ಗೋವಾ: ದೇಶದ ಬೆನ್ನುಲುಬಾಗಿರುವ ರೈತರು (Farmer) ಪ್ರಸ್ತುತ ದಿನಗಳಲ್ಲಿ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೃಷಿ (Agriculture) ಸಮಸ್ಯೆಗಳು ಒಂದೆಡೆಯಾದರೆ, ನಿರೀಕ್ಷಿತ ಆದಾಯ ಕೈ ಸೇರುತ್ತಿಲ್ಲ ಎಂಬ ಚಿಂತೆ ಇನ್ನೊಂದೆಡೆ. ರಸಗೊಬ್ಬರಗಳು, ಕೃಷಿ ಯಂತ್ರೋಪಕರಣಗಳಲ್ಲಿ ಬೆಲೆ ಏರಿಕೆಯ ಸಮಸ್ಯೆ, ಸರಕಾರದಿಂದ ಸೂಕ್ತವಾಗಿ ಬೆಂಬಲ ದೊರೆಯದೇ ಇರುವುದು.. ಹೀಗೆ ರೈತರು ಒಂದಿಲ್ಲೊಂದು ಸಮಸ್ಯೆಗಳಿಂದ ತೊಳಲಾಡುತ್ತಲೇ ಇದ್ದಾರೆ. ಇದೀಗ ಗೋವಾದ ಕಾತಾರ್ಲಿ (Cotarli) ಯಲ್ಲಿರುವ ರೈತರು ತಮ್ಮದೇ ಕೃಷಿ ಭೂಮಿಯಲ್ಲಿ ಸ್ವತಂತ್ರರಾಗಿ ಕೃಷಿಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಏರ್ಪಟ್ಟಿದೆ. ಭಾರತೀಯ ರಿಸರ್ವ್ ಬೆಟಾಲಿಯನ್ (Indian Reserve Battalion), ರೈತರು ತಮ್ಮ ಹೊಲಗಳಿಗೆ ಹೋಗಲು ಬಳಸುತ್ತಿದ್ದ ದಾರಿಯನ್ನು ನಿರ್ಬಂಧಿಸಿದ್ದು, ಏಕಾಏಕಿ ಅಧಿಕಾರಿಗಳು ಟ್ರ್ಯಾಕ್ಟರ್‌ಗಳು ಹಾಗೂ ಕೃಷಿ ಸಂಬಂಧಿತ ವಾಹನಗಳಿಗೆ ತಡೆಯೊಡ್ಡಿದ್ದಾರೆ. ಇದಕ್ಕೆ ಕಾರಣ ತಿಳಿದು ಬಂದಿಲ್ಲ ಎಂಬುದು ಇಲ್ಲಿನ ಕೃಷಿಕರ ಅಳಲಾಗಿದೆ.
ಐಐಟಿ ಯೋಜನೆಯನ್ನು ವಿರೋಧಿಸಿ ಹೋರಾಟ
ಈ ಹಿಂದೆ ಐಐಟಿ ಯೋಜನೆ ಅವರ ಕೃಷಿ ಭೂಮಿಯಲ್ಲಿ ತಲೆ ಎತ್ತಲಿದೆ ಎಂಬ ಕಾರಣಕ್ಕೆ ಸರಕಾರದೊಂದಿಗೆ ಈ ಕೃಷಿಕರು ದೊಡ್ಡ ಹೋರಾಟವನ್ನೇ ನಡೆಸಿದ್ದರು. ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಕೇಂದ್ರವು ಈ ಭೂಮಿ ತಮ್ಮ ಐಐಟಿ ಯೋಜನೆಗೆ ಸೂಕ್ತವಲ್ಲ ಎಂದು ರಾಜ್ಯ ಸರಕಾರಕ್ಕೆ ಸ್ಪಷ್ಟವಾಗಿ ಸೂಚಿಸಿದ ನಂತರ ಈ ವಿವಾದ ಸುಖಾಂತ್ಯ ಕಂಡಿತ್ತು.
ಆದರೆ ಇದೀಗ IRB ಆಕ್ರಮಿಸಿಕೊಂಡಿರುವ ಪೊಲೀಸ್ ಕ್ವಾರ್ಟರ್ಸ್ ಮೂಲಕ ಕೃಷಿಭೂಮಿ ಹಾದು ಹೋಗಿದ್ದು ಕಾತಾರ್ಲಿಯಲ್ಲಿನ ಸರ್ವೆ ನಂ 21/1 ರ ಸರ್ಕಾರಿ ಆಸ್ತಿ ಎಂದು ಉಲ್ಲೇಖಗೊಂಡಿದೆ. ಹೋಲಿ ಕ್ರಾಸ್ ಬಳಿಯ ಮುಖ್ಯ ರಸ್ತೆಯಿಂದ ಪ್ರಾರಂಭವಾಗುವ ಮಾರ್ಗವು IRB ಯ ಮುಖ್ಯ ದ್ವಾರದ ಮೂಲಕ ಹಾದುಹೋಗುತ್ತದೆ.
ಇದನ್ನೂ ಓದಿ: Agriculture: ಕಡಿಮೆ ಖರ್ಚಿನಲ್ಲಿ ಈ ಬೆಳೆಗಳನ್ನು ಬೆಳೆದರೆ ದುಪ್ಪಟ್ಟು ಲಾಭ ಸಿಗೋದು ಗ್ಯಾರಂಟಿ
ಕೃಷಿಕರ ದುಃಖಪೂರಿತ ಮಾತುಗಳು
ರೈತರು ಕೃಷಿ ಭೂಮಿಗೆ ತೆರಳಲು ಇದೇ ದಾರಿಯನ್ನೇ ಹಲವಾರು ವರ್ಷಗಳಿಂದ ಬಳಸುತ್ತಿದ್ದಾರೆ. ಸರಕಾರಕ್ಕೆ ಹಾಗೂ ಇಲ್ಲಿನ ಅಧಿಕಾರಿಗಳಿಗೆ ತಿಳಿದಿದ್ದರೂ ನಮ್ಮನ್ನು ನಿರ್ಬಂಧಿಸಿದ್ದಾರೆ. ನಮ್ಮನ್ನು ಏಕೆ ತಡೆಯುತ್ತಿದ್ದಾರೆ ಎಂಬುದು ನಮಗೆ ತಿಳಿಯುತ್ತಿಲ್ಲ, ನಾವೇನು ಅಂತಹ ತಪ್ಪು ಮಾಡಿದ್ದೇವೆ ಎಂದು ದಶಕಗಳಿಂದ ಈ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ಎಸ್ಪೆರಾಂಕಾ ರೆಬೆಲ್ಲೊ ತಮ್ಮ ಮನದಾಳದ ನೋವನ್ನು ಹೊರಹಾಕಿದ್ದಾರೆ.
ಈ ಪ್ರದೇಶದಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ಪುರಾತನವಾಗಿದ್ದು ಬಿದ್ದುಹೋಗುವಂತಹ ಸ್ಥಿತಿಯಲ್ಲಿತ್ತು . ಸಾಂಗೇಂ ಪೊಲೀಸ್ ಠಾಣೆಯಲ್ಲಿ ಕೆಲವೇ ಕೆಲವು ಸಮವಸ್ತ್ರಧಾರಿ ಪೊಲೀಸರು ಈ ಹಿಂದೆ ಕಂಡುಬರುತ್ತಿದ್ದರು. 2020 ರಲ್ಲಿ ಇದೇ ಕಚೇರಿಯನ್ನು IRB ಗೆ ಹಸ್ತಾಂತರಿಸಲಾಯಿತು . ನಂತರ ಸಂಸ್ಥೆಯು ತನ್ನ ಸಿಬ್ಬಂದಿಗಳಿಗಾಗಿ ಕ್ವಾರ್ಸ್ ಅನ್ನು ನವೀಕರಿಸಿಕೊಂಡಿತ್ತು.
ಏಕಾಏಕಿ ನಿರ್ಬಂಧವೇರಿದ ಅಧಿಕಾರಿಗಳು
ಕಚೇರಿಯ ನವೀಕರಣದ ನಂತರವೂ ಕೃಷಿಕರು ತಮ್ಮ ಕೃಷಿ ಉತ್ಪನ್ನಗಳನ್ನು ಸಾಗಿಸಲು ಹಾಗೂ ಕೃಷಿ ಸಂಬಂಧಿತ ಕೆಲಸಗಳಿಗಾಗಿ ಇದೇ ದಾರಿಯಲ್ಲಿ ಸಾಗುತ್ತಿದ್ದರು. ಆದರೆ ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಈ ಪ್ರದೇಶವನ್ನು ಬಳಸುತ್ತಿದ್ದ ರೈತರನ್ನು ತಡೆದ ಅಧಿಕಾರಿಗಳು, ಸರಕಾರದ ಆಸ್ತಿಯನ್ನು ರೈತರು ಕೃಷಿ ದಾರಿಯಾಗಿ ಬಳಸಿಕೊಳ್ಳಬಾರದು ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳಿಗೆ ತಾಕೀತು ಮಾಡಿರುವ ರೈತರು
ಅಧಿಕಾರಿಗಳು ಟ್ರ್ಯಾಕ್ಟರ್ ಕೊಂಡೊಯ್ಯಲು ಅನುಮತಿ ನೀಡಿಲ್ಲ ಎಂದು ತಿಳಿಸಿರುವ ರೈತರು, ಈ ಹಿಂದೆಯೂ ಇದೇ ದಾರಿಯನ್ನು ಬಳಸಿಕೊಂಡು ನಾವು ಕೃಷಿ ಭೂಮಿಗೆ ತೆರಳುತ್ತಿದ್ದೆವು. ಆದರೆ ಈಗ ಟ್ರ್ಯಾಕ್ಟರ್ ಅನ್ನು ಮರಳಿ ಕೊಂಡೊಯ್ಯುವಂತೆ ಅಧಿಕಾರಿಗಳು ಬೆದರಿಸುತ್ತಿದ್ದಾರೆ ಎಂದು ರೈತರು ತಿಳಿಸಿದ್ದಾರೆ.
ಮತ್ತೊಂದು ದಾರಿಯೂ ಬಂದ್
ಈ ದಾರಿಯಲ್ಲದೆ ರೈತರು ಕೋಕೋರಾದಲ್ಲಿ ತಮ್ಮ ಭತ್ತದ ಗದ್ದೆಗಳಿಗೆ ಸಂಚರಿಸುತ್ತಿದ್ದ ಮತ್ತೊಂದು ಮಾರ್ಗವನ್ನು ಗೋವಾ ತ್ಯಾಜ್ಯ ನಿರ್ವಹಣಾ ನಿಗಮವು (ಜಿಡಬ್ಲ್ಯೂಎಂಸಿ) ನಿರ್ಬಂಧಿಸಿದೆ. ಈಗಾಗಲೆ ಅಲ್ಲಿ ಕಾಂಪೌಂಡ್ ಗೋಡೆಯನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿದೆ. ಹಾಗಾಗಿ ರೈತರಿಗೆ ತಮ್ಮ ಗದ್ದೆಗಳಿಗೆ ತೆರಳುತ್ತಿದ್ದ ಎರಡೂ ಮಾರ್ಗಗಳು ಬಂದ್ ಆಗಿವೆ.
ದಾರಿ ಬಿಟ್ಟು ಕಾಂಪೌಂಡ್ ಕಟ್ಟಲು ಮನವಿ
ರೈತರು ಈ ಹಿಂದೆ ಬಳಸುತ್ತಿದ್ದ ದಾರಿಯನ್ನು ಬಿಟ್ಟು ಪೊಲೀಸ್ ಇಲಾಖೆ ಕಾಂಪೌಂಡ್ ಕಟ್ಟಬೇಕು. ಒಂದೊಮ್ಮೆ ಕಾಂಪೌಂಡ್ ನಿರ್ಮಾಣಗೊಂಡರೆ ರೈತರಿಗೆ ಪ್ರವೇಶವಿಲ್ಲದೇ ಎರಡು ಕಿಲೋಮೀಟರ್ ದೂರದ ಪರ್ಯಾಯ ರಸ್ತೆಯನ್ನು ಬಳಸಬೇಕಾಗುತ್ತದೆ ಎಂದು ರೈತ ಮಹಿಳೆ ಅನಾ ಮರಿಯಾ ವಾಜ್ ದೂರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ