ನಮ್ಮಲ್ಲಿ ಸ್ವಂತ ಉದ್ಯಮ (Industry) ಆರಂಭಿಸಬೇಕು ಎನ್ನುವವರಿಗೆ ಸಾಕಷ್ಟು ಅವಕಾಶಗಳಿವೆ. ಚಿಕ್ಕದರಿಂದ ಹಿಡಿದು ದೊಡ್ಡ ದೊಡ್ಡ ಬ್ಯುಸಿನೆಸ್ (Business) ತನಕ ಯಾವುದನ್ನು ಬೇಕಾದರೂ ಮಾಡಬಹುದು. ಆದ್ರೆ ಇದು ಅಪಾರ ಶ್ರಮ, ಬಂಡವಾಳ (Investment) ಹಾಗೂ ಉತ್ಸಾಹವನ್ನು ಕೇಳುತ್ತೆ. ಅಂದಹಾಗೆ ನೀವು ಯಾವತ್ತಾದರೂ ಮಸಾಲೆ ವ್ಯಾಪಾರವನ್ನು (Masala Business) ಆರಂಭಿಸಬೇಕು ಅಂತ ಅಂದುಕೊಂಡಿದ್ದೀರಾ? ಈ ಬಗ್ಗೆ ನಿಮಗೆ ಉತ್ಸಾಹವಿದ್ದರೆ ಈ ವ್ಯವಹಾರದ ಸಂಪೂರ್ಣ ವಿವರ (Details) ಇಲ್ಲಿದೆ.
ಅಂದಹಾಗೆ ಭಾರತವು ಅತಿ ಹೆಚ್ಚು ಮಸಾಲೆ ಪದಾರ್ಥಗಳನ್ನು ಉತ್ಪಾದಿಸುವ ದೇಶ. 2021-22ರಲ್ಲಿ ಭಾರತದಲ್ಲಿ ಬರೋಬ್ಬರಿ 10.88 ಮಿಲಿಯನ್ ಟನ್ ಸಾಂಬಾರ ಪದಾರ್ಥ ಉತ್ಪಾದನೆಯಾಗಿದೆ. ಹಾಗಾಗಿ ಇದು ಮಸಾಲೆಗಳ ಅತಿದೊಡ್ಡ ರಫ್ತುದಾರ ಮತ್ತು ಗ್ರಾಹಕ ದೇಶ ಕೂಡ ಹೌದು.
ಆದ್ದರಿಂದ ಮಸಾಲೆ ಪದಾರ್ಥಗಳ ವ್ಯಾಪಾರವು ಒಂದು ಲಾಭದಾಯಕ ಉದ್ಯಮಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಆದ್ರೆ ಈ ವ್ಯವಹಾರವು ವ್ಯಕ್ತಿಯ ಹೂಡಿಕೆಯ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.
ಈ ಉದ್ಯಮವನ್ನು ಆರಂಭಿಸಲು ನೀವು ಈ ಕೆಳಗಿನ ಪ್ರಮುಖ ಅಂಶಗಳನ್ನು ಮೊದಲು ತಿಳಿದುಕೊಳ್ಳಬೇಕು.
ಪ್ರಮುಖ ಅಂಶಗಳು
*ಹೂಡಿಕೆ: ರೂ. 1,00,000 - ರೂ. 5,00,000 (ಊಹಿಸಲಾಗಿದೆ)
*ಅಗತ್ಯವಿರುವ ಪ್ರದೇಶ: 700 ಚದರ ಅಡಿ(ಕನಿಷ್ಠ)
*ಕೆಲಸಗಾರರು: 10 - 12 ಜನರು
*ಮಸಾಲಾ ವ್ಯಾಪಾರ ಲಾಭದ ಮಾರ್ಜಿನ್ : ಸುಮಾರು 30% - 40%
*ದಿನಕ್ಕೆ ನಿರೀಕ್ಷಿತ ಮಾರಾಟ: 100 ಕೆಜಿ
*ಗಳಿಕೆ: ತಿಂಗಳಿಗೆ ರೂ. 60,000 - 1,40,000 ರೂ
ಸಂಸ್ಥೆಯ ನೋಂದಣಿ
ನೀವು ಮಸಾಲೆ ಉದ್ಯಮವನ್ನು ಆರಂಭಿಸಬೇಕು ಎಂದುಕೊಂಡಲ್ಲಿ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಸಂಸ್ಥೆಯನ್ನು ಅಧಿಕೃತವಾಗಿ ನೋಂದಾಯಿಸುವುದು. ಸಂಸ್ಥೆಯ ನೋಂದಣಿ ಮಾಡಬೇಕೆಂದರೆ ಅದಕ್ಕೊಂದು ಆಕರ್ಷಕ ಹೆಸರು ಮತ್ತು ಲೋಗೋ ಎರಡನ್ನೂ ನೀವು ಆಯ್ಕೆ ಮಾಡಿರಬೇಕಾಗುತ್ತದೆ.
ಇದನ್ನೂ ಓದಿ: Farming: ಕಾರ್ಪೊರೇಟ್ ಕೆಲ್ಸಕ್ಕೆ ಗುಡ್ ಬೈ, ಕೃಷಿ ಕೆಲ್ಸಕ್ಕೆ ಜೈ ಜೈ! ಸಾವಯವ ಬೇಸಾಯದಲ್ಲೇ ಸಕ್ಸಸ್ ಕಂಡ ದಂಪತಿ
GST ನೋಂದಣಿ:
ನಿಮ್ಮ ವ್ಯವಹಾರ ಅಧಿಕೃತವಾಗಿ ಮನ್ನಣೆ ಪಡೆಯಬೇಕೆಂದರೆ ನೀವು ಜಿಎಸ್ಟಿ ನೋಂದಣಿ ಮಾಡಬೇಕು. ಇನ್ನು ಟ್ರೇಡ್ ಲೈಸೆನ್ಸ್, ಉದ್ಯಮ ನೋಂದಣಿ/ MSME ನೋಂದಣಿ, ಟ್ರೇಡ್ಮಾರ್ಕ್ ನೋಂದಣಿ, FSSAI ನೋಂದಣಿ ಮುಂತಾದವುಗಳನ್ನೂ ಅವಶ್ಯವಾಗಿ ಪಡೆದುಕೊಳ್ಳಬೇಕು.
ಇನ್ನು, ಈಗಾಗಲೇ ತಿಳಿಸಲಾಗಿರುವ ವಿಷಯಗಳ ಹೊರತಾಗಿಯೂ ಮಸಾಲೆ ಉದ್ಯಮವನ್ನು ಪ್ರಾರಂಭಿಸುವಾಗ ಕೆಲವು ಸವಾಲುಗಳು ಎದುರಾಗಬಹುದು. ಅವುಗಳನ್ನು ಗಮನದಲ್ಲಿಟ್ಟುಕೊಂಡೇ ನೀವು ಉದ್ಯಮವನ್ನು ಆರಂಭಿಸಿದರೆ ಒಳ್ಳೆಯದು. ಹಾಗಿದ್ರೆ ಆ ಸಮಸ್ಯೆಗಳು ಅಥವಾ ತೊಂದರೆಗಳು ಯಾವವು ಅನ್ನೋದನ್ನು ನೋಡೋಣ.
ಹೆಚ್ಚಾಗಿ ಕಾಡುವ ಕಾರ್ಮಿಕರ ಸಮಸ್ಯೆ
ಈ ಮಸಾಲೆ ಪದಾರ್ಥಗಳು ಕಟುವಾದ ವಾಸನೆ ಹೊಂದಿರುತ್ತೆ. ಹೀಗಾಗಿ ಆ ಕಟು ವಾಸನೆಯೊಂದಿಗೆ ಕೆಲಸ ಮಾಡಲು ಜನರು ಹಿಂದೇಟು ಹಾಕುತ್ತಾರೆ. ಅಲ್ಲದೇ ಈ ಕಟುವಾದ ವಾಸನೆಯಿಂದ ಕೆಲವರಿಗೆ ಆರೋಗ್ಯದ ಸಮಸ್ಯೆಗಳೂ ಉಂಟಾಗಬಹುದು. ಹಾಗಾಗಿ ತೀಕ್ಷ್ಣ ವಾಸನೆಯಿರುವ ಮಸಾಲೆ ಉದ್ಯಮದಲ್ಲಿ ಕಾರ್ಮಿಕದ ಸಮಸ್ಯೆ ಎದುರಿಸುವುದು ಸಾಮಾನ್ಯ.
ಮಾರ್ಕೆಟ್ ಕ್ರೆಡಿಟ್ ಸಮಸ್ಯೆ
ಕ್ರೆಡಿಟ್ ಮಾರುಕಟ್ಟೆ ಎಂದರೆ ಕಂಪನಿಗಳು ಮತ್ತು ಸರ್ಕಾರಗಳು ಹೂಡಿಕೆದಾರರಿಗೆ ಸಾಲವನ್ನು ನೀಡುವ ಮಾರುಕಟ್ಟೆ. ಈ ಮಸಾಲೆ ಉದ್ಯಮದಲ್ಲಿ ಸಾಲ ನೀಡುವ ಬಗ್ಗೆ ನೀವು ಸ್ವಲ್ಪ ಸಮಸ್ಯೆಯನ್ನು ಎದುರಿಸಬೇಕಾಗಿ ಬರಬಹುದು. ಇದರ ಜೊತೆಗೆ ಈ ಉದ್ಯಮದಲ್ಲಿರುವ ತೀವ್ರವಾದ ಸ್ಪರ್ಧೆಯಿದ್ದು ಇದೂ ಕೂಡ ನಿಮಗೆ ಸವಾಲಾಗಬಹುದು.
ಒಟ್ಟಾರೆ, ಸಮಸ್ಯೆಗಳು ಎಲ್ಲ ಕಡೆಯಲ್ಲೂ ಇರುತ್ತವೆ. ಆದ್ರೆ ಅದನ್ನೂ ಮೀರಿ ಬೆಳೆಯಬೇಕೆಂಬ ಆಸೆ ಇದ್ದರೆ ಎಲ್ಲವೂ ಸಾಧ್ಯವಾಗುತ್ತವೆ. ಈ ಮಸಾಲೆ ಉದ್ಯಮವೂ ಹಾಗೆಯೇ. ಇದು ಲಾಭದಾಯಕ ಉದ್ಯಮವೂ ಹೌದು.. ಜೊತೆಗೆ ಸಮಸ್ಯೆಗಳನ್ನೂ ಹೊಂದಿದೆ. ಸ್ವಲ್ಪ ಕಷ್ಟಪಟ್ಟರೆ ಲಾಭ ಮಾಡಬಹುದು ಅನ್ನೋದ್ರಲ್ಲಿ ಡೌಟೇ ಇಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ