ನಮ್ಮಲ್ಲಿ ಅನೇಕರು ಬೆಂಗಳೂರಿನ (Bengaluru) ಟ್ರಾಫಿಕ್ ನಲ್ಲಿ ಆಫೀಸಿಗೆ ಹೋಗಿ ಸಂಜೆ ಮನೆಗೆ ಮತ್ತೆ ಅದೇ ರೀತಿಯ ಟ್ರಾಫಿಕ್ ನಲ್ಲಿ ಬರುವಷ್ಟರಲ್ಲಿ ದಣಿದು ಸುಸ್ತಾಗಿ ಹೋಗುತ್ತಾರೆ. ಆದರೆ ಇನ್ನೂ ಕೆಲವರು ಇದೇ ಬೆಂಗಳೂರಿನಲ್ಲಿ ಟ್ರಾಫಿಕ್ ನಲ್ಲಿ (Traffic) ಸುತ್ತಾಡಿಕೊಂಡು ಎರಡೆರಡು ಕೆಲಸಗಳನ್ನು ಮಾಡುತ್ತಿರುತ್ತಾರೆ. ಇದರಲ್ಲಿ ಯಾವುದು ಸರಿ ಅಥವಾ ತಪ್ಪು ಅನ್ನೋ ಮಾತಿಲ್ಲ ಬಿಡಿ, ಅವರವರ ಅನುಕೂಲ, ಉತ್ಸಾಹ ಮತ್ತು ಅವರು ರೂಢಿಸಿಕೊಂಡ ಜೀವನಶೈಲಿಗೆ (Lifestyle) ಬಿಟ್ಟ ವಿಷಯ.
ಇಷ್ಟೆಲ್ಲಾ ಈಗೇಕೆ ಹೇಳುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು. ಇಲ್ಲೊಬ್ಬ ಆಟೋ ಡ್ರೈವರ್ ಬೆಂಗಳೂರಿನಲ್ಲಿ ದಿನವಿಡೀ ಆಟೋ ಓಡಿಸಿಕೊಂಡು ತನ್ನದೇ ಆದ ಯೂಟ್ಯೂಬ್ ಚಾನೆಲ್ ಸಹ ಮಾಡಿಕೊಂಡಿದ್ದಾರೆ.
ಈ ಬೆಂಗಳೂರಿನ ಆಟೋ ಡ್ರೈವರ್ ಯೂಟ್ಯೂಬ್ ಚಾನೆಲ್ ಸಹ ನಡಿಸ್ತಾರಂತೆ
ಬೆಂಗಳೂರಿನ 29 ವರ್ಷ ವಯಸ್ಸಿನ ಜನಾರ್ಧನ್ ದಿನವಿಡೀ ಆಟೋ ಓಡಿಸುತ್ತಾರೆ ಮತ್ತು ಹವ್ಯಾಸ ಎಂಬಂತೆ ವೈಯಕ್ತಿಕ ಹಣಕಾಸು ಕುರಿತು ಒಂದು ಯೂಟ್ಯೂಬ್ ಚಾನೆಲ್ ಅನ್ನು ಸಹ ನಡೆಸುತ್ತಾರೆ. ಬೆಂಗಳೂರಿನ ಆಟೋ ಪ್ರಯಾಣಿಕರೊಬ್ಬರು ಈ ಆಟೋದ ಫೋಟೋವನ್ನು ಕ್ಲಿಕ್ಕಿಸಿ ಅದನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ನಂತರ ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ: ಭಾರತದ ಪಾಸ್‌ಪೋರ್ಟ್ ಒಂದಿದ್ದರೆ ಸಾಕು, ವೀಸಾ ಇಲ್ಲದೆಯೇ ಈ ದೇಶಗಳಿಗೆ ನೀವು ಭೇಟಿ ನೀಡಬಹುದು
ಟ್ವೀಟ್ ನಲ್ಲಿ ಹಂಚಿಕೊಂಡ ಫೋಟೋದಲ್ಲಿ ಆಟೋದೊಳಗೆ ಇರಿಸಲಾದ ಒಂದು ಫಲಕವನ್ನು ನಾವು ನೋಡಬಹುದು. "ದಯವಿಟ್ಟು ನನ್ನ ಯೂಟ್ಯೂಬ್ ಚಾನೆಲ್ ‘ಗೋಲ್ಡ್ ಜನಾರ್ಧನ್ ಇನ್ವೆಸ್ಟರ್’ ಗೆ ಚಂದಾದಾರರಾಗಿ” ಅಂತ ಅದರಲ್ಲಿ ಬರೆದಿದೆ.
ಸಿಎಂಆರ್ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವೀಧರರಾಗಿರುವ ಜನಾರ್ದನ್ ಯಾವಾಗಲೂ ಷೇರು ಮಾರುಕಟ್ಟೆಯ ಬಗ್ಗೆ ಒಲವು ಹೊಂದಿದ್ದರು. ನಂತರ ಅವರು ಆ ಉತ್ಸಾಹವನ್ನು ‘ಗೋಲ್ಡ್ ಜನಾರ್ದನ್ ಇನ್ವೆಸ್ಟರ್’ ಎಂಬ ಯೂಟ್ಯೂಬ್ ಚಾನೆಲ್ ಆಗಿ ಪರಿವರ್ತಿಸಿದರು.
ತಮ್ಮ ಯೂಟ್ಯೂಬ್ ಚಾನೆಲ್ ಬಗ್ಗೆ ಏನ್ ಹೇಳ್ತಾರೆ ಜನಾರ್ಧನ್?
"ನೀವು 10 ರೂಪಾಯಿಗಳನ್ನು ಗಳಿಸಿದರೆ, ಚಿಂತೆ ಮುಕ್ತ ಜೀವನವನ್ನು ನಡೆಸಲು ಮತ್ತು ಸುರಕ್ಷಿತ ಭವಿಷ್ಯವನ್ನು ಹೊಂದಲು ನೀವು ಕನಿಷ್ಠ 3 ರೂಪಾಯಿಗಳನ್ನು ಹೂಡಿಕೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ" ಎಂದು ಜನಾರ್ದನ್ ಸುದ್ದಿ ಮಾಧ್ಯಮದೊಂದಿಗೆ ತಮ್ಮ ಈ ಕಥೆಯನ್ನು ಹಂಚಿಕೊಳ್ಳುತ್ತಾ ಹೇಳಿದರು.
ಜನಾರ್ದನ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅರ್ಥಶಾಸ್ತ್ರದ ಸಂಕೀರ್ಣತೆಗಳನ್ನು ಸರಳೀಕರಿಸುತ್ತಾರೆ ಮತ್ತು ಜನರು ಉತ್ತಮ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ಸಹಾಯ ಮಾಡಲು ಕನ್ನಡದಲ್ಲಿ ವೈಯಕ್ತಿಕ ಹಣಕಾಸು ಸಲಹೆಗಳನ್ನು ಸಹ ಇವರು ನೀಡುತ್ತಾರೆ.
"ಪದವಿಯ ನಂತರ, ನಾನು 2018 ರಲ್ಲಿ ಆಟೋಮೊಬೈಲ್ ಕಂಪನಿಯಲ್ಲಿ ಮಾರಾಟಗಾರನಾಗಿ ಕೆಲಸಕ್ಕೆ ಸೇರಿಕೊಂಡೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ಸಮಯದಲ್ಲಿ ನನ್ನ ಕೆಲಸ ಹೋಯ್ತು, ಹಾಗಾಗಿ ನಾನು ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಿದೆ. ನಾನು ಹೊಸ ಕೆಲಸ ಹುಡುಕುತ್ತಿದ್ದೆ, ಆದರೆ ಯಾವುದೇ ಕಂಪನಿಯು ನನಗೆ ತಿಂಗಳಿಗೆ 15-20 ಸಾವಿರ ರೂಪಾಯಿಗಿಂತ ಹೆಚ್ಚು ಸಂಬಳ ನೀಡಲು ಸಿದ್ಧರಿರಲಿಲ್ಲ" ಎಂದು ಜನಾರ್ಧನ್ ಹೇಳಿದರು.
ಅವರು ಈಗ ಆಟೋ ಓಡಿಸಿಕೊಂಡು ಬಿಡುವಿಲ್ಲದ ಜೀವನವನ್ನು ನಡೆಸುತ್ತಾರೆ. ಎಂದರೆ ಅವರು ಪ್ರತಿದಿನ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಆಟೋ ಓಡಿಸುತ್ತಾರೆ.
ಆಟೋ ಡ್ರೈವರ್ ಯೂಟ್ಯೂಬರ್ ಆಗಿ ಮಾರ್ಪಟ್ಟಿದ್ದು ಹೇಗೆ?
"ನಾನು ನಿರುದ್ಯೋಗಿಯಾಗಿದ್ದಾಗ ಆರ್ಥಿಕವಾಗಿ ತುಂಬಾನೇ ಹೆಣಗಾಡುತ್ತಿದ್ದೆ. ಮಧ್ಯಮ ವರ್ಗದವರಿಗೆ ತಮ್ಮ ಹಣವನ್ನು ಹೇಗೆ ನಿರ್ವಹಿಸುವುದು ಅಥವಾ ಅದನ್ನು ಸರಿಯಾಗಿ ಬಳಸಿಕೊಳ್ಳುವುದು ಹೇಗೆ ಎಂದು ಅಷ್ಟಾಗಿ ತಿಳಿದಿರುವುದಿಲ್ಲ. ಆದರೆ ಅದನ್ನು ನಾನು ಅರಿತುಕೊಂಡೆ" ಎಂದು ಹೇಳುತ್ತಾರೆ.
ಅವರು ಸ್ವತ್ತುಗಳನ್ನು ಖರೀದಿಸಲು ಮತ್ತು ಕಾರುಗಳಂತಹ ಐಷಾರಾಮಿ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡಲು ಹೆಣಗಾಡುತ್ತಾರೆ. ಅದು ನಿಜವಾಗಿಯೂ ಹೂಡಿಕೆಯಲ್ಲ ಅದೊಂದು ಹೊಣೆಗಾರಿಕೆ ಮತ್ತು ಅಪಾಯವಾಗಿದೆ.
ಪುಸ್ತಕಗಳು ಮತ್ತು ಯೂಟ್ಯೂಬ್ ಮೂಲಕ ನಾನು ಹಣವನ್ನು ಹೇಗೆಲ್ಲಾ ಉಳಿಸಬಹುದು ಮತ್ತು ಹೂಡಿಕೆ ಮಾಡಬಹುದು ಅನ್ನೋದನ್ನು ಅರಿತುಕೊಂಡೆ. ಸುರಕ್ಷಿತ ಭವಿಷ್ಯವನ್ನು ನಿರ್ಮಿಸುವ ಮಹತ್ವವನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ನಾನು ಈಗ ಇಚ್ಛೆ ಪಡುತ್ತೇನೆ ಎಂದು ಹಣಕಾಸು ಸಲಹೆಯ ಬಗ್ಗೆ ಯೂಟ್ಯೂಬ್ ಚಾನೆಲ್ ಶುರು ಮಾಡಿದ ಜನಾರ್ದನ್ ಹೇಳಿದರು.
ಕೆಲವು ವೀಡಿಯೋಗಳನ್ನು ನೋಡಿದರೆ ಜನಾರ್ದನ್ ಅವರ ಆರ್ಥಿಕ ಬುದ್ಧಿವಂತಿಕೆಯ ಮಾತುಗಳು ಯಾವುದೇ ಅರ್ಥಶಾಸ್ತ್ರಜ್ಞ ಅಥವಾ ಹೂಡಿಕೆ ಗುರುವಿನ ಮಾತುಗಳಿಗಿಂತ ಕಡಿಮೆಯಿಲ್ಲ ಎಂದು ನಿಮಗೆ ಅರ್ಥವಾಗುತ್ತದೆ.
ಹಣದ ಮಹತ್ವವನ್ನು ಅರಿತುಕೊಂಡ ಆಟೋ ಚಾಲಕ ಮತ್ತು ಯೂಟ್ಯೂಬರ್
"ನನ್ನ ತಂದೆ ಸಹ ಚಾಲಕರಾಗಿದ್ದರು ಮತ್ತು ನಾವು ಆವಾಗಲೇ ಸ್ವಂತ ಆಟೋವನ್ನು ಹೊಂದಿದ್ದೆವು. ನಾನು ಉಬರ್ ನಲ್ಲಿ ನೋಂದಾಯಿಸಲು ನಿರ್ಧರಿಸಿದಾಗ ಕಷ್ಟದ ಸಮಯದಲ್ಲಿ ಹಣದ ಶಕ್ತಿ ಮತ್ತು ಅದನ್ನು ಉಳಿಸುವ ಅಥವಾ ಹೂಡಿಕೆ ಮಾಡುವ ಮಹತ್ವವನ್ನು ನಾನು ಅರಿತುಕೊಂಡೆ ಎಂದು ಹೇಳಿದರು.
ನಾವು ಹಣವನ್ನು ಸಂಪಾದಿಸುತ್ತೇವೆ, ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ಅದನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿಲ್ಲ. ನಾನು ಈಗಾಗಲೇ ಯೂಟ್ಯೂಬ್ ಚಾನೆಲ್ ಹೊಂದಿದ್ದೆ ಮತ್ತು ವೈಯಕ್ತಿಕ ಹಣಕಾಸಿನ ಜ್ಞಾನದೊಂದಿಗೆ ಸ್ಟಾಕ್ ಗಳ ಬಗ್ಗೆ ಕೋರ್ಸ್ ಮಾಡಿದ್ದೆ" ಎಂದು ಜನಾರ್ದನ್ ಹೇಳಿದರು.
ಆಟೋದಲ್ಲಿ ಪ್ಯಾಸೆಂಜರ್ ಸೀಟಿನ ಪಕ್ಕದಲ್ಲಿಯೇ, ಅವರ ಯೂಟ್ಯೂಬ್ ಚಾನೆಲ್ ನ ಹೆಸರನ್ನು ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ. ಅನೇಕ ಸವಾರರು ಅವನ ಬಗ್ಗೆ ತಿಳಿದ ನಂತರ ಇದರಲ್ಲಿ ಆಸಕ್ತಿ ವಹಿಸುತ್ತಾರೆ ಮತ್ತು ಅವರ ಕಥೆ ಅನೇಕರಿಗೆ ಸ್ಪೂರ್ತಿ ನೀಡುತ್ತದೆ. ಜನಾರ್ದನ್ ಅವರ ಯೂಟ್ಯೂಬ್ ಚಾನೆಲ್ ಪ್ರಸ್ತುತ 3.65 ಸಾವಿರ ಫಾಲೋವರ್ ಗಳನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ