ದಾವಣಗೆರೆ: ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಕತ್ತಲಗೆರೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಪೀಡೆ ಸರ್ವೇಕ್ಷಣಾ ತಂಡವು ಅಕ್ಟೋಬರ್ ತಿಂಗಳಿನಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಭೇಟಿ ನೀಡಿ ಪ್ರಮುಖ ಬೆಳೆಗಳಾದ ಭತ್ತ, ಮೆಕ್ಕೆಜೋಳ, ತೊಗರಿ, ಹತ್ತಿ ಮತ್ತು ಇತರೆ ಬೆಳೆಗಳಿಗೆ ಭಾದಿಸುವ ಕೀಟ ಮತ್ತು ರೋಗಗಳ ನಿರ್ವಹಣೆಗಾಗಿ ಪೀಡೆ ಸರ್ವೇಕ್ಷಣೆಯನ್ನು ಕೈಗೊಳ್ಳಲಾಯಿತು. ಜಿಲ್ಲೆಯಲ್ಲಿ ಪ್ರಸ್ತುತ ಭತ್ತದ ಬೆಳೆಯು ಬೆಳೆವಣಿಗೆ ಹಂತದಿಂದ ತೆಂಡೆಹೊಡೆಯುವ ಹಂತದಲ್ಲಿದ್ದು ಭತ್ತದ ಬೆಳೆಯಲ್ಲಿ ಪ್ರಮುಖವಾಗಿ ದುಂಡಾಣು ಅಂಗಮಾರಿ ರೋಗ, ಎಲೆ ಕವಚ ಒಣಗುವ ರೋಗ ಹಾಗೂ ಕಂದುಜಿಗಿ ಹುಳುವಿನ ಬಾಧೆಯು ಕಂಡುಬಂದವು.
ದುಂಡಾಣು ಅಂಗಮಾರಿ ರೋಗ: ಎಲೆಯ ಅಂಚಿನಲ್ಲಿ ಉದ್ದನೆಯ ಒಣಗಿದ ಪಟ್ಟಿಗಳು ಕಂಡು ಬರುತ್ತವೆ. ನಂತರದ ಹಂತದಲ್ಲಿ ಎಲೆಗಳು ಪೂರ್ತಿಯಾಗಿ ಒಣಗಿದಂತಾಗುತ್ತವೆ.
ನಿರ್ವಹಣಾ ಕ್ರಮಗಳು: ಗೋಣಿ ಚೀಲದಲ್ಲಿ ಸಗಣಿಯನ್ನು ಹಾಕಿ ಕಟ್ಟಿ, ನೀರು ಹಾಯಿಸುವ ಜಾಗದಲ್ಲಿ ಇಡುವುದರಿಂದ ನೀರಿನ ಜೊತೆಯಲ್ಲಿ ಹರಿಯುವ ಸಗಣಿ ರಾಡಿಯಿಂದ ಈ ರೋಗವು ಹತೋಟಿಗೆ ಬರುವುದು. ಸ್ಟ್ರೆಪ್ಟೋಸೈಕ್ಲಿನ್ 0.5 ಗ್ರಾಂ ಮತ್ತು ತಾಮ್ರದ ಆಕ್ಸಿಕ್ಲೋರೈಡ್ 2.15 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು. ಎಲೆ ಕವಚದ ಮೇಲೆ ಕಂದು ಅಂಚುಳ್ಳ ಹುಲ್ಲಿನ ಬಣ್ಣದ ಮಚ್ಚೆಗಳು ಕಂಡುಬರುತ್ತವೆ. 2 ಮಿ. ಲೀ ಹೆಕ್ಸಾಕೊನಜೋಲ್ 25 ಇ.ಸಿ. ಅಥವಾ 1 ಮಿ.ಲೀ ಪ್ರೊಪಿಕೊನೊಜೋಲ್ ಅಥವಾ ಟ್ರೈಪ್ಲಾಕ್ಸಿಸ್ಟ್ರೋಬಿನ್ 25 ಟೆಬುಕೊನಾಜೋಲ್ 50 ನ್ನು 0.4 ಗ್ರಾಂ ನಂತೆ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡುವುದು.
ಇದನ್ನೂ ಓದಿ: ಕುಂಟುತ್ತಾ ಸಾಗಿದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ; ಬೀದರ್ ಜನತೆ ಹೈರಾಣು
ಕಂದುಜಿಗಿ ಹುಳುವಿನ ನಿರ್ವಹಣಾ ಕ್ರಮಗಳು: ಗದ್ದೆಯಲ್ಲಿರುವ ನೀರನ್ನು ಬಸಿದು ತೆಗೆದು ನಂತರ ಮಿ.ಲೀ ಥಯೋಮೆಥೋಕ್ಸಾಮ್ 25 ಎಸ್‍ಜಿ ಅಥವಾ 0.5 ಇಮಿಡಾಕ್ಲೋಪ್ರಿಡ್ 30.5% ಎಸ್‍ಸಿ ಅಥವಾ 2 ಮಿ.ಲೀ ಅಸಿಫೇಟ್ 65 ಎಸ್‍ಡಬ್ಲ್ಯುಜಿಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.
ಜಿಲ್ಲೆಯಲ್ಲಿ ತೊಗರಿ ಬೆಳೆಯು ಹೂಬಿಡುವ ಹಂತದಲ್ಲಿದ್ದು ಗೂಡು ಮಾರು ಹುಳು ಹಾಗೂ ಕಾಯಿ ಕೊರಕ ಹುಳುವಿನ ಹತೋಟಿಗಾಗಿ 3 ಮಿ.ಲೀ ಲೀಟರ್ ಬೇವಿನ ಎಣ್ಣೆ 1500 ಪಿಪಿಎಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. 10 ದಿನಗಳ ನಂತರ 2 ಮಿ.ಲೀ ಪ್ರೊಫೆನೋಪಾಸ್ 50 ಇಸಿ ಮತ್ತು 0.5 ಮಿ.ಲೀ ಡಿಡಿವಿಪಿ ಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.
ಇದನ್ನೂ ಓದಿ: ಕೋವಿಡ್ ಆರ್ಥಿಕ ಸಂಕಷ್ಟ; ರೈತರಿಗೆ ಶೇಂಗಾ ಬೀಜ ಪೂರೈಕೆ ಮಾಡದ ರಾಜ್ಯ ಸರ್ಕಾರ
ಜಿಲ್ಲಾ ಮಟ್ಟದ ಪೀಡೆ ಸರ್ವೇಕ್ಷಣಾ ಮತ್ತು ಸಲಹಾ ಘಟಕದ ತಂಡದಲ್ಲಿ ಉಪ ಕೃಷಿ ನಿರ್ದೇಶಕರು ಆರ್.ತಿಪ್ಪೇಸ್ವಾಮಿ, ಡಾ. ಮುರಳಿ ಆರ್, ಪತ್ತಲಗೆರೆಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ವಿಜಯದಾನರೆಡ್ಡಿ, ಹಾಗೂ ಸಹಾಯಕ ಕೃಷಿ ನಿರ್ದೇಶಕರು ರೇಖಾ ಆರ್ ಗಡ್ಡದವರ, ಪ್ರತಿಮಾ ಎ.ಎಸ್., ಮತ್ತು ಪವನ್ ಎಂ.ಪಿ., ಜಂಟಿ ಕೃಷಿ ನಿರ್ದೇಶಕರ ಕಚೇರಿ ದಾವಣಗೆರೆ ಹಾಗೂ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಹೆಚ್ ಎಂ ಪಿ ಕುಮಾರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ