ಆ್ಯಪಲ್ ಸಂಸ್ಥೆ (Apple Company) ಮುಂಬೈ ಬಿಕೆಸಿಯಲ್ಲಿ ಕಂಪೆನಿಯ ಮೊದಲ ಅಧಿಕೃತ ರಿಟೇಲ್ ಸ್ಟೋರ್‌ನ (Retail Store) ಉದ್ಘಾಟನಾ ಸಮಾರಂಭಕ್ಕಾಗಿ ಆ್ಯಪಲ್ ಸಿಇಒ ಟಿಮ್ ಕುಕ್ ಭಾರತದಲ್ಲಿದ್ದಾರೆ. ಮುಕೇಶ್ ಅಂಬಾನಿ (Mukhesh Ambani) ಅವರ ಮಕ್ಕಳಾದ ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿಯನ್ನು ಭೇಟಿಯಾಗಿರುವ ಟಿಮ್ ಕುಕ್ ಬಾಲಿವುಡ್ ತಾರೆಯರಾದ ಮಾಧುರಿ ದೀಕ್ಷಿತ್ ಹಾಗೂ ನೇಹಾ ಧೂಪಿಯಾ ಅವರೊಂದಿಗೆ ಭಾರತೀಯ ತಿಂಡಿ ತಿನಿಸುಗಳನ್ನು ಸವಿದು ಸಮಯ ಕಳೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿರುವ ಟಿಮ್ ಕುಕ್
ದೆಹಲಿಯ ಸಾಕೇತ್‌ನಲ್ಲಿರುವ ಸೆಲೆಕ್ಟ್ ಸಿಟಿವಾಕ್ ಮಾಲ್‌ನಲ್ಲಿ ರಿಟೇಲ್ ಸ್ಟೋರ್ ಅನ್ನು ತೆರೆಯುವ ಮುನ್ನ ಟಿಮ್ ಕುಕ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ನಿರೀಕ್ಷೆ ಇದೆ.
ಟಿಮ್ ಕುಕ್ ವಿಷಯವನ್ನೇ ಇದೀಗ ಭಾರತದಲ್ಲಿ ಮಾತನಾಡುತ್ತಿದ್ದು ಅವರು ಚರ್ಚೆಯ ವಿಷಯವಾಗಿದ್ದಾರೆ. ಭಾರತದಲ್ಲಿ ಆ್ಯಪಲ್‌ನ ವಿಸ್ತರಣೆಯು ಭಾರತದಲ್ಲಿ ಇನ್ನಷ್ಟು ಟೆಕ್ ಕ್ರಾಂತಿಯನ್ನುಂಟು ಮಾಡಲಿದೆ ಎಂದು ನಂಬಲಾಗಿದೆ. ಆ್ಯಪಲ್‌ನ ಮುಂದಿನ ಚೀನಾ, ಭಾರತ ಎಂದು ಕೆಲವು ತಜ್ಞರು ನಂಬಿದ್ದಾರೆ.
ಇದನ್ನೂ ಓದಿ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕಿಯ ಅತ್ಯಾಚಾರಗೈದು ಕೊಲೆ! ಕ್ಯಾಬ್ ಡ್ರೈವರ್‌ನಿಂದ ಭೀಕರ ಕೃತ್ಯ
ಸ್ಥಾಪಕ ಸ್ಟೀವ್ ಜಾಬ್ಸ್ ಅವರ ಮರಣದ ನಂತರ 2011 ರಲ್ಲಿ ಟಿಮ್ ಕುಕ್ ಆ್ಯಪಲ್ ಸಿಇಒ ಆಗಿ ನೇಮಕ
ಟಿಮ್ ಕುಕ್ 1998 ರಲ್ಲಿ ಆ್ಯಪಲ್‌ಗೆ ಸೇರ್ಪಡೆಗೊಂಡರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಸ್ಥಾನಕ್ಕೆ ಬಡ್ತಿ ಪಡೆಯುವ ಮೊದಲು, ಸ್ಟೀವ್ ಜಾಬ್ಸ್ ಅಡಿಯಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಯುನೈಟೆಡ್ ಸ್ಟೇಟ್ಸ್‌ನ ಅಲಬಾಮಾದಲ್ಲಿ ಜನಿಸಿದ ಸ್ಟೀವ್ ಜಾಬ್ಸ್ ಒಬ್ಬ ಶಿಪ್‌ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯ ಮಗ ಹಾಗೂ ಇವರ ತಾಯಿ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದರು.
ಟಿಮ್ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಐಬಿಎಂನಲ್ಲಿ 12 ವರ್ಷಗಳ ಕಾಲ ಕೆಲಸ ಮಾಡಿದರು ಹಾಗೂ ತಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿದ ಸಂಸ್ಥೆ ಸೇರುತ್ತಾರೆ. ಸ್ಟೀವ್ ಜಾಬ್ಸ್ ಅವರನ್ನು ಭೇಟಿಯಾದ ನಂತರ ಆ್ಯಪಲ್‌ನಂತಹ ಸಂಸ್ಥೆಗೆ ಸೇರುವ ತೀರ್ಮಾನ ಮಾಡಿದೆ ಎಂದು ಕುಕ್ ಬಹಿರಂಗಪಡಿಸಿದ್ದಾರೆ. ಆ್ಯಪಲ್ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಗಳಲ್ಲಿ ಹೆಸರುಮಾಡಲು ಕಾರಣೀಕರ್ತರಾದವರಲ್ಲಿ ಟಿಮ್ ಕುಕ್ ಒಬ್ಬರಾಗಿದ್ದಾರೆ.
ಆ್ಯಪಲ್ ಸಿಇಒ ಟಿಮ್ ಕುಕ್ ಅವರ ನಿವ್ವಳ ಆಸ್ತಿ ಮೌಲ್ಯ 14 ಸಾವಿರ ಕೋಟಿ ರೂ
ಫೋರ್ಬ್ಸ್ ಪ್ರಕಾರ, ಟಿಮ್ ಕುಕ್ ಅವರ ಆಸ್ತಿಯ ನಿವ್ವಳ ಮೌಲ್ಯ $ 1.8 ಶತಕೋಟಿ (ರೂ. 14 ಸಾವಿರ ಕೋಟಿಗಿಂತ ಹೆಚ್ಚು). ಟಿಮ್ ಕುಕ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ ಸಂಸ್ಥೆಯ ಆದಾಯ ಹಾಗೂ ಲಾಭವನ್ನು ದ್ವಿಗುಣಗೊಳಿಸಲು ಸಹಾಯ ಮಾಡಿದ್ದಾರೆ.
ಪ್ರಸ್ತುತ, ಆಪಲ್ $2 ಟ್ರಿಲಿಯನ್‌ಗಿಂತಲೂ ಹೆಚ್ಚಿನ ಒಟ್ಟು ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಲಾಭದಾಯಕ ಕಂಪನಿಗಳಲ್ಲಿ ಒಂದಾಗಿದೆ ಮತ್ತು ಕುಕ್ ಆಪಲ್‌ನ 3 ಮಿಲಿಯನ್‌ಗಿಂತಲೂ ಹೆಚ್ಚು ಷೇರುಗಳನ್ನು ಹೊಂದಿದ್ದಾರೆ. ಕುಕ್ ಈಗಾಗಲೇ ನೂರಾರು ಮಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ವರ್ಷಗಳಲ್ಲಿ ಮಾರಾಟ ಮಾಡಿದ್ದಾರೆ.
ಸಲಿಂಗಕಾಮಿ ಎಂಬುದನ್ನು ಬಹಿರಂಗಪಡಿಸಿದ ಟಿಮ್ ಕುಕ್
ಸಾರ್ವಜನಿಕವಾಗಿ ತಾವೊಬ್ಬ ಸಲಿಂಗಕಾಮಿ ಎಂಬುದನ್ನು ಬಹಿರಂಗಗೊಳಿಸಿದ ಫಾರ್ಚೂನ್ 500 ಕಂಪನಿಯ ಮೊದಲ ಸಿಇಒ ಆಗಿದ್ದಾರೆ. ನಾನು ಸಲಿಂಗಕಾಮಿಯಾಗಿರುವುದು ದೇವರು ನನಗೆ ನೀಡಿದ ಶ್ರೇಷ್ಠ ಉಡುಗೊರೆಗಳಲ್ಲಿ ಒಂದಾಗಿದೆ ಎಂದು ಭಾವಿಸಿರುವುದಾಗಿ ತಿಳಿಸಿದ್ದಾರೆ.
ಫಿಟ್‌ನೆಸ್ ಫ್ರೀಕ್ ಆಗಿರುವ ಟಿಮ್ ಕುಕ್ ಆ ಉತ್ಸಾಹವನ್ನು ಆ್ಯಪಲ್‌ನ ಅನೇಕ ಉತ್ಪನ್ನಗಳಲ್ಲಿ ತೋರ್ಪಡಿಸಿದ್ದಾರೆ. ಟಿಮ್ ಕುಕ್ ಹಾಗೂ ಸ್ಟೀವ್ ಜಾಬ್ಸ್ ವಿಷಯದಲ್ಲಿ ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ ಇವರಿಬ್ಬರೂ ಅಪರೂಪದ ರಕ್ತದ ವಿಧವನ್ನು ಹೊಂದಿರುವುದಾಗಿದೆ. 2009 ರಲ್ಲಿ ಕುಕ್ ತಮ್ಮ ಯಕೃತ್ತಿನ ಒಂದು ಭಾಗವನ್ನು ಜಾಬ್ಸ್‌ಗೆ ನೀಡಲು ಮುಂದಾಗಿದ್ದರು ಅದಕ್ಕೆ ಜಾಬ್ಸ್ ಹಾಗೆ ಮಾಡಲು ನಿಮ್ಮನ್ನು ಅನುಮತಿಸುವುದಿಲ್ಲ ಎಂದು ತಿಳಿಸಿ ನಿರಾಕರಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ