ಕೋವಿಡ್ ಸಾಂಕ್ರಾಮಿಕದಿಂದ ಆರಂಭಗೊಂಡಿದ್ದ ಉದ್ಯೋಗಿ ವಜಾಗೊಳಿಸುವಿಕೆ ಎಂಬ ಆಘಾತ ಇನ್ನೂ ನಿಂತಿಲ್ಲ ಎಂದೇ ಹೇಳಬಹುದು. ಸಾಂಕ್ರಾಮಿಕ ಉಂಟುಮಾಡಿದ್ದ ಆರ್ಥಿಕ (Economic) ಹೊಡೆತದಿಂದ ಪಾರಾಗಲು, ಹೆಚ್ಚುವರಿ ಖರ್ಚುಗಳನ್ನು ಸರಿದೂಗಿಸಲು ವಿಶ್ವದ ದೊಡ್ಡ ದೊಡ್ಡ ಕಂಪನಿಗಳು (Campony) ಉದ್ಯೋಗಿಗಳನ್ನು ವಜಾಗೊಳಿಸಲು (Layoff) ಸನ್ನದ್ಧವಾಗಿವೆ. ಉದ್ಯೋಗಿಗಳಿಗೆ ಇದೊಂದು ರೀತಿಯ ಆಘಾತ ಹೊಡೆತವಾಗಿದ್ದರೆ ಇನ್ನು ಉದ್ಯೋಗದಾತರು ಏನೂ ಮಾಡುವ ಪರಿಸ್ಥಿತಿಯಲ್ಲಿಲ್ಲದೆ ಕೈಚೆಲ್ಲಿದ್ದಾರೆ. ಕೋವಿಡ್ (Covid) ಪೂರ್ಣಗೊಂಡ ನಂತರವಾದರೂ ಸ್ಥಿತಿ ಉತ್ತಮಗೊಳ್ಳಬಹುದು ಎಂದು ಆಸೆಪಟ್ಟವರೆಲ್ಲರ ಕನಸು ಇದೀಗ ಕಮರುತ್ತಿದೆ. ಚೇತರಿಕೆ ಕಾಣಬೇಕಿದ್ದ ಉದ್ಯಮ ರಂಗ ಕುಸಿಯುತ್ತಿದೆ.
ಉದ್ಯೋಗಿ ಕಡಿತದ ತೀರ್ಮಾನ ಕೈಗೊಂಡ ಅಮೆಜಾನ್
ಫೇಸ್ಬುಕ್, ಟ್ವಿಟರ್, ಗೂಗಲ್, ಓಲಾ, ಹೀಗೆ ಪಟ್ಟಿಮಾಡುತ್ತಾ ಹೋದರೆ ಈ ಕ್ರಮ ಕೈಗೊಂಡ ಟೆಕ್ ಕಂಪನಿಗಳಿಗೆ ಬರವೇ ಇಲ್ಲ. ರಿಟೇಲ್ ಸಂಸ್ಥೆ ಅಮೆಜಾನ್ ಕೂಡ ಉದ್ಯೋಗಿ ವಜಾಗೊಳಿಸುವಿಕೆಯಂತಹ ಕ್ರಮಕ್ಕೆ ಮುಂದಾಗಿದೆ ಹಾಗೂ 18,000 ಕ್ಕಿಂತಲೂ ಅಧಿಕ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದೆ ಎಂದು ವರದಿಯಾಗಿದೆ.
ಅಮೆಜಾನ್ ಕಚೇರಿಯಲ್ಲಿ ಅಳುತ್ತಿರುವ ಸಿಬ್ಬಂದಿಗಳು
ಇದೀಗ ಅಮೆಜಾನ್ನಿಂದ ವಜಾಗೊಂಡಿರುವ ಅದೆಷ್ಟೋ ಉದ್ಯಮಿಗಳು ತಮ್ಮ ದುಃಖ ತೋಡಿಕೊಳ್ಳುತ್ತಿದ್ದಾರೆ. ಹೆಚ್ಚಿನ ಉದ್ಯೋಗಿಗಳು ಮುಂದಿನ ದಾರಿ ಕಾಣದೆ ತಮ್ಮ ಬೇಸರ ಹೊರಹಾಕಿದ್ದಾರೆ ಅಳುತ್ತಿದ್ದಾರೆ ಎಂಬುದಾಗಿ ಭಾರತೀಯ ಉದ್ಯೋಗ ಸಂಬಂಧಿತ ಅಪ್ಲಿಕೇಶನ್ ಮಾಹಿತಿ ನೀಡಿದೆ.
ದುಃಖ ಹಂಚಿಕೊಂಡ ಅಮೆಜಾನ್ ಉದ್ಯೋಗಿ
75% ದಷ್ಟು ತಂಡ ಕಚೇರಿಯಿಂದ ನಿರ್ಗಮಿಸಿದೆ. ಇನ್ನುಳಿದ 25% ದಲ್ಲಿ ನಾನು ಒಬ್ಬ ಈ ಸಂಸ್ಥೆಯಲ್ಲಿ ಕೆಲಸ ಮುಂದುವರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಕೆಲಸ ಮಾಡುವುದಕ್ಕೆ ನನಗೆ ಪ್ರೇರಣೆ ದೊರೆಯುತ್ತಿಲ್ಲ. ಕ್ಯಾಬಿನ್ ಪ್ರಕಾರವಾಗಿ ಸಿಬ್ಬಂದಿಗಳನ್ನು ವಜಾಗೊಳಿಸುತ್ತಿದ್ದಾರೆ ಎಂದು ಕಚೇರಿಯಲ್ಲಿರುವ ಉದ್ಯೋಗಿಗಳು ಅಳುತ್ತಿದ್ದಾರೆ ಎಂಬುದಾಗಿ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
18,000 ಕ್ಕೂ ಹೆಚ್ಚಿನ ಉದ್ಯೋಗಿಗಳಿಗೆ ನೋಟೀಸ್
ಜನವರಿಯಲ್ಲಿಯೇ ಸಂಸ್ಥೆ ಉದ್ಯೋಗಿ ವಜಾಗೊಳಿಸುವ ಕಠಿಣ ನಿರ್ಧಾರವನ್ನು ಘೋಷಿಸಿತ್ತು ಹಾಗೂ ಉದ್ಯೋಗಿ ಸಾಮರ್ಥ್ಯವನ್ನು ಕುಂಠಿತಗೊಳಿಸುವ ನಿಟ್ಟಿನಲ್ಲಿ 18,000 ಕ್ಕೂ ಹೆಚ್ಚಿನ ಉದ್ಯೋಗಿಗಳಿಗೆ ಕತ್ತರಿ ಹಾಕುವುದಾಗಿ ಘೋಷಿಸಿತ್ತು. ಜನವರಿ 18 ರಿಂದ ವಜಾಗೊಳಿಸುವಿಕೆಯ ಪ್ರಕ್ರಿಯೆ ಆರಂಭಿಸಿದ ಇಕಾಮರ್ಸ್ ತಾಣಕ್ಕೆ ಉಂಟಾಗುವ ನಷ್ಟ ಕೂಡ ಅಷ್ಟೇ ಪ್ರಮಾಣದ್ದಾಗಿದೆ ಎಂಬುದು ಅಮೆಜಾನ್ ಮುಖ್ಯ ಕಾರ್ಯನಿರ್ವಾಹಕ ಆಂಡಿ ಜಾಸ್ಸಿ ಮಾತಾಗಿದೆ.
ಅಮೆಜಾನ್ನ ಉದ್ಯೋಗಿ ಕಡಿತವು ಅದರ ಸಂಪೂರ್ಣ 3,00,000 ಕಾರ್ಪೊರೇಟ್ ಉದ್ಯೋಗಿಗಳ 6% ದಷ್ಟಿದ್ದು, ದುಪ್ಪಟ್ಟು ಸಂಬಳ ನೀಡಿ ಪ್ರತಿಭಾವಂತರಿಗೆ ಅವಕಾಶ ನೀಡುತ್ತಿದ್ದ ಸಂಸ್ಥಯು ತ್ವರಿತ ವ್ಯಾಪಾರಿ ನೀತಿಯನ್ನು ಬಹಿರಂಗಗೊಳಿಸಿದೆ.
ವಜಾಗೊಂಡ ಉದ್ಯೋಗಿಗಳಿಗೆ 5 ತಿಂಗಳ ಸಂಬಳ ಇನ್ನಿತರ ಸೌಲಭ್ಯ
ವರದಿಗಳ ಪ್ರಕಾರ, ವಜಾಗೊಳಿಸುವಿಕೆಯು ದೇಶಾದ್ಯಂತ ಹಲವಾರು ಇಲಾಖೆಗಳ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ 1 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಅಮೆಜಾನ್, 1,000 ಉದ್ಯೋಗಿಗಳನ್ನು ವಜಾಗೊಳಿಸಲು ಸಜ್ಜಾಗಿದೆ ಎಂದು ಸುದ್ದಿಮಾಧ್ಯಮಗಳು ವರದಿ ಮಾಡಿವೆ. ಯುಎಸ್ ಮೂಲದ ಸಂಸ್ಥೆಯು ವಜಾಗೊಂಡ ಉದ್ಯೋಗಿಗಳಿಗೆ ಐದು ತಿಂಗಳ ಸಂಬಳ ಹಾಗೂ ಇನ್ನಿತರ ಪ್ರಯೋಜನಗಳನ್ನು ಒದಗಿಸುತ್ತಿದೆ ಎಂದು ವರದಿಯಾಗಿದೆ.
ವಾಲ್ಮಾರ್ಟ್ನ ನಂತರ ದೊಡ್ಡ ಸಂಸ್ಥೆ
ಅಮೆಜಾನ್ ಗೋದಾಮಿನ ಸಿಬ್ಬಂದಿಯನ್ನು ಒಳಗೊಂಡಂತೆ 1.5 ಮಿಲಿಯನ್ಗಿಂತಲೂ ಹೆಚ್ಚು ಕೆಲಸಗಾರರನ್ನು ಸಂಸ್ಥೆಯಲ್ಲಿ ಹೊಂದಿದ್ದು, ಇದು ವಾಲ್ಮಾರ್ಟ್ ಇಂಕ್ ನಂತರ ಅಮೆರಿಕದ ಎರಡನೇ ಅತಿದೊಡ್ಡ ಖಾಸಗಿ ಉದ್ಯೋಗದಾತ ಸಂಸ್ಥೆಯಾಗಿ ಹೆಸರುವಾಸಿಯಾಗಿದೆ. ಸಂಸ್ಥೆಯ ಷೇರು ಬೆಲೆಗಳು ಕುಸಿದಿದ್ದು, ಏರುತ್ತಿರುವ ಹಣದುಬ್ಬರದಿಂದ ವ್ಯಾಪಾರ ನಷ್ಟಗೊಂಡಿರುವುದರಿಂದ ಸಂಸ್ಥೆ ಉದ್ಯೋಗಿ ವಜಾಗೊಳಿಸುವಿಕೆಯಂತಹ ಕಠಿಣ ನಿರ್ಧಾರವನ್ನು ಕೈಗೊಂಡಿದೆ ಎಂದು ವರದಿಯಾಗಿದೆ.
ಫೇಸ್ಬುಕ್ ಅನ್ನು ಮೀರಿಸಿದ ಅಮೆಜಾನ್ ಉದ್ಯೋಗ ಕಡಿತ ನೀತಿ
ಸಂಸ್ಥೆ ಡಿವೈಸ್ಗಳ ವಿಭಾಗದಿಂದ ನೌಕರರನ್ನು ವಜಾಗೊಳಿಸಲು ಆರಂಭಿಸಿತು ಆ ಸಮಯದಲ್ಲಿಯೇ ಸಂಸ್ಥೆ 10,000 ಉದ್ಯೋಗಿ ಕಡಿತಗಳನ್ನು ಗುರಿಯಾಗಿಸಿಕೊಂಡಿತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ. ಫೇಸ್ಬುಕ್ನ 11,000 ಉದ್ಯೋಗಿ ವಜಾಗೊಳಿಸುವಿಕೆಗಳನ್ನು ಅಮೆಜಾನ್ ಮೀರಿರುವುದು ಖಾತ್ರಿಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ