ಶಿವಮೊಗ್ಗ; ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಭೂ ಸುಧಾರಣೆ 1961 ಕ್ಕೆ ತಿದ್ದುಪಡಿ ತಂದಿದೆ. ಈ ಬೆಳವಣಿಗೆಗೆ ರಾಜ್ಯಾದ್ಯಂತ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ, ಇದೀಗ ಸಿಎಂ ಯಡಿಯೂರಪ್ಪನವರ ರಾಜಕೀಯ ತವರು ಜಿಲ್ಲೆ ಶಿವಮೊಗ್ಗದಲ್ಲೇ ರೈತ ಸಂಘಗಳು ಸರ್ಕಾರದ ವಿರುದ್ಧ ಬೀದಿಗೆ ಇಳಿದಿವೆ.
ಗ್ರಾಮೀಣ ಭಾಗದ ದುಡಿಯುವ ಜನಪರ ಕಾಳಜಿಯಿಂದಾಗಿ ಈ ಹಿಂದೆ ಈ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಅದರೆ ಬಿಜೆಪಿ ನೇತತ್ವದ ರಾಜ್ಯ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತಂದು ರೈತರಿಗೆ ಅನ್ಯಾಯ ಮಾಡಲು ಹೊರಟಿದೆ ಎಂದು ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಇಂದು ಶಿವಮೊಗ್ಗ ನಗರ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರೈತರು ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು. ರಸ್ತೆ ತಡೆ ಮಾಡಿ, ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ, ರಾಜ್ಯ ಸರ್ಕಾರ ಜನ ವಿರೋಧಿ, ಬಡವರ, ರೈತರ ವಿರೋಧಿ ಎಂಬುದನ್ನು ಸಾಭೀತು ಮಾಡಿದೆ ಎಂದು ಯಡಿಯೂರಪ್ಪ ವಿರುದ್ಧ ರೈತರು ಗುಟುರು ಹಾಕಿದರು.
ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡಲು ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ಕಾಯ್ದೆಯಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕು. ಇಲ್ಲದೇ ಹೋದರೆ ಉಗ್ರ ಹೋರಾಟವನ್ನು ಸಿಎಂ ತವರು ಜಿಲ್ಲೆಯಿಂದಲೇ ಆರಂಭಿಸುತ್ತೇವೆ ಎಂಬ ಎಚ್ಚರಿಕೆಯನ್ನು ರೈತರು ಸರ್ಕಾರಕ್ಕೆ ನೀಡಿದ್ದಾರೆ.
ಇನ್ನು ಮತ್ತೊಂದು ಕಡೆ ವಿರೋಧ ಪಕ್ಷದವಾಗಿರುವ ಕಾಂಗ್ರೆಸ್ ಕಾರ್ಯಕರ್ತರು ಸಹ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಾರೆ. ಜಿಲ್ಲಾ ಕಾಂಗ್ರೇಸ್ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಹಿರಿಯ ರಾಜಕಾರಣಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಭಾಗವಹಿಸಿದ್ದರು. "ಈ ಕಾಯ್ದೆ ಜಾರಿಗೆ ತಂದು ಕೃಷಿಕರಲ್ಲದವರಿಗೆ ಕೃಷಿ ಭೂಮಿ ಖರೀದಿಸಲು ಅವಕಾಶ ಕಲ್ಪಿಸಿರುವುದು, ರೈತರಿಗೆ ಮಾಡಿದ ಮೋಸವಾಗಿದೆ. ಗ್ರಾಮೀಣ ವ್ಯವಸ್ಥೆಯನ್ನು, ರೈತರ ಆರ್ಥಿಕ ವ್ಯವಸ್ಥೆಯನ್ನು ಈ ಕಾಯ್ದೆ ಬೂಡಮೇಲು ಮಾಡಲಿದೆ. ಮುಂದಿನ ದಿನಗಳಲ್ಲಿ ರೈತರು ಜೀವನ ಮಾಡೋದು ಕಷ್ಟವಾಗಲಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿದರು.
ಇದನ್ನೂ ಓದಿ : ಚೀನಾ ಗಡಿತಂಟೆ ಬಗ್ಗೆ ಮೋದಿ ನೀಡಿದ ಹೇಳಿಕೆಯನ್ನ ತಿರುಚಲಾಗುತ್ತಿದೆ: ಪ್ರಧಾನಿ ಕಚೇರಿ ಸ್ಪಷ್ಟನೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ