ನವದೆಹಲಿ (ಫೆ. 8): ಎಲ್ಲ ಸರ್ಕಾರಗಳೂ ಕೃಷಿ ಸುಧಾರಣೆಯ ಬಗ್ಗೆ ಮಾತನಾಡಿವೆ. ಆದರೆ, ಯಾರಿಗೂ ಕಾಯ್ದೆಗೆ ತಿದ್ದುಪಡಿ ತರಲು ಸಾಧ್ಯವಾಗಿರಲಿಲ್ಲ. ಈಗ ನಾವು ದಿಟ್ಟತನದಿಂದ ಹೊಸ ಕೃಷಿ ಕಾಯ್ದೆ ಜಾರಿಗೊಳಿಸಿದ್ದೇವೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, 1930ರ ಕೃಷಿ ಕಾನೂನಿನಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಕೃಷಿ ಕಾಯ್ದೆ ರೈತರನ್ನು ತಮಗೆ ಬೇಕಾದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದಂತೆ ತಡೆಯುತ್ತಿವೆ. ಕೃಷಿ ಕ್ಷೇತ್ರದ ಏಳಿಗೆಗೆ ಈ ಕಾಯ್ದೆಯಿಂದ ತೊಡಕು ಉಂಟಾಗುತ್ತಿದೆ. ಹೀಗಾಗಿ, ಈ ಕಾಯ್ದೆಯನ್ನು ತೆಗೆದುಹಾಕುತ್ತೇವೆ ಎಂದು ಭಾಷಣ ಮಾಡಿದ್ದರು. ಆದರೆ, ಅವರ ಅಧಿಕಾರಾವಧಿಯಲ್ಲಿ ಕೃಷಿ ಕಾಯ್ದೆಗೆ ತಿದ್ದುಪಡಿ ತರಲು ಸಾಧ್ಯವಾಗಲೇ ಇಲ್ಲ. ಮನಮೋಹನ್ ಸಿಂಗ್ ಹೇಳಿದ್ದನ್ನೇ ಈಗ ಮೋದಿ ಮಾಡಿದ್ದಾರೆ ಎಂದು ನೀವು ಹೆಮ್ಮೆ ಪಡಬೇಕು. ಆದರೂ ಕಾಂಗ್ರೆಸ್ನವರು ಈಗ ಯಾಕೆ ಯೂಟರ್ನ್ ಹೊಡೆಯುತ್ತಿದ್ದೀರ? ಎಂದು ವಿಪಕ್ಷ ಕಾಂಗ್ರೆಸ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಟಿ ಬೀಸಿದ್ದಾರೆ.
ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ವಿರೋಧ ಪಕ್ಷಗಳ ವಿರೋಧದ ಬಗ್ಗೆ ಇಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ, ಚರ್ಚೆಗಳು ನಡೆದವೇ ಹೊರತು ಅದರ ಉದ್ದೇಶದ ಬಗ್ಗೆ ಎಲ್ಲಿಯೂ ಚರ್ಚೆಯಾಗಿಲ್ಲ ಎಂಬುದೇ ದುರಂತ ಸಂಗತಿ. ರೈತರ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ರಾಜಕೀಯಕ್ಕಾಗಿ ರೈತರನ್ನು ಯಾರೂ ಕತ್ತಲಿಗೆ ತಳ್ಳಬಾರದು. ಪ್ರತಿಭಟನಾಕಾರರು ಧರಣಿ ಕೈಬಿಟ್ಟು ಮಾತುಕತೆಗೆ ಬನ್ನಿ ಎಂದು ಮೋದಿ ಆಹ್ವಾನಿಸಿದ್ದಾರೆ.
ಕೃಷಿ ಕಾಯ್ದೆಗಳ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿದ್ದು ಆಶ್ಚರ್ಯವೇನಲ್ಲ. ಒಂದು ಮನೆಯೊಳಗಿನ ಸದಸ್ಯರಲ್ಲೇ ಹಲವು ಅಭಿಪ್ರಾಯಗಳಿರುತ್ತವೆ. ಅಂಥದ್ದರಲ್ಲಿ ದೇಶದ ಕೋಟ್ಯಂತರ ಜನರಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಅಸಹಜವೇನಲ್ಲ. ಆದರೆ, ನಾವು ಜಾರಿಗೆ ತಂದಿರುವ ಕಾನೂನಿನಲ್ಲಿ ಕೊರತೆ ಏನಿದೆ? ಸಮಸ್ಯೆ ಏನಿದೆ? ಎಂಬುದನ್ನು ಚರ್ಚೆ ಮಾಡಿ. ಒಟ್ಟಿಗೇ ಕುಳಿತು ಚರ್ಚಿಸಿ, ಆ ಸಮಸ್ಯೆಯನ್ನು ಬಗೆಹರಿಸೋಣ. ನಾವು ಮುಂದೆ ಹೋಗಬೇಕೆಂಬ ಸ್ವಾರ್ಥದಿಂದ ದೇಶವನ್ನು ಹಿಂದಕ್ಕೆ ಎಳೆಯುವುದು ಸರಿಯಲ್ಲ ಎಂದು ವಿಪಕ್ಷಗಳ ವಿರುದ್ಧ ಮೋದಿ ಆಕ್ರೋಶ ಹೊರಹಾಕಿದ್ದಾರೆ.
ವಿಪಕ್ಷಗಳು ನಮ್ಮ ಸರ್ಕಾರ ಅಮೆರಿಕದ ಕೈಗೊಂಬೆ ಎಂದು ಟೀಕಿಸಿದವು. ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ನಾವು ಈಗ ಬೇರೆ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಕೃಷಿ ಕ್ಷೇತ್ರದಲ್ಲಿ ಭಾರತ ಮುಂಚೂಣಿಯತ್ತ ಸಾಗಿದೆ. ಕೊರೋನಾ ಕಾಲದಲ್ಲಿ ನಮ್ಮ ರೈತರು ಅತಿಹೆಚ್ಚು ಬೆಳೆ ಬೆಳೆದಿದ್ದಾರೆ.
PM @narendramodi: The eyes of the world are on India #PMinRajyaSabha pic.twitter.com/2xNj4ZB1AX
— DD News (@DDNewslive) February 8, 2021
ಇಡೀ ವಿಶ್ವವೇ ಭಾರತದ ಮೇಲೆ ವಿಶ್ವಾಸ ಇಟ್ಟುಕೊಂಡಿದೆ. ನಾವು ನಮ್ಮ ಮೇಲಿಟ್ಟ ವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಕೊರೋನಾ ಲಸಿಕೆ ಭಾರತವನ್ನು ವಿಶ್ವದಲ್ಲೇ ಅಗ್ರಸ್ಥಾನದಲ್ಲಿ ನಿಲ್ಲಿಸಿದೆ. ಕೊರೋನಾ ವಿರುದ್ಧದ ಭಾರತದ ಜಯ ಕೇವಲ ಬಿಜೆಪಿಗೆ ಸೇರಿದ್ದಲ್ಲ. ಇದು ಇಡೀ ಭಾರತಕ್ಕೆ ಸಿಕ್ಕ ಯಶಸ್ಸಾಗಿದೆ. ಇಡೀ ವಿಶ್ವವೇ ಈಗ ಸವಾಲುಗಳನ್ನು ಎದುರಿಸುತ್ತಿದೆ. ನಾವು ಕೊರೋನಾಗೆ ಸ್ವದೇಶಿ ಲಸಿಕೆಗಳನ್ನು ಕಂಡು ಹಿಡಿದು, ಬೇರೆ ದೇಶಗಳಿಗೂ ಪೂರೈಕೆ ಮಾಡಿದ್ದೇವೆ. ಎಲ್ಲ ದೇಶಗಳ ಗಮನ ಈಗ ಭಾರತದ ಕಡೆಗಿದೆ. ನಮ್ಮನ್ನು ಗಮನಿಸುತ್ತಿರುವ ಇತರೆ ದೇಶಗಳಿಗೆ ನಾವು ಮಾದರಿಯಾಗುವಂತೆ ನಡೆದುಕೊಳ್ಳಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
Manmohan ji is here, I'd read out his quote. Those taking a U-Turn (farm laws) will perhaps agree with him. "There are other rigidities because of marketing regime set up in 1930s which prevent our farmers from selling their produce where they get highest rate of return...": PM pic.twitter.com/npAfVwLHlv
— ANI (@ANI) February 8, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ