ಯುಎಸ್ ಮೂಲದ ಇ-ಕಾಮರ್ಸ್ ದೈತ್ಯ ಅಮೆಜಾನ್ (Amazon) ತನ್ನ ಎಡ್ಟೆಕ್ (Edtech) ವ್ಯವಹಾರ ಅಮೆಜಾನ್ ಅಕಾಡೆಮಿಯನ್ನು ಹಂತ ಹಂತವಾಗಿ ಮುಚ್ಚಲಿದೆ ಎಂದು ಈಗಾಗಲೇ ಹೇಳಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಅಮೆಜಾನ್ ತನ್ನ ಎಡ್ಟೆಕ್ ವ್ಯವಹಾರವನ್ನು ಪ್ರಾರಂಭಿಸಿತ್ತು. ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಣಿತ ಮತ್ತು ವಿಜ್ಞಾನದ ಕೋರ್ಸ್ ಗಳನ್ನು ಈ ಎಡ್ಟೆಕ್ ನೀಡಿತು. ಆದರೆ ಈ ವ್ಯವಹಾರವನ್ನ ಅಮೆಜಾನ್ ಹಂತ ಹಂತವಾಗಿ ಮುಚ್ಚಲಿದೆ ಎಂದು ಹೇಳಿದೆ.
ಆದರೆ ಹೊಸ ಸುದ್ದಿ ಏನು ಎಂದರೆ ಪ್ರಾರಂಭಿಸಿದ ಎರಡು ವರ್ಷಗಳ ನಂತರ, ಅಮೆಜಾನ್ ಡಿಸೆಂಬರ್ 29 ರಿಂದ ತನ್ನ ಆಹಾರ ವಿತರಣಾ ಸೇವೆಯನ್ನು ಸಹ ಸ್ಥಗಿತಗೊಳಿಸುತ್ತಿದೆಯಂತೆ. ಹೀಗಂತ ಸ್ವತಃ ಇ-ಕಾಮರ್ಸ್ ಸಂಸ್ಥೆ ದೇಶದ ರೆಸ್ಟೋರೆಂಟ್ ಪಾಲುದಾರರಿಗೆ ಕಳುಹಿಸಿದ ಸಂದೇಶದಲ್ಲಿ ತಿಳಿಸಿದೆ.
ಆಹಾರ ವಿತರಣಾ ಸೇವೆಯನ್ನ ಸ್ಥಗಿತಗೊಳಿಸುತ್ತಿರುವ ಅಮೆಜಾನ್
"ಈ ನಿರ್ಧಾರದ ಅರ್ಥ ಏನೆಂದರೆ ಡಿಸೆಂಬರ್ 29 ರ ನಂತರ ರೆಸ್ಟೋರೆಂಟ್ ಗಳು ಅಮೆಜಾನ್ ಫುಡ್ ಮೂಲಕ ಗ್ರಾಹಕರಿಂದ ಊಟದ ಆರ್ಡರ್ ಗಳನ್ನು ಪಡೆಯುವುದಿಲ್ಲ. ಆದರೆ ಆ ದಿನಾಂಕದವರೆಗೆ ನೀವು ಆರ್ಡರ್ ಗಳನ್ನು ಸ್ವೀಕರಿಸುವುದನ್ನು ಮುಂದುವರಿಸುತ್ತೀರಿ ಮತ್ತು ನೀವು ಆ ಆರ್ಡರ್ ಗಳನ್ನು ಪೂರೈಸುವುದನ್ನು ಮುಂದುವರಿಸುತ್ತೀರಿ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಅಮೆಜಾನ್ ತನ್ನ ರೆಸ್ಟೋರೆಂಟ್ ಪಾಲುದಾರರಿಗೆ ಕಳುಹಿಸಿದ ಇ-ಮೇಲ್ ನಲ್ಲಿ ತಿಳಿಸಲಾಗಿದೆ.
ಅಮೆಜಾನ್ ಮೇ 2020 ರಲ್ಲಿ ಭಾರತದಲ್ಲಿ ಆಹಾರ ವಿತರಣಾ ವ್ಯವಹಾರವನ್ನು ಬೆಂಗಳೂರಿನ ಕೆಲವು ಭಾಗಗಳಲ್ಲಿ ಪ್ರಾರಂಭಿಸಿತು ಮತ್ತು ನಂತರ ನಗರದಾದ್ಯಂತ ಈ ಸೇವೆಯನ್ನು ವಿಸ್ತರಿಸಿತು, ಆದರೆ ಅದು ಈ ಪ್ಲಾಟ್ಫಾರ್ಮ್ ನ ಬಗ್ಗೆ ಹೆಚ್ಚು ಪ್ರಚಾರ ಮಾಡಲಿಲ್ಲ ಅಥವಾ ಇದನ್ನು ಹೆಚ್ಚು ಉತ್ತೇಜಿಸಲಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಅಮೆಜಾನ್ ನಲ್ಲಿಯೂ ಶುರುವಾಗುತ್ತಾ ಲೇ-ಆಫ್ ಡ್ರಾಮಾ?
ಅಮೆಜಾನ್ ದೇಶದಲ್ಲಿ ತನ್ನ ಎಡ್ಟೆಕ್ ಪ್ಲಾಟ್ಫಾರ್ಮ್ ಅನ್ನು ಮುಚ್ಚುತ್ತಿದೆ ಎಂದು ಹೇಳಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಜಾಗತಿಕವಾಗಿ, ಕಂಪನಿಯು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಯೋಜಿಸಿದೆ. ಟ್ವಿಟರ್ ಮತ್ತು ಮೆಟಾದಂತಹ ಇತರ ಡಿಜಿಟಲ್ ಪ್ಲಾಟ್ಫಾರ್ಮ್ ಗಳು ಸಹ ಇತ್ತೀಚೆಗೆ ಸಾವಿರಾರು ಜನರನ್ನು ಕೆಲಸದಿಂದ ತೆಗೆದು ಹಾಕಿವೆ.
ಅಮೆಜಾನ್ ತನ್ನ ಎಲ್ಲಾ ಪಾವತಿಗಳು ಮತ್ತು ಇತರ ಒಪ್ಪಂದದ ಬಾಧ್ಯತೆಗಳನ್ನು ಪೂರೈಸಲು ಬದ್ಧವಾಗಿದೆ ಎಂದು ತನ್ನ ರೆಸ್ಟೋರೆಂಟ್ ಪಾಲುದಾರರಿಗೆ ತಿಳಿಸಿದೆ. ರೆಸ್ಟೋರೆಂಟ್ ಗಳು ಜನವರಿ 31, 2023 ರವರೆಗೆ ಎಲ್ಲಾ ಅಮೆಜಾನ್ ಉಪಕರಣಗಳು ಮತ್ತು ವರದಿಗಳಿಗೆ ಪ್ರವೇಶವನ್ನು ಹೊಂದಿರುತ್ತವೆ ಮತ್ತು ಇದು ಯಾವುದೇ ಅನುಸರಣೆ-ಸಂಬಂಧಿತ ಸಮಸ್ಯೆಗಳಿಗೆ ಮಾರ್ಚ್ 31 ರವರೆಗೆ ಬೆಂಬಲವನ್ನು ಸಹ ಒದಗಿಸುತ್ತದೆ.
ತನ್ನ ನಿರ್ಧಾರದ ಬಗ್ಗೆ ಏನ್ ಹೇಳಿದೆ ನೋಡಿ ಅಮೆಜಾನ್?
"ನಮ್ಮ ವಾರ್ಷಿಕ ಕಾರ್ಯಾಚರಣೆ ಯೋಜನೆ ಪರಾಮರ್ಶೆ ಪ್ರಕ್ರಿಯೆಯ ಭಾಗವಾಗಿ, ಬೆಂಗಳೂರಿನಲ್ಲಿ ನಮ್ಮ ಪ್ರಾಯೋಗಿಕ ಆಹಾರ ವಿತರಣಾ ವ್ಯವಹಾರವಾದ ಅಮೆಜಾನ್ ಫುಡ್ ಅನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ" ಎಂದು ಅಮೆಜಾನ್ ಹೇಳಿದೆ.
"ನಾವು ಈ ನಿರ್ಧಾರಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಪ್ರಸ್ತುತ ಗ್ರಾಹಕರು ಮತ್ತು ಪಾಲುದಾರರನ್ನು ನೋಡಿಕೊಳ್ಳಲು ನಾವು ಈ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ನಿಲ್ಲಿಸುತ್ತಿದ್ದೇವೆ ಮತ್ತು ಈ ಪರಿವರ್ತನೆಯ ಸಮಯದಲ್ಲಿ ನಮ್ಮ ಬಾಧಿತ ಉದ್ಯೋಗಿಗಳಿಗೆ ನಾವು ಬೆಂಬಲ ನೀಡುತ್ತಿದ್ದೇವೆ" ಎಂದು ಅದು ಹೇಳಿದೆ.
ಕಂಪನಿಯು ಭಾರತೀಯ ಮಾರುಕಟ್ಟೆಗೆ ಬದ್ಧವಾಗಿದೆ ಮತ್ತು ದಿನಸಿ, ಸ್ಮಾರ್ಟ್ಫೋನ್ ಗಳು, ಎಲೆಕ್ಟ್ರಾನಿಕ್ಸ್, ಫ್ಯಾಷನ್ ಮತ್ತು ಸೌಂದರ್ಯ ಮತ್ತು ಅಮೆಜಾನ್ ಬಿಸಿನೆಸ್ ನಂತಹ ಬಿ2ಬಿ ಕೊಡುಗೆಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದೆ.
ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ 6.5 ಶತಕೋಟಿ ಡಾಲರ್ ಹೂಡಿಕೆ ಮಾಡಿದ ನಂತರವೂ, ಅಮೆಜಾನ್ ದೇಶದಲ್ಲಿ ಲಾಭದಾಯಕವಾಗಲು ಸಾಧ್ಯವಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ