ಪ್ರಪಂಚದಾದ್ಯಂತ (World) ಉದ್ಯೋಗಿಗಳ ವಜಾಗೊಳಿಸುವಿಕೆ ಪ್ರಕ್ರಿಯೆ ನಿಲ್ಲದ ನೀರಿನಂತೆ ನಡೆಯುತ್ತಲೇ ಇದೆ. ಅದರಲ್ಲೂ ಟೆಕ್ ಕಂಪನಿಗಳು ಒಂದು ಹೆಜ್ಜೆ ಮುಂದು ಎನ್ನುವಂತೆ ಉದ್ಯೋಗಿಗಳನ್ನು ಕೈ ಬಿಡುತ್ತಿದೆ. ಅಮೆಜಾನ್, ಮೆಟಾ, ಟ್ವಿಟರ್, ಮೈಕ್ರೋಸಾಫ್ಟ್, ಸೇರಿದಂತೆ ಹಲವು ದೈತ್ಯ ಟೆಕ್ ಕಂಪನಿಗಳು (Company) ಸಾವಿರಾರು ಉದ್ಯೋಗಿಗಳನ್ನು ಈಗಾಗಲೇ ವಜಾ ಮಾಡಿವೆ. ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ಮಾರುಕಟ್ಟೆಯಲ್ಲಿ (Market) ಬೇಡಿಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗಿಗಳ ಸಾಮೂಹಿಕ ವಜಾ ಮುಂದುವರಿಯುತ್ತಿದೆ. ಕಂಪನಿಗಳು ಮುಲಾಜಿಲ್ಲದೇ ಉದ್ಯೋಗಿಗಳನ್ನು ಕೈಬಿಡುತ್ತಿದೆ. ಉದ್ಯೋಗಿಗಳು ಸಹ ಈ ಟ್ರೆಂಡ್ಗೆ ಒಗ್ಗಿ ಹೋಗಿರುವಂತೆ ವಜಾಗೊಳಿಸಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ (Post) ಮಾಡುತ್ತಿದ್ದಾರೆ.
ಮೊದಲೆಲ್ಲಾ ಕೆಲಸದಿಂದ ಕಂಪನಿಗಳು ತೆಗೆದುಹಾಕಿವೆ ಎಂಬ ಸುದ್ದಿ ಅವರ ಕಾರ್ಯಕ್ಷಮತೆಯ ಮೇಲೆ ಅನುಮಾನ ಹುಟ್ಟಿಸುವಂತಿತ್ತು ಮತ್ತು ಅದನ್ನು ಉದ್ಯೋಗಿಗಳು ಗುಟ್ಟಾಗಿ ಇಡಲು ಬಯಸುತ್ತಿದ್ದರು. ಆದರೆ ಈಗ ಕಾಲಮಾನ ಬದಲಾಗಿದೆ.
ಹಿಂದೆ ಉದ್ಯೋಗಿಗಳು ವಜಾಗೊಳಿಸುವಿಕೆಯನ್ನು ಬಹಿರಂಗಗೊಳಿಸಲು ಹಿಂಜರಿಯುತ್ತಿದ್ದರು. ಆದರೆ ಟೆಕ್ ಕಂಪನಿಗಳು, ಸ್ಟಾರ್ಟ್ಅಪ್ಗಳಿಂದ ವಜಾಗೊಂಡಿರುವ ಯಾವುದೇ ಉದ್ಯೋಗಿ ಇದನ್ನು ಅಸಮರ್ಥತೆ, ಅವಮಾನ ಎಂದು ಭಾವಿಸದೇ ರಾಜಾರೋ಼ಷವಾಗಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಹೊಸ ಉದ್ಯೋಗ ಹುಡುಕುವ ಮಾರ್ಗ
ಹೀಗೆ ಉದ್ಯೋಗಿಗಳು ವಜಾಗೊಳಿಸುವಿಕೆಯನ್ನು ಬಹಿರಂಗ ಪಡಿಸುತ್ತಿರವ ಹಿಂದೆಯೂ ಕಾರಣ ಇದೆ. ಅದೇನಪ್ಪಾ ಎಂದರೆ ಹೊಸ ಉದ್ಯೋಗಗಳನ್ನು ಹುಡುಕುವಲ್ಲಿ ಈ ಮಾರ್ಗ ಅನುಸರಿಸುತ್ತಿದ್ದಾರೆ..
ಪ್ರಸ್ತುತ ನಡೆಯುತ್ತಿರುವ ವಜಾಗೊಳಿಸುವಿಕೆ ಉದ್ಯೋಗಿಗಳ ತಪ್ಪಿಂದಲ್ಲ ಅಥವಾ ವಜಾಗೊಳಿಸುವಿಕೆಯು ಅಸಮರ್ಥತೆಯ ಪರಿಣಾಮವಲ್ಲ ಬದಲಿಗೆ ಕಂಪನಿಗಳು ಮುಂದಿನ ಪರಿಸ್ಥಿತಿಯನ್ನು ಅವಲೋಕಿಸಿ ಸಿಬ್ಬಂದಿಯ ವಜಾಕ್ಕೆ ಮುಂದಾಗಿವೆ ಎಂದು ಸಹ ಅರ್ಥೈಸಲಾಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಉದ್ಯೋಗಿಗಳ ಅಳಲು
ಇತ್ತೀಚೆಗೆ ಗೋಲ್ಡ್ಮನ್ ಸ್ಯಾಕ್ಸ್ ಕಂಪನಿ ಸುಮಾರು 3,200 ಉದ್ಯೋಗಿಗಳನ್ನು ಅಂದರೆ ಸಂಸ್ಥೆಯು ತನ್ನ 6.5 % ಉದ್ಯೋಗಿಗಳನ್ನು ಕೈಬಿಟ್ಟಿದೆ. ಈ ಬಗ್ಗೆ ಹಲವು ಉದ್ಯೋಗಿಗಳು ಲಿಂಕ್ಡ್ಇನ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ವಜಾಗೊಳಿಸುವಿಕೆಯನ್ನು ಬಹಿರಂಗ ಪಡಿಸಿದ್ದರು.
ಗೋಲ್ಡ್ಮನ್ ಸ್ಯಾಕ್ಸ್ನ ಬೆಂಗಳೂರು ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಐಐಟಿ-ಖರಗ್ಪುರ ಪದವೀಧರ ಶುಭಂ ಸಾಹು ಎಂಬುವವರು ಈ ಬಗ್ಗೆ ಲಿಂಕ್ಡ್ಇನ್ ಪೋಸ್ಟ್ ಹಂಚಿಕೊಂಡಿದ್ದರು.
ವಜಾಗೊಂಡ ಉದ್ಯೋಗಿಗಳಲ್ಲಿ ಶುಭಂ ಸಾಹು ಸಹ ಸೇರಿದ್ದು, ಹೊಸ ವರ್ಷ ಆರಂಭಿಸಲು ವಿಭಿನ್ನ ಮಾರ್ಗ ಸಿಕ್ಕಿದೆ ಎಂದು ಬರೆದುಕೊಂಡಿದ್ದರು.
ಶುಭಂ ಸಾಹು ಸರಿಸುಮಾರು ಆರು ತಿಂಗಳ ಹಿಂದೆ ಸಾಫ್ಟ್ವೇರ್ ಡೆವಲಪರ್ ಆಗಿ ಸಂಸ್ಥೆಯನ್ನು ಸೇರಿದ್ದರು. ಪ್ರಸ್ತುತ ಉದ್ಯೋಗ ಕಳೆದುಕೊಂಡುರುವ ಸಾಹು ಲಿಂಕ್ಡ್ಇನ್ನಲ್ಲಿ ಕೆಲಸ ಹುಡುಕುತ್ತಿದ್ದಾರೆ.
ಇದನ್ನೂ ಓದಿ: ಜಸ್ಟ್ 6 ತಿಂಗಳಲ್ಲಿ ಲಕ್ಷಕ್ಕೆ 3 ಲಕ್ಷ ಲಾಭ, ಹಣದ ಸುರಿಮಳೆಗೈದ ಬ್ಯಾಂಕ್!
ಶುಭಂ ಸಾಹುನಂತೆ ಇದೇ ರೀತಿ ಅನೇಕರು ತಮ್ಮ ಕೆಲಸ ಹೋಗಿದ್ದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಅಮೆಜಾನ್ ಕಂಪನಿಯಿಂ ವಜಾಗೊಂಡ ಹರ್ಷ್, ಲಿಂಕ್ಡ್ಇನ್ನಲ್ಲಿ ವಜಾಗೊಳಿಸುವಿಕೆಯನ್ನು ಹೇಳಿಕೊಂಡಿದ್ದು, 2023 ಅನ್ನು ಈ ರೀತಿ ಪ್ರಾರಂಭಿಸಲು ಬಯಸುವುದಿಲ್ಲ ಎಂದು ಬರೆದಿದ್ದಾರೆ. ಜೊತೆಗೆ ಕೆಲಸ ಹೋಗಿದ್ದರೂ ಕಂಪನಿಯಿಂದ ಕಲಿತ ಕೌಶಲ್ಯ, ಅನುಭವಕ್ಕಾಗಿ ಧನ್ಯವಾದದ ಪೋಸ್ಟ್ ಮಾಡಿದ್ದಾರೆ.
ಅಮೆಜಾನ್ನಿಂದ ವಜಾಗೊಂಡ ಮತ್ತೋರ್ವ ಉದ್ಯೋಗಿ ಸಮ್ಯಕ್ ಜೈನ್, ಯಾವುದೇ ಕಾರ್ಯಕ್ಷಮತೆಯ ಪರಿಗಣನೆಗಳಿಲ್ಲದೆ ಸಿಬ್ಬಂದಿಯನ್ನು ವಜಾಗೊಳಿಸುತ್ತಿರುವುದು ನಿರಾಶಾದಾಯಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿಷ್ಠಿತ ಕಂಪನಿಗಳು ಸೇರಿ ಸ್ಟಾರ್ಟ್ಅಪ್ನಲ್ಲಿ ಕೆಲಸ ಕಳೆದುಕೊಂಡವರು ಕೆಲಸ ಹುಡುಕಲು ಕಾಲೇಜು ಹಳೆಯ ವಿದ್ಯಾರ್ಥಿಗಳು ಮತ್ತು ವೃತ್ತಿಪರ ನೆಟ್ವರ್ಕ್ಗಳ ಮೊರೆ ಹೋಗುತ್ತಿದ್ದಾರೆ.
ನಿಲ್ಲದ ಉದ್ಯೋಗಿಗಳ ವಜಾ
ಸಾಫ್ಟ್ವೇರ್ ಕಂಪನಿ ಮೈಕ್ರೋಸಾಫ್ಟ್ ತನ್ನ ಸಿಬ್ಬಂದಿಯಲ್ಲಿ ಶೇ. 5ರಷ್ಟು ಅಂದರೆ 11,000 ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಲು ಮುಂದಾಗಿದೆ.
ಅಮೆಜಾನ್ ಭಾರತದಲ್ಲಿ 1,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂದು ಹೇಳಲಾಗಿದೆ, ಗೋಲ್ಡ್ಮನ್ ಸ್ಯಾಕ್ಸ್ ಸುಮಾರು 500 ಉದ್ಯೋಗಿಗಳನ್ನು ವಜಾಗೊಳಿಸಿದ್ದರೆ, ಭಾರತೀಯ ಸ್ಟಾರ್ಟ್ಅಪ್ಗಳು ಕಳೆದ ಕೆಲವು ತಿಂಗಳುಗಳಲ್ಲಿ ಸುಮಾರು 20,000 ಉದ್ಯೋಗಿಗಳನ್ನು ವಜಾಗೊಳಿಸಿವೆ ಎಂದು ವರದಿ ಹೇಳಿದೆ.
ಐಐಐಟಿ-ಬೆಂಗಳೂರಿನ ಸಂಸ್ಥಾಪಕ ನಿರ್ದೇಶಕ ಎಸ್ ಸದಗೋಪನ್, "ವಜಾಗೊಳಿಸುವಿಕೆಯು ನಿಜಕ್ಕೂ ನೋವಿನ ಸಂಗತಿ. ಇದು ಯಾರೊಬ್ಬರ ಅಸಮರ್ಥತೆಯನ್ನು ಅಳೆಯುವ ಮಾಪನವಲ್ಲ. ಮುಂಬರುವ ಅವಕಾಶವು ಉತ್ತಮವಾಗಿರುತ್ತದೆ ಎಂಬ ಭರವಸೆ ಇದೆ" ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ