B-Khata Holders: ಬೆಂಗಳೂರಿಗರೇ ಗಮನಿಸಿ: ಬಿ-ಖಾತಾ ಆಸ್ತಿ ಹೊಂದಿರುವವರು ಎ-ಖಾತಾಗೆ ಬಡ್ತಿ ಪಡೆಯಿರಿ

ಬಿ-ಖಾತಾದಿಂದ ಎ-ಖಾತಾಗೆ ವರ್ಗಾಯಿಸುವಿಕೆ ಪ್ರಕ್ರಿಯೆಯೊಂದರಿಂದಲೇ ಸಾವಿರ ಕೋಟಿ ರೂಪಾಯಿಗಳ ಹಣ ಸಂಗ್ರಹಣೆ ಮಾಡುವುದಾಗಿ ಅಂದಾಜು ಲೆಕ್ಕ ಮಾಡಿ ತೋರಿಸಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಬೆಂಗಳೂರು (Bengaluru)  ಸಹ ಒಂದು. ನಗರ ಬೆಳೆದಂತೆ ಇಲ್ಲಿ ವಾಣಿಜ್ಯ ವ್ಯವಹಾರಗಳೂ ಸಹ ಸಾಕಷ್ಟು ಬೆಳೆಯುತ್ತಿವೆ. ಅದರ ಫಲಶ್ರುತಿಯಿಂದಾಗಿ ನಗರದಲ್ಲಿ ಆಸ್ತಿ ಪ್ರಮಾಣಗಳು ಹಾಗೂ ಆಸ್ತಿ ಕೊಳ್ಳುವವರು ಹೆಚ್ಚುತ್ತಿದ್ದಾರೆ. ಆದರೆ, ಹಲವಾರು ಪ್ರಕರಣಗಳಲ್ಲಿ ಇಲ್ಲಿ ಆಸ್ತಿ ಖರೀದಿಸಿರುವವರು ಸರಿಯಾದ ರೀತಿಯಲ್ಲಿರುವ ದಾಖಲಾತಿಗಳಿರುವ ಆಸ್ತಿ ಪತ್ರ ಹೊಂದಿಲ್ಲ. ಹಾಗಾಗಿ ಅವರು ತಮ್ಮ ಆಸ್ತಿಗಳಿಗಾಗಿ ಬಿ-ಖಾತಾ (B-Khata) ಪಡೆದಿದ್ದು ಯಾವಾಗ ಅದು ಎ-ಖಾತಾ (A-Khata) ಆಗುತ್ತವೆಯೋ ಎಂದು ಕಾಯುತ್ತಿದ್ದುದು ಸುಳ್ಳಲ್ಲ. ಈಗ ಅಂತಹ ಆಸ್ತಿ ಮಾಲೀಕರಿಗೆ ಬಿಬಿಎಂಪಿ (BBMP) ಗುಡ್ ನ್ಯೂಸ್ ನೀಡಿದೆ.

ಬೆಂಗಳೂರಿನಲ್ಲಿರುವ ಸುಮಾರು 6 ಲಕ್ಷಕ್ಕೂ ಹೆಚ್ಚು 'ಬಿ-ಖಾತಾ' ಹೊಂದಿರುವ ಆಸ್ತಿ ಮಾಲೀಕರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಸುಧಾರಣಾ ಶುಲ್ಕ ಪಾವತಿಸುವ ಮೂಲಕ ತಮ್ಮ ಬಿ ಖಾತಾಗಳನ್ನು ಎ-ಖಾತಾಗಳನ್ನಾಗಿ ಪರಿವರ್ತಿಸಿ ಪ್ರಮಾಣೀಕರಿಸಲ್ಪಟ್ಟ ಸೌಲಭ್ಯ ಪಡೆಯಬಹುದಾಗಿದೆ.

ಏನೇನು ಇರುತ್ತದೆ?
ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ನಿಯಮಗಳ ಉಲ್ಲಂಘನೆಯಿರದ ಸ್ಪಷ್ಟ ಹಾಗೂ ಪ್ರಾಮಾಣಿಕವಾದ ಆಸ್ತಿ ಪತ್ರಗಳನ್ನು ಎ-ಖಾತಾ ಎಂದು ಕರೆಯಲಾಗುತ್ತದೆ. ರಾಜ್ಯದ ಏಜೆನ್ಸಿಗಳಿಂದ ಈ ಆಸ್ತಿಗಳು ಅಧಿಕೃತವಾಗಿ ದೃಢೀಕರಿಸಲ್ಪಟ್ಟಿರುತ್ತವೆ. ಇನ್ನು ಬಿ-ಖಾತಾ ಆಸ್ತಿಗಳು ಹಲವು ರೀತಿಯ ವೈಪರೀತ್ಯಗಳನ್ನು ಹೊಂದಿದ್ದು ಆಸ್ತಿ ಪತ್ರದಲ್ಲಿ ಬೈಲಾಗಳ ಉಲ್ಲಂಘನೆ ಹಾಗೂ ಕಟ್ಟಡಗಳ ಪ್ಲ್ಯಾನುಗಳು ಅನುಮೋದನೆ ಪಡೆದಿರದಿಲ್ಲದಿರುವಿಕೆಯಂತಹ ಅಂಶಗಳನ್ನು ಹೊಂದಿರುತ್ತವೆ.

2008 ರಿಂದ ನಿಲ್ಲಿಸಿತ್ತು
ಈ ಹಿಂದೆಯೂ ಬಿಬಿಎಂಪಿ ಈ ರೀತಿಯ ಖಾತಾಗಳನ್ನು ಹೊಂದ ಆಸ್ತಿ ಪತ್ರಗಳಿಗೆ ಎ-ಖಾತಾ ನೀಡುತ್ತಿತ್ತಾದರೂ ಈ ಪ್ರಕ್ರಿಯೆಯನ್ನು 2008 ರಿಂದ ನಿಲ್ಲಿಸಿತ್ತು. ಅಂದಿನಿಂದ ಇಂತಹ ಆಸ್ತಿಗಳಿಗೆ ಪಾಲಿಕೆಯು ಪ್ರತ್ಯೇಕವಾದ ಬಿ ರಿಜಿಸ್ಟರ್ ಪುಸ್ತಕವೊಂದನ್ನು ನಿರ್ವಹಿಸಲು ಪ್ರಾರಂಭಿಸಿತು. ಅಂದಿನಿಂದ ಈ ರಿಜಿಸ್ಟರ್‌ನಲ್ಲಿರುವ ಆಸ್ತಿ ಪತ್ರಗಳಿಗೆ ಬಿ-ಖಾತಾ ಆಸ್ತಿಗಳು ಎಂದೇ ಕರೆಯಲಾಗುತ್ತಿದೆ.

ಬೆಂಗಳೂರಿನ ಎಲ್ಲ ಆಸ್ತಿಗಳಿಗೂ "ಖಾತಾ" ಹಂಚಿಕೆ
ಇನ್ನು ಈ ಖಾತೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನಡೆದಿರುವ ಉನ್ನತ ಮಟ್ಟದ ಸಭೆಯ ನಡಾವಳಿ ಕುರಿತು ಪ್ರತಿಕ್ರಯಿಸಿರುವ ಬಿಬಿಎಂಪಿ ಆಯುಕ್ತರಾದ ಗೌರವ್ ಗುಪ್ತಾ ಅವರು ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆದಿದ್ದು ಇದರಲ್ಲಿ ಬೆಂಗಳೂರಿನ ಎಲ್ಲ ಆಸ್ತಿಗಳಿಗೂ "ಖಾತಾ" ಹಂಚಿಕೆ ಮಾಡಬೇಕಾಗಿರುವ ಬಗ್ಗೆ ಶಿಫಾರಸು ಮಾಡಲಾಗಿದೆ.

ಸಾಧಕ-ಬಾಧಕ ಗುರುತಿಸಿ
ಆದರೂ ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಇನ್ನೂ ಅಧಿಕೃತ ಕಾರ್ಯಾದೇಶ ಬರಬೇಕಾಗಿದೆ. ಇದನ್ನು ಕಾರ್ಯಗತಗೊಳಿಸುವ ಮುಂಚೆ ಇದರಲ್ಲಿ ಇರುವ ಕಾನೂನಿನ ಹಲವು ಸಾಧಕ-ಬಾಧಕಗಳನ್ನು ಗುರುತಿಸಿ ಚರ್ಚಿಸಬೇಕಾಗಿದೆ ಎಂದು ಆಯುಕ್ತರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Elon Musk: ಪಾಕಿಸ್ತಾನವನ್ನೂ ಖರೀದಿಸಿ! ಎಲಾನ್ ಮಸ್ಕ್​ಗೆ ಆಫರ್

ಬೆಂಗಳೂರು ಮಹಾನಗರ ಪಾಲಿಕೆ ಇತ್ತೀಚೆಗೆ ಮಂಡಿಸಿದ ತನ್ನ ಬಜೆಟ್‌ನಲ್ಲಿ 10,484.28 ಕೋಟಿ ರೂಪಾಯಿಗಳ ಆದಾಯ ತೋರಿಸಿತ್ತು. ಈ ಸಂದರ್ಭದಲ್ಲಿ ಪಾಲಿಕೆಯು ಆಸ್ತಿ ತೆರಿಗೆಯ ಮೂಲಕ ಏನಿಲ್ಲವೆಂದರೂ 3,107 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವುದಾಗಿ ಹೇಳಿತ್ತು.

ಬಿ-ಖಾತಾದಿಂದ ಎ-ಖಾತಾಗೆ ವರ್ಗಾಯಿಸುವಿಕೆ ಪ್ರಕ್ರಿಯೆಯೊಂದರಿಂದಲೇ ಸಾವಿರ ಕೋಟಿ ರೂಪಾಯಿಗಳ ಹಣ ಸಂಗ್ರಹಣೆ ಮಾಡುವುದಾಗಿ ಅಂದಾಜು ಲೆಕ್ಕ ಮಾಡಿ ತೋರಿಸಿತ್ತು.

ಈಮುನ್ನವೇ ಶಿಫಾರಸ್ಸು ಮಾಡಲಾಗಿತ್ತು
ಇತ್ತೀಚಿಗಷ್ಟೆ ಕರ್ನಾಟಕ ಆಡಳಿತ ಸುಧಾರಣೆಗಳಡಿಯಲ್ಲಿ ಉಪಸ್ಥಿತವಿರುವ ಎಲ್ಲ ಬಿ ಖಾತಾಗಳನ್ನು ಕಾನೂನು ಬದ್ಧ ಕ್ರಮಗಳಿಗೊಳಪಡಿಸಿ ದಂಡ ಹಾಗೂ ಭೂ ಸುಧಾರಣಾ ಶುಲ್ಕಗಳನ್ನು ಹೇರುವ ಮೂಲಕ ಅವುಗಳಿಗೆ ಎ-ಖಾತಾ ನೀಡಲು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ವಿಷಯವನ್ನು ಕರ್ನಾಟಕ ಟೌನ್ ಆಂಡ್ ಕಂಟ್ರಿ ಪ್ಲ್ಯಾನಿಂಗ್ ಆ್ಯಕ್ಟ್ ಹಾಗೂ ಕರ್ನಾಟಕ ಲ್ಯಾಂಡ್ ರೆವೆನ್ಯೂ ಆ್ಯಕ್ಟ್‌ಗಳಡಿಯಲ್ಲಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: LIC IPO: ಎಚ್ಚರ! ಈ ಅಕೌಂಟ್ ಇಲ್ದಿದ್ರೆ ಎಲ್​ಐಸಿ ಐಪಿಒ ಖರೀದಿಸೋಕೆ ಆಗಲ್ಲ

ಒಟ್ಟಿನಲ್ಲಿ ಈ ಕ್ರಮ ಅನುಷ್ಠಾನದ ಬಳಿಕ ಲಕ್ಷಾಂತರ ಬಿ ಖಾತಾ ಹೊಂದಿರುವ ಆಸ್ತಿ ಮಾಲೀಕರು ಬಹು ನಿರೀಕ್ಷಿತ ಎ-ಖಾತಾ ಪ್ರಮಾಣ ಪತ್ರಗಳನ್ನು ತಮ್ಮ ಆಸ್ತಿಗಳಿಗೆ ಹೊಂದಲು ಬಹು ಉತ್ಸುಕತೆ ತೋರಬಹುದೆಂದು ನಿರೀಕ್ಷಿಸಲಾಗಿದೆ.
Published by:guruganesh bhat
First published: