Organic Farming: ಕಾರ್ಪೊರೇಟ್ ಕಂಪನಿ ಕೆಲಸ ಬಿಟ್ಟು ಕೃಷಿಯತ್ತ ಮುಖ ಮಾಡಿದ ಟೆಕ್ಕಿ, ಸಂಪಾದನೆ ಕೋಟಿ ಕೋಟಿ!

ರೋಜಾ ರೆಡ್ಡಿ

ರೋಜಾ ರೆಡ್ಡಿ

ಮಹಾಮಾರಿ ಕೊರೋನಾದ ಬಳಿಕ ಅನೇಕರದ್ದು ಕೆಲಸ ಕಳೆದುಕೊಂಡು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ. ಇನ್ನೂ ಅನೇಕರ ಜೀವನವೇ ಬೀದಿಗೆ ಬಂದಿದೆ. ಆದ್ರೆ ಅನೇಕ ಅದೃಷ್ಟವಂತರ ಪಾಲಿಗೆ ಇದೇ ವರವಾಗಿದೆ. ಹಲವಾರು ಜನರು ಕೊರೋನಾ ಸಮಯದಲ್ಲೇ ಬದುಕನ್ನು ಕಟ್ಟಿಕೊಂಡು ಸಾಧನೆ ಮಾಡಿದ್ದಾರೆ. ಅಂಥವರಲ್ಲೊಬ್ಬರು ರೋಜಾ ರೆಡ್ಡಿ. ಐಟಿ ಕೆಲಸ ಬಿಟ್ಟು ಕೃಷಿ ಮಾಡಿ ವರ್ಷಕ್ಕೆ ಕೋಟಿಗಟ್ಟಲೇ ಆದಾಯ ಗಳಿಸುತ್ತಿದ್ದಾರೆ.

ಮುಂದೆ ಓದಿ ...
  • Share this:

ಐಟಿ ಸಿಟಿ ಬೆಂಗಳೂರು (Bengaluru) ಅನೇಕರಿಗೆ ನೆರಳು ಕೊಟ್ಟಿದೆ. ಇಲ್ಲಿ ಬಂದು ಕೈತುಂಬಾ ಸಂಪಾದನೆ ಮಾಡೋದು ಅನೇಕರ ಕನಸು ಕೂಡ. ಇದು ಐಟಿ ಸಿಟಿಯಾದ್ದರಿಂದ ಇಲ್ಲಿ ಅವಕಾಶಗಳೂ ಹೆಚ್ಚು. ಹೀಗಾಗಿ ಇಲ್ಲಿ ಬಂದು ಬದುಕು ಕಟ್ಟಿಕೊಂಡವರು ಅನೇಕ ಮಂದಿ. ಆದರೆ ಕಳೆದ ಎರಡು ವರ್ಷಗಳಿಂದ ಇಡೀ ಜಗತ್ತನ್ನು ಕಂಗಾಲಾಗಿಸಿದ ಕೊರೋನಾ (Corona) ಮಹಾಮಾರಿ ಅನೇಕರನ್ನು ಬಲಿ ಪಡೆದಿದೆ. ಅನೇಕರದ್ದು ಕೆಲಸ ಕಳೆದುಕೊಂಡು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ. ಇನ್ನೂ ಅನೇಕರ ಜೀವನವೇ ಬೀದಿಗೆ ಬಂದಿದೆ. ಆದ್ರೆ ಅನೇಕ ಅದೃಷ್ಟವಂತರ ಪಾಲಿಗೆ ಇದೇ ವರವಾಗಿದೆ. ಹಲವಾರು ಜನರು ಕೊರೋನಾ ಸಮಯದಲ್ಲೇ ಬದುಕನ್ನು ಕಟ್ಟಿಕೊಂಡು ಸಾಧನೆ (Achievement) ಮಾಡಿದ್ದಾರೆ. ಅಂಥವರಲ್ಲೊಬ್ಬರು ರೋಜಾ ರೆಡ್ಡಿ. ಐಟಿ ಕೆಲಸ ಬಿಟ್ಟು ಕೃಷಿ (Agriculture) ಮಾಡಿ ವರ್ಷಕ್ಕೆ ಕೋಟಿಗಟ್ಟಲೇ ಆದಾಯ (Income) ಗಳಿಸುತ್ತಿದ್ದಾರೆ.


ರೋಜಾ ರೆಡ್ಡಿಯವರ ಕಥೆ ಇದು
ಹೌದು, 26 ವರ್ಷದ ರೋಜಾ ರೆಡ್ಡಿ ಕರ್ನಾಟಕದ ಚಿತ್ರದುರ್ಗದ ದೊಣ್ಣೆಹಳ್ಳಿ ಅನ್ನೋ ಗ್ರಾಮದವರು. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಎಂಎನ್‌ ಸಿ ಒಂದರಲ್ಲಿ ಒಳ್ಳೆಯ ಕೆಲಸದಲ್ಲಿದ್ದರು. ಕೊರೋನಾ ಹೊತ್ತಿಗೆ ಬಹುತೇಕ ಎಲ್ಲ ಕಂಪನಿಗಳಂತೆ ಈ ಕಂಪನಿ ಕೂಡ ಮನೆಯಿಂದಲೇ ಕೆಲಸ ಮಾಡಿ ಎಂದಿತು. ಹೀಗಾಗಿ ಬೆಂಗಳೂರಿನಲ್ಲಿ ಇದ್ದು ಮಾಡುವುದೇನು ಎಂದು ಊರಿಗೆ ತೆರಳಿ ಕೆಲಸ ಮಾಡಲಾರಂಭಿಸಿದರು. ಇದು ಅವರ ಜೀವನವನ್ನೇ ಬದಲಾಯಿಸುತ್ತೆ ಅನ್ನೋದು ಬಹುಶಃ ಅವರಿಗೂ ಗೊತ್ತಿರಲಿಕ್ಕಿಲ್ಲ.


ʼನನ್ನ ಕುಟುಂಬ ರೈತ ಕುಟುಂಬ. ತಂದೆ ಸಹೋದರ ಇಬ್ಬರೂ ಕೃಷಿಯನ್ನೇ ನಂಬಿಕೊಂಡವರು. ಅದರ ಕಷ್ಟ ನಷ್ಟ ಅರಿತಿರುವ ಅವರು ನನ್ನನ್ನು ಕೃಷಿಯಿಂದ ದೂರವೇ ಇಟ್ಟಿದ್ದರು. ಬೆಂಗಳೂರಿನಲ್ಲಿ ಒಳ್ಳೆಯ ಕೆಲಸ ಮಾಡಿ ಕೈತುಂಬಾ ಸಂಪಾದನೆ ಮಾಡಲಿ ಅನ್ನೋ ಕಾರಣಕ್ಕೆ ಬಿ ಇ ಓದಿಸಿ ಕೆಲಸಕ್ಕೆ ಕಳಿಸಿದ್ದರು. ನಾನು ಕೃಷಿ ಕೆಲಸ ಮಾಡುವುದು ಅವರಿಗೆ ಇಷ್ಟವೇ ಇರಲಿಲ್ಲ. ಆದರೆ ನಮ್ಮ ಕುಲಕಸುಬು ಕೃಷಿಯಲ್ಲಿ ಏನಾದರೂ ಮಾಡಬೇಕು ಅನ್ನೋದನ್ನು ಸವಾಲಾಗಿ ಸ್ವೀಕರಿಸಿದ ನಾನು ಅವರು ಮಾಡುತ್ತಿದ್ದ ಕೃಷಿಯನ್ನು ಸಾವಯವ ಕೃಷಿಯನ್ನಾಗಿ ಮಾಡಲು ಪ್ರಯತ್ನಿಸಿದೆ. ನನ್ನ ಆಫೀಸ್‌ ಕೆಲಸ ಮುಗಿದ ಬಳಿಕ ಅಂದರೆ ಸಂಜೆ 4 ಗಂಟೆಯ ಬಳಿಕ ನಾನು ಹೊಲಕ್ಕೆ ಹೋಗಿ ಈ ಬಗ್ಗೆ ಕೆಲಸ ಮಾಡತೊಡಗಿದೆʼ ಎನ್ನುತ್ತಾರೆ ರೋಜಾ.


ಇದನ್ನೂ ಓದಿ: Wedding Industry: ಇವೆಂಟ್‌ ಮ್ಯಾನೇಜ್‌ಮೆಂಟ್​ಗೆ ಭಾರೀ ಡಿಮ್ಯಾಂಡ್:‌ ಈ ವರ್ಷ ಮದುವೆ ಉದ್ಯಮ 200% ಹೆಚ್ಚಳ!


ಅಷ್ಟಕ್ಕೂ ನಮ್ಮಲ್ಲಿ ಜನರು ಪರಿವರ್ತನೆಯನ್ನು ಅಷ್ಟು ಬೇಗ ಒಪ್ಪಿಕೊಳ್ಳೋದಿಲ್ಲ. ರೋಜಾ ಕುಟುಂಬವೂ ಇದಕ್ಕೆ ಹೊರತಾಗಿರಲಿಲ್ಲ. ಹಲವಾರು ವರ್ಷಗಳಿಂದ ರಾಸಾಯನಿಕ ಕೃಷಿಯನ್ನು ಮಾಡುತ್ತ ಬಂದಿದ್ದ ಈ ಕುಟುಂಬ ಸಾವಯವ ಕೃಷಿ ಮಾಡೋಣ ಅನ್ನೋದನ್ನು ವಿರೋಧಿಸಿತು. ರಾಸಾಯನಿಕ ವಿಧಾನದಿಂದಲೇ ಭೂಮಿ ಹಾಳಾಗಿ ಫಸಲು ಕಡಿಮೆಯಾಗುತ್ತಿದೆ ಅನ್ನುವುದನ್ನು ಒಪ್ಪಲೇ ಇಲ್ಲ. ಆದರೆ, ಕೊನೆಗೂ ಮನೆಯವರನ್ನು ಒಪ್ಪಿಸುವುದರಲ್ಲಿ ರೋಜಾ ಸಫಲರಾದರು.


ಸಾವಯವ ಕೃಷಿ ಮಾಡಿದ ಯುವತಿ 
ಮೊದಲು ಕುಟುಂಬದ ಜೊತೆ ಸಂಬಧಿಕರು ಸೇರಿದಂತೆ ಅನೇಕರು ರೋಜಾಳನ್ನು ಕೆಲಸ ಬಿಟ್ಟು ಕೃಷಿ ಮಾಡುವ ಕುರಿತು ಪ್ರಶ್ನಿಸಿದರು. ಆದರೆ ಅಜ್ಜ ಮಾಡುತ್ತಿದ್ದ ಸಾವಯವ ಕೃಷಿಯನ್ನು ರೋಜಾ ನೋಡಿದ್ದರು. ಆದರೆ ತನ್ನ ತಂದೆ ಹಾಗೂ ಸಹೋದರ ಮಾಡುತ್ತಿದ್ದ ರಾಸಾಯನಿಕಯುಕ್ತ ಕೃಷಿಯಿಂದ ಭೂಮಿಯ ಫಲವತ್ತತೆ ಹಾಗೂ ಫಸಲಿನ ಪ್ರಮಾಣ ಎರಡೂ ಕಡಿಮೆಯಾಗುತ್ತಿರುವುದು ಇವರು ಗಮನಿಸಿದ್ದರು.


ಅವರಿಗಿದ್ದ 20 ಎಕರೆ ಭೂಮಿಯಲ್ಲಿ ಅವರು ಬಳಸುತ್ತಿದ್ದುದು ಕೇವಲ 6 ಎಕರೆ ಮಾತ್ರವಾಗಿತ್ತು. ಉಳಿದಷ್ಟೂ ಭೂಮಿ ಕೃಷಿ ಮಾಡಲು ಬಾರದೇ ಹಾಗೆಯೇ ಉಳಿದಿತ್ತು. ಅದೇ ಬಳಕೆಗೆ ಬಾರದು ಎಂದು ಬಿಟ್ಟಿದ್ದ ಭೂಮಿಯಲ್ಲೇ ತಾನು ಸಾವಯವ ಕೃಷಿ ಮಾಡುತ್ತೇನೆಂದು ಮನೆಯವರನ್ನು ಒಪ್ಪಿಸಿದ ರೋಜಾ ಕೆಲ ಸಂಬಂಧಿಕರು ಹಾಗೂ ಕೃಷಿ ವಿಭಾಗದ ಅಧಿಕಾರಿಗಳ ಸಲಹೆಯ ಮೇಲೆ ಅದೇ 6 ಎಕರೆ ಪ್ರದೇಶದಲ್ಲಿ ಕೃಷಿ ಆರಂಭಿಸಿದ್ದರು.


ಗಿಡಗಳಿಗೆ ಸಾವಯವ ಗೊಬ್ಬರ ಬಳಕೆ 
ಕೆಲವೊಂದಿಷ್ಟು ಇಂಟರ್‌ ನೆಟ್‌ ನಲ್ಲಿ ಹುಡುಕಿ, ಇನ್ನೂ ಕೆಲವನ್ನು ಯಶಸ್ವಿಯಾಗಿ ಸಾವಯವಕೃಷಿ ಮಾಡುತ್ತಿರುವವರ ಬಳಿ ಕೇಳಿ ತಿಳಿದುಕೊಂಡರು. ಬೆಳೆಗಳಿಗೆ ಸಾವಯವ ಗೊಬ್ಬರಗಳಾದ ಜೀವಾಮೃತ, ನೀಮಾಸ್ತ್ರ, ಅಗ್ನಿಯಸ್ತ್ರ ಮುಂತಾದವನ್ನು ಹಾಕಿದರು. ಅದಾದ ಕೆಲವೇ ತಿಂಗಳುಗಳಲ್ಲಿ ಸಾವಯವ ಕೃಷಿ ಮೊಳಕೆಯೊಡೆಯತೊಡಗಿತು.


ಬೆಳೆ ಬೆಳೆದ ಮೇಲೆ ಇರುವ ದೊಡ್ಡ ಸವಾಲೇ ಅದನ್ನು ಮಾರಾಟ ಮಾಡುವುದು. ರೋಜಾ ಅವರಿಗೂ ಮಾರ್ಕೆಟಿಂಗ್‌ ದೊಡ್ಡ ಸವಾಲಿನ ಕೆಲಸವೇ ಆಗಿತ್ತು. ಆಕೆ ಇರುವ ಊರಿನ ಸುತ್ತಮುತ್ತ ಜನರಿಗೆ ಸಾವಯವ ಕೃಷಿಯ ಬಗ್ಗೆ ಹೆಚ್ಚಾಗಿ ಅರಿವಿರಲಿಲ್ಲ. ಅದನ್ನು ಬೆಳೆಯುವುದು ಮತ್ತು ಅವನ್ನು ಸೇವಿಸೋದರಿಂದ ಏನು ಲಾಭ ಅನ್ನೋದ್ರ ಬಗ್ಗೆ ಅವರಿಗೆ ಗೊತ್ತಿರಲಿಲ್ಲ. ಹೀಗಾಗಿ ನೂರಾರು ಕೆಜಿಗಟ್ಟಲೆ ಬೆಳೆದ ಬೆಳೆಗಳನ್ನು ಮಾರಾಟ ಮಾಡುವ ಬಗ್ಗೆ ಚಿಂತಿತರಾಗಿದ್ದು ನಿಜ.


ಇದನ್ನೂ ಓದಿ:  Gac Fruit: ಅಪರೂಪದ ಗ್ಯಾಕ್ ಹಣ್ಣನ್ನು ಬೆಳೆಸಿ ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ ಕೇರಳದ ಕೃಷಿಕ


ಆದರೆ ಛಲ ಬಿಡದ ರೋಜಾ ಬೇರೆ ಬೇರೆ ಊರುಗಳಿಗೆ ತೆರಳಿದರು. ಇದಕ್ಕೂ ಮೊದಲು ನಾನು ಚಿತ್ರದುರ್ಗದಲ್ಲೇ 8 ಜನ ಆರ್ಗ್ಯಾನಿಕ್‌ ಕೃಷಿಕರದ್ದೊಂದು ಗುಂಪು ಮಾಡಿದೆ. ಅಲ್ಲಿಂದ ಸ್ಥಳೀಯ ಅಧಿಕಾರಿಗಳ ಜೊತೆ ಮಾತನಾಡಿ ಹತ್ತಿರದ ತಾಲೂಕುಗಳಲ್ಲಿ ನಮ್ಮ ಸಾವಯವ ಬೆಳೆಗಳನ್ನು ಮಾರಾಟ ಮಾಡಲು ಸ್ಥಳಾವಕಾಶ ನೀಡಬೇಕೆಂದು ಮನವಿ ಮಾಡಿದೆವು.


ಸಾವಯವ ಹಣ್ಣು ತರಕಾರಿಗಳ ಬಗ್ಗೆ ಮಾಹಿತಿ 
ಅಲ್ಲದೇ ಹತ್ತಿರದ ಮನೆ ಮನೆಗಳಿಗೆ ತೆರಳಿ ಸಾವಯವ ಹಣ್ಣುಗಳನ್ನು ಉಪಯೋಗಿಸುವುದರಿಂದ ಆರೋಗ್ಯಕ್ಕೆ ಉಂಟಾಗುವ ಪ್ರಯೋಜನಗಳನ್ನು ಮನವರಿಕೆ ಮಾಡಿಕೊಡತೊಡಗಿದೆವು. ಅಲ್ಲದೇ ನಮ್ಮ ಮಾರ್ಕೆಟ್‌ ಗೂ ಬಂದು ಖರೀದಿ ಮಾಡಬೇಕೆಂದು ಕೇಳಿಕೊಂಡೆವು ಎಂಬುದಾಗಿ ರೋಜಾ ವಿವರಿಸುತ್ತಾರೆ.


ಸದ್ಯ ನಿಸರ್ಗ ನೇಟಿವ್‌ ಫಾರ್ಮ್‌ ಅನ್ನೋ ಬ್ರಾಂಡ್‌ ರೋಜಾ ತಮ್ಮ ಸಾವಯವ ಕೃಷಿಯ ಮಾರುಕಟ್ಟೆಯನ್ನು ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ ಹೀಗೆ ಬೇರೆ ಬೇರೆ ಊರುಗಳಿಗೆ ವಿಸ್ತರಿಸಿದ್ದಾರೆ. ಅಲ್ಲದೇ ಅವರು ಸುಮಾರು 500 ಮಂದಿ ರೈತರನ್ನು ತಮ್ಮ ಮಾರುಟ್ಟೆಯಲ್ಲಿ ಹೊಂದಿದ್ದಾರೆ. ಸದ್ಯ ಬೆಂಗಳೂರಿನಂಥ ಸಿಟಿಯಿಂದ ತಮಗೆ ಸಾಕಷ್ಟು ಆರ್ಡರ್‌ ಗಳು ಬರುತ್ತಿವೆ ಎನ್ನುತ್ತಾರೆ.


ರೋಜಾ ರೆಡ್ಡಿಗೆ ಎದುರಾದ ಸವಾಲುಗಳು
ಸದ್ಯ ಪೂರ್ಣಾವಧಿಯ ಕೃಷಿ ಕೆಲಸ ಮಾಡುತ್ತಿರುವ ರೋಜಾ ರೆಡ್ಡಿಗೆ ಎದುರಾದ ಮತ್ತೊಂದು ಸವಾಲು ಭೂಮಿಯದ್ದು. ಮೂಲತಃ ಚಿತ್ರದುರ್ಗ ಬಿಸಿಲೂರು. ಅಷ್ಟಾಗಿ ಮಳೆಯಾಗದ ಪ್ರದೇಶ. ಆದರೆ ಮನಸ್ಸಿದ್ದಲ್ಲಿ ಮಾರ್ಗವಿದೆ ಅನ್ನೋದು ಈ ವಿಷಯದಲ್ಲೂ ಸತ್ಯವಾಗಿದೆ. ಸದ್ಯ ಸಾವಯವ ಕೃಷಿಯಲ್ಲಿ ಬೇರೆ ಕೃಷಿ ವಿಧಾನಕ್ಕಿಂತಲೂ ಕಡಿಮೆ ನೀರು ಸಾಕಾಗುತ್ತದೆ. ಸದ್ಯ 3 ಬೋರ್‌ ವೆಲ್‌ ಹೊಂದಿರುವ ರೋಜಾ ರೈನ್‌ ವಾಟರ್‌ ಹಾರ್ವೆಸ್ಟಿಂಗ್‌ ಕೂಡ ನಡೆಸಿದ್ದಾರೆ.


ಯಾವೆಲ್ಲಾ ತರಕಾರಿಗಳನ್ನು ಬೆಳೆಯುತ್ತಾರೆ  
6 ಎಕರೆ ಭೂಮಿಯಿಂದ ಕೃಷಿ ಆರಂಭಿಸಿದ ಇವರು 50 ಎಕರೆ ಪ್ರದೇಶದಲ್ಲಿ ಈಗ ಬೆಳೆ ಬೆಳೆಯುತ್ತಿದ್ದಾರೆ. ಟೊಮ್ಯಾಟೋ, ಬೀನ್ಸ್‌, ಕ್ಯಾರೆಟ್‌, ಬದನೆಕಾಯಿ, ಬೆಂಡೆಕಾಯಿ, ಸೋರೆಕಾಯಿ, ಹಾಗಲಕಾಯಿ, ಮೆಣಸು, ಸೌತೆಕಾಯಿ ಸೇರಿದಂತೆ ಬೇರೆ ಬೇರೆ ವಿಧದ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ದಿನಕ್ಕೆ ಸುಮಾರು 500 ರಿಂದ 700 ಕೆಜಿ ತರಕಾರಿಗಳನ್ನು ಬೆಳೆಯುತ್ತಿದ್ದು ವರ್ಷಕ್ಕೆ 1 ಕೋಟಿ ಆದಾಯ ಗಳಿಸುತ್ತಿರೋದಾಗಿ ಹೇಳುತ್ತಾರೆ ರೋಜಾ.


ಸದ್ಯ ಯಶಸ್ವಿಯಾಗಿ ಸಾವಯವ ಕೃಷಿ ಮಾಡುತ್ತಿರುವ ರೋಜಾ ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿದ್ದಾರೆ. ಮೊದಲು ಕಾಲೆಳೆದವರೂ ಈಗ ಆಕೆಯ ಸಲಹೆ ಕೇಳುತ್ತಿದ್ದಾರೆ. ಸಾವಯವ ಕೃಷಿ ಪದ್ಧತಿಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಅವರದೇ ಊರಿನಲ್ಲಿ ಸುಮಾರು 25 ಜನರು ರಾಸಾಯನಿಕ ಕೃಷಿ ಪದ್ಧತಿ ಬಿಟ್ಟು ಈ ಪದ್ಧತಿ ಅನುಸರಿಸುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿಯಿಲ್ಲದೇ ಹೆಚ್ಚು ಲಾಭವನ್ನೂ ಗಳಿಸುತ್ತಿದ್ದಾರೆ.


ಇದನ್ನೂ ಓದಿ:  Business: ಕಾರ್ಪೊರೇಟ್ ಉದ್ಯೋಗಕ್ಕಿಂತ ಈ ಉದ್ಯಮವೇ ಬೆಸ್ಟ್; MBA ಪದವಿ ಪಡೆದು ಆಹಾರೋದ್ಯಮದಲ್ಲಿ ಯಶಸ್ಸು ಕಂಡವರಿವರು

top videos


    ರಾಸಾಯನಿಕ ಪದ್ಧತಿಯಿಂದ ಭೂಮಿಯೂ ಹಾಳು, ಮಣ್ಣೂ ತನ್ನ ಗುಣ ಕಳೆದುಕೊಂಡು ಸತ್ವಹೀನವಾಗುತ್ತೆ. ಜೊತೆಗೆ ಈ ಪದ್ಧತಿಯಿಂದ ಬೆಳೆದ ಬೆಳೆ ಸೇವಿಸಿದವರ ಆರೋಗ್ಯವೂ ಹಾಳಾಗುತ್ತದೆ. ಹೀಗಾಗಿ ಸಾವಯವ ಪದ್ಧತಿ ಭೂಮಿಗೆ, ಮಣ್ಣಿಗೆ, ಆರೋಗ್ಯಕ್ಕೆ ಎಲ್ಲದಕ್ಕೂ ಉತ್ತಮ. ಜೊತೆಗೆ ಲಾಭವೂ ಹೆಚ್ಚು. ಈ ಪದ್ಧತಿಯಲ್ಲಿ ಕೃಷಿ ಮಾಡಿ ಕೋಟಿಗಟ್ಟಲೆ ಆದಾಯ ಗಳಿಸುತ್ತಿರುವ ರೋಜಾ ರೆಡ್ಡಿ ಅನೇಕರಿಗೆ ಸ್ಪೂರ್ತಿಯಾಗುತ್ತಾರೆ.

    First published: