ಸಮಾಜದಲ್ಲಿ ಅದೆಷ್ಟೋ ಸಾಧನೆ ಮಾಡಿದ ಅನೇಕರು ಎಲೆಮರೆಯ ಕಾಯಿಯಂತೆ ಸದ್ದಿಲ್ಲದೆ ನಮ್ಮವರಲ್ಲೊಬ್ಬರಂತೆ ಇರುತ್ತಾರೆ. ತಮ್ಮ ಪ್ರತಿಷ್ಟೆ ಹಾಗೂ ಮಹಾನ್ ಕಾರ್ಯಗಳನ್ನು ಎಲ್ಲರೂ ಮೆಚ್ಚಿ ಕೊಂಡಾಡಬೇಕು ಎಂಬುದು ಇವರ ಬಯಕೆಯಾಗಿರುವುದಿಲ್ಲ ಬದಲಿಗೆ ತಮ್ಮ ಮನಸ್ಸಿಗೆ ಇಷ್ಟವಾಗುವಂತಹ ರೀತಿಯಲ್ಲಿ ಸಾಧನೆಗೈಯುತ್ತಾರೆ. ಇದೇ ರೀತಿ ಸಾಧನೆ ಮಾಡಿದ ಕುಮಾರ್ ರಾಮ್ ನಾರಾಯಣ್ ಕಾರ್ತಿಕೇಯನ್ (Kumar Ram Narain Karthikeyan) ಜಾಗತಿಕ ಮೋಟಾರ್ ಸ್ಪೋರ್ಟ್‌ಗಳ ಫಾರ್ಮುಲಾ ಒನ್‌ನಲ್ಲಿ (Formula One) ಸ್ಪರ್ಧಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ರೇಸರ್ (Indian Racer) ಕೂಡ ಹೌದು.
ರೇಸರ್ ಆಗಿದ್ದವರು ಉದ್ಯಮಿಯಾಗಿ ಹೆಸರು ಗಳಿಸಿದರು
ಇದಕ್ಕೂ ಮೊದಲು, ಅವರು ನಿಸ್ಸಾನ್, ಆಟೋಜಿಪಿ, ಫಾರ್ಮುಲಾ ಏಷ್ಯಾ, ಬ್ರಿಟಿಷ್ ಫಾರ್ಮುಲಾ ಫೋರ್ಡ್ ಮತ್ತು ಒಪೆಲ್‌ನಿಂದ ಎ1ಜಿಪಿ, ಬ್ರಿಟಿಷ್ ಎಫ್3, ವರ್ಲ್ಡ್ ಸರಣಿಗಳಲ್ಲಿ ಅನೇಕ ರೇಸ್‌ಗಳನ್ನು ಗೆದ್ದ ಸಾಧಕರಾಗಿದ್ದರು. ಬ್ರಿಟಿಷ್ ಫಾರ್ಮುಲಾ ಫೋರ್ಡ್ ವಿಂಟರ್ ಸೀರೀಸ್ ಮತ್ತು ಫಾರ್ಮುಲಾ ಏಷ್ಯಾ ಚಾಂಪಿಯನ್‌ಶಿಪ್ ಅನ್ನು ಗೆದ್ದ ನಾರಾಯಣ್ ಅವರಿಗೆ 2010 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಶಸ್ವಿ ಉದ್ಯಮಿ ಎಂದೆನಿಸಿದ್ದ ನಾರಾಯಣ್ ಅವರು 2020 ರಲ್ಲಿ ಡ್ರೈವ್ಎಕ್ಸ್ ಎಂಬ ಕಂಪನಿಯನ್ನು ಆರಂಭಿಸಿದರು.
2022 ರಲ್ಲಿ ಆರಂಭವಾದ ಈ ಕಂಪನಿ ಬರೇ ಎರಡು ವರ್ಷಗಳಲ್ಲಿ ರೂ 178 ಕೋಟಿ ರೂಗಳ ಮಾನ್ಯತೆಯನ್ನು ಗಳಿಸಿಕೊಂಡಿದೆ. ಮೋಟಾರ್‌ಸೈಕಲ್ ತಯಾರಕರಲ್ಲಿ ಒಂದಾದ ಭಾರತದ ಟಿವಿಎಸ್ ಗ್ರೂಪ್‌ನ ಬೆಂಬಲವನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಕೇವಲ 25 ಗುಂಟೆ ಜಮೀನಲ್ಲಿ 3 ಲಕ್ಷ ಆದಾಯ ತೆಗೆಯುುವ ರೈತ! ಕಾಲಕ್ಕೆ ತಕ್ಕ ತರಕಾರಿ ಬೆಳೆದು ಮಾದರಿಯಾದ ಅನ್ನದಾತ
ರೇಸರ್ ಆಗಿದ್ದ ತಂದೆಯೇ ತಮಗೆ ಸ್ಫೂರ್ತಿ
ತಮಿಳುನಾಡಿನ ಕೊಯಂಬತ್ತೂರ್‌ನಲ್ಲಿ ಜನಿಸಿದ ನಾರಾಯಣ್ ಕಾರ್ತಿಕೇಯನ್, ಶಾಲಾ ಶಿಕ್ಷಣವನ್ನು ಸ್ಟೇನ್ಸ್ ಆಂಗ್ಲೋ ಇಂಡಿಯನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪೂರೈಸಿದರು. ಸ್ವತಃ ರೇಸರ್ ಆಗಿದ್ದ ಅವರ ತಂದೆಯೇ ತಮಗೆ ಸ್ಫೂರ್ತಿ ಎಂಬುದು ಕಾರ್ತಿಕ್ ಮಾತಾಗಿದೆ. ಇವರ ತಂದೆ ಏಳು ಬಾರಿ ದಕ್ಷಿಣದ ರ‍್ಯಾಲಿಯಲ್ಲಿ ಭಾಗವಹಿಸಿ ಗೆದ್ದಂತಹ ಕಲಿಯಾಗಿದ್ದಾರೆ. ಎಳವೆಯಲ್ಲಿಯೇ ರೇಸರ್ ಆಗಿ ತಮ್ಮ ಕನಸಿಗೆ ಇಂಬು ನೀಡಿದ ನಾರಾಯಣ್ ತಂದೆಯ ಪ್ರೇರಣೆ ಹಾಗೂ ಬೆಂಬಲದೊಂದಿಗೆ ವಿಶ್ವದಾದ್ಯಂತ ಹಲವಾರು ತಂಡಗಳನ್ನು ಮುನ್ನಡೆಸಿದ್ದಾರೆ.
ರೂ 178 ಕೋಟಿಗೇರಿದ ಸಂಸ್ಥೆಯ ಮೌಲ್ಯ
ರೇಸಿಂಗ್ ಕ್ಷೇತ್ರದಿಂದ ನಿವೃತ್ತಿ ಹೊಂದಿದ ನಂತರ ಯಶಸ್ವಿ ಉದ್ಯಮಿಯಾಗಿ ನಾರಾಯಣ್ ಇಲ್ಲೂ ತಮ್ಮ ಅದೃಷ್ಟ ಪರೀಕ್ಷೆ ಮಾಡಿ ಸೈ ಎನಿಸಿಕೊಂಡರು. 2022 ರಲ್ಲಿ, ಟಿವಿಎಸ್ ಅವರ ಕಂಪನಿಯಲ್ಲಿ 48% ಸ್ಟಾಕ್‌ಗಳನ್ನು ಸ್ವಾಧೀನಪಡಿಸಿಕೊಂಡಿತು. ಇದರಿಂದ ಕಂಪನಿಯ ಮೌಲ್ಯ ರೂ 178 ಕೋಟಿಯಾಯಿತು.
ಅವರ ಸಂಸ್ಥೆ ಡ್ರೈವ್ ಎಕ್ಸ್ ಸಬ್‌ಸ್ಕ್ರಿಪ್ಶನ್ ರೀತಿಯಲ್ಲಿ ದ್ವಿಚಕ್ರ ವಾಹನಗಳನ್ನು ಒದಗಿಸುತ್ತದೆ. ಅಂತೆಯೇ ಸಂಸ್ಥೆಯು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತದೆ. 2020-2021ರಲ್ಲಿ ಕಂಪನಿಯ ವಹಿವಾಟು 47.98 ಲಕ್ಷ ರೂಪಾಯಿ ಆಗಿದ್ದು ವಹಿವಾಟಿನ ಸಮಯದಲ್ಲಿ ಕಂಪನಿಯು ಐದು ನಗರಗಳಿಗೆ ವಿಸ್ತಾರವಾಗಿ ಇನ್ನಷ್ಟು ಹೆಸರು ಮಾಡಿತು. ಕಂಪನಿಯು ಮೋಟಾರ್ ಸೈಕಲ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತದೆ ಜೊತೆಗೆ ವಿತರಣೆಯನ್ನು ಸಹ ನಡೆಸುತ್ತದೆ.
ಟಿವಿಎಸ್ ಮೋಟಾರ್ ಕುರಿತು ಒಂದಿಷ್ಟು ಮಾಹಿತಿ
ಟಿವಿಎಸ್ ಮೋಟಾರ್ ಕಂಪನಿಯ ವಿಶ್ರಾಂತ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ವೇಣು ಶ್ರೀನಿವಾಸನ್ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಕಂಪನಿಯು ಭಾರತದಲ್ಲಿ ಮೂರು ಮತ್ತು ಇಂಡೋನೇಷ್ಯಾದಲ್ಲಿ ಒಂದು ಕಾರ್ಖಾನೆಯನ್ನು ಹೊಂದಿದೆ. ಕೋಟಿಗಟ್ಟಲೆ ಆದಾಯವನ್ನು ಕಂಪನಿ ಹೊಂದಿದೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಸುದರ್ಶನ್ ವೇಣು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಲಕ್ಷ್ಮಿ ವೇಣು ಅವರು ಮಂಡಳಿಯಲ್ಲಿ ನಿರ್ದೇಶಕರಾಗಿದ್ದಾರೆ. 1911 ರಲ್ಲಿ ಟಿವಿಎಸ್ ಗ್ರೂಪ್ ಅನ್ನು ಸ್ಥಾಪಿಸಿದ ಟಿವಿ ಸುಂದರಂ ಅಯ್ಯಂಗಾರ್ ಅವರ ಮೊಮ್ಮಗನಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ