ಝೂಮ್ ಕಾಲ್​ನಲ್ಲಿ 900 ಉದ್ಯೋಗಿಗಳಿಗೆ ಗೇಟ್ ಪಾಸ್ ಕೊಟ್ಟ ಬೆಟರ್ ಸಿಇಒ; ವಿಡಿಯೋ ವೈರಲ್

900 Employees Sacked on Zoom Call- ಅಮೆರಿಕನ್ ಕಂಪನಿಯ ಭಾರತೀಯ ಸಿಇಒವೊಬ್ಬರು 900 ಉದ್ಯೋಗಿಗಳನ್ನ ಕೆಲಸದಿಂದ ಕಿತ್ತುಹಾಕಿದ ನಿರ್ಧಾರವನ್ನು ಝೂಮ್ ಕಾಲ್​ನಲ್ಲಿ ಪ್ರಕಟಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.

ವಿಶಾಲ್ ಗರ್ಗ್

ವಿಶಾಲ್ ಗರ್ಗ್

  • News18
  • Last Updated :
  • Share this:
    ಬೆಂಗಳೂರು: ಅಮೆರಿಕದ ಬೆಟರ್ ಡಾಟ್ ಕಾಮ್ ಎಂಬ ಕಂಪನಿ ಕಳೆದ ವಾರ ಶೇ. 15ರಷ್ಟು ಉದ್ಯೋಗಿಗಳನ್ನ ಕೆಲಸದಿಂದ ಕಿತ್ತುಹಾಕಿದ ಘಟನೆ ನಡೆದಿದೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ವ್ಯವಹಾರ ನಷ್ಟದಿಂದಾಗಿ ಭಾರತವೂ ಸೇರಿ ವಿಶ್ವಾದ್ಯಂತ ಅನೇಕ ಕಂಪನಿಗಳು ತಮ್ಮ ಹಲವು ಉದ್ಯೋಗಿಗಳನ್ನ ಲೇ ಆಫ್ ಮಾಡಿದ್ದಿದೆ. ಇದರಲ್ಲೇನು ವಿಶೇಷತೆ ಅನಿಸದೇ ಇರಬಹುದು. ಆದರೆ, ಬೆಟರ್ ಡಾಟ್ ಕಾಮ್ ಸಂಸ್ಥೆಯ ಸಿಇಒ ಝೂಮ್ ಮೀಟಿಂಗ್​ನಲ್ಲಿ 900 ಉದ್ಯೋಗಿಗಳನ್ನ ಕಾಲ್​ನಲ್ಲಿ ಸೇರಿಸಿ ಎಲ್ಲರಿಗೂ ಇವತ್ತಿನಿಂದ ನಿಮ್ಮ ಕೆಲಸ ಹೋಯಿತು ಎಂದು ಹೇಳಿದರೆ… ಕಳೆದ ವಾರ ಸಿಇಒ ಜೊತೆ ಝೂಮ್ ಮೀಟಿಂಗ್​ನಲ್ಲಿದ್ದ 900 ಮಂದಿ ತಮ್ಮ ಕೆಲಸ ಇವತ್ತೇ ಹೋಗುತ್ತೆ ಎಂದು ಯಾರೂ ಅಂದಾಜು ಮಾಡಿರಲಿಲ್ಲ. ಇದ್ದಕ್ಕಿದ್ದಂತೆ, ಇವತ್ತು ನಿಮ್ಮನ್ನ ಕಂಪನಿಯ ಸೇವೆಯಿಂದ ವಜಾಗೊಳಿಸಲಾಗುತ್ತದೆ ಎಂದು ಖುದ್ದು ಸಿಇಒ ಅವರೇ ಘೋಷಿಸಿದಾಗ ಉದ್ಯೋಗಿಗಳು ಶಾಕ್ ಆಗಿದ್ಧಾರೆ. ಸಿಇಒ ಅವರ ಈ ಝೂಮ್ ಕಾಲ್​ನ ವಿಡಿಯೋ ವೈರಲ್ ಆಗಿದೆ.

    ಅಂದಹಾಗೆ, ಬೆಟರ್ ಡಾಟ್ ಕಾಮ್ ಸಂಸ್ಥೆಯ ಸಿಇಒ ವಿಶಾಲ್ ಗರ್ಗ್. ಭಾರತೀಯ ಮೂಲದ ಅಮೆರಿಕನ್ ವ್ಯಕ್ತಿ. ಆದರೆ, ನೋವಿನಲ್ಲೇ ಅವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಕಂಪನಿ ಸಂಕಷ್ಟದ ಸ್ಥಿತಿಯಲ್ಲಿರುವುದರಿಂದ ಶೇ. 15ರಷ್ಟು ನೌಕರರನ್ನ ವಜಾಗೊಳಿಸುವುದು ಅನಿವಾರ್ಯ ಆಗಿದೆ. ನನಗೆ ಬೇರೆ ದಾರಿ ಇಲ್ಲ ಎಂದು ಅವರು ಝೂಮ್ ಕಾಲ್​ನಲ್ಲಿ ಹತಾಶೆಯಿಂದ ಹೇಳಿದ್ದು ಕಂಡು ಬಂದಿದೆ.

    “ನಾನು ಒಳ್ಳೆಯ ಸುದ್ದಿ ಹೊತ್ತು ಬಂದಿಲ್ಲ. ಮಾರುಕಟ್ಟೆ ಬದಲಾಗಿದೆ. ನಾವು ಉಳಿಯಬೇಕೆಂದರೆ ಅದಕ್ಕೆ ತಕ್ಕಂತೆ ಬದಲಾಗುವುದು ಅಗತ್ಯ. ನಮ್ಮ ಗುರಿಯನ್ನ ಈಡೇರಿಸಲು ನಾವು ಸಫಲರಾಗುತ್ತೇವೆ ಎಂದು ಆಶಿಸುತ್ತೇನೆ” ಎಂದು ವಿಶಾಲ್ ಗರ್ಗ್ ಮೊದಲು ಹೇಳಿದಾಗ ತಮ್ಮನ್ನ ಲೇ ಆಫ್ ಮಾಡಲಾಗುತ್ತದೆ ಎಂದು 900 ಉದ್ಯೋಗಿಗಳಿಗೆ ಅನಿಸಿರಲಿಕ್ಕಿಲ್ಲ.

    “ನಿಮಗೆ ಇದು ಒಳ್ಳೆಯ ಸುದ್ದಿ ಅಲ್ಲ. ಅಂತಿಮವಾಗಿ ಇದು ನನ್ನ ನಿರ್ಧಾರ. ನನ್ನಿಂದಲೇ ಈ ನಿರ್ಧಾರ ನಿಮಗೆ ತಿಳಿಯಲಿ. ಇದು ನಿಜಕ್ಕೂ ಬಹಳ ಬಹಳ ಕಷ್ಟಕರ ನಿರ್ಧಾರ ಆಗಿದೆ. ನನ್ನ ವೃತ್ತಿಜೀವನದಲ್ಲಿ ನಾನು ಇಂಥ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಇದು ಎರಡನೇ ಬಾರಿ. ಈ ಕೆಲಸ ಮಾಡಲು ನನಗೆ ಖಂಡಿತ ಮನಸ್ಸಿಲ್ಲ. ಹಿಂದಿನ ಬಾರಿ ಈ ನಿರ್ಧಾರ ಪ್ರಕಟಿಸಿದಾಗ ನಾನು ಅತ್ತುಬಿಟ್ಟಿದ್ದೆ. ಈ ಬಾರಿ ನನ್ನ ಮನಸು ಗಟ್ಟಿಯಾಗಿರಬಹುದು ಎಂದು ಭಾವಿಸಿದ್ಧೇನೆ” ಎಂದು ಸಿಇಒ ಹೇಳಿದಾಗ ಉದ್ಯೋಗಿಗಳಿಗೆ ಮುಂದೆ ಪ್ರಕಟಗೊಳ್ಳುವ ನಿರ್ಧಾರದ ಸುಳಿವು ಸಿಕ್ಕಿದ್ದೀತು.

    ಇದನ್ನೂ ಓದಿ: EPFO Credits : EPFO ಬಳಕೆದಾರರಿಗೆ ಗುಡ್ ನ್ಯೂಸ್; EPFO ವಿಮೆ ಯೋಜನೆಯಡಿ ಸಿಗಲಿದೆ 7ಲಕ್ಷ

    “ನೀವು ಈ ಕಾಲ್​ನಲ್ಲಿ ಇದ್ದೀರೆಂದರೆ ಲೇ ಆಫ್ ಆಗಿರುವ ದುರದೃಷ್ಟವಂತರ ಗುಂಪಿನಲ್ಲಿದ್ದೀರಿ ಎಂದಾಗುತ್ತದೆ. ತತ್​ಕ್ಷಣಕ್ಕೆ ಜಾರಿಗೆ ಬರುವಂತೆ ನಿಮ್ಮನ್ನ ಉದ್ಯೋಗದಿಂದ ವಜಾಗೊಳಿಸಲಾಗಿದೆ” ಎಂದು ಬೆಟರ್ ಡಾಟ್ ಕಾಮ್​ನ ಸಿಇಒ ವಿಶಾಲ್ ಗರ್ಗ್ ಹೇಳಿದರು.

    ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ರೀತಿ ಲೇ ಆಫ್ ಆದ ಮಹಿಳೆಯೊಬ್ಬರ ಧ್ವನಿ ಈ ವಿಡಿಯೋದಲ್ಲಿದೆ. ಆಕೆ ಪಡುತ್ತಿದ್ದ ನೋವು, ಹತಾಶೆ ಆಕೆಯ ಧ್ವನಿಯಿಂದ ತಿಳಿಯಬಹುದು. ಸೋಷಿಯಲ್ ಮೀಡಿಯಾದಲ್ಲಿ ಹಲವು ಜನರು ಸಿಇಒ ವಿರುದ್ಧ ಕಿಡಿ ಕಾರಿದ್ಧಾರೆ.

    ಅಂದಹಾಗೆ, ಬೆಟರ್ ಡಾಟ್ ಕಾಮ್​ನಲ್ಲಿ ಕೆಲಸ ಕಳೆದುಕೊಂಡವರಿಗೆ ಒಂದು ತಿಂಗಳ ಪೂರ್ಣ ಸಂಬಳ ಹಾಗೂ ಎರಡು ತಿಂಗಳ ವಿಮೆ ಸೌಲಭ್ಯ ಸಿಗುತ್ತದೆ.

    ಯಾವುದಿದು ಬೆಟರ್ ಡಾಟ್ ಕಾಮ್?:

    ಇದು ಅಮೆರಿಕದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಹೋಮ್ ಓನರ್​ಶಿಪ್ ಕಂಪನಿ. ಅಂದರೆ ಇದು ಗೃಹ ಸಾಲ, ವಿಮೆ, ರಿಯಲ್ ಎಸ್ಟೇಟ್ ಇತ್ಯಾದಿ ಸೇವೆಗಳನ್ನ ಒದಗಿಸುವ ಹಣಕಾಸು ಸಂಸ್ಥೆ. 2016ರಲ್ಲಿ ಸ್ಥಾಪನೆಗೊಂಡಿರುವ ಇದು ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ತನ್ನ ಸೇವೆ ನೀಡುತ್ತಿದೆ. 40 ಬಿಲಿಯನ್ ಡಾಲರ್ ಮೊತ್ತದಷ್ಟು ಗೃಹ ಸಾಲಗಳನ್ನ ನೀಡಿದೆ. 16 ಬಿಲಿಯನ್ ಡಾಲರ್ ಮೊತ್ತದಷ್ಟು ವಿಮೆ ಸೇವೆಯನ್ನ ಒದಗಿಸಿದೆ.
    Published by:Vijayasarthy SN
    First published: