ಫೇಮಸ್ ಆ್ಯಪ್ ಬ್ಲಿಂಡ್ನಲ್ಲಿ ಇತ್ತೀಚೆಗೆ ಅಮೆಜಾನ್ (Amazon) ಸಂಸ್ಥೆಯ ಸಾಫ್ಟ್ ವೇರ್ ಉದ್ಯೋಗಿಯೊಬ್ಬರ ಒಂದು ಪೋಸ್ಟ್ (Post) ವೈರಲ್ (Viral) ಆಗಿದೆ. ಪೋಸ್ಟ್ನಲ್ಲಿ ಅಸಮಾಧಾನ ಹೊರಹಾಕಿದ್ದು ಇದು ನೆಟ್ಟಿಗರನ್ನು ಅಚ್ಚರಿಗೊಳಿಸಿದೆ. ಒಂದು ವೇಳೆ ನನ್ನನ್ನು ಕೆಲಸದಿಂದ ತೆಗೆದುಹಾಕಿದರೆ ನಿಮ್ಮ ಪ್ರಾಡಕ್ಟ್ ಹೇಗೆ ನಾಶಗೊಳಿಸಬಹುದೆಂಬುದು ನನಗೆ ಗೊತ್ತಿದೆ ಎಂದಿದ್ದಾನೆ ಈ ವ್ಯಕ್ತಿ.
ಈ ಬಗ್ಗೆ ವಿವರವಾಗಿ ಬರೆದುಕೊಂಡಿರುವ ಅಜ್ಞಾತ ಟೆಕ್ಕಿ, ತಾನು ತನ್ನ ಸಹೋದ್ಯೋಗಿಗಳ ಕೋಡ್ನಲ್ಲಿ ಬಗ್ ಇರುವುದನ್ನು ಪತ್ತೆ ಹಚ್ಚಿದ್ದರೂ ಸಹ ಅದನ್ನು ಅಪ್ರೂವ್ ಮಾಡಿದ್ದೇನೆ. ಈ ಟಫ್ ಟೈಂನಲ್ಲಿ ಅಮೆಜಾನ್ ತನ್ನನ್ನು ಕೆಲಸದಿಂದ ವಜಾಗೊಳಿಸಿದಲ್ಲಿ ವೆಬ್ ಪೋರ್ಟಲ್ಗೆ ಹಾನಿಯಾಗುವ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಪ್ರಾಡಕ್ಟ್ ಹಾಳು ಮಾಡುವ ಬೆದರಿಕೆ
ತನ್ನ ಸಹುದ್ಯೋಗಿಯನ್ನು ವಜಾಗೊಳಿಸಿದ ಬಗ್ಗೆ ಪೋಸ್ಟ್ ಹಾಕಿ ಪ್ರೊಗ್ರ್ಯಾಮ್ ನಲ್ಲಿ ತಪ್ಪಿದ್ದರೂ ಅದನ್ನು ಅನುಮೋದಿಸಿ ಈಗಾಗಲೇ ಪ್ರಾಥಮಿಕ ಸರ್ವರ್ ಗಳಲ್ಲಿ ಆ ಕೋಡ್ ಅನ್ನು ಸೇರಿಸಿರುವುದಾಗಿ ಹೇಳಿದ್ದಾರೆ. ಈ ದೋಷವನ್ನು ತ್ವರಿತವಾಗಿ ಸರಿಪಡಿಸದೆ ಹೋದರೆ ಕೆಲ ಸಮಯದ ನಂತರ ಅದು ಅಮೆಜಾನ್ನ ಯಾವುದಾದರೂ ಉತ್ಪನ್ನವನ್ನು ನಾಶಗೊಳಿಸಬಹುದು ಎಂದು ಬೆದರಿಸಿದ್ದಾರೆ.
ಈಗ ಅಮೆಜಾನ್ ನಲ್ಲಿ ವಜಾಗೊಳಿಸುವಿಕೆ ನಡೆಯುತ್ತಿದೆ. ನನ್ನ ಸಹೋದ್ಯೋಗಿಯ ಸಿಆರ್ ನಲ್ಲಿ ನಾನು ಒಂದು ಬಗ್ ಅನ್ನು ಪತ್ತೆ ಹಚ್ಚಿದ್ದು ಅದಕ್ಕೆ ಅನುಮೋದನೆಯನ್ನೂ ಸಹ ನೀಡಿರುವೆ. ಆ ಬಗ್ ಈಗ ಆಂತರಿಕ ಪ್ರಕ್ರಿಯೆಯಲ್ಲಿ ಸೇರಿಕೊಂಡಿದೆ. ನನ್ನನ್ನು ಕೆಲಸದಿಂದ ತೆಗೆದುಹಾಕಿದರೆ ಮುಂದೆ ಅದು ನಾನಿರದ ಸಂದರ್ಭದಲ್ಲಿ ಅಮೆಜಾನ್ ಉತ್ಪನ್ನಕ್ಕೆ ಭಾರಿ ಹಾನಿ ಮಾಡಬಹುದು ಎಂದಿದ್ದಾರೆ. ವ್ಯಕ್ತಿಯು ಬ್ಲಿಂಡ್ ಆಪ್ ನಲ್ಲಿ "cPk3du" ಎಂಬ ಹೆಸರಿನ ಮೂಲಕ ಈ ಪೋಸ್ಟನ್ನು ಮಾಡಿದ್ದಾರೆ.
ಅಮೆಜಾನ್ ಸಂಸ್ಥೆಯು ಕಳೆದ ನವೆಂಬರ್ ನಿಂದಲೇ ಉದ್ಯೋಗಿಗಳನ್ನು ವಜಾಗೊಳಿಸುವಿಕೆಯ ಪ್ರಕ್ರಿಯೆ ಆರಂಭಿಸಿಯಾಗಿದೆ. ಅದು ಈಗಲೂ ಮುಂದುವರೆಯುತ್ತಿದೆ. ಉದ್ಯೋಗಿಗಳ ನೈತಿಕ ಮೌಲ್ಯವು ಕುಸಿದಿದೆ ಎಂದು ಹತಾಶೆ ವ್ಯಕ್ತಪಡಿಸುತ್ತ ಟೆಕ್ಕಿ ತಮ್ಮ ಪೋಸ್ಟ್ ಬರೆದುಕೊಂಡಿದ್ದಾರೆ.
ಈಗಾಗಲೇ ಟೆಕ್ ದೈತ್ಯ ಅಮೆಜಾನ್ ಆರ್ಥಿಕ ಹಿಂಜರಿತ ಹಾಗೂ ಅದರಿಂದ ಉಂಟಾಗುವ ವೆಚ್ಚದ ಪರಿಣಾಮಗಳನ್ನು ಅವಲೋಕಿಸಿ ಜಗತ್ತಿನಾದ್ಯಂತ ತನ್ನ ವಿವಿಧ ಶಾಖೆಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಪೈಕಿ ಸುಮಾರು 18,000 ಉದ್ಯೋಗಿಗಳನ್ನು ಕೈಬಿಡುವುದಾಗಿ ಹೇಳಿಕೆ ನೀಡಿದೆ. ಈ ಮೂಲಕ ಸಂಸ್ಥೆಯು ತನ್ನ ಒಟ್ಟು ಕೆಲಸಗಾರರ ಶೇ. 6 ರಷ್ಟನ್ನು ಕೈಬಿಡುತ್ತಿದೆ.
ಇದನ್ನೂ ಓದಿ: Budget 2023: ಈ ಬಾರಿ ಬಜೆಟ್‌ನಲ್ಲಿ ಹೆಲ್ತ್ ಸೆಕ್ಟರ್ ಹಾಗೂ ಮ್ಯಾನ್ಯುಫಾಕ್ಟರಿಂಗ್ ಸೆಕ್ಟರ್‌ಗೆ ಸಿಗುವುದೇನು?
ಟೆಕ್ಕಿ ಬರೆದುಕೊಂಡಿರುವ ಈ ಪೋಸ್ಟ್ ಅನೇಕರ ಹುಬ್ಬೇರಿಸುವಂತೆ ಮಾಡಿರುವುದರಲ್ಲಿ ಸಂಶಯವಿಲ್ಲ. ಅಲ್ಲದೆ, ಸ್ವತಃ ಬ್ಲಿಂಡ್ ಆಪ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟೆಕ್ಕಿ ಬರೆದುಕೊಂಡಿರುವ ಪೋಸ್ಟಿನ ಸ್ಕ್ರೀನ್ ಶಾಟನ್ನು ಹಂಚಿಕೊಂಡಿದ್ದು ಅದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ .
ಹಲವು ಐಟಿ ವಲಯದ ಉದ್ಯೋಗಿಗಳು ಹಾಗೂ ಇತರೆ ಟ್ವಿಟರ್ ಬಳಕೆದಾದರು ಆ ಟೆಕ್ಕಿ ವ್ಯಕ್ತಿ ಮಾಡಿರುವುದನ್ನು ಅನೈತಿಕ ಹಾಗೂ ಕಳಪೆ ಎಂದು ಹೇಳಿದ್ದಾರೆ.
ಇದು ಕೀಳುಮಟ್ಟದ ನಡವಳಿಕೆ ಎಂದು ಟೀಕಿಸಿದ್ದಾರೆ. ನಮಗೆ ಉದ್ಯೋಗ, ಕಲಿಕೆ, ಕೌಶಲ್ಯ, ಅನುಭವ ಹಾಗೂ ಹಣ ಕೊಟ್ಟ ಸಂಸ್ಥೆಗೆ ಈ ರೀತಿಯಾಗಿ ದ್ರೋಹ ಬಗೆಯುವುದು ನಿಜಕ್ಕೂ ಸರಿಯಲ್ಲ ಎಂದಿದ್ದಾರೆ ನೆಟ್ಟಿಗರು. ಒಟ್ಟಾರೆಯಾಗಿ ಈ ಪೋಸ್ಟಿಗೆ ಸಂಬಂಧಿಸಿದಂತೆ ಅಮೆಜಾನ್ ಏನಾದರೂ ಪ್ರತಿಕ್ರಿಯೆ ನೀಡಬಹುದೆ ಎಂಬುದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ