ಈಗಂತೂ ವಿಶ್ವದಾದ್ಯಂತದ ಪ್ರಮುಖ ಐಟಿ (IT)( ಮತ್ತು ಇ-ಕಾಮರ್ಸ್ ಕಂಪನಿಗಳು ತಮ್ಮಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಉದ್ಯೋಗಿಗಳನ್ನು ಆರ್ಥಿಕ ಸಂಕಷ್ಟದ ಕಾರಣವನ್ನು ಮುಂದಿಟ್ಟುಕೊಂಡು ರಾತ್ರೋರಾತ್ರಿ ಕೆಲಸದಿಂದ ವಜಾಗೊಳಿಸುತ್ತಿವೆ. ಕೆಲಸ ಕಳೆದುಕೊಂಡ ಸಾವಿರಾರು ಉದ್ಯೋಗಿಗಳು ಈಗ ತಮ್ಮ ಉದ್ಯೋಗ ಕಳೆದುಕೊಂಡಿರುವ ನೋವನ್ನು ಮತ್ತು ಮುಂದೆ ಎಲ್ಲಾದರೂ ಕೆಲಸ ಸಿಗುತ್ತದೆ ಅನ್ನೋ ಒಂದು ನಂಬಿಕೆಯಿಂದ ಲಿಂಕ್ಡ್ಇನ್ ನಲ್ಲಿ (LinkedIn) ತಮ್ಮ ನೋವಿನ ಕಥೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ, ಕಳೆದ ಕೆಲವು ತಿಂಗಳುಗಳಲ್ಲಿ ಸಾವಿರಾರು ಉದ್ಯೋಗಗಳನ್ನು (Employment) ಕಡಿತಗೊಳಿಸಿದ ದೊಡ್ಡ ಟೆಕ್ ಕಂಪನಿಗಳಲ್ಲಿ ಅಮೆಜಾನ್ (Amazon) ಕೂಡ ಒಂದು.
ಯುನೈಟೆಡ್ ಸ್ಟೇಟ್ಸ್ ನ ಅಮೆಜಾನ್ ಕಂಪನಿಯಲ್ಲಿ ಮೂರು ವರ್ಷಗಳಿಗಿಂತ ಸ್ವಲ್ಪ ಹೆಚ್ಚು ಕಾಲ ಕಳೆದ ಡೇಟಾ ವಿಜ್ಞಾನಿಯೊಬ್ಬರು ಇ-ಕಾಮರ್ಸ್ ದೈತ್ಯ ಅಮೆಜಾನ್ನಿಂದ ವಜಾಗೊಳಿಸಲ್ಪಟ್ಟ ಭಾರತೀಯರಲ್ಲಿ ಸೇರಿದ್ದಾರೆ.
ಲಿಂಕ್ಡ್ಇನ್ನಲ್ಲಿ ಹಂಚಿಕೊಂಡಿರುವ ಕೆಲಸ ಕಳೆದುಕೊಂಡ ಡೇಟಾ ವಿಜ್ಞಾನಿ
ಲಿಂಕ್ಡ್ಇನ್ನಲ್ಲಿ ತಮ್ಮ ಲೇ-ಆಫ್ ಕಥೆಗಳನ್ನು ಹಂಚಿಕೊಂಡ ಅವರು ಕಳೆದ ಕೆಲವು ತಿಂಗಳುಗಳಲ್ಲಿ ಕಂಪನಿಯು ಹೇಗೆ ಅವರಿಗೆ ಕೆಲಸದಲ್ಲಿ ಬಡ್ತಿಯನ್ನು ನೀಡಿತ್ತು ಮತ್ತು ಹೇಗೆ ನಂತರ ಏಕಾಏಕಿಯಾಗಿ ಕೆಲಸದಿಂದ ವಜಾಗೊಳಿಸಿದೆ ಅಂತ ಹೇಳಿಕೊಂಡಿದ್ದಾರೆ ನೋಡಿ. “ಕೆಲಸದಿಂದ ತೆಗೆದು ಹಾಕುವ ಕೇವಲ ಮೂರು ತಿಂಗಳ ಮೊದಲು ನನ್ನನ್ನು ಹಿರಿಯ ಅರ್ಥಶಾಸ್ತ್ರಜ್ಞರ ಪಾತ್ರಕ್ಕೆ ಬಡ್ತಿ ನೀಡಿದ್ದರು. ಸೀನಿಯರ್ ಆಗಿ ನನಗೆ ಬಡ್ತಿ ನೀಡಿದ ನಂತರ ಎಲ್ಲಾ ಕೆಲಸಗಳು ತುಂಬಾನೇ ಚೆನ್ನಾಗಿ ನಡೆದುಕೊಂಡು ಹೋಗುತ್ತಿವೆ ಎಂದು ನಾನು ನನ್ನ ಹೆಂಡತಿಗೆ ಹೇಳಿದ್ದೆ.
ಇದನ್ನೂ ಓದಿ: ಮನೆ ಕಟ್ಟುವವರಿಗೆ ಬೊಂಬಾಟ್ ನ್ಯೂಸ್, ಸಿಮೆಂಟ್ ಬೆಲೆ ಭಾರೀ ಇಳಿಕೆ!
ಹಾಗೆಯೇ ತಮಾಷೆಗೆ ಅಂತ ಆಕೆಗೆ ಎಲ್ಲವೂ ಚೆನ್ನಾಗಿ ನಡೆಯಬೇಕಾದ ಸಮಯದಲ್ಲಿ ಕಂಪನಿಯಲ್ಲಿ ವಿಷಯಗಳು ಹಠಾತ್ತನೆ ಕೆಟ್ಟದಾಗಿ ಬಿಡುತ್ತವೆ ಅಂತ ನಾನು ತಮಾಷೆ ಮಾಡಿದ್ದೆ" ಎಂದು ಅವರು ಲಿಂಕ್ಡ್ಇನ್ ನಲ್ಲಿ ಬರೆದಿದ್ದಾರೆ.
"ತಮಾಷೆಯೆಂದರೆ, ಆ ದಿನದಿಂದ ಸರಿಯಾಗಿ ಮೂರು ತಿಂಗಳ ನಂತರ, ಅಮೆಜಾನ್ ನಲ್ಲಿ ನನ್ನನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ತಿಳಿಸಲಾಯಿತು" ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಅವರ ಲೇ-ಆಫ್ ನಡೆದಿದ್ದು 15 ನಿಮಿಷಗಳ ಫೋನ್ ಕಾಲ್ ನಲ್ಲಂತೆ..
ತನ್ನ ಉದ್ಯೋಗದಾತರಿಂದ ವಜಾ ಕರೆ 15 ನಿಮಿಷಗಳ ಕಾಲ ಅಷ್ಟೇ ಇತ್ತು ಎಂದು ಅವರು ಹೇಳಿದರು. "ಮಾಲೀಕತ್ವದ ಬಗ್ಗೆ ಮೂರು ವರ್ಷಗಳ ಗೀಳು, ದೊಡ್ಡ ಚಿಂತಕರ ವಿಶ್ವಾಸವನ್ನು ಗಳಿಸುವುದು ಮತ್ತು ಕಾರ್ಯಗಳಿಂದ ಪಕ್ಷಪಾತವನ್ನು ತೆಗೆದು ಹಾಕುವುದು, 15 ನಿಮಿಷಗಳ ಫೋನ್ ಕರೆಯಲ್ಲಿ ಇದೆಲ್ಲವೂ ಕೊನೆಗೊಂಡಿತು" ಎಂದು ಅವರು ಹೇಳಿದರು.
ಎಚ್-1 ಬಿ ವೀಸಾದಲ್ಲಿರುವ ಡೇಟಾ ಸೈಂಟಿಸ್ಟ್ ತನ್ನ ಹೆಂಡತಿ ಮತ್ತು ತನ್ನ ನಾಲ್ಕು ತಿಂಗಳ ನಾಯಿಮರಿಯೊಂದಿಗೆ ಸ್ಯಾನ್ ಜೋಸ್ ನಲ್ಲಿ ವಾಸಿಸುತ್ತಿದ್ದಾರೆ.
"ಈ ಕಷ್ಟದ ಸಮಯದಲ್ಲಿ ಮುಂದೆ ಏನು ಮಾಡೋದು ಅನ್ನೋ ವಿಷಯದ ಬಗ್ಗೆ ಗೊಂದಲ ಸೃಷ್ಟಿಸಿದೆ, ಆದರೆ ನಿಮ್ಮ ಬೆಂಬಲದೊಂದಿಗೆ, ಎಲ್ಲಾದರೂ ನನಗೆ ಒಳ್ಳೆಯ ಕೆಲಸ ಸಿಗುತ್ತದೆ ಅನ್ನೋ ಒಂದು ಭರವಸೆಯ ದಾರಿ ಇದ್ದೇ ಇರುತ್ತದೆ ಎಂದು ನನಗೆ ವಿಶ್ವಾಸವಿದೆ" ಎಂದು ಅವರು ಲಿಂಕ್ಡ್ಇನ್ ನಲ್ಲಿ ಬರೆದಿದ್ದಾರೆ.
ಎಚ್-1ಬಿ ವೀಸಾ ಹೊಂದಿರುವವರಿಗೆ ಹೊಸ ಕೆಲಸ ಹುಡುಕಲು 2 ತಿಂಗಳ ಸಮಯ ಇರುತ್ತಂತೆ
ಎಚ್-1 ಬಿ ವೀಸಾ ಹೊಂದಿರುವವರು ಹೊಸ ಉದ್ಯೋಗವನ್ನು ಹುಡುಕಲು, ಇನ್ನೊಬ್ಬ ಉದ್ಯೋಗದಾತರು ತಮ್ಮ ಪರವಾಗಿ ಎಚ್-1 ಬಿ ಅರ್ಜಿಯನ್ನು ಸಲ್ಲಿಸಲು ಅಥವಾ ಯುಎಸ್ ತೊರೆಯಲು ಕೇವಲ 60 ದಿನಗಳನ್ನು ಮಾತ್ರ ಪಡೆಯುತ್ತಾರೆ. ಅಮೆಜಾನ್ ಮಾರ್ಚ್ ನಲ್ಲಿ ತನ್ನ ಎರಡನೇ ಸುತ್ತಿನ ಲೇ-ಆಫ್ ಗಳನ್ನು ಘೋಷಿಸಿತು, ಇದರಲ್ಲಿ 9,000 ಉದ್ಯೋಗಗಳನ್ನು ಕಡಿತಗೊಳಿಸಲಾಯಿತು. ಮಾರ್ಚ್ 20 ರಂದು ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಅವರು ಉದ್ಯೋಗಿಗಳಿಗೆ ಬರೆದ ಜ್ಞಾಪಕ ಪತ್ರದಲ್ಲಿ, ಇದು ಕಂಪನಿಯ ದೀರ್ಘಕಾಲೀನ ಲಾಭಕ್ಕಾಗಿ ತೆಗೆದುಕೊಂಡ "ಕಠಿಣ ನಿರ್ಧಾರ" ಎಂದು ಹೇಳಿದರು.
ಇ-ಕಾಮರ್ಸ್ ದೈತ್ಯ ಕಂಪನಿಯು ಎರಡನೇ ಸುತ್ತಿನ ಸಾಮೂಹಿಕ ಉದ್ಯೋಗ ಕಡಿತದ ಭಾಗವಾಗಿ ಭಾರತದಾದ್ಯಂತ ಕನಿಷ್ಠ 500 ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯಲ್ಲಿದೆ. ಅಮೆಜಾನ್ ವೆಬ್ ಸೇವೆಗಳು (ಎಡಬ್ಲ್ಯುಎಸ್), ಎಚ್ ಆರ್ ಮತ್ತು ಸಪೋರ್ಟ್ ಕೆಲಸಗಳು ಸೇರಿದಂತೆ ವಿವಿಧ ವಿಭಾಗಗಳ ಮೇಲೆ ಈ ಲೇ-ಆಫ್ ಪರಿಣಾಮ ಬೀರುತ್ತಿದೆ ಎಂದು ಅನೇಕ ಮೂಲಗಳು ದೃಢಪಡಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ