ನಮ್ಮ ದೇಶ ಕೃಷಿ (Agriculture) ಆಧಾರಿತ ದೇಶ. ಇಲ್ಲಿ ಶೇ.60ರಷ್ಟು ಜನಸಂಖ್ಯೆ ಕೃಷಿಯನ್ನೇ ಅವಲಂಬಿಸಿ ಬದುಕುತ್ತಾರೆ. ಬಹುತೇಕ ಕುಟುಂಬಗಳು ಕೃಷಿಕರು. ಒಂದಾನೊಂದು ಕಾಲದಲ್ಲಿ ಬದುಕಲಾರದವನು ಕೃಷಿ ಮಾಡಿದವನು ಎಂಬ ಮಾತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಂಪ್ಯೂಟರ್ (Computer) ಗಳ ಮುಂದೆ ಕುಳಿತೆ ಸಾಫ್ಟ್‌ವೇರ್ (Software) ಉದ್ಯೋಗ ಮಾಡುವವರೂ ಕೃಷಿಯತ್ತ ಹೋಗುತ್ತಿದ್ದಾರೆ. ವಿವಿಧ ಬೆಳೆಗಳನ್ನು ಬೆಳೆದು ಲಕ್ಷ ಕೋಟಿ (Crore) ಗಳಿಸುತ್ತಿದ್ದಾರೆ. ರೈತರಿಗೆ ಅಪಾರ ಆದಾಯ ತರುವ ಅನೇಕ ಬೆಳೆಗಳಿವೆ. ಅಂತಹ ಬೆಳೆಯ ಬಗ್ಗೆ ಇಂದು ತಿಳಿಯೋಣ. ಈ ಬೆಳೆ ಬೆಳೆದು ಬಾಗಲಕೋಟೆಯ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿಯ ರೈತರೊಬ್ಬರು ಕೈತುಂಬಾ ಹಣ ಗಳಿಸುತ್ತಿದ್ದಾರೆ.
ಮಿಶ್ರ ಬೆಳೆ ಬೆಳೆದರೆ ಹೆಚ್ಚಿನ ಲಾಭ!
ಧನಪಾಲ ಯಲ್ಲಟ್ಟಿ ಎಂಬ ರೈತರು ಕಡಿಮೆ ಭೂಮಿ ಮತ್ತು ಹಣದಲ್ಲಿ ಸಾವಯವ ಪದ್ಧತಿಯಲ್ಲಿ ಮಿಶ್ರ ಬೆಳೆಯನ್ನು ವೈಜ್ಞಾನಿಕವಾಗಿ ಬೆಳೆದರೆ ಹೆಚ್ಚಿನ ಪ್ರಮಾಣದಲ್ಲಿ ಲಾಭಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸನ್ 2010ರಲ್ಲಿ ಕೃಷಿ ಪಂಡಿತ ಮತ್ತು ಸನ್ 2012ರಲ್ಲಿ ಕೃಷಿರತ್ನ ಪ್ರಶಸ್ತಿ, 2014ರಲ್ಲಿ ರಾಷ್ಟ್ರ ಮಟ್ಟದ ಮಹಿಂದ್ರಾ ಸಮೃದ್ಧಿ ಪ್ರಶಸ್ತಿ ವಿಜೇತ ಹಳಿಂಗಳಿಯ ಧನಪಾಲ್ ಯಲ್ಲಟ್ಟಿ ತಮ್ಮ ತೋಟದ ಸುಮಾರು 2,10 ಎಕರೆ ಜಮೀನಿನಲ್ಲಿ ಮಿಶ್ರ ಬೆಳೆಗಳನ್ನು ಬೆಳೆದಿದ್ದು, ಕೇವಲ ನಾಲ್ಕು ತಿಂಗಳಲ್ಲಿ 20 ಲಕ್ಷ ಆದಾಯ ಗಳಿಸುವ ನಿರೀಕ್ಷೆಯಲ್ಲಿ ಧನಪಾಲ ಯಲ್ಲಟ್ಟಿ ಇದ್ದಾರೆ.
20 ಲಕ್ಷ ಆದಾಯದ ನಿರೀಕ್ಷೆಯಲ್ಲಿ ರೈತ!
ಒಂದೇ ಜಾಗದಲ್ಲಿ ಹಲವು ಬೆಳೆಗಳನ್ನು ಬೆಳೆಯುವುದು ಸುಲಭ. ಆದರೆ, ಎಲ್ಲವನ್ನು ಕಾಪಾಡಿಕೊಳ್ಳುವುದು ಸ್ವಲ್ಪ ಹೆಚ್ಚಿನ ಕೆಲಸವೇ ಸರಿ. ಆದರೆ, ಈ ರೈತ ತನ್ನ ಜಮೀನಿನಲ್ಲಿ ಯಶಸ್ವಿಯಾಗಿ ಮಿಶ್ರ ಬೆಳೆ ಬೆಳೆದಿದ್ದಾರೆ. ಎರಡುವರೆ ಎಕರೆ 10 ಗುಂಟೆ ಜಮೀನಿನಲ್ಲಿ ಒಂದು 30 ಗುಂಟೆ ಯಷ್ಟು ಜಮೀನಿನಲ್ಲಿ ಸಾಲಿನಿಂದ ಸಾಲಿಗೆ 5-ಫೂಟ್, ಜಿಗ್ ಜಾಗ ಪದ್ದತಿಯಲ್ಲಿ 2 -ಫೂಟ್ ಗೆ ಹೀರೆಕಾಯಿ ತರಕಾರಿ ಬೆಳೆದಿದ್ದು, ಇದರ ಜತೆಗೆ ಮಿಶ್ರ ಬೆಳೆಯಾಗಿ 4 ಪೂಟ್ ಗೆ ಒಂದರಂತೆ ಮಧ್ಯದಲ್ಲಿ ಟೊಮೇಟೋ ಬೆಳೆದಿದ್ದು, ಹಿರೇಕಾಯಿ ಕಟಾವು ನಡೆಯುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಧನಪಾಲ ಯಲ್ಲಟ್ಟಿ ಅವರ ಹೀರೆಕಾಯಿ ಮಾರಾಟವಾಗುತ್ತಿದೆ.
ಇದನ್ನೂ ಓದಿ: ರೈತರನ್ನು ಲಕ್ಷಾಧಿಪತಿ ಮಾಡುವ ಮರ ಇದು, ಒಂದು ಎಕರೆಗೆ 5 ಲಕ್ಷ ಆದಾಯ!
ಎಲ್ಲಿ ನೋಡಿದರೂ ತರಕಾರಿಗಳ ರಾಶಿ!
ಇನ್ನೊಂದು ಎಕರೆ ಜಮೀನಿನಲ್ಲಿ ಜವಾರಿ ಹಾಗೂ ಹೈಬ್ರೀಡ್ ಟೊಮೆಟೊ ಪ್ರತ್ಯೇಕವಾಗಿ ಬೆಳೆದಿದ್ದು, ಅದು ಕೂಡ ಕಟಾವಿಗೆ ಬಂದಿದೆ. ಇನ್ನೂ 20 ಗುಂಟೆ(ಅರ್ಧ ಎಕರೆ) ಜಮೀನಿನಲ್ಲಿ ಸೌತೆಕಾಯಿ ಬೆಳೆದಿದ್ದು, ಮಿಶ್ರ ಬೆಳೆಯಾಗಿ 3 ಪೂಟ್ ಗೆ ಒಂದರಂತೆ ಕ್ಯಾಪ್ಸಿಕಾಂ ಬೆಳೆಯುತ್ತಿದ್ದಾರೆ. ಎಲ್ಲ ಬೆಳೆಗಳು ಸತತ 45 ದಿನಗಳಿಗೂ ಅಧಿಕ ಕಟಾವು ನಡೆಯುತ್ತವೆ.
ಸರಿಯಾದ ಪ್ಲ್ಯಾನ್ ಇದ್ದರೆ ಸಾಕು!
ಬೆಳೆಗಳನ್ನು ಬೆಳೆಯಲು ಮಲ್ಚಿಂಗ್ ಪೇಪರ ಬಳಕೆ ಮಾಡಿದ್ದಾರೆ ಈ ರೈತ. ಇದರಿಂದ ಭೂಮಿಯಲ್ಲಿ ತೇವಾಂಶ ಕಡಿಮೆಗೊಳ್ಳುವುದಿಲ್ಲ. ನೀರು ಕೂಡ ಹೆಚ್ಚಿಗೆ ಪೋಲಾಗದೆ ಬೆಳೆಗೆ ಸೇರುತ್ತದೆ. ಮೊದಲಿಗೆ 1 ಎಕರೆಗೆ ಕುರಿ, ತಿಪ್ಪೆ ಗೊಬ್ಬರ, ಕಾಂಪೋಸ್ಟ್ ಗೊಬ್ಬರ 10 ಟನ್, ಡಿಎಪಿ 1 ಕ್ವಿಂಟಾಲ್, ಪೋಟ್ಯಾಶ 50 ಕೆಜಿ, ಸೂಕ್ಷ್ಮ ಪೋಷಕಾಂಶ 10 ಕೆಜಿ, ಮಣ್ಣು ಸುಧಾರಕ 50 ಕೆಜಿ ಹಾಕಿ ನಾಟಿ ಮಾಡಲಾಗಿದೆ. ಹವಾಮಾನಕ್ಕೆ ತಕ್ಕಂತೆ ಅವಶ್ಯಕ ನೀರಿನಲ್ಲಿ ಕರಗುವ ಎಂಪಿಕೆ ಗೊಬ್ಬರ, ಸೂಕ್ಷ್ಮ ಪೋಷಕಾಂಶಗಳನ್ನು ಡ್ರೀಫ್ ಮೂಲಕ ನೀಡಲಾಗಿದೆ.
ಇದನ್ನೂ ಓದಿ: ಜೇನಿನಂತೆ ಸ್ವೀಟ್ ಈ ಬ್ಯುಸಿನಸ್, ತಿಂಗಳಿಗೆ 1 ಲಕ್ಷ ಆದಾಯ ಅಂತೂ ಪಕ್ಕಾ ಬಾಸ್!
ನೀವೂ ಕೂಡ ಈ ರೈತನ ಶೈಲಿಯಲ್ಲಿ ಮಿಶ್ರ ಬೆಳೆ ಬೆಳೆದು ಕೈತುಂಬಾ ಹಣ ಗಳಿಸಬಹುದು. ಹೆಚ್ಚಿನ ಮಾಹಿತಿಗಾಗಿ ಧನಪಾಲ ಎನ್. ಯಲ್ಲಟ್ಟಿ, ಹಳಿಂಗಳಿ ಗ್ರಾಮ, ತಾ. ರಬಕವಿ-ಬನಹಟ್ಟಿ ಜಿ. ಬಾಗಲಕೋಟ ಮೊ: 9900030678 ಗೆ ಸಂಪರ್ಕಿಸಬಹುದು. ಅವರ ಬಳಿ ಐಡಿಯಾ ಪಡೆದುಕೊಂಡು ನೀವು ಕೂಡ ಹಣ ಗಳಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ