ಇವರು ಹೂಡಿಕೆದಾರರಿಂದ 73 ಬಾರಿ ತಿರಸ್ಕರಿಸಲ್ಪಟ್ಟರೂ ಇಂದು 44 ಸಾವಿರ ಕೋಟಿಯ ಕಂಪೆನಿಯನ್ನೇ ಕಟ್ಟಿದ್ದಾರೆ. ಐಐಟಿ ಖರಗ್‌ಪುರದಲ್ಲಿ ಪದವಿ ಪಡೆದವರು. ಜೊತೆಗೆ ಪ್ರತಿಷ್ಠಿತ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ISB) ಯಿಂದ ಎಂಬಿಎ (MBA) ಮಾಡಿದವರು. ಜೊತೆಗೆ ಪಾಡ್‌ಕ್ಯಾಸ್ಟ್‌ನಲ್ಲಿ (Podcast) ಕಚೇರಿ ಹೊಂದಿದ್ದರೂ ಯಾವುದೇ ಸಹಾಯಕರಾಗಲೀ ಅಥವಾ ಡ್ರೈವರ್ ಹೊಂದಿಲ್ಲದಂಥ ಸರಳ ವ್ಯಕ್ತಿತ್ವದವರು. ಅವರೇ ಶ್ರೀಮಂತ ಉದ್ಯಮಿ ಆಸಿಶ್ ಮೊಹಾಪಾತ್ರ.
ಆಸಿಶ್ ಮೊಹಾಪಾತ್ರ ಅವರು 2015 ರಲ್ಲಿ ಆಫ್ ಬ್ಯುಸಿನೆಸ್‌ನೊಂದಿಗೆ ತಮ್ಮ ಉದ್ಯಮಶೀಲ ಪ್ರಯಾಣವನ್ನು ಪ್ರಾರಂಭಿಸಿದರು. ಕೇವಲ 8 ವರ್ಷಗಳಲ್ಲಿ ಬಹಳ ಎತ್ತರಕ್ಕೆ ಬೆಳೆದ ಕಂಪೆನಿ 5 ಬಿಲಿಯನ್ ಡಾಲರ್ ಅಂದರೆ ಸುಮಾರು ರೂ. 44,000 ಕೋಟಿ ರೂ. ಮೌಲ್ಯವನ್ನು ಹೊಂದಿದೆ.
ಪ್ರತ್ಯೇಕ ಕ್ಯಾಬಿನ್ ಇಲ್ಲ, ಸಹಾಯಕರು, ಡ್ರೈವರ್ ಕೂಡ ಇಲ್ಲ!
ಇನ್ನು, ಇಷ್ಟೆಲ್ಲ ದೊಡ್ಡ ಕಂಪೆನಿಯನ್ನು ಸ್ಥಾಪಿಸಿದರೂ ಆಸಿಶ್ ಮೊಹಾಪಾತ್ರ ಅವರು ಪ್ರತ್ಯೇಕ ಕ್ಯಾಬಿನ್ ಹೊಂದಿಲ್ಲ ಎಂದರೆ ಆಶ್ಚರ್ಯ ಪಡುತ್ತೀರಾ. ಆದರೆ ಇದು ನಿಜ. ಬರೀ ಕ್ಯಾಬಿನ್ ಒಂದೇ ಅಲ್ಲ. ಬದಲಾಗಿ ಅವರಿಗೆ ಆಪ್ತ ಸಹಾಯಕರು ಹಾಗೂ ಡ್ರೈವರ್ ಕೂಡ ಇಲ್ಲ ಎಂಬುದಾಗಿ ಆಸಿಶ್ ಮೊಹಾಪಾತ್ರ ಹೇಳುತ್ತಾರೆ.
ಇದನ್ನೂ ಓದಿ: ಈ ಆ್ಯಪ್ ಡೌನ್ಲೋಡ್ ಮಾಡದಂತೆ IRCTC ವಾರ್ನಿಂಗ್!
ಅಲ್ಲದೇ ಅವರ ಆಫೀಸ್‌ನಲ್ಲಿ ಯಾರಿಗೂ ನಿಗದಿತ ಸೀಟ್ ಎಂಬುದಿಲ್ಲ. ಜೊತೆಗೆ ನಿಗದಿತ ಪಾರ್ಕಿಂಗ್ ಸ್ಥಳವೂ ಇಲ್ಲ ಎಂಬುದಾಗಿ ಹೇಳಿದ್ದಾರೆ. ಅವರು ಬ್ಯುಸಿನೆಸ್ ಟ್ರಿಪ್‌ಗಳಲ್ಲಿ ಪ್ರತಿ ಉದ್ಯೋಗಿ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಾರೆ ಎಂಬುದಾಗಿಯೂ ಮಾಹಿತಿ ನೀಡಿದರು.
ಇಲ್ಲಿ ಎಲ್ಲರೂ ಸಮಾನರು!
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳ ಮೇಲೆ ಸ್ಥಾಪಿಸಲಾದ ಸಂಸ್ಥೆ ಇದು. ಆದ್ದರಿಂದ ಇಂಥದ್ದೊಂದು ಸಮಾನ ಆಫೀಸ್ ಕಲ್ಚರ್ ಬೆಳೆಸುವ ಉದ್ದೇಶದಿಂದ ಇಂಥ ಸೌಕರ್ಯಗಳನ್ನು ತಾವು ಹೊಂದಿಲ್ಲ ಎಂಬುದಾಗಿ ಆಸಿಶ್ ಹೇಳಿಕೊಂಡಿದ್ದಾರೆ.
“ರಾಷ್ಟ್ರದ ಜನರು ಮೂಲಭೂತ ಹಕ್ಕುಗಳಲ್ಲಿ ನಂಬಿಕೆ ಇಡುವುದರಿಂದ ಅಮೆರಿಕ ವಿಶ್ವದ ಶ್ರೀಮಂತ ರಾಷ್ಟ್ರವಾಗಿದೆ ಎನ್ನುವ ಆಸಿಶ್, ಅವರು ಯಶಸ್ವಿ ವ್ಯಕ್ತಿಯಾದಾಗ ಈ ಆದರ್ಶಗಳನ್ನು ಪ್ರತಿಪಾದಿಸುತ್ತಾರೆ ಎನ್ನುತ್ತಾರೆ. ಆದ್ದರಿಂದ ತಾವೂ ಕೂಡ ಯಶಸ್ವಿಯಾದಾಗ, ಪ್ರತಿಯೊಬ್ಬ ಉದ್ಯೋಗಿ ಸಮಾನರಾಗಿರುವ ಸಂಸ್ಕೃತಿಯನ್ನು ಉತ್ತೇಜಿಸಿದ್ದಾಗಿ ಅವರು ಹೇಳುತ್ತಾರೆ.
ಯಶಸ್ಸಿನ ಮಂತ್ರ
ಅವರ ಯಶಸ್ಸಿನ ಮಂತ್ರವೆಂದರೆ “ನಿಮಗೆ ಯೋಚಿಸಲೂ ಸಾಧ್ಯವಾಗದ್ದನ್ನು ಬೆನ್ನಟ್ಟಿ. ಮತ್ತು ಎಲ್ಲರನ್ನೂ ಅದೇ ರೀತಿ ಮಾಡುವಂತೆ ಮಾಡಿ” ಎಂಬುದಾಗಿದೆ.
ಇನ್ನು ಒಡಿಶಾ ಮೂಲದವರಾದ ಆಸಿಶ್ ಮೊಹಾಪಾತ್ರ ಅವರ ಆಫೀಸ್ ಗುರಗಾಂವ್‌ನಲ್ಲಿದೆ. ಅಂದಹಾಗೆ ಆಸಿಶ್ ಅವರ ಆಫ್‌ಬ್ಯುಸಿನೆಸ್ ಒಂದು ಕೈಗಾರಿಕಾ ಸರಕು ಮತ್ತು ಸೇವೆಗಳ ಸಂಗ್ರಹಣಾ ವೇದಿಕೆಯಾಗಿದೆ. ಇದು ಕಂಪೆನಿಯು ಕೈಗಾರಿಕಾ ಸರಕುಗಳು, ರಾಸಾಯನಿಕಗಳು ಮತ್ತು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.
ಆಸಿಶ್ ಅವರ ಆಫ್‌ಬ್ಯುಸಿನೆಸ್ ಬಗ್ಗೆ
ಆಸಿಶ್ ಅವರ ಆಫ್‌ಬ್ಯುಸಿನೆಸ್ ಕಂಪೆನಿಯು 2021 ರಲ್ಲಿ ಯುನಿಕಾರ್ನ್ ಆಗಿ ಹೊರಹೊಮ್ಮಿತು. ಕೆಲವೇ ತಿಂಗಳುಗಳಲ್ಲಿ, ಅದರ ಮೌಲ್ಯವು 5 ಬಿಲಿಯನ್ ಮಾರ್ಕ್ ಅನ್ನು ದಾಟಿತು. 2021-22 ರ ಹಣಕಾಸು ವರ್ಷದಲ್ಲಿ, ಕಂಪೆನಿಯ ಆದಾಯವು 400 ಪಟ್ಟು ಹೆಚ್ಚಾಗಿದ್ದು, 7269 ಕೋಟಿ ರೂ.ತಲುಪಿದೆ. 2022ರ ಆರ್ಥಿಕ ವರ್ಷದಲ್ಲಿ ತೆರಿಗೆಯ ನಂತರದ ಲಾಭ ಸುಮಾರು 125.63 ಕೋಟಿ ಎಂದು ಹೇಳಲಾಗಿದೆ.
ಆಸಿಶ್ ಅವರ ಪತ್ನಿ ಕಂಪನಿಯಲ್ಲಿ ಸಹ ಸಂಸ್ಥಾಪಕಿಯಾಗಿದ್ದಾರೆ. ಅವರು ಈಗಾಗಲೇ ಯುನಿಕಾರ್ನ್ ಆಗಿರುವ ಆಕ್ಸಿಜೋ ಎಂಬ ಮತ್ತೊಂದು ಯುನಿಕಾರ್ನ್ ಅನ್ನು ಸಹ ಮಾಡಿದ್ದಾರೆ. ಅದೂ ಕೂಡ ಲಾಭದಾಯಕವಾಗಿ ಮುನ್ನಡೆಯುತ್ತಿದೆ.
ಆಸಿಶ್ ತಾಯಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಾಯಿಯಿಂದ ಬಹಳಷ್ಟು ಪಾಠಗಳನ್ನು ಕಲಿತಿದ್ದಾಗಿ ಅವರು ಹೇಳಿದ್ದಾರೆ.
73 ಬಾರಿ ತಿರಸ್ಕರಿಸಲ್ಪಟ್ಟಿತ್ತು ಅವರ ಯೋಜನೆ !
ಬಹಳಷ್ಟು ಜನ ಉದ್ಯಮಿಗಳಿಗೆ ಆಗುವಂಥ ಆರಂಭಿಕ ಅನುಭವ ಆಸಿಶ್ ಮೊಹಾಪಾತ್ರ ಅವರಿಗೂ ಆಗಿದೆ. ಅವರು ಮೊದಲು ಡಜನ್ಗಟ್ಟಲೆ ಹೂಡಿಕೆದಾರರಿಂದ ತಿರಸ್ಕರಿಸಲ್ಪಟ್ಟರು. ಪ್ರತಿ ವಹಿವಾಟಿಗೆ ಲಾಭ ಗಳಿಸಲು ಬಯಸುವುದಾಗಿ ಹೇಳಿದಾಗ, 'ಚಿಕ್ಕದಾಗಿ ಮಾತನಾಡಬೇಡಿ' ಹೂಡಿಕೆದಾರರು ಅವಮಾನ ಮಾಡಿದ್ದರಂತೆ.
ಇನ್ನು ಅವರ ಯೋಜನೆಯು 73 ಬಾರಿ ಹೂಡಿಕೆದಾರರಿಂದ ತಿರಸ್ಕರಿಸಲ್ಪಟ್ಟರೂ ಅವರು ಭರವಸೆಯನ್ನು ಕಳೆದುಕೊಳ್ಳಲಿಲ್ಲ ಎಂಬುದಾಗಿ ಹೇಳಿದ್ದಾರೆ. ಒಟ್ಟಾರೆ, ಕಾಣುವ ಕನಸನ್ನು ಈಡೇರಿಸಿಕೊಳ್ಳಲು, ಬುದ್ಧಿವಂತಿಕೆ, ಪರಿಶ್ರಮದ ಜೊತೆಗೆ ನಮ್ಮ ಮೇಲೆ ನಾವಿಡುವ ನಂಬಿಕೆಗೆ ಸಾಧನೆಗೆ ದಾರಿಯಾಗುತ್ತದೆ ಅನ್ನೋದನ್ನು ಆಸಿಶ್ ಮೊಹಾಪಾತ್ರ ಸಾಬೀತುಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ