ನವ ದೆಹಲಿ (ನವೆಂಬರ್ 30); ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ 'ದೆಹಲಿ ಚಲೋ' ಹೆಸರಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟಿದೆ. ದೇಶದ ವಿವಿಧ ಮೂಲೆಗಳಿಂದ ದೆಹಲಿಯತ್ತ ಧಾವಿಸಿದ್ದ ರೈತರು ನವೆಂಬರ್ 26ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಗೆ ಮೊದಲು ಒಪ್ಪಿಗೆ ನೀಡಿದ್ದ ಪೊಲೀಸರು ನಂತರ ಪ್ರತಿಭಟನೆ ಹತ್ತಿಕ್ಕಲೆಂದೇ ಕೊರೋನಾ ಕಾರಣವೊಡ್ಡಿ ಒಪ್ಪಿಗೆಯನ್ನು ಹಿಂಪಡೆದಿದ್ದರು. ಇದಲ್ಲದೆ ರೈತರು ದೆಹಲಿಯನ್ನು ಪ್ರವೇಶಿಸದಂತೆ ಗಡಿಯಲ್ಲೇ ತಡೆದರು. ಸದ್ಯ ದೆಹಲಿಯ ಗಡಿಯಲ್ಲಿರುವ ರೈತರು ತಾವಿದ್ದ ಸ್ಥಳಗಳಲ್ಲೇ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಆದರೆ, ಹೀಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ದೇಶದ ರೈತರಿಗೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರ್ದೇಶನದಂತೆ ರೈತರಿಗೆ ಆಹಾರ, ನೀರು, ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
"ದೆಹಲಿಯಲ್ಲಿ ರೈತರು ಎಲ್ಲೆಲ್ಲಿ ಪ್ರತಿಭಟನೆ ಮಾಡಲು ಬಯಸುತ್ತಾರೋ ಅವರಿಗೆ ಅನುಮತಿ ನೀಡಬೇಕು. ದೆಹಲಿ ಸಿಎಂ ನಿರ್ದೇಶನದಂತೆ, ಎಎಪಿ ಸರ್ಕಾರ ಪ್ರತಿಭಟನಾಕಾರ ರೈತರಿಗೆ ಬೆಂಬಲ ನೀಡಲಿದೆ. ನಾವು ಅವರಿಗೆ ಶೆಡ್‌ಗಳು, ನೀರು, ವಿದ್ಯುತ್ ಇತ್ಯಾದಿಗಳನ್ನು ವ್ಯವಸ್ಥೆ ಮಾಡುತ್ತೇವೆ. ನಾವು ರೈತರ ಪರವಾಗಿ ನಿಲ್ಲುತ್ತೇವೆ" ಎಂದು ಹೇಳುವ ಮೂಲಕ ಎಎಪಿ ಪಕ್ಷದ ರಾಷ್ಟ್ರೀಯ ವಕ್ತಾರ ರಾಘವ್ ಚಾಡ್ಡಾ ರೈತ ಹೋರಾಟದ ಕುರಿತು ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ
दिल्ली जल बोर्ड के उपाध्यक्ष @raghav_chadha लगातार दूसरे दिन पहुंचे बुराड़ी के निरंकारी मैदान, पंजाब हरियाणा से आए हुए किसानों के लिए व्यवस्था का लिया जायजा pic.twitter.com/GVqs1WJgfv
— Delhi Jal Board (@DelhiJalBoard) November 28, 2020
ದೆಹಲಿಯಲ್ಲಿ ಎಲ್ಲಾ ಪ್ರವೇಶ ದ್ವಾರಗಳನ್ನು ನಿರ್ಬಂಧಿಸಿ ಪ್ರತಿಭಟನೆ ಮಾಡುವ ಎಚ್ಚರಿಕೆ ಹಿನ್ನೆಲೆ, ಇಂದು ಪ್ರತಿಭಟನೆ ತೀವ್ರಗೊಳ್ಳುವ ಲಕ್ಷಣಗಳಿವೆ. ಈ ನಡುವೆ ಪ್ರತಿಭಟನೆಯನ್ನು ಕೈಬಿಟ್ಟು ಮಾತುಕತೆಗೆ ಆಗಮಿಸುವಂತೆ ಕೇಂದ್ರ ಸರ್ಕಾರ ಹೇಳಿದೆ. ಆದರೆ ನವೆಂಬರ್ 13ರಂದು ರೈತರೊಂದಿಗೆ ಮೊದಲ ಸುತ್ತಿನ ಮಾತುಕತೆ ವೇಳೆ ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಸ್ವಲ್ಪವೂ ಸ್ಪಂದಿಸದೇ ಇರುವುದರಿಂದ ಪ್ರತಿಭಟನಾನಿರತ ರೈತರು ಕೇಂದ್ರ ಸರ್ಕಾರದ 'ಮಾತುಕತೆ ಪ್ರಸ್ತಾಪವನ್ನು' ನಿರಾಕರಿಸಿದ್ದಾರೆ.
ಇದನ್ನೂ ಓದಿ : Farmers Protest: 5ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ; ದೆಹಲಿ ಗಡಿ ಬಂದ್
ಕೃಷಿಯನ್ನು ಕಾರ್ಪೊರೇಟ್ ಕುಳಗಳ ವಶವನ್ನಾಗಿ ಮಾಡುವ ಈ ರೈತ ವಿರೋಧಿ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆದುಕೊಳ್ಳುವವರೆಗೂ ಹೋರಾಟ ನಡೆಸುತ್ತೇವೆ. ನಮ್ಮ ಬಳಿ 3-4 ತಿಂಗಳಿಗಾಗುವಷ್ಟು ರೇಷನ್ ಇದೆ. ಹಾಗಾಗಿ ಪ್ರತಿಭಟನೆ ಅನಿರ್ದಿಷ್ಠಾವಧಿ ನಡೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್‌ನ ಅಧ್ಯಕ್ಷ ಸುರ್ಜಿತ್ ಪೌಲ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ