ಭಾರತ (India) ದೇಶದ ಕೆಲ ಮೂಲಭೂತ ಸಮಸ್ಯೆಗಳಲ್ಲಿ ನಿರುದ್ಯೋಗ (Unemployment) ಒಂದು ದೊಡ್ಡ ಸಮಸ್ಯೆ. ಕೆಲಸ ಮಾಡಲು ಸಶಕ್ತವಾಗಿರುವ ಯುವಕರಿಗೆ ಸರಿಯಾದ ಕೆಲಸ ಸಿಗದೇ ಇದ್ದಾಗ ಅದು ಆ ಕುಟುಂಬಕ್ಕೆ ಮಾತ್ರವಲ್ಲದೇ ದೇಶದ ಆರ್ಥಿಕತೆಗೆ (Indian Economy 2022) ದೊಡ್ಡ ಹೊಡೆತ ನೀಡುತ್ತದೆ. ಉದ್ಯೋಗ ಭರವಸೆ ಜೊತೆಯೇ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ (Nodi Govt) ನಿರುದ್ಯೋಗ ದರವನ್ನು ಇಳಿಕೆ ಮಾಡುವಲ್ಲಿ ವಿಫಲವಾಗುತ್ತಿದೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ.
ಭಾರತದಲ್ಲಿ ಹೆಚ್ಚಾಯ್ತು ನಿರುದ್ಯೋಗ ಸಮಸ್ಯೆ
ಭಾರತದಲ್ಲಿ ನಿರುದ್ಯೋಗ (Unemployment)ಸಮಸ್ಯೆ ತೀವ್ರ ಸ್ವರೂಪ ತಾಳಿದೆ ಎನ್ನುವುದಕ್ಕೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಇತ್ತಿಚೆಗೆ ಬಿಡುಗಡೆ ಮಾಡಿದ ವರದಿ ಸಾಕ್ಷಿಯಾಗಿದೆ. ಸಿಎಂಐಇ ಬಿಡುಗಡೆ ಮಾಡಿರುವ ವರದಿ ಪ್ರಕಾರ ದೇಶದಲ್ಲಿ ನಿರುದ್ಯೋಗ ದರವು ಡಿಸೆಂಬರ್ನಲ್ಲಿ ಶೇಕಡಾ 8.30 ರಷ್ಟು ಏರಿಕೆಯಾಗಿದೆ. ನವೆಂಬರ್ನಲ್ಲಿ ನಿರುದ್ಯೋಗ ದರವು ಶೇಕಡಾ 8 ರಷ್ಟಿತ್ತು.
ಆದರೆ ಇದೀಗ ಈ ದರ ಏರಿಕೆಯಾಗಿದ್ದು, ಯುವಕರ ಸ್ಥಿತಿ ಮುಂದೇನು ಎಂಬ ಪ್ರಶ್ನೆ ಮೂಡುತ್ತಿದೆ. ಇನ್ನೊಂದು ಆತಂಕಕಾರಿ ವಿಚಾರವೆಂದರೆ ಇದು ಕಳೆದ 16 ತಿಂಗಳುಗಳಲ್ಲಿ ಅತ್ಯಂತ ಅಧಿಕವಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಅಂಕಿಅಂಶಗಳ ಆಧಾರದ ಮೇಲೆ ರಾಯಿಟರ್ಸ್ ವರದಿ ಮಾಡಿದೆ.
ಸಿಎಂಐಇ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಡಿಸೆಂಬರ್ ತಿಂಗಳಲ್ಲಿ ಭಾರತದಲ್ಲಿ ನಿರುದ್ಯೋಗ ದರವು ಹತ್ತಿ -ಹತ್ತಿರ ಶೇ.9 ತಲುಪಿದ್ದು, ಈ ಅಂಕಿ ನವೆಂಬರ್ನಲ್ಲಿ ಶೇ.8 ರಷ್ಟಿತ್ತು.
ನಗರ ಮತ್ತು ಗ್ರಾಮೀಣ ಭಾಗದಲ್ಲಿ ಎಷ್ಟಿದೆ ನಿರುದ್ಯೋಗ ದರ?
ಸಿಎಂಐಇ ದತ್ತಾಂಶದ ಪ್ರಕಾರ ನಗರ ನಿರುದ್ಯೋಗ ದರವು ಶೇಕಡಾ 10.09 ಕ್ಕೆ ಏರಿಕೆಯಾಗಿದೆ ಎಂದು ತೋರಿಸಿದೆ ಮತ್ತು ಡಿಸೆಂಬರ್ನಲ್ಲಿ ಗ್ರಾಮೀಣ ನಿರುದ್ಯೋಗ ದರವು ಶೇಕಡಾ 7.44 ಕ್ಕೆ ಇಳಿದಿದೆ ಎಂದು ವರದಿ ಉಲ್ಲೇಖಿಸಿದೆ. ಇನ್ನೂ ನವೆಂಬರ್ನಲ್ಲಿ ನಗರದಲ್ಲಿ ಶೇಕಡಾ 8.96 ಮತ್ತು ಗ್ರಾಮೀಣ ಭಾಗದಲ್ಲಿ 7.55 ನಿರುದ್ಯೋಗ ದರ ಇತ್ತು ಎಂಬುದಾಗಿ ರಾಯಿಟರ್ಸ್ ವರದಿ ಮಾಡಿದೆ..
ನವೆಂಬರ್ನಲ್ಲಿ ಇಳಿಕೆ ಕಂಡಿದ್ದ ನಿರುದ್ಯೋಗ ದರ
ನವೆಂಬರ್ನಲ್ಲಿ ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬಿಡುಗಡೆ ಮಾಡಿದ ಇತ್ತೀಚಿನ ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ (PLFS) ಪ್ರಕಾರ, ನವೆಂಬರ್ನಲ್ಲಿ ಸ್ವಲ್ಪ ಮಟ್ಟಿಗೆ ನಿರುದ್ಯೋಗ ದರ ಇಳಿಕೆಯಾಗಿತ್ತು. ವರದಿ ಪ್ರಕಾರ 2022-23ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಭಾರತದ ನಗರ ನಿರುದ್ಯೋಗ ದರವು ಸತತ ಐದನೇ ತ್ರೈಮಾಸಿಕದಲ್ಲಿ ಶೇಕಡಾ 7.2 ಕ್ಕೆ ಇಳಿದಿತ್ತು.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಾರ್ಮಿಕ ಮಾರುಕಟ್ಟೆಯ ಪರಿಸ್ಥಿತಿಗಳು ಸುಧಾರಿಸಿದೆ. ಹಳ್ಳಿಗಳಿಂದಲೆ ಕೂಡಿರುವ ಭಾರತಕ್ಕೆ ಇದು ದೊಡ್ಡ ಕೊಡುಗೆ ಎನ್ನಬಹುದು. ಕಾರ್ಮಿಕರ ಭಾಗವಹಿಸುವಿಕೆಯ ಪ್ರಮಾಣವು ಡಿಸೆಂಬರ್ನಲ್ಲಿ ಶೇಕಡಾ 40.48 ಕ್ಕೆ ಜಿಗಿದಿದೆ, ಇದು 12 ತಿಂಗಳಲ್ಲೇ ಅತ್ಯಧಿಕವಾಗಿದೆ ಎಂದು ವರದಿ ಹೇಳಿದೆ.
ಹರಿಯಾಣ ಹೆಚ್ಚಿನ ನಿರುದ್ಯೋಗ ದರ ಹೊಂದಿರುವ ರಾಜ್ಯ
ಹರಿಯಾಣ ದೇಶದಲ್ಲೇ ಅತಿ ಹೆಚ್ಚು ನಿರುದ್ಯೋಗ ದರವನ್ನು ಹೊಂದಿದೆ. ಡಿಸೆಂಬರ್ 2022ರಲ್ಲಿ ಅಲ್ಲಿನ ನಿರುದ್ಯೋಗ ದರವು ಆತಂಕಕಾರಿಯಾದ ಶೇ.37.4 ರಷ್ಟನ್ನು ತಲುಪಿದೆ. ಎರಡನೇ ಸ್ಥಾನದಲ್ಲಿ ರಾಜಸ್ಥಾನವಿದ್ದು, ಇಲ್ಲಿನ ನಿರುದ್ಯೋಗ ದರ 28.5% ಇದೆ, ಈ ದರ ನವೆಂಬರ್ನಲ್ಲಿ ಶೇ.24.5ರಷ್ಟಿತ್ತು. ಇನ್ನೂ ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.23.9ರಷ್ಟು ನಿರುದ್ಯೋಗ ದರವಿದೆ ಎಂದು CMIE ಅಂಕಿಅಂಶಗಳು ತೋರಿಸಿವೆ.
ಪ್ರಸ್ತುತ ದೇಶದಲ್ಲಿ ನಿರುದ್ಯೋಗ ಮತ್ತು ಹಣದುಬ್ಬರ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಕೇಂದ್ರ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ನಿರುದ್ಯೋಗ ದರದ ವಿರುದ್ಧ ಸಹ ವಿರೋಧ ಪಕ್ಷಗಳು ಆಡಳಿತ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಇರುತ್ತದೆ. ಮುಂದಿನ ದಿನಗಳಲ್ಲಾದರೂ ಯುವ ಭಾರತದ ಕೆಲಸದ ಕನಸನ್ನು ನನಸು ಮಾಡುವ ಪ್ರಯತ್ನವನ್ನು ಸರ್ಕಾರ ಮಾಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ