ನವದೆಹಲಿ(ಫೆ. 05): ದೇಶದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಸತತ ಹೋರಾಟಗಳು ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಆರಂಭಿಸಿದ ಹೊತ್ತಲ್ಲೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುತ್ತಿರುವಂತಿದೆ. ವಿವಾದಕ್ಕೆ ಕಾರಣವಾಗಿರುವ ಮೂರು ಕೃಷಿ ಕಾಯ್ದೆಗಳನ್ನ ಪುನರ್ಪರಿಶೀಲಿಸಲು ಸಂಸದೀಯ ಸಮಿತಿಯೊಂದಕ್ಕೆ ನೀಡಲು ಯೋಜಿಸಿದೆ. ಸರ್ಕಾರದ ಉನ್ನತ ಮಟ್ಟದಲ್ಲಿ ಈ ವಿಚಾರ ಚರ್ಚೆಯಾಗುತ್ತಿದ್ದು, ಸದ್ಯಕ್ಕೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಲೈವ್ ಮಿಂಟ್ ಪತ್ರಿಕೆ ತನ್ನ ಮೂಲವನ್ನ ಉಲ್ಲೇಖಿಸಿ ವರದಿ ಮಾಡಿದೆ.
ಒಂದು ವೇಳೆ ಸಂಸದೀಯ ಸಮಿತಿಗೆ ಈ ಕಾಯ್ದೆಗಳ ನಿಷ್ಕರ್ಷೆಗೆ ಕಳುಹಿಸಲು ನಿರ್ಧರಿಸಿದ್ದೇ ಆದಲ್ಲಿ ಸರ್ಕಾರವು ತಜ್ಞರು, ರೈತ ಸಂಘಟನೆಗಳು ಮತ್ತು ವಿವಿಧ ರಾಜ್ಯಗಳಿಂದ ನಾಗರಿಕರನ್ನ ಕರೆದು ಸಮಾಲೋಚಿಸಿ ತನ್ನ ಶಿಫಾರಸುಗಳ ಪಟ್ಟಿ ಮಾಡಬಹುದು. ಹಾಗೆಯೇ, ರಾಜ್ಯ ಸರ್ಕಾರಗಳು ತಮ್ಮ ಪರಿಧಿಯಲ್ಲಿ ಕೃಷಿ ಸುಧಾರಣೆಗಳನ್ನ ಕೈಗೊಳ್ಳುವ ಬಗ್ಗೆ ಕೇಂದ್ರ ತಿಳಿಸಿಕೊಡುವ ಸಾಧ್ಯತೆ ಇದೆ ಎಂದು ಲೈವ್ ಮಿಂಟ್ ಪತ್ರಿಕೆಯ ವರದಿಯಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: Repo Rate - ಅಭಿವೃದ್ಧಿ ಪೂರಕ ನೀತಿ ಅಗತ್ಯ ಎಂದ ಆರ್ಬಿಐ; ಬಡ್ಡಿ ದರ ಸದ್ಯ ಇಲ್ಲ ಹೆಚ್ಚಳ
ಪಶ್ಚಿಮ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರಿಗೆ ಕೃಷಿಪದ್ಧತಿ ಪರಿಸರಸ್ನೇಹಿ ಹಾಗೂ ಲಾಭದಾಯಕವಾಗುವಂತೆ ಮಾಡುವ ನಿಟ್ಟಿನಲ್ಲಿ ಏನೇನು ಸುಧಾರಣೆಗಳನ್ನ ಕೈಗೊಳ್ಳಬೇಕೆಂದು ಪ್ರತ್ಯೇಕವಾದ ಉನ್ನತ-ಮಟ್ಟದ ತಜ್ಞರ ಗುಂಪೊಂದನ್ನೂ ರಚಿಸುವ ಚಿಂತನೆಯಲ್ಲಿ ಸರ್ಕಾರ ಇದೆ. ಈ ತಜ್ಞರ ತಂಡದ ನೇತೃತ್ವವನ್ನ ಹಿರಿಯ ತಂತ್ರಜ್ಞರೊಬ್ಬರ ಹೆಗಲಿಗೆ ವಹಿಸಬಹುದು ಎಂದೆನ್ನಲಾಗಿದೆ.
ಜನರ ಆಹಾರ ಪ್ರಾಕಾರಗಳು ಇದೀಗ ಕ್ಯಾಲೋರಿಯಿಂದ ದೂರವಾಗಿ ವೈಟಮಿನ್ ಮತ್ತು ಪ್ರೋಟೀನ್ಗಳತ್ತ ಸಾಗುತ್ತಿರುವುದು ವೇದ್ಯವಾಗುತ್ತಿದೆ. ಆ ನಿಟ್ಟಿನಲ್ಲಿ ಬೇಡಿಕೆ ಹೆಚ್ಚುತ್ತಿದೆ. ಆಹಾರ ಭದ್ರತೆಯಿಂದ ಪೌಷ್ಟಿಕಾಂಶ ಭದ್ರತೆಯತ್ತ ಪರಿವರ್ತನೆಯಾಗುತ್ತಿದ್ದು, ಕೃಷಿ ಕ್ಷೇತ್ರವು ಈ ನಿಟ್ಟಿನಲ್ಲಿ ಬದಲಾವಣೆ ಆಗಬೇಕಿದೆ. ರೈತರಿಗೆ ಹೆಚ್ಚಿನ ಆದಾಯ ಬರಬೇಕಾದರೆ ಮತ್ತು ಬೆಳೆ ವೈವಿಧ್ಯತೆ ಹೆಚ್ಚಾಗಬೇಕಾದರೆ ಕೃಷಿ ಕ್ಷೇತ್ರದಲ್ಲಿ ದಿಢೀರ್ ಶಾಕ್ ಬದಲು ರಚನಾತ್ಮಕ ಬದಲಾವಣೆಯ ಅಗತ್ಯತೆ ಇದೆ. ಈ ದಿಕ್ಕಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ ಎಂದು ಲೈವ್ ಮಿಂಟ್ ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಎಚ್ಎನ್ಆರ್ಎಫ್ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಚಿಕಿತ್ಸಾಲಯ ಉದ್ಘಾಟಿಸಿದ ನೀತಾ ಅಂಬಾನಿ
ಸದ್ಯ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಸರ್ಕಾರ ಕೂಡ ತನ್ನ ಕಾಯ್ದೆಗಳನ್ನ ಒಂದೂವರೆ ವರ್ಷ ಕಾಲ ಸ್ಥಗಿತಗೊಳಿಸುವುದಾಗಿ ರೈತರಿಗೆ ಭರವಸೆ ನೀಡಿದೆ. ಆದರೂ ಕಾಯ್ದೆ ಸಂಪೂರ್ಣ ಹಿಂಪಡೆಯುವವರೆಗೂ ಪ್ರತಿಭಟನೆ ಮುಂದುವರಿಸಲು ರೈತರು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೀಗ ವಿವಿಧ ಮಾರ್ಗೋಪಾಯಗಳ ಮೂಲಕ ರೈತರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಚಿಂತನೆ ನಡೆಸಿದೆ. ಅದರಂತೆ ಸಂಸದೀಯ ಸಮಿತಿ ರಚನೆ, ಉನ್ನತ ಮಟ್ಟದ ತಜ್ಞರ ತಂಡ ಇತ್ಯಾದಿ ಕ್ರಮಗಳನ್ನ ಸರ್ಕಾರ ಕೈಗೊಳ್ಳುವ ಸಂಭವ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ