ಇಂದಿನ ಕಾಲದಲ್ಲಿ ಜನರು ಯಾವಾಗಲೂ ಒತ್ತಡದಿಂದಲೇ ಬದುಕುತ್ತಾರೆ. ಈ ಒತ್ತಡದ ಜೀವನಶೈಲಿಯಿಂದ ಆರೋಗ್ಯ ಹದಗೆಡುತ್ತದೆ. ಈ ಟ್ರಾಫಿಕ್, ಗಡಿಬಿಡಿ, ಒತ್ತಡ ಇವನ್ನೆಲ್ಲ ಬದಿಗಿರಿಸಿ ಒಂದಿಷ್ಟು ಶಾಂತಿಯನ್ನು, ಮನಸ್ಸಿಗೆ ಆಹ್ಲಾದವನ್ನು ನೀಡುವಂತಹ ಸ್ಥಳಕ್ಕೆ ಹೋಗಬೇಕು ಅಂತ ಎಲ್ಲರೂ ಬಯಸುತ್ತಾರೆ. ಹೀಗೆ ಪ್ರಶಾಂತವಾಗಿ ಪ್ರಕೃತಿಯ ಮಡಿಲಲ್ಲಿ ಕುಳಿತೆದ್ದು ಬರಬೇಕು ಎಂದರೆ ಬೆಂಗಳೂರಿನ ಸುತ್ತಮುತ್ತ ಸಾಕಷ್ಟು ಜಾಗಗಳಿವೆ. ಅದರಲ್ಲೊಂದು ಲೈಲಾಕ್ ಫಾರ್ಮ್ (Lilac Farm). ಹೌದು, ಗದ್ದಲದ ಜೀವನದಿಂದ ತಪ್ಪಿಸಿಕೊಳ್ಳಲು ಬಯಸುವವರಿಗೆ ಇದೊಂದು ಪರ್ಫೆಕ್ಟ್ ಜಾಗವಾಗಿದೆ. ಬೆಂಗಳೂರಿನ ಸೋಮಶೆಟ್ಟಿಹಳ್ಳಿ ಬಳಿ ಕ್ರಿಸ್ಟಿನಾ ಮತ್ತು ಆಕೆಯ ತಾಯಿ ಅನಿತಾ ಅಜಿತ್ ನಡೆಸುತ್ತಿರುವ ದಿ ಲೈಲಾಕ್ ಫಾರ್ಮ್ ಒಂದು ವಿಶಿಷ್ಟ ಅನುಭವ ನೀಡುವುದರಲ್ಲಿ ಸಂಶಯವೇ ಇಲ್ಲ.
ಅಂದಹಾಗೆ ಪ್ರಾಣಿ ಮತ್ತು ಪ್ರಕೃತಿ ಪ್ರಿಯರಿಗೆ ಈ ಫಾರ್ಮ್ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿಗೆ ಭೇಟಿ ನೀಡಿದರೆ ನೀವು ಕೃಷಿ ಮಾಡುವುದರಿಂದ ಹಿಡಿದು ಮಣ್ಣಿನ ಸ್ನಾನ ಮಾಡುವುದು ಮತ್ತು ಆರೋಗ್ಯಕರ ವೇಗನ್ (ಸಸ್ಯಜನ್ಯ) ಊಟವನ್ನೂ ಮಾಡಬಹುದು.
23 ವರ್ಷದ ಕ್ರಿಸ್ಟಿನಾ ತನ್ನ ತಾಯಿ ಅನಿತಾ ಅಜಿತ್ ಅವರೊಂದಿಗೆ ತಮ್ಮ 13 ಎಕರೆ ಜಮೀನಿನಲ್ಲಿ ನೈಸರ್ಗಿಕ ಕೃಷಿಯ ಮೂಲಕ ಎಲ್ಲಾ ಉತ್ಪನ್ನಗಳನ್ನು ಬೆಳೆಯುತ್ತಾರೆ.
ಇಲ್ಲಿ ಟೊಮ್ಯಾಟೋ, ಮೆಣಸಿನಕಾಯಿ, ಕ್ಯಾಪ್ಸಿಕಂ, ಹಸಿರು ಪಪ್ಪಾಯಿ ಮತ್ತು ಬದನೆ, ಬಾಳೆಹಣ್ಣು, ನೆಲ್ಲಿಕಾಯಿ ಮತ್ತು ಮಾವಿನ ಹಣ್ಣುಗಳು ಮತ್ತು ಚಿಟ್ಟೆ ಬಟಾಣಿ ಜೊತೆಗೆ ದಾಸವಾಳ ಮತ್ತು ನೀಲಕ ಮುಂತಾದ ಹೂವುಗಳನ್ನೂ ಬೆಳೆಯಲಾಗುತ್ತದೆ.
ಇದನ್ನೂ ಓದಿ: ನಿಮ್ಮ ಮಗಳ ಭವಿಷ್ಯಕ್ಕೆ ಈಗಿನಿಂದಲೇ ಹಣ ಸೇವ್ ಮಾಡಿ, ಮದುವೆ ವಯಸ್ಸಿಗೆ 63 ಲಕ್ಷ ಬರುತ್ತೆ!
ಈ ಬಗ್ಗೆ ಕ್ರಿಸ್ಟಿನಾ ಅಜಿತ್ ಅವರ ಅಭಿಪ್ರಾಯ
ಹಿಂದೆ ಒಂದು ದಶಕಕ್ಕೂ ಹೆಚ್ಚು ಕಾಲ ಕುಟುಂಬದ ಒಡೆತನದ ಡೈರಿ ಫಾರ್ಮ್ ಆಗಿದ್ದದ್ದು, ಇಂದು ವೆಗನ್ ಫಾರ್ಮ್ ಆಗಿದೆ. "ನಾವು ಜನರಿಗೆ ಒಂದು ಅನನ್ಯ ಅನುಭವವನ್ನು ನೀಡಲು ಬಯಸುತ್ತೇವೆ. ನೈಸರ್ಗಿಕ ಕೃಷಿ, ವೆಗನ್ ಮತ್ತು ಆರೋಗ್ಯಕರ ಜೀವನವನ್ನು ಉತ್ತೇಜಿಸಲು ಬಯಸುತ್ತೇವೆ" ಎಂಬುದಾಗಿ ಕ್ರಿಸ್ಟಿನಾ ಅಜಿತ್ ಹೇಳುತ್ತಾರೆ.
ಆರೋಗ್ಯ ಕಾರಣಕ್ಕಾಗಿ ಮಾಂಸಾಹಾರದಿಂದ ವೇಗನ್ ಪದ್ಧತಿಗೆ
ಮಲಯಾಳಿ ಕುಟುಂಬದಿಂದ ಬಂದ ಕ್ರಿಸ್ಟಿನಾ ಅವರು ಮೊದಲು ಮಾಂಸಾಹಾರಿಯಾಗಿದ್ದರು. ಚಿಕನ್, ಮಟನ್ ಮತ್ತು ಮೀನುಗಳನ್ನು ತಿನ್ನೋದೆಂದರೆ ತುಂಬಾ ಇಷ್ಟವಾಗಿತ್ತು. ಆದರೆ 2019 ರಲ್ಲಿ, ಆಕೆಗೆ ಲೂಪಸ್ ಎಂಬ ಕಾಯಿಲೆ ಇರುವುದು ಪತ್ತೆಯಾದಾಗ ಜೀವನ ಬದಲಾಯ್ತು. ವೈದ್ಯರು ಪ್ರಾಣಿ ಉತ್ಪನ್ನಗಳನ್ನು ತಿನ್ನುವುದನ್ನು ಬಿಟ್ಟು ಹೆಚ್ಚು ನೈಸರ್ಗಿಕ ಜೀವನವನ್ನು ನಡೆಸುವಂತೆ ಸಲಹೆ ನೀಡಿದರು. ನಂತರದಲ್ಲಿ ಎರಡು ತಿಂಗಳೊಳಗೆ ಆಕೆಯ ಕುಟುಂಬ ವೇಗನ್ (ಸಸ್ಯಜನ್ಯ ಆಹಾರ ಪದ್ದತಿ) ಪದ್ಧತಿಗೆ ಬದಲಾಯಿತು.
"ನಾನು ಹಾಗೂ ನನ್ನ ಇಡೀ ಕುಟುಂಬ ಮಾಂಸಾಹಾರವನ್ನು ಇಷ್ಟ ಪಡುತ್ತಿದ್ದೆವು. ಆದರೆ ನನಗೆ ಲೂಪಸ್ ಕಾಯಿಲೆ ಇದೆ ಎಂದು ಗೊತ್ತಾದ ಮೇಲೆ ದೇಹ ಮತ್ತು ಪರಿಸರದ ಮೇಲೆ ಪ್ರಾಣಿ ಉತ್ಪನ್ನಗಳ ಪರಿಣಾಮಗಳನ್ನು ನಾವು ಅರಿತುಕೊಂಡೆವು. ನಾವು ವೆಗನ್ ಆಹಾರ ಪದ್ಧತಿಗೆ ಬದಲಾಗಲು ನಿರ್ಧರಿಸಿದೆವು. ಹಾಗೆಯೇ ಹೆಚ್ಚಿನ ಜನರಿಗೆ ಈ ನೈಸರ್ಗಿಕ ಜೀವನವನ್ನು ಪರಿಚಯಿಸುತ್ತೇವೆ” ಎಂದು ಕ್ರಿಸ್ಟಿನಾ ಹೇಳುತ್ತಾರೆ.
ಅಲ್ಲದೇ ಅನಿತಾಗೆ, ಲೈಲಾಕ್ ಫಾರ್ಮ್ ಅವರು ಯಾವಾಗಲೂ ಬಯಸಿದ ನೈಸರ್ಗಿಕ ಜೀವನವನ್ನು ನಡೆಸಲು ಒಂದು ಪರಿಪೂರ್ಣ ಅವಕಾಶವಾಗಿತ್ತು. ಅವರು ಹೇಳುವ ಪ್ರಕಾರ, ಅವರು ಜನಿಸಿದ್ದು ಕೇರಳದ ರೈತರ ಕುಟುಂಬದಲ್ಲಿ.
“ನಾನು ಯಾವಾಗಲೂ ನಮ್ಮ ಜಮೀನಿನಲ್ಲಿ ಬೆಳೆದ ಆಹಾರವನ್ನು ತಿನ್ನುತ್ತಿದ್ದೆ. ತಾಯಿಯಾಗಿ, ಯಾವಾಗಲೂ ನನ್ನ ಮಕ್ಕಳಿಗೆ ನೈಸರ್ಗಿಕ ಮತ್ತು ಆರೋಗ್ಯಕರ ಆಹಾರವನ್ನು ನೀಡಲು ಬಯಸುತ್ತೇನೆ. ಆದರೆ ನಾವು ನಗರದಲ್ಲಿ ವಾಸಿಸುತ್ತಿದ್ದಾಗ ಅದು ಸಾಧ್ಯವಾಗಲಿಲ್ಲ. ನಾವು ಲೈಲಾಕ್ ಫಾರ್ಮ್ಅನ್ನು ಪ್ರಾರಂಭಿಸಿದಾಗ, ನಾನು ಯಾವಾಗಲೂ ಬಯಸಿದ ಜೀವನವನ್ನು ನಡೆಸಲು ಇದು ಪರಿಪೂರ್ಣ ಅವಕಾಶ ಎಂದು ನಾನು ಕಂಡುಕೊಂಡೆ” ಎನ್ನುತ್ತಾರೆ ಅನಿತಾ.
ಸಸ್ಯಜನ್ಯ ಆಹಾರ ಪದ್ಧತಿಗೆ ಬದಲಾದ್ದರ ಬಗ್ಗೆ ಮಾತನಾಡುತ್ತಾ, “ಆರಂಭದಲ್ಲಿ, ಈ ಪದ್ಧತಿಗೆ ಸ್ವಿಚ್ ಆಗುವುದು ತುಂಬಾ ಕಷ್ಟಕರವಾಗಿತ್ತು. ನಾವು ಮಾಂಸಾಹಾರವನ್ನು ತಿನ್ನಲು ಇಷ್ಟಪಡುತ್ತೇವೆ. ಆದರೆ ಸಸ್ಯಾಹಾರಿಯಾಗಿ ಬದಲಾಗುವ ಪರಿಸರ ಮತ್ತು ನೈತಿಕ ಅಂಶಗಳನ್ನು ನಾವು ನಿಧಾನವಾಗಿ ಅರಿತುಕೊಂಡೆವು. ಇದು ಆರೋಗ್ಯದ ಕಾರಣಗಳಿಗಾಗಿ ಪ್ರಾರಂಭವಾದರೂ, ಅದು ಅದಕ್ಕಿಂತ ಹೆಚ್ಚು ಎಂದು ನಾವು ಶೀಘ್ರದಲ್ಲೇ ಅರಿತುಕೊಂಡೆವು ಎಂದು ಅವರು ಹೇಳುತ್ತಾರೆ.
ಲೈಲಾಕ್ ಫಾರ್ಮ್ ಆರಂಭವಾದ ಕಥೆ
2020 ರಲ್ಲಿ, ಸಾಂಕ್ರಾಮಿಕ ರೋಗವು ಬಂದಾಗ ಕ್ರಿಸ್ಟಿನಾ ಅನಾರೋಗ್ಯದ ಕಾರಣಕ್ಕಾಗಿ ಕುಟುಂಬಸ್ಥರು ತಮ್ಮ ಜಮೀನಿಗೆ ತೆರಳಲು ನಿರ್ಧರಿಸಿದರು. "ನಾವು ಅಲ್ಲಿಗೆ ಹೋದಾಗ, ಅದು ಇನ್ನೂ ಕಾರ್ಯನಿರ್ವಹಿಸುತ್ತಿರುವ ಡೈರಿ ಫಾರ್ಮ್ ಆಗಿತ್ತು. ನಾವು ಅದನ್ನು ಸಸ್ಯಾಹಾರಿ ಫಾರ್ಮ್ ಆಗಿ ಪರಿವರ್ತಿಸಲು ನಿರ್ಧರಿಸಿದೆವು”.
“ನಾವು ಜಮೀನಿನಲ್ಲಿ ವಾಸಿಸಲು ಪ್ರಾರಂಭಿಸಿದಾಗ ನಮಗೆ ಫಾರ್ಮ್ ವಾಸ್ತವ್ಯದ ಕಲ್ಪನೆ ಬಂದಿತು. ನಾನು ಅಡುಗೆಯನ್ನು ಇಷ್ಟಪಡುತ್ತೇನೆ. ನನ್ನ ತಾಯಿಗೆ ಯಾವಾಗಲೂ ಕೃಷಿಯಲ್ಲಿ ಉತ್ಸಾಹವಿತ್ತು.
ಆದ್ದರಿಂದ, ನಾವು ನಮ್ಮ ಕೌಶಲ್ಯಗಳನ್ನು ಸಂಯೋಜಿಸಲು ನಿರ್ಧರಿಸಿದೆವು. ಇದರಿಂದಲೇ ಲೈಲಾಕ್ ಫಾರ್ಮ್ ಪ್ರಾರಂಭವಾಯಿತು” ಎಂದು ಕ್ರಿಸ್ಟಿನಾ ಹೇಳುತ್ತಾರೆ.
“ಇಲ್ಲಿನ ಅತಿಥಿ ಕೊಠಡಿಗಳನ್ನು ತಯಾರಿಸಲು ಕಿಟಕಿಗಳು, ಟೈಲ್ಸ್ ಮತ್ತು ಬಾಗಿಲುಗಳಂತಹ ಪ್ರತಿಯೊಂದು ವಸ್ತುವೂ ಸೆಕೆಂಡ್‌ಹ್ಯಾಂಡ್ ಆಗಿದೆ. ಟೈಲ್‌ಗಳು ಹೊಂದಿಕೆಯಾಗುವುದಿಲ್ಲ ಮತ್ತು ವಿಭಿನ್ನ ಆಕಾರಗಳು ಮತ್ತು ಗಾತ್ರಗಳನ್ನು ಹೊಂದಿವೆ. ಏಕೆಂದರೆ ಅವೆಲ್ಲವನ್ನೂ ಜಂಕ್‌ಯಾರ್ಡ್‌ಗಳು ಮತ್ತು ಸ್ಕ್ರ್ಯಾಪ್ ಡೀಲರ್‌ಗಳಿಂದ ಸಂಗ್ರಹಿಸಿದ್ದೇವೆ” ಎಂಬುದಾಗಿ ಕ್ರಿಸ್ಟಿನಾ ಹೇಳುತ್ತಾರೆ.
ಲೈಲಾಕ್ ಫಾರ್ಮ್‌ನಲ್ಲಿ ಈ ಎಲ್ಲಾ ಸರ್ವೀಸ್‌ಗಳಿವೆ!
“ನಾವು ಯೋಗ, ಕಾರ್ಪೊರೇಟ್ ವಿಹಾರಗಳು ಮತ್ತು ಶಾಲಾ ವಿಹಾರಗಳನ್ನು ಸಹ ಮಾಡುತ್ತೇವೆ. ಇಲ್ಲಿ ವಿದ್ಯಾರ್ಥಿಗಳು ಆಹಾರವು ನಿಜವಾಗಿ ಹೇಗೆ ಬೆಳೆಯುತ್ತದೆ ಎಂಬುದನ್ನು ನೋಡಬಹುದು.
ತಮ್ಮ ಮೇಜಿನ ಮೇಲಿರುವ ಆಹಾರವು ಸೂಪರ್ ಮಾರ್ಕೆಟ್‌ನಿಂದ ಅಲ್ಲ, ಆದರೆ ಹೊಲದಿಂದ ಬಂದದ್ದು ಎಂದು ಅವರು ಕಲಿಯುತ್ತಾರೆ. ಈ ಎಲ್ಲಾ ಚಟುವಟಿಕೆಗಳು ಜನರನ್ನು ಪ್ರಕೃತಿಗೆ ಹತ್ತಿರ ತರುವ ದೃಷ್ಟಿಯಿಂದ ಮಾಡಲಾಗುತ್ತದೆ” ಎಂದು ಅನಿತಾ ಮಾಹಿತಿ ನೀಡುತ್ತಾರೆ.
ಫಾರ್ಮ್‌ನಲ್ಲಿ ಸುಸ್ಥಿರ ಮತ್ತು ಸಸ್ಯಾಹಾರಿ ಹುಟ್ಟುಹಬ್ಬದ ಪಾರ್ಟಿಗಳನ್ನು ಸಹ ಆಯೋಜಿಸಲಾಗುತ್ತದೆ. ಅಲ್ಲದೇ, "ಶೀಘ್ರದಲ್ಲೇ ಸುಸ್ಥಿರ ವಿವಾಹಗಳಿಗೆ ಅದನ್ನು ವಿಸ್ತರಿಸಲು ಯೋಜಿಸುತ್ತಿದ್ದೇವೆ.
ನಾವು ಆಯೋಜಿಸುವ ಹುಟ್ಟುಹಬ್ಬದ ಪಾರ್ಟಿಗಳು ನೈಸರ್ಗಿಕವಾಗಿ ಬೆಳೆದ ಆಹಾರದೊಂದಿಗೆ ಪ್ಲಾಸ್ಟಿಕ್ ಬಳಸದೆಯೇ ಮಾಡುತ್ತೇವೆ. ನಮ್ಮ ಜಮೀನಿನಿಂದ ಬರುವ ಹೂವುಗಳು ಮತ್ತು ಎಲೆಗಳಿಂದ ಎಲ್ಲಾ ಅಲಂಕಾರಗಳನ್ನು ಮಾಡಲಾಗುತ್ತದೆ” ಎಂದು ಕ್ರಿಸ್ಟಿನಾ ಹಂಚಿಕೊಳ್ಳುತ್ತಾರೆ.
ವಿವಿಧ ಬಗೆಯ ಹೂವಿನ ಪಾನೀಯಗಳೂ ಲಭ್ಯ!
ಇಷ್ಟಲ್ಲದೇ ಇವರ ಫಾರ್ಮ್‌ನಲ್ಲಿ ಕಾಕ್‌ಟೈಲ್ ಮಿಶ್ರಣಗಳು ಮತ್ತು ತಂಪು ಪಾನೀಯಗಳನ್ನು ಸಹ ತಯಾರಿಸಲಾಗುತ್ತದೆ. "ನಾವು ಯಾವುದೇ ಸಂರಕ್ಷಕಗಳನ್ನು ಬಳಸದೆ, ಜಮೀನಿನಲ್ಲಿ ಬೆಳೆದ ದಾಸವಾಳ, ಬಟರ್‌ಫ್ಲೈ ಬಟಾಣಿ ಹೂಗಳನ್ನು ಬಳಸಿ ಕೆಲವು ರೀತಿಯ ಹೂವಿನ ಪಾನೀಯಗಳನ್ನು ತಯಾರಿಸುತ್ತೇವೆ" ಎಂದು ಅವರು ಮಾಹಿತಿ ನೀಡುತ್ತಾರೆ.
ಅಂದಹಾಗೆ ಫಾರ್ಮ್‌ನಲ್ಲಿ, ಅತಿಥಿಗಳನ್ನು ಗಿಡಮೂಲಿಕೆ ಚಹಾಗಳು ಮತ್ತು ಹಣ್ಣಿನ ರಸಗಳೊಂದಿಗೆ ಸ್ವಾಗತಿಸಲಾಗುತ್ತದೆ ಮತ್ತು ಮಣ್ಣಿನ ಕೊಳ, ನಕ್ಷತ್ರ ನೋಡುವ ಡೆಕ್ ಮತ್ತು ಆರೋಗ್ಯಕರ ವೆಗನ್ ಊಟವನ್ನು ಆನಂದಿಸುವ ಅನುಭವವನ್ನು ನೀಡಲಾಗುತ್ತದೆ.
ಇತ್ತೀಚೆಗೆ ಫಾರ್ಮ್‌ನಲ್ಲಿ ಉಳಿದುಕೊಂಡಿರುವ ಪ್ರಂಜುಲ್ ಭದೌರಿಯಾ ಅವರು, “ನೀವು ಕೆಲಸದ ಜೀವನದಿಂದ ಪಾರಾಗಲು ಮತ್ತು ಭೂಮಿತಾಯಿಗೆ ಹತ್ತಿರವಾಗಲು ವಿರಾಮ ತೆಗೆದುಕೊಳ್ಳಲು ಬಯಸಿದರೆ, ಇದು ಪರಿಪೂರ್ಣ ಸ್ಥಳವಾಗಿದೆ. ವಾತಾವರಣ, ವೇಗನ್ ಆಹಾರ ಮತ್ತು ಫಾರ್ಮ್‌ಗಳು ಸುಂದರವಾದ, ಸ್ವರ್ಗೀಯ ಸ್ಥಳವಾಗಿದೆ” ಎಂದು ಅನುಭವ ಹಂಚಿಕೊಳ್ಳುತ್ತಾರೆ.
ಅಂದಹಾಗೆ 2021 ರಲ್ಲಿ ಅತಿಥಿಗಳಿಗಾಗಿ ತಮ್ಮ ಫಾರ್ಮ್ ಅನ್ನು ಆರಂಭಿಸಿದಾಗಿನಿಂದ ಸುಮಾರು 1,000 ಜನರಿಗೆ ಆತಿಥ್ಯ ನೀಡಿದೆ. ಫಾರ್ಮ್‌ನಲ್ಲಿ ಉಳಿಯುವ ವೆಚ್ಚವು ಊಟ ಸೇರಿದಂತೆ ಡಬಲ್ ರೂಮ್‌ಗೆ ರೂ 2,000 ರಿಂದ ಪ್ರಾರಂಭವಾಗುತ್ತದೆ ಮತ್ತು ಪ್ಯಾಕೇಜ್‌ಗೆ ಅನುಗುಣವಾಗಿ ಹೆಚ್ಚಾಗುತ್ತದೆ.
ಪ್ರಕೃತಿಯೊಂದಿಗೆ ಸಾಮರಸ್ಯದ ಬದುಕು
“ನಾವು ಎಷ್ಟು ಸಾಧ್ಯವೋ ಅಷ್ಟು ಜನರಿಗೆ ವೆಗನ್ ಆಹಾರ ಪದ್ಧತಿಯ ಬಗ್ಗೆ ಹೇಳುತ್ತೇವೆ. ಇಂದಿಗೂ ಜನರು ವೆಗನ್ ಅಥವಾ ಸಸ್ಯಜನ್ಯ ಆಹಾರವನ್ನು ವಿದೇಶಿ ಪರಿಕಲ್ಪನೆಯಾಗಿ ತೆಗೆದುಕೊಳ್ಳುತ್ತಾರೆ.
ಹೆಚ್ಚಿನ ಭಾರತೀಯ ಅಡುಗೆಗಳಲ್ಲಿ ನಾವು ತುಪ್ಪವನ್ನು ಬಳಸದೇ ಹೋದರೆ ನಮ್ಮ ಆಹಾರವು ವೆಗನ್ ಆಹಾರವಾಗುತ್ತದೆ. ನಮ್ಮ ದೋಸೆಗಳು, ಇಡ್ಲಿಗಳು ಮತ್ತು ಸಾಂಬಾರ್ ಎಲ್ಲಾ ಸಸ್ಯಮೂಲದ್ದಾಗಿದೆ” ಎಂದು ಅನಿತಾ ಹಾಗೂ ಕ್ರಿಸ್ಟಿನಾ ಅಭಿಪ್ರಾಯ ಪಡುತ್ತಾರೆ.
"ನಾವು ಪರಿಸರಕ್ಕೆ ಹಾನಿಯಾಗದಂತೆ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದು ಮುಖ್ಯ. ತಾಯಿಯಾಗಿ, ನಾನು ಇತರ ತಾಯಂದಿರು ಮತ್ತು ಜನರಿಗೆ ವೇಗನ್ ಮತ್ತು ನೈಸರ್ಗಿಕ ಆಹಾರವನ್ನು ಬೆಳೆಯುವ ಪ್ರಯೋಜನಗಳನ್ನು ಕಲಿಯಲು ಸಹಾಯ ಮಾಡಲು ಬಯಸುತ್ತೇನೆ," ಎಂದು ಅನಿತಾ ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ