವರು ಲೋಕಸಭೆಯಲ್ಲಿ ಬಿಹಾರವು ಭಾರತದ ಚಿನ್ನದ ನಿಕ್ಷೇಪದಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ ಎಂದು ಅಧಿಕೃತ ಮಾಹಿತಿ ನೀಡಿದ್ದರು. ಲೋಕಸಭೆಗೆ ನೀಡಿದ್ದ ಲಿಖಿತ ಉತ್ತರದಲ್ಲಿ ಅವರು, ಬಿಹಾರದಲ್ಲಿ 222.885 ಮಿಲಿಯನ್ ಟನ್ ಚಿನ್ನದ ಲೋಹವಿದೆ. ಇದು ದೇಶದ ಒಟ್ಟು ಚಿನ್ನದ ನಿಕ್ಷೇಪದ ಶೇಕಡಾ 44 ರಷ್ಟಿದೆ ಎಂದು ಮಾಹಿತಿ ನೀಡಿದ್ದರು.
ಆರಂಭವಾಗಿದೆ ಪ್ರಕ್ರಿಯೆ ಜಮುಯಿ ಜಿಲ್ಲೆಯ ಕರ್ಮಾಟಿಯಾ, ಝಾಝಾ ಮತ್ತು ಸೋನೋ ಮುಂತಾದ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾದ ನಂತರ ಸಮಾಲೋಚನೆ ಪ್ರಕ್ರಿಯೆಯು ಪ್ರಾರಂಭವಾಗಿದೆ ಎಂದು ಉನ್ನತ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಬಿಹಾರ ಸರ್ಕಾರವು ಒಂದು ತಿಂಗಳ ಅವಧಿಯಲ್ಲಿ G3 (ಪ್ರಾಥಮಿಕ) ಹಂತದ ಪರಿಶೋಧನೆಗಾಗಿ ಕೇಂದ್ರೀಯ ಸಂಸ್ಥೆ ಅಥವಾ ಏಜೆನ್ಸಿಗಳೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಕೆಲವು ಪ್ರದೇಶಗಳಲ್ಲಿ G2 (ಸಾಮಾನ್ಯ) ಪರಿಶೋಧನೆಯನ್ನು ಸಹ ಕೈಗೊಳ್ಳಬಹುದು ಎಂದು ಇನ್ನೋರ್ವ ಉನ್ನತ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಎಷ್ಟು ಚಿನ್ನವಿದೆ ಗೊತ್ತೇ? ರಾಷ್ಟ್ರೀಯ ಖನಿಜ ದಾಸ್ತಾನು ಪ್ರಕಾರ 1.4.2015 ನೇ ದಿನಾಂಕಕ್ಕೆ ಅನ್ವಯವಾಗುವಂತೆ ದೇಶದಲ್ಲಿ ಪ್ರಾಥಮಿಕ ಚಿನ್ನದ ಅದಿರಿನ ಒಟ್ಟು ಸಂಪನ್ಮೂಲಗಳು 654.74 ಟನ್ ಚಿನ್ನದ ಲೋಹದೊಂದಿಗೆ 501.83 ಮಿಲಿಯನ್ ಟನ್ಗಳು ಎಂದು ಅಂದಾಜಿಸಲಾಗಿದೆ. ಈ ಪೈಕಿ ಬಿಹಾರವು 222.885 ಮಿಲಿಯನ್ ಟನ್ಗಳನ್ನು ಹೊಂದಿದೆ.
ಇತ್ತ ಭಾರತ್ ಗೋಲ್ಡ್ ಮೈನ್ಸ್ ಬಂದ್ ಮಾಡಲು ನಿರ್ಧಾರ! ಕೇಂದ್ರ ಸಚಿವ ಸಂಪುಟವು ಭಾರತ್ ಗೋಲ್ಡ್ ಮೈನಿಂಗ್ ಲಿಮಿಟೆಡ್ ಅನ್ನು ಮುಚ್ಚಲು ನಿರ್ಧರಿಸಿದೆ ಎಂದು ಸಿಎನ್ಬಿಸಿ ಟಿವಿ-18ಗೆ ಮೂಲಗಳಿಂದ ತಿಳಿದು ಬಂದಿದೆ. ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಹಿಂದಿನ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಗಣಿ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಲ್ಲಿ ಏಪ್ರಿಲ್, 1972 ರಲ್ಲಿ ಕೋಲಾರ ಗೋಲ್ಡ್ ಫೀಲ್ಡ್ಸ್ ತನ್ನ ಕಛೇರಿಯನ್ನು ಹೊಂದಿದೆ. ಕನ್ನಡ ಕೆಜಿಎಫ್ 2 ಚಿತ್ರದ ಹಿಟ್ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹ ಪ್ರಸಿದ್ಧವಾಗಿದೆ.
ಮಾಜಿ ಉದ್ಯೋಗಿಗಳ ವಿರೋಧ
ಜಾಗತಿಕ ಟೆಂಡರ್ ಮೂಲಕ ಆಸ್ತಿಗಳನ್ನು ವಿಲೇವಾರಿ ಮಾಡಲು 2006 ರಲ್ಲಿ ಕ್ಯಾಬಿನೆಟ್ ನಿರ್ಧಾರವನ್ನು ತೆಗೆದುಕೊಂಡಿತು. ಕಾಲ ಕಳೆದಂತೆ ನಾನಾ ಬದಲಾವಣೆಗಳು ನಡೆದು ನಾನಾ ಸಮಸ್ಯೆಗಳು ತಲೆದೋರಿದ್ದು, ಸಚಿವ ಸಂಪುಟದ ಈ ನಿರ್ಣಯ ಜಾರಿಯಾಗಲಿಲ್ಲ. ಕಂಪನಿಯನ್ನು ಮುಚ್ಚಿದಾಗಿನಿಂದ, ಅದನ್ನು ತೆರೆದು ಅಭಿವೃದ್ದಿ ಮಾಡುವ ಬೇಡಿಕೆ ಜೀವಂತವಾಗಿದೆ. ಅನೇಕ ರಾಜ್ಯ ಮತ್ತು ಕೇಂದ್ರ ಸಚಿವರು ಕಂಪನಿಯನ್ನು ಮತ್ತೆ ತೆರೆಯಲು ಹಲವಾರು ಭಾರೀ ಸಲಹೆ ನೀಡುವುದರ ಜೊತೆಗೆ ಒತ್ತಾಯ ಮಾಡುತ್ತಿದ್ದಾರೆ. ಆದರೆ, 2021ರಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ