ಟ್ವಿಟರ್ (Twitter) ಅನ್ನು ಸ್ವಾಧೀನ ಪಡಿಸಿಕೊಂಡಿದ್ದೇ ಬಂತು ಎಲಾನ್ ಮಸ್ಕ್ (Elon Musk) ಒಂದಿಲ್ಲ ಒಂದು ಹೊಸ ಕ್ರಮ, ನೀತಿ-ನಿಯಮ, ವ್ಯವಹಾರದಲ್ಲಿ ಬದಲಾವಣೆಗಳನ್ನು ತರುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಟ್ವಿಟರ್ ಕಂಪನಿ (Twitter Company) ಯ ಈ ವರ್ಷದ ದೊಡ್ಡ ಸೆನ್ಸೇಷನ್ ಸುದ್ದಿ ಎಂದರೆ ಉದ್ಯೋಗಿಗಳ ವಜಾ (Layoff). ಮಸ್ಕ್ ಟ್ವಿಟರ್ ಚುಕ್ಕಾಣಿ ಹಿಡಿಯುತ್ತಿದ್ದಂತೆ ಸಾವಿರಾರು ಉದ್ಯೋಗಿಗಳನ್ನು ಮುಲಾಜಿಲ್ಲದೆ ಮನೆಗೆ ಕಳುಹಿಸಿದ್ದಾರೆ.
ಕೆಲಸದಿಂದ ವಜಾ ಮಾಡದಂತೆ ತಡೆಯಾಜ್ಞೆ ಕೋರಿದ ಉದ್ಯೋಗಿ
ನವೆಂಬರ್ 16 ರಂದು ಟ್ವಿಟರ್ ಉದ್ಯೋಗಿಗಳಿಗೆ ಮಸ್ಕ್ ಮಧ್ಯರಾತ್ರಿ ಇಮೇಲ್ ಮೂಲಕ ನೌಕರರನ್ನು ವಜಾ ಮಾಡುತ್ತಿರುವ ಬಗ್ಗೆ ತಿಳಿಸಿದ್ದರು. ಪಟ್ಟಿಯಲ್ಲಿರುವ ಎಲ್ಲಾ ಉದ್ಯೋಗಿಗಳಂತೆ ಕಂಪನಿಯ ಮಹಿಳಾ ಉದ್ಯೋಗಿ ಮೆಕ್ಸ್ವೀನಿಗೂ ಈ ಮೇಲ್ ತಲುಪಿತ್ತು. ಮಸ್ಕ್ ಮೇಲ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಮೆಕ್ಸ್ವೀನಿ ಟ್ವಿಟರ್ನಿಂದ ತನ್ನನ್ನು ವಜಾ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
"75 ಗಂಟೆ ಕೆಲಸ ಮಾಡುತ್ತಿದ್ದೇನೆ"
ಎಲಾನ್ ಮಸ್ಕ್ ಕಂಪನಿಯ ಜವಾಬ್ದಾರಿಯನ್ನು ವಹಿಸಿಕೊಂಡಾಗಿನಿಂದ ಮೆಕ್ಸ್ವೀನಿ ವಾರಕ್ಕೆ 75 ಗಂಟೆಗಳಿಗಿಂತ ಹೆಚ್ಚು ಸಮಯ ಕೆಲಸ ಮಾಡಿದ್ದಾಗಿ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ ಎಂದು ಐರಿಶ್ ಟೈಮ್ಸ್ ವರದಿ ಮಾಡಿದೆ. ಬಿಲಿಯನೇರ್ ಅಧಿಕಾರ ವಹಿಸಿಕೊಂಡ ನಂತರ ಒಂದು ವಾರದಲ್ಲಿ ಅವರ ಕೆಲಸದ ಸಮಯವು 75 ಗಂಟೆಗಿಂತ ಹೆಚ್ಚಿದೆ ಎಂದು ಐರ್ಲೆಂಡ್ನ ಹೈಕೋರ್ಟ್ಗೆ ನೀಡಿದ ಹೇಳಿಕೆಯಲ್ಲಿ ಸಿನೆಡ್ ಮೆಕ್ಸ್ವೀನಿ ಹೇಳಿದ್ದಾರೆ.
ಇದನ್ನೂ ಓದಿ: ಹೀಗೊಂದು ಬ್ಯುಸಿನೆಸ್ ಐಡಿಯಾ ಸ್ಪರ್ಧೆ- ವಿಜೇತರಿಗೆ 5 ಲಕ್ಷ ರೂ. ಬಹುಮಾನ
ಸುಮಾರು ಎರಡ್ಮೂರು ವರ್ಷದಿಂದ ಟ್ವಿಟರ್ನಲ್ಲಿ ಕೆಲಸ ಮಾಡುತ್ತಿದ್ದ ಮೆಕ್ಸ್ವೀನಿ, ತಮ್ಮ ಉದ್ಯೋಗ ಒಪ್ಪಂದದ ಪ್ರಕಾರ ನಿಯಮಿತವಾಗಿ ವಾರಕ್ಕೆ 40 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತೇನೆ ಎಂದು ಹೇಳಿದರು.
"ಮಸ್ಕ್ ಬಂದ ನಂತರ ಕೆಲಸ ಕಷ್ಟವಾಗಿದೆ"
ಎಲಾನ್ ಮಸ್ಕ್ ಕಂಪನಿಯನ್ನು ವಹಿಸಿಕೊಂಡ ನಂತರ ಕೆಲಸ ಇನ್ನೂ ಕಠಿಣವಾಗಿದೆ ಎಂದು ಮೆಕ್ಸ್ವೀನಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಮಸ್ಕ್ ಕಾರ್ಯಪ್ರವೃತ್ತಿ ಬಗ್ಗೆ ಮಾತನಾಡಿದ ಮೆಕ್ಸ್ವೀನಿ ಸಂಸ್ಥೆಯನ್ನು ಮಸ್ಕ್ ಇನ್ನೂ ಸಹ ಅಸಾಂಪ್ರದಾಯಿಕ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂದಿದ್ದಾರೆ. ಯಾವುದೇ ಸ್ಪಷ್ಟವಾದ ತರ್ಕವಿಲ್ಲದೆ ಸುಖಾಸುಮ್ಮನೆ ಸಿಬ್ಬಂದಿಯನ್ನು ವಜಾಗೊಳಿಸಿದ್ದಾರೆ. ಮತ್ತೆ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಉದ್ಯೋಗಿಗಳನ್ನು ಕಂಪನಿಗೆ ವಾಪಸ್ ಬರಲು ಹೇಳುತ್ತಿದ್ದಾರೆ, ಮತ್ತೆ ನೇಮಕಾತಿ ಕೂಡ ನಡೆಯುತ್ತಿದೆ ಎಂದು ಅವರು ಹೇಳಿದರು.
ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಮಸ್ಕ್
44 ಶತಕೋಟಿ ಡಾಲರ್ನೊಂದಿಗೆ ಮಸ್ಕ್ ಅವರು ಅಕ್ಟೋಬರ್ 27 ರಂದು ತನ್ನ ಸ್ವಾಧೀನದ ಒಪ್ಪಂದವನ್ನು ಅಂತಿಮಗೊಳಿಸಿದ ಒಂದು ವಾರದ ನಂತರ ಕಂಪನಿಯಿಂದ ಸಾವಿರಾರು ಉದ್ಯೋಗಿಗಳನ್ನು ಮಸ್ಕ್ ವಜಾ ಮಾಡಿದ್ದರು. ಟ್ವಿಟರ್ನ ಸಿಇಒ, ಪರಾಗ್ ಅಗರವಾಲ್ ಮತ್ತು ಸಿಎಫ್ಒ ಮತ್ತು ಇತರ ಕೆಲವು ಹಿರಿಯ ಅಧಿಕಾರಿಗಳನ್ನು ಸಹ ಮನೆಗೆ ಕಳುಹಿಸಿದ್ದರು ಮಸ್ಕ್.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ನ ಹೊಸ ಮಾಲೀಕ ಎಲೋನ್ ಮಸ್ಕ್ ಅವರು ಆರ್ಥಿಕತೆಯನ್ನು ಸಾಧಿಸಲು ಸಾಮೂಹಿಕ ಸಿಬ್ಬಂದಿ ವಜಾ ಪ್ರಕ್ರಿಯೆ ನಡೆಯಲಿದೆ ಎಂದು ಘೋಷಿಸಿದ್ದರು. ಶೇಕಡಾ 75ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿರುವ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ ಇದೀಗ ವಿವಿಧ ಹುದ್ದೆಗಳಿಗೆ ಮತ್ತೆ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದೆ.
ಇದನ್ನೂ ಓದಿ: ಡಿಸೆಂಬರ್ 1ರಿಂದ ಹಲವು ನಿಯಮಗಳಲ್ಲಿ ಬದಲಾವಣೆ
ಕಂಪನಿಯ ಲೇ-ಅಪ್ ಪರ್ವ ಕೊನೆಯಾಗಿದೆ. ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದೇವೆ ಎಂಬುದಾಗಿ ಕಂಪನಿಯ ಹೊಸ ಮಾಲೀಕ ಎಲಾನ್ ಮಸ್ಕ್ ಹೇಳಿರುವುದಾಗಿ ವರದಿಯಾಗಿದೆ. ವಜಾಗೊಂಡ ಕೆಲವು ಸಿಬ್ಬಂದಿಯನ್ನು ಕಂಪನಿಗೆ ಮತ್ತೆ ಕೆಲಸಕ್ಕೆ ಬನ್ನಿ ಎಂದು ಮಸ್ಕ್ ಆಹ್ವಾನಿಸಿದ್ದಾರೆ. ಮರಳಿ ಕೆಲಸಕ್ಕೆ ಬರುವಂತೆ ಕೆಲವು ಉದ್ಯೋಗಿಗಳಿಗೆ ಕಂಪನಿಯಿಂದ ಸಂದೇಶ ಬಂದಿದೆ ಎಂದು ಎಂಬುದಾಗಿ ಕೆಲವು ದಿನಗಳ ಹಿಂದೆ ವರದಿಯಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ