ದೇಶಾದ್ಯಂತ ಬ್ಯಾಂಕುಗಳಲ್ಲಿ (Bank) ಮೇ 23 ಮಂಗಳವಾರದಿಂದ 2 ಸಾವಿರ ರೂಪಾಯಿ ನೋಟು (2000 Rs Notes) ನೀಡಿ ಬದಲಿ ನಗದು ಹಣ ಪಡೆಯಬಹುದು. ಇನ್ನು ಸಾರ್ವಜನಿಕರು ಬ್ಯಾಂಕ್‌ಗಳಲ್ಲಿ 2,000 ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಯಾವುದೇ ನಮೂನೆಯನ್ನು ಭರ್ತಿ ಮಾಡುವ ಅಗತ್ಯವಿಲ್ಲ. ನೋಟುಗಳ ವಿನಿಮಯ ಅಥವಾ ಠೇವಣಿಗೆ (Deposit) ಯಾವುದೇ ಶುಲ್ಕ ಪಾವತಿಸುವ (Charges) ಅಗತ್ಯವಿಲ್ಲ. ಅಲ್ಲದೇ, ಗುರುತಿನ ಚೀಟಿ (Identity Card) ಸೇರಿದಂತೆ ಯಾವುದೇ ದಾಖಲೆಗಳನ್ನು ತೋರಿಸುವ ಅಗತ್ಯವಿಲ್ಲ.
ಮೇ 23ರಿಂದ ಆರಂಭವಾಗಲಿರುವ 2000 ರೂ. ನೋಟು ವಿನಿಮಯ/ಠೇವಣಿಗೆ ನಮೂನೆಯನು ಭರ್ತಿ ಮಾಡಬೇಕು, ವಿನಿಮಯಕ್ಕೆ ಶುಲ್ಕ ಪಾವತಿಸಬೇಕು ಎಂಬಿತ್ಯಾದಿ ಹತ್ತಾರು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ. ಇದು ಎಲ್ಲಾ ಬ್ಯಾಂಕ್‌ಗಳಿಗೂ ಅನ್ವಯವಾಗುತ್ತದೆ.
ಸೆಪ್ಟೆಂಬರ್ 30ವರೆಗೂ ಕಾಲಾವಕಾಶ
ಆರ್ಥಿಕತೆಯಲ್ಲಿ ಚಲಾವಣೆಯಲ್ಲಿರುವ 2000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಆರ್‌ಬಿಐ ಮೇ 19ರಂದು ಆದೇಶ ಹೊರಡಿಸಿದ್ದು, ಮೇ 23ರಿಂದ ಸೆಪ್ಟೆಂಬರ್ 30ರ ಒಳಗೆ 2000 ರೂ. ನೋಟುಗಳನ್ನು ಕಡಿಮೆ ಮುಖಬೆಲೆಯ ಇತರೆ ಕರೆನ್ಸಿಗೆ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಅದರಂತೆ ಮಂಗಳವಾರದಿಂದ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ನೋಟುಗಳ ವಿನಿಮಯ ಆರಂಭವಾಗಿದೆ. ''ಸುಗಮ ಮತ್ತು ಅಡಚಣೆರಹಿತವಾಗಿ ವಿನಿಮಯ ಪ್ರಕ್ರಿಯೆ ನಡೆಸಲು ಅಗತ್ಯ ಸಹಕಾರ ತೋರುವಂತೆ ಎಲ್ಲಾಶಾಖೆಗಳಿಗೂ ಸೂಚಿಸಲಾಗಿದೆ,'' ಎಂದು ಎಸ್‌ಬಿಐ ತಿಳಿಸಿದೆ.
ನಿಮಗಿದು ತಿರಿಳಿದಿರಲಿ:
*ಮಂಗಳವಾರದಿಂದ (ಮೇ 23) 2000 ರೂ. ಕರೆನ್ಸಿ ವಿನಿಮಯಕ್ಕೆ ಅವಕಾಶ.
*ಸೆ 30, 2023ರವರೆಗೂ ಗಡುವು, ಅಲ್ಲಿಯವರೆಗೂ ಕಾನೂನು ಮಾನ್ಯತೆ ಇದೆ.
*ಯಾವುದೇ ಬ್ಯಾಂಕ್‌ನ, ಯಾವುದೇ ಶಾಖೆಯಲ್ಲಿ ಎಕ್ಸ್‌ಚೇಂಜ್‌ಗೆ ಅವಕಾಶ.
*ಒಂದು ಬಾರಿಗೆ 20,000 ರೂ.ವರೆಗೆ ವಿನಿಮಯ ಮಾಡಿಕೊಳ್ಳಬಹುದು.
*2000 ರೂ. ನೋಟುಗಳ ಠೇವಣಿಗೆ ಗರಿಷ್ಠ ಮಿತಿ ನಿಗದಿಪಡಿಸಿಲ್ಲ.
*ಯಾವುದೇ ಮನವಿ ಪತ್ರ/ನಮೂನೆ/ಐಡಿ ಕಾರ್ಡ್ ಸಲ್ಲಿಸುವ ಅಗತ್ಯವಿಲ್ಲ.
*ಕರೆನ್ಸಿ ವಿನಿಮಯ ಉಚಿತ, ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ.
ಶೀಘ್ರದಲ್ಲೇ ನಿಷ್ಕ್ರಿಯಗೊಳ್ಳಲಿರುವ ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳಲು ಒಬ್ಬ ವ್ಯಕ್ತಿಯು ಬ್ಯಾಂಕ್‌ನ ಗ್ರಾಹಕರಾಗಿರಬೇಕಾಗಿಲ್ಲ. ಖಾತೆದಾರರಲ್ಲದವರು ಯಾವುದೇ ಬ್ಯಾಂಕ್ ಶಾಖೆಯಲ್ಲಿ 20,000 ರೂ.ಗಳ ಮಿತಿಯವರೆಗೆ 2,000 ರೂ.ಗಳ ನೋಟುಗಳನ್ನು ಒಮ್ಮೆಗೆ ಬದಲಾಯಿಸಿಕೊಳ್ಳಬಹುದು."2,000 ರೂ ಮುಖಬೆಲೆಯ ನೋಟುಗಳಲ್ಲಿ ಸುಮಾರು 89 ಪ್ರತಿಶತವನ್ನು ಮಾರ್ಚ್ 2017 ಕ್ಕಿಂತ ಮೊದಲು ವಿತರಿಸಲಾಗಿತ್ತು ಮತ್ತು ಅವುಗಳ ಅಂದಾಜು ಜೀವಿತಾವಧಿಯು ನಾಲ್ಕರಿಂದ ಐದು ವರ್ಷಗಳು ಎಂದು ಆರ್‌ಬಿಐ ತಿಳಿಸಿತ್ತು.
ಇದನ್ನೂ ಓದಿ: ಸೆಪ್ಟೆಂಬರ್ 30ರ ನಂತರವೂ ನಿಮ್ಮ ಹತ್ರ 2 ಸಾವಿರ ರೂಪಾಯಿ ನೋಟುಗಳಿದ್ರೆ ಏನ್ ಮಾಡ್ಬೇಕು?
ಚಲಾವಣೆಯಲ್ಲಿರುವ ಈ ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯವು ಮಾರ್ಚ್ 31, 2018 ರ ವೇಳೆಗೆ ಗರಿಷ್ಠ ₹ 6.73 ಲಕ್ಷ ಕೋಟಿಯಿಂದ ₹ 3.62 ಲಕ್ಷ ಕೋಟಿಗೆ ಇಳಿದಿದೆ ಎಂದು ಆರ್‌ಬಿಐ ತಿಳಿಸಿದೆ.
ನೋಟು ಖಾಲಿ ಮುಗಿಬಿದ್ದ ಜನ
ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಿದ್ದೇ ತಡ, ಜನರಲ್ಲಿಗೊಂದಲ, ಆತಂಕ ಸೃಷ್ಟಿಯಾಗಿದೆ. ತಮ್ಮ ಬಳಿ ಇರುವ ಪಿಂಕ್ ನೋಟುಗಳನ್ನು ಖಾಲಿ ಮಾಡಲು ಜನರು ಮುಗಿಬಿದ್ದಿದ್ದಾರೆ. ಮೇ 23ರ ಮಂಗಳವಾರದಿಂದ ದೇಶಾದ್ಯಂತ ಬ್ಯಾಂಕುಗಳಲ್ಲಿ2 ಸಾವಿರ ರೂಪಾಯಿ ನೋಟು ನೀಡಿ ಬದಲಿ ನಗದು ಹಣ ಪಡೆಯಬಹುದು. ಆದರೂ ಜನರು ವ್ಯಾಪಾರ, ವಹಿವಾಟುಗಳ ಮೂಲಕವೇ ತಮ್ಮ ಬಳಿ ಇರುವ ಪಿಂಕ್ ನೋಟುಗಳನ್ನು ಖಾಲಿ ಮಾಡಲು ಮುಂದಾಗಿದ್ದಾರೆ.
ಅಂಗಡಿ ಮಾಲೀಕರಿಗೆ ಹೊಸ ತಲೆನೋವು:
ಬಹುತೇಕ ಮಾರುಕಟ್ಟೆಗಳು, ಪೆಟ್ರೋಲ್ ಬಂಕ್‌ಗಳಲ್ಲಿ2 ಸಾವಿರ ರೂ. ನೋಟುಗಳು ಹಾವಳಿ ಇಡುತ್ತಿವೆ. ಇದರಿಂದಾಗಿ ಅಂಗಡಿ ಮಾಲೀಕರಿಗೆ ಹೊಸ ತಲೆ ನೋವು ಸೃಷ್ಟಿಯಾಗಿದೆ. ಸಣ್ಣ ಪುಟ್ಟ ವಹಿವಾಟಿಗೂ ಜನರು 2 ಸಾವಿರ ರೂ. ನೋಟು ಕೊಡುತ್ತಿದ್ದಾರೆ. ಹೀಗಾಗಿ, ಮಳಿಗೆ ಮಾಲೀಕರು ಚಿಲ್ಲರೆ ಕೊಡಲು ಸಾಧ್ಯವಾಗದೆ 2,000 ನೋಟು ಕೊಡಬೇಡಿ ಎಂದು ತಾಕೀತು ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ