138 ಕೋಟಿ ವಂಚನೆ ಆರೋಪದಡಿ ಭಾರತ(India) ಮೂಲದ ಆ್ಯಪಲ್ ಮಾಜಿ ಉದ್ಯೋಗಿ (Apple employee) ಧೀರೇಂದ್ರ ಪ್ರಸಾದ್‌ಗೆ 3 ವರ್ಷ ಜೈಲು ಶಿಕ್ಷೆ ಮತ್ತು ವಂಚಿಸಿದ ಹಣವನ್ನು ಮರುಪಾವತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಆ್ಯಪಲ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ವೇಳೆ ಕಂಪನಿಗೆ 17 ಮಿಲಿಯನ್ ಡಾಲರ್‌ಗಳನ್ನು ಧೀರೇಂದ್ರ ಪ್ರಸಾದ್ ವಂಚಿಸಿದ್ದಾರೆ. ಕೆಲಸ ಮಾಡುತ್ತಿದ್ದ ಕಂಪನಿಗೆ ವಂಚಿಸಲು ಪಿತೂರಿ ಮಾಡಿದ್ದನ್ನು ಒಪ್ಪಿಕೊಂಡ ಬಳಿಕ ನ್ಯಾಯಾಲಯ $ 19 ಮಿಲಿಯನ್ ಮರುಪಾವತಿಯನ್ನು ಪಾವತಿಸಲು ಆದೇಶಿಸಲಾಗಿದೆ.
ಕೆಲಸ ಮಾಡುತ್ತಿದ್ದ ಕಂಪನಿಗೇ ದೋಖಾ
ಪ್ರಸಾದ್ ಅವರು 2008 ರಿಂದ 2018ರವರೆಗೆ ಆ್ಯಪಲ್ ಕಂಪನಿಯಲ್ಲಿ ಉದ್ಯೋಗಿಯಾಗಿ ಸೇವೆಸಲ್ಲಿಸಿದ್ದಾರೆ. ಕಂಪನಿಯಲ್ಲಿ ಮೊದಲಿಗೆ ಜಾಗತಿಕ ಸೇವಾ ಪೂರೈಕೆ ಸರಪಳಿಯಲ್ಲಿ ಖರೀದಿದಾರರಾಗಿ ಮಾರಾಟಗಾರರಿಂದ ಭಾಗಗಳು ಮತ್ತು ಸೇವೆಗಳನ್ನು ಖರೀದಿಸುವ ಜವಾಬ್ದಾರಿಯನ್ನು ಅವರು ಹೊಂದಿದ್ದರು.
ಅಧಿಕಾರ ದುರುಪಯೋಗ ಪಡಿಸಿಕೊಂಡ ಧೀರೇಂದ್ರ ಪ್ರಸಾದ್
ಆ್ಯಪಲ್ ಕಂಪನಿಯಲ್ಲಿ ಧೀರೇಂದ್ರ ಪ್ರಸಾದ್ ಅವರಿಗೆ ಉನ್ನತ ಸ್ಥಾನಮಾನವಿತ್ತು. ಹಲವು ಲಾಭದಾಯಕವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹ ಇವರಿಗೆ ಅಧಿಕಾರ ನೀಡಲಾಗಿತ್ತು.
ಇದನ್ನೂ ಓದಿ: 5 ಲಕ್ಷ ಮನೆಗಳ ಹರಾಜಿಗೆ ಮುಂದಾದ ಬ್ಯಾಂಕ್‌ಗಳು; ಇ-ಹರಾಜು ಆ್ಯಪ್ ಆರಂಭಕ್ಕೆ ಸಿದ್ಧತೆ
ಆದರೆ ಈ ಸಂಪೂರ್ಣ ಜವಾಬ್ದಾರಿಯನ್ನು ದುರುಪಯೋಗಿಸಿಕೊಂಡ ಪ್ರಸಾದ್ ನಂಬಿಕೆ ಉಳಿಸಿಕೊಳ್ಳದೇ ಕಂಪನಿಗೆ ಸಾವಿರಾರು ಡಾಲರ್ ವಂಚಿಸಿದ್ದಾರೆ. ಸಾವಿರಾರು ಡಾಲರ್ ಸಂಬಳ ಮತ್ತು ಬೋನಸ್ ಪಡೆಯುತ್ತಿದ್ದರೂ ಸಹ ಅಡ್ಡ ದಾರಿಯಲ್ಲಿ ಹಣ ಗಳಿಕೆಗೆ ಬೇರೆ ಮಾರ್ಗ ಅನುಸರಿಸಿದರು.
2011ರಿಂದಲೂ ಕಂಪನಿಗೆ ಮೋಸ ಮಾಡುತ್ತಿದ್ದ ಪ್ರಸಾದ್
2011ರಿಂದ ಕಂಪನಿಗೆ ವಂಚಿಸಲು ಶುರು ಮಾಡಿದ ಇವರು ಹಣವನ್ನು ಪಡೆಯಲು ಪ್ರಾರಂಭಿಸಿದರು. ಸುಳ್ಳು ಲೆಕ್ಕ ತೋರಿಸುವುದು, ಹೆಚ್ಚಿನ ಇನ್‌ವಾಯ್ಸ್ ನೀಡುವುದು, ವಿವಿಧ ಸರಕುಗಳಿಗೆ ಹೆಚ್ಚಿನ ಬಿಲ್, ತೆರಿಗೆ ವಂಚನೆ ಹೀಗೆ ಎಲ್ಲಾ ರೀತಿಯಲ್ಲೂ ಮೋಸ ಮಾಡಿ ಹಣ ಗಳಿಸಿದರು.
ತಾವು ಮಾಡಿದ ತಪ್ಪುಗಳು ಗೊತ್ತಾಗಬಾರದು ಎಂದೂ ಸಹ ಹಲವು ರೀತಿಯಲ್ಲಿ ಎಚ್ಚರಿಕೆ ವಹಿಸಿದ್ದರು. ಕಾನೂನುಬಾಹಿರ ಚಟುವಟಿಕೆಗಳನ್ನು ಮರೆಮಾಡಲು ಕಂಪನಿಯ ವಂಚನೆ ಪತ್ತೆ ತಂತ್ರಗಳ ಆಂತರಿಕ ಮಾಹಿತಿಯನ್ನು ಬಳಸಿದ್ದಾರೆ ಎಂದು US ನ್ಯಾಯಾಂಗ ಇಲಾಖೆ ಆರೋಪಿಸಿದೆ. ಕಂಪನಿಗೆ ಹಲವು ರೀತಿಯಲ್ಲಿ ವಂಚಿಸಿದ್ದ ಇವರ ವಂಚನೆಗಳು ಅಂತಿಮವಾಗಿ ಬೆಳಕಿಗೆ ಬಂದವು.
ಮೂರು ವರ್ಷ ಜೈಲು ಮತ್ತು ಮರುಪಾವತಿಗೆ ಆದೇಶ
ಇಲ್ಲಿಯವರೆಗೆ ಕಂಪನಿಗೆ ವಂಚನೆ ಮಾಡಿದ್ದಕ್ಕಾಗಿ ಕಂಪನಿ ಸದ್ಯ ಇವರಿಗೆ $19 ಮಿಲಿಯನ್ (155 ಕೋಟಿ ರೂ.ಗಿಂತ ಹೆಚ್ಚು) ಮರುಪಾವತಿಯನ್ನು ಪಾವತಿಸಬೇಕಾಗಿ ಆದೇಶ ಹೊರಡಿಸಿದೆ. ಮೂರು ವರ್ಷಗಳ ಜೈಲು ಶಿಕ್ಷೆಯ ಹೊರತಾಗಿ ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈಗಾಗಲೇ ಸರ್ಕಾರದಿಂದ ವಶಪಡಿಸಿಕೊಂಡಿರುವ 5.4 ಮಿಲಿಯನ್ ಡಾಲರ್ (ರೂ. 44.14 ಕೋಟಿ) ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಧೀಶರು ಆದೇಶಿಸಿದ್ದಾರೆ.
ಪ್ರಸಾದ್ ಅವರು ಆ್ಯಪಲ್‌ಗೆ $17,398,104 (ರೂ. 142.25 ಕೋಟಿ) ಮತ್ತು IRS ಗೆ $1,872,579 (ರೂ. 15.31 ಕೋಟಿ) ಪಾವತಿಸಬೇಕಾಗುತ್ತದೆ. ಅಂತಿಮವಾಗಿ, ಪ್ರಸಾದ್ ಅವರನ್ನು ಮೂರು ವರ್ಷಗಳ ಮೇಲ್ವಿಚಾರಣೆಯ ಬಿಡುಗಡೆಗೆ ಶಿಕ್ಷೆ ವಿಧಿಸಲಾಗಿದೆ, ಇದು ಅವರು ಜೈಲು ಶಿಕ್ಷೆಯನ್ನು ಪೂರೈಸಿದ ನಂತರ ಪ್ರಾರಂಭವಾಗುತ್ತದೆ.
ವಂಚನೆಗಳನ್ನು ಒಪ್ಪಿಕೊಂಡ ಪ್ರಸಾದ್
ಪ್ರಸಾದ್ ಅವರು ತಮ್ಮ ಯೋಜನೆಗಳ ಆದಾಯದ ಮೇಲಿನ ತೆರಿಗೆ ವಂಚನೆ ಮತ್ತು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಯಾಗಿರುವ ಎರಡು ಮಾರಾಟಗಾರರ ಕಂಪನಿಗಳ ಮಾಲೀಕರೊಂದಿಗೆ ಪಿತೂರಿ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ಪ್ರಸಾದ್ ಅವರ ಬಗ್ಗೆ ತನಿಖೆ ನಡೆಸಲು ಮೈಕೆಲ್ ಜಿ. ಪಿಟ್ಮನ್ ಮತ್ತು ಕರೆನ್ ಬ್ಯೂಸಿ IRSನೊಂದಿಗೆ ಸಹಾಯ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ