ಇತ್ತೀಚಿನ ದಿನಗಳಲ್ಲಿ ಜನರು ತಿಂಗಳ ಸಂಬಳಕ್ಕೆ (Salary) ಬೇಸತ್ತು ಉದ್ಯಮಿಯಾಗುವತ್ತ ಮುಖ ಮಾಡುತ್ತಿದ್ದಾರೆ. ವಾಣಿಜ್ಯೋದ್ಯಮಿಯಾಗುವುದು (Entrepreneur) ಒಂದು ರಾತ್ರಿಯ ನಿರ್ಧಾರ ಹಾಗೂ ದಿಢೀರ್ ಯೋಜನೆ ಕಾರ್ಯಸಾಧುವಲ್ಲ. ಉದ್ಯಮಿಯಾಗುವುದು ನಿಜಕ್ಕೂ ಒಂದು ರೀತಿಯ ತಪಸ್ಸು. ಉದ್ಯಮಿಯಾಗಲು ಅವಿರತ ಶ್ರಮದ ಜೊತೆಗೆ ಸಾಲು ಸಾಲು ಸವಾಲುಗಳನ್ನು ಎದುರಿಸುವ ಸ್ಥೈರ್ಯ ಇರಬೇಕಾಗುತ್ತದೆ ಮತ್ತು ಉತ್ತಮ ಯೋಜನೆಯನ್ನು ರೂಪಿಸುವ ಚಾಕಚಕ್ಯತೆ ಇರಬೇಕಾಗುತ್ತದೆ.
ಉದ್ಯಮಿಯಾಗಲು ಇಂತಹದ್ದೇ ಎಂಬ ನಿಖರ ಸಮಯವಿಲ್ಲ. ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅದುವೇ ಸರಿಯಾದ ಸಮಯ. ಹಾಗಾದರೆ ಸಮಯ, ಶ್ರಮ, ಯೋಜನೆ, ಜ್ಞಾನ ಈ ಎಲ್ಲವುಗಳ ಗುಚ್ಛವಾಗಿರುವ ಉದ್ಯಮಿಯ ಕನಸನ್ನು ನನಸಾಗಿಸಿಕೊಳ್ಳಲು ಕೆಲವೊಂದು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
ಕಲ್ಪನೆ
ಯಾವುದೇ ಉದ್ಯಮಿಯ ಮೊದಲ ಹೆಜ್ಜೆ ಎಂದರೆ ಕಲ್ಪನೆ. ಇದನ್ನು ರೂಪಿಸಿಕೊಳ್ಳಲು ನಿಖರವಾದ ಅವಧಿ ಇಲ್ಲ. ಶಾಲಾ ಅವಧಿಯಲ್ಲೋ, ಕಾಲೆಜು ದಿನಗಳಲ್ಲೋ ಅಥವಾ ನಿವೃತ್ತಿ ನಂತರವೋ ಉದ್ಯಮದ ಕಲ್ಪನೆ ಬರಬಹುದು. ಆದರೆ ಇದನ್ನು ತಕ್ಷಣವೇ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ. ಯಾಕೆಂದರೆ ಕಲ್ಪನೆಯನ್ನು ವ್ಯಾಪಾರವಾಗಿ ಪರಿವರ್ತಿಸಲು ಬಹಳಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ಮರೆಯಬಾರದು.
ಇದನ್ನೂ ಓದಿ: ತಿಂಗಳಿಗೆ 60,000 ಸಂಬಳ- ಕ್ಯಾನ್ಬ್ಯಾಂಕ್ನಲ್ಲಿದೆ ಬಂಪರ್ ಉದ್ಯೋಗ
ಹಾಗಾಗಿ ಇದನ್ನು ವಿದ್ಯಾಭ್ಯಾಸ ತೊರೆದು, ವೃತ್ತಿಯನ್ನು ತೊರೆದು ಮಾಡುವ ಅವಶ್ಯಕತೆಯಿಲ್ಲ. ಏಕೆಂದರೆ ಇದಕ್ಕೆ ನಿಗದಿತ ವಯಸ್ಸು ಕೂಡ ಇರುವುದಿಲ್ಲ. ಆದರೆ ಕಲ್ಪನೆಯನ್ನು ಮರೆಯದೆ ಅದರ ಹಿಂದೆಯೇ ಅವಿರತ ಶ್ರಮ ಹಾಕುವುದನ್ನು ಮಾತ್ರ ಮರೆಯುವಂತಿಲ್ಲ. ಆದರೆ ಕನಿಷ್ಠ ಸ್ವತಂತ್ರವಾಗಿ 50 ಸಾವಿರದಿಂದ 1 ಲಕ್ಷದವರೆಗೆ ಗಳಿಸಲು ಶಕ್ತವಾಗುವವರೆಗೆ ಉದ್ಯಮಕ್ಕೆ ಪ್ರವೇಶಿಸಬೇಡಿ.
ಯೋಜನೆ
ಯೋಜನೆಯು ನಿಮ್ಮ ಉದ್ಯಮವನ್ನು ಪ್ರಾರಂಭಿಸುವ ಮತ್ತು ನಿರ್ವಹಿಸುವ ತಂತ್ರವಾಗಿದೆ. ನಿಮ್ಮ ಹೊಸ ಉದ್ಯಮವನ್ನು ರೂಪಿಸಲು ಸಮರ್ಪಕ ಮಾರ್ಗಸೂಚಿಯಾಗಿದೆ. ಯಾವ ಮಾರುಕಟ್ಟೆಯನ್ನು ಪ್ರವೇಶಿಸುತ್ತೀರಿ ಎಂಬ ಬಗ್ಗೆ ವಿಶ್ಲೇಷಣೆ, ಸ್ಪರ್ಧೆ, ಮಾರುಕಟಟ್ಟೆಯ ತಂತ್ರಗಾರಿಕೆ ಮತ್ತು ಹಣಕಾಸಿನ ಕುರಿತಾದ ವಿವರಗಳು ಹೀಗೆ ಈ ಎಲ್ಲವನ್ನು ಒಳಗೊಂಡ ಒಂದು ಯೋಜನೆಯನ್ನು ಮೊದಲು ರೂಪಿಸಿಕೊಳ್ಳಬೇಕು.
ಇದರ ಜೊತೆಯಲ್ಲೇ ವ್ಯಾಪಾರದ ಗುರಿಗಳು, ಗುರಿ ಸಾಧಿಸಲು ಬೇಕಾದ ಸಂಪನ್ಮೂಲಗಳು, ಎದುರಾಗಬಹುದಾದ ಅಪಾಯಗಳು, ಸವಾಲುಗಳ ಬಗ್ಗೆ ಸ್ಪಷ್ಟ ತಿಳುವಳಿಕೆ ಹೊಂದಿರುವುದು ಮುಖ್ಯವಾಗುತ್ತದೆ.
ನಿಮ್ಮ ಉತ್ಪನ್ನ ಮತ್ತು ಗ್ರಾಹಕರ ಬಗ್ಗೆ ತಿಳಿದುಕೊಳ್ಳಿ
ನಮ್ಮ ಉತ್ಪನ್ನದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರುವುದು ಮೊದಲು ಮುಖ್ಯವಾಗುತ್ತದೆ. ಇದರ ಜೊತೆಗೆ ಯಾವ ರೀತಿಯ ಗ್ರಾಹಕರ ಮೇಲೆ ಹೆಚ್ಚು ನಿಗಾ ವಹಿಸಿ ಉದ್ಯಮವನ್ನು ಪ್ರಾರಂಭಿಸಲು ಮುಂದಾಗಿದ್ದೀರಾ ಎಂಬುದನ್ನು ಕೂಡ ಅರಿತುಕೊಳ್ಳಬೇಕಾಗುತ್ತದೆ.
ನಿಮ್ಮ ನಿರ್ದಿಷ್ಟವಾಗಿ ಗ್ರಾಹಕರ ಬಗ್ಗೆ ಅಧ್ಯಯನ ನಡೆಸದೇ ಗುರಿಯನ್ನು ಪ್ರಾರಂಭಿಸಲು ಹೋಗಬೇಡಿ. ಉದ್ಯಮ ಜಗತ್ತಿನಲ್ಲಿ ಕಾಲಿರಿಸುವ ಮೊದಲು ನಿಮ್ಮ ಉತ್ಪನ್ನಗಳು, ಸೇವೆಗಳನ್ನು ಅನ್ವೇಷಿಸಿ ಮತ್ತು ಪರೀಕ್ಷಿಸಿಕೊಳ್ಳಿ. ಯಾವ ಅಂಶದ ಮೇಲೆ ಉದ್ಯಮಿಯಾಗಿ ಮುಂದುವರೆಯಲು ಆಶಿಸಿದ್ದೀರೋ ಅದರ ಬಗ್ಗೆ ಆಳವಾದ ಅಧ್ಯಯನ, ಅನ್ವೇಷಣೆ ಮಾಡುವುದು ಮುಖ್ಯವಾಗುತ್ತದೆ.
ಆರ್ಥಿಕ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಿ
ಯಾವುದೇ ಉದ್ಯಮವನ್ನು ಪ್ರಾರಂಭಿಸುವ ಮೊದಲು ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಳ್ಳಬೇಕು. ಯಾಕೆಂದರೆ ಇದು ಲಾಭ ನಷ್ಟದ ಆಟವಾಗಿರುವುದರಿಂದ ಅದನ್ನು ನಿಭಾಯಿಸುವಷ್ಟಾದರೂ ಹಣಕಾಸಿನ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕಾಗುತ್ತದೆ.
ಉದ್ಯಮಕ್ಕೆ ಧುಮುಕುವ ಮೊದಲು ಅಥವಾ ಯಾವುದೇ ವೃತ್ತಿಯನ್ನು ತೊರೆಯುವ ಮೊದಲು ಆದಾಯದ ಸಂಗ್ರಹಣೆ ಇದ್ದರೆ ಒಳಿತು. ಆದಾಯವಿಲ್ಲದಿದ್ದರೆ ಆದಾಯದ ಮೂಲಗಳ ಸಂಪರ್ಕವನ್ನಾದರೂ ಹೊಂದಿರಬೇಕು.
ಸಂಪರ್ಕ ಮತ್ತು ಬೆಂಬಲ
ಉದ್ಯಮದಲ್ಲಿ ಉತ್ತಮ ಮಾರ್ಗದರ್ಶಕ ಮತ್ತು ಸಂಪರ್ಕಗಳು ಪ್ರಾಧಾನ್ಯತೆಯ ಅಂಶಗಳಾಗಿವೆ. ಮಾರ್ಗದರ್ಶಕರಿಂದ ಉದ್ಯಮದ ಬಗ್ಗೆ ಕಲಿಯುವುದು ಮತ್ತು ನೆಟ್‌ವರ್ಕ್ ಅನ್ನು ಹೆಚ್ಚು ಹೇಗೆ ಸಾಧಿಸುವುದು ಎಂಬುದರ ಬಗ್ಗೆ ಅರಿತರೆ ಉದ್ಯಮದಲ್ಲಿ ಯಶಸ್ಸು ಅನಿಯಮಿತವಾಗಿರುತ್ತದೆ.
ಏಕೆಂದರೆ ನಿಮ್ಮ ಸಂಪರ್ಕ ಹೆಚ್ಚಿದ್ದರೂ ನಿಮ್ಮ ಉದ್ಯಮ ಮೌಲ್ಯವೂ ಹೆಚ್ಚುತ್ತದೆ. ಹಾಗಾಗಿ ನೆಟ್‌ವರ್ಕ್ ಹೆಚ್ಚಿಸಿಕೊಳ್ಳುವ ಬಗ್ಗೆ ಮತ್ತು ಸಂಬಂಧಗಳನ್ನು ಸುಧಾರಿಸಿಕೊಳ್ಳುವ ಬಗ್ಗೆ ಅರಿಯುವುದು ಮುಖ್ಯವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ