Bengaluru Hacker: 7 ಕೋಟಿ ಎಗರಿಸಿದ ಬೆಂಗಳೂರಿನ ಹ್ಯಾಕರ್! ಖದೀಮರನ್ನು ಪತ್ತೆಹಚ್ಚಲು ಪೊಲೀಸರ ಶತಪ್ರಯತ್ನ
ಬೆಂಗಳೂರಿನಲ್ಲಿ ಹ್ಯಾಕರ್ ಒಬ್ಬ ಮೂರು ತಿಂಗಳ ಅವಧಿಯಲ್ಲಿ ಪೇಮೆಂಟ್ ಗೇಟ್ ವೇ ಆದ ರೇಜರ್ ಪೇ ಎಂಬ ಸಂಸ್ಥೆಯಿಂದ ಮೋಸದ ಮಾರ್ಗದ ಮೂಲಕ 7.3 ಕೋಟಿ ರೂಪಾಯಿಗಳನ್ನು ಕದ್ದಿರುವುದಾಗಿ ತಿಳಿದುಬಂದಿದೆ.
ಇಂದು ತಂತ್ರಜ್ಞಾನ (Technology) ಎಷ್ಟು ಪ್ರಗತಿಯಾಗುತ್ತಿದೆಯೋ ಅದನ್ನು ದುರುಪಯೋಗ ಪಡಿಸಿಕೊಳ್ಳುವಂತಹ ತಾಂತ್ರಿಕ ಜ್ಞಾನ (Technical Knowledge) ಹೊಂದಿದ ಹ್ಯಾಕರ್ ಗಳು (Hacker) ಸಹ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಈಗಾಗಲೇ ನಾವು ಸಾಕಷ್ಟು ಬಾರಿ ಸೈಬರ್ ಕ್ರೈಮ್ ಗಳ (Cyber Crime) ಬಗ್ಗೆ ಕೇಳಿದ್ದೇವೆ. ಅದೆಷ್ಟೋ ಜನರಿಗೆ ಹ್ಯಾಕರ್ಗಳು ಬ್ಯಾಂಕುಗಳ (Bank) ಸೋಗಿನಲ್ಲಿ ಫೋನ್ ಮಾಡಿ ಅವರ ಅಕೌಂಟ್ ಸರಿ ಮಾಡಿಕೊಡುವುದಾಗಿ ಕಾರ್ಡುಗಳಿಗೆ ಸಂಬಂಧಿಸಿದಂತೆ ಅಪ್ಡೇಟ್ ಮಾಡುವುದಾಗಿಯೋ ಸಬೂಬು ಹೇಳಿ ಓಟಿಪಿ (OTP) ಪಡೆಯುವ ಮೂಲಕ ಅವರ ಖಾತೆಗಳಲ್ಲಿನ ಹಣಕ್ಕೆ ಪಂಗನಾಮ ಹಾಕಿದ್ದಾರೆ. ಬೆಂಗಳೂರಿನ ಹ್ಯಾಕರ್ ಓರ್ವ (Bengaluru Hacker) ಮೂರು ತಿಂಗಳ ಅವಧಿಯಲ್ಲಿ 7.3 ಕೋಟಿ ರೂಪಾಯಿ ವಂಚನೆ ಎಸಗಲಾಗಿದೆ.
ಮೇಲೆ ಹೇಳಿದ ರೀತಿಯು ಒಂದು ಪ್ರಕಾರವಾದರೆ ಇನ್ನು ಹಲವಾರು ಬಗೆಗಳಲ್ಲಿ ಸೈಬರ್ ಖದೀಮರು ತಮ್ಮ ಕೈಚಳಕ ತೋರಿಸಿ ದೊಡ್ಡಾ ಮೊತ್ತದ ಹಣವನ್ನು ಲಪಟಾಯಿಸಿರುವ ಘಟನೆಗಳೂ ಸಹ ವರದಿಯಾಗಿವೆ.
ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಈಗ ಇಂತಹುದ್ದೆ ಒಂದು ಪ್ರಕರಣ ಬೆಂಗಳೂರಿನಲ್ಲಿ ಮುನ್ನೆಲೆಗೆ ಬಂದಿದೆ. ಸದ್ಯ ಆಗ್ನೇಯ ಸೈಬರ್ ಅಪರಾಧ ಪೊಲೀಸರು ಈಗಾಗಲೇ ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಹ್ಯಾಕರ್ ಒಬ್ಬ ಮೂರು ತಿಂಗಳ ಅವಧಿಯಲ್ಲಿ ಪೇಮೆಂಟ್ ಗೇಟ್ ವೇ ಆದ ರೇಜರ್ ಪೇ ಎಂಬ ಸಂಸ್ಥೆಯಿಂದ ಮೋಸದ ಮಾರ್ಗದ ಮೂಲಕ 7.3 ಕೋಟಿ ರೂಪಾಯಿಗಳನ್ನು ಕದ್ದಿರುವುದಾಗಿ ತಿಳಿದುಬಂದಿದೆ.
7,38,36,192 ರೂಪಾಯಿಗಳ ಲೆಕ್ಕವೇ ಸಿಕ್ಕಿಲ್ಲ! ರೇಜರ್ ಪೇ ಸಾಫ್ಟ್ವೇರ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಲೆಕ್ಕ ಪರಿಶೋಧಕರು ತಮ್ಮ ಕಂಪನಿಯ ಲೆಕ್ಕ ಪರಿಶೋಧನೆ ಕಾರ್ಯ ನಿರ್ವಹಿಸುತ್ತಿರುವಾಗ ಅವರ ಗಮನಕ್ಕೆ ಈ ವಿಷಯ ಬಂದಿರುವುದಾಗಿ ವರದಿಯಾಗಿದೆ. ಅವರು ಲೆಕ್ಕ ಪರಿಶೋಧಿಸುವಾಗ ವಿಫಲವಾದ 831 ಟ್ರಾನ್ಸ್ಯಾಕ್ಷನ್ ಗಳ ಮೊತ್ತದ ಕುರಿತು ಯಾವುದೇ ದೃಢೀಕರಣ ಸಿಗದೆ ಈ ಮೊತ್ತವು ಕಾಣೆಯಾಗಿರುವುದರ ಬಗ್ಗೆ ಗೊತ್ತಾಗಿದೆ. ಈ ಸಂದರ್ಭದಲ್ಲಿ ಅವರಿಗೆ 7,38,36,192 ರೂಪಾಯಿಗಳ ಲೆಕ್ಕವೇ ಸಿಕ್ಕಿಲ್ಲ ಎನ್ನಲಾಗಿದೆ.
ಏನಿದು ರೇಜರ್ ಪೇ?
ರೇಜರ್ ಪೇ ಒಂದು ಪೇಮೆಂಟ್ ಗೇಟ್ ವೇ ಸಂಸ್ಥೆಯಾಗಿದ್ದು ಅದು ಭಾರತದಲ್ಲಿ ಕಂಪನಿಗಳು ಕ್ರೆಡಿಟ್, ಡೆಬಿಟ್, ಮನಿ ವ್ಯಾಲೆಟ್ ಗಳ ಮೂಲಕ ಹಣ ಪಾವತಿಸುವಿಕೆ ಹಾಗೂ ಪಡೆದುಕೊಳ್ಳುವಿಕೆಗೆ ಅನುವು ಮಾಡಿಕೊಡುತ್ತದೆ. ಸದ್ಯ ಕಂಪನಿಯ ಕಾನೂನು ವಿಭಾಗದ ಮುಖ್ಯಸ್ಥರಾಗಿರುವ ಅಭಿಷೇಕ್ ಅಭಿನವ್ ಆನಂದ್ ಅವರು ಮೇ 16 ರಂದು ಈ ಬಗ್ಗೆ ಸೌತ್ ಈಸ್ಟ್ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಹ್ಯಾಕರ್ಗಳನ್ನು ಪತ್ತೆಹಚ್ಚಲು ಪೊಲೀಸರಿಂದ ಪ್ರಯತ್ನ
ಆನ್ಲೈನ್ ವಹಿವಾಟಿನ ಆಧಾರದ ಮೇಲೆ ಪೊಲೀಸರು ಹ್ಯಾಕರ್ಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ರೇಜರ್ ಪೇ ಸಫ್ಟ್ವೇರ್ ಸಂಸ್ಥೆ ನಡೆಸಿದ ಆಂತರಿಕ ತನಿಖೆಯು ಕೆಲವು ವ್ಯಕ್ತಿಗಳು ಅಥವಾ ವ್ಯಕ್ತಿಗಳು 'ಅಧಿಕಾರ ಮತ್ತು ದೃಢೀಕರಣ ಪ್ರಕ್ರಿಯೆಯನ್ನು' ಟ್ಯಾಂಪರ್ ಮಾಡಿದ್ದಾರೆ, ಮಾರ್ಪಡಿಸಿದ್ದಾರೆ ಇಲ್ಲವೆ ಕುಶಲತೆಯಿಂದ ಮಾಡಿದ್ದಾರೆ ಎಂದು ಕಂಡುಬಂದಿದೆ. ಇದರ ಪರಿಣಾಮವಾಗಿ, 831 ವಿಫಲ ವಹಿವಾಟುಗಳ ವಿರುದ್ಧ ನಕಲಿ ‘ಅನುಮೋದನೆ’ಗಳನ್ನು ರೇಜರ್ ಪೇ ಸಂಸ್ಥೆಗೆ ಕಳುಹಿಸಲಾಗಿದೆ ಹಾಗೂ ಅದರ ಪರಿಣಾಮವಾಗಿ ರೂ.7,38,36,192 ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಸದ್ಯ ರೇಜರ್ ಪೇ ಸಂಸ್ಥೆಯು ಸೈಬರ್ ಪೊಲೀಸರೊಂದಿಗೆ ಸಹಕರಿಸುತ್ತಿದ್ದು ಹ್ಯಾಕರ್ ಗಳನ್ನು ಹುಡುಕಲು ಎಲ್ಲ ರೀತಿಯ ಅವಶ್ಯಕ ಮಾಹಿತಿಗಳನ್ನು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ದಿನಾಂಕ, ಸಮಯ ಮತ್ತು ಐಪಿ ವಿಳಾಸ ಸೇರಿದಂತೆ ಎಲ್ಲ 831 ವಿಫಲ ವಹಿವಾಟುಗಳ ವಿವರಗಳನ್ನು ಪೊಲೀಸರಿಗೆ ಒದಗಿಸಿದೆ. ಇನ್ನು, ಸೈಬರ್ ಪೊಲೀಸರು ಸಹ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಈ ಹ್ಯಾಕರ್ ಗಳನ್ನು ಹುಡುಕುವಲ್ಲಿ ಯಶಸ್ವಿಯಾಗುವರೋ, ಕಂಪನಿಗೆ ತನ್ನ ಕಳೆದ ಹಣ ಮತ್ತೆ ಮರಳಬಹುದೋ ಎಂಬುದನ್ನು ಕಾದು ನೋಡಬೇಕಾಗಿದೆ ಅಷ್ಟೆ.
Published by:Ashwini Prabhu
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ