• Home
 • »
 • News
 • »
 • business
 • »
 • Pickle Business: ಉಪ್ಪಿನಕಾಯಿ ಬ್ಯುಸಿನೆಸ್‌ನಿಂದ ಲಕ್ಷಗಟ್ಟಲೆ ಆದಾಯ; ಇಳಿವಯಸ್ಸಿನಲ್ಲೂ ಉತ್ತಮ ಸಾಧನೆ!

Pickle Business: ಉಪ್ಪಿನಕಾಯಿ ಬ್ಯುಸಿನೆಸ್‌ನಿಂದ ಲಕ್ಷಗಟ್ಟಲೆ ಆದಾಯ; ಇಳಿವಯಸ್ಸಿನಲ್ಲೂ ಉತ್ತಮ ಸಾಧನೆ!

ಉಪ್ಪಿನಕಾಯಿ ಬ್ಯುಸಿನೆಸ್

ಉಪ್ಪಿನಕಾಯಿ ಬ್ಯುಸಿನೆಸ್

ಕೇರಳದ ಶೈಲಾ ಚಾಕೋ ಕಲ್ಲಿವಯಾಲಿಲ್ ಅವರು ತಮ್ಮ ಉಪ್ಪಿನಕಾಯಿ ಮತ್ತು ಜಾಮ್‌ಗಳ ಮೂಲಕ ಈ ಬಾಲ್ಯದ ನೆನಪನ್ನು ಮೆಲುಕು ಹಾಕಿದ್ದು, ಇಳಿವಯಸ್ಸಿನಲ್ಲೂ ಸಾಧನೆ ಮಾಡಿದ್ದಾರೆ.

 • Trending Desk
 • Last Updated :
 • Karnataka, India
 • Share this:

  ಭಾರತೀಯ ಆಹಾರ ಪದ್ಧತಿಯಲ್ಲಿ ಉಪ್ಪಿನಕಾಯಿಗೆ (Pickle) ಅದರದೇ ಆದ ಮಹತ್ವವಿದೆ. ಅದರಲ್ಲೂ ದಕ್ಷಿಣ ಭಾರತೀಯರಿಗೆ (South Indians) ಆಚಾರ್‌, ಓರ್ಗೈ, ಉಪ್ಪಿನಕಾಯಿ, ಲೋಂಚ ಈ ಪದಗಳ ಜೊತೆ ವಿಶೇಷ ಅನುಬಂಧವಿರುತ್ತೆ. ಖಾರದ, ಹುಳಿ, ಸಿಹಿಯ ಕೆಲವೊಮ್ಮೆ ಇವೆಲ್ಲದರ ಮಿಶ್ರಣದ ಉಪ್ಪಿನಕಾಯಿ ಊಟಕ್ಕೆ ವಿಶೇಷ ರುಚಿ ನೀಡುತ್ತೆ. ಅದಿಲ್ಲದೇ ಊಟ ಅಪೂರ್ಣ ಅನ್ನುವ ಅನೇಕ ಮಂದಿ ಇದ್ದಾರೆ. ಒಂದು ಸರಳವಾದ ಅನ್ನ ಸಾಂಬಾರ್‌ ನ (Sambar) ಅಥವಾ ಅನ್ನ ದಾಲ್‌ ನ ರುಚಿಯನ್ನ ಇಮ್ಮಡಿಗೊಳಿಸುತ್ತೆ ಉಪ್ಪಿನಕಾಯಿ. ಜೊತೆಗೆ ಉತ್ತರ ಭಾರತದ ಕಡೆ ಮಾಡುವ ಪರಾಠಕ್ಕೆ ರುಚಿನೀಡುವುದೇ ಈ ಉಪ್ಪಿನಕಾಯಿ. ಇನ್ನೂ ಕೆಲವರಿಗೆ ಬಿಸಿ ಬಿಸಿ ಅನ್ನ (Rice) ತುಪ್ಪ ಜೊತೆಗೆ ಒಂದಿಷ್ಟು ಉಪ್ಪಿನಕಾಯಿ ನೀಡುವಂಥ ರುಚಿಯನ್ನು ಮತ್ಯಾವ ಮೃಷ್ಟಾನ್ನವೂ ನೀಡಲಾರದು.


  ಪ್ರತಿಯೊಬ್ಬರಿಗೂ ಉಪ್ಪಿನಕಾಯಿ ಇಷ್ಟವಾದರೂ ಅದರ ಹಿಂದೆ ಒಂದೊಂದು ನೆನಪಿರುತ್ತದೆ. ಅವು ಅನೇಕ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತವೆ. ಕೇರಳದ ಶೈಲಾ ಚಾಕೋ ಕಲ್ಲಿವಯಾಲಿಲ್ ಅವರು ತಮ್ಮ ಉಪ್ಪಿನಕಾಯಿ ಮತ್ತು ಜಾಮ್‌ಗಳ ಮೂಲಕ ಈ ಬಾಲ್ಯವನ್ನು ನೆನಪನ್ನು ಮೆಲುಕು ಹಾಕೋದೇ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿದ್ದಾರೆ.


  ಹೌದು, ಶೈಲಾ ಅವರು 2001 ರಲ್ಲಿ ಕೇರಳದ ಕೊಟ್ಟಾಯಂನ ಮುಂಡಕಯಂಗೆ ಶಿಫ್ಟ್‌ ಆದಾಗ ಅವರು ಸ್ವಲ್ಪ ಸಮಯವನ್ನು ಹಾಗೆಯೇ ಕಳೆಯುತ್ತಾರೆ. ಬಳಿಕ ಅಲ್ಲಿನ ವಾತಾವರಣ, ಹಸಿರಿನ ಸಿರಿ, ಜೊತೆಗೆ ಅಲ್ಲಿ ಬೆಳೆಯುವ ಬಾಳೆಹಣ್ಣು, ಪಪ್ಪಾಯ, ಪೇರಲ ಮುಂತಾದ ಹಣ್ಣುಗಳನ್ನು ನೋಡಿ ಇದರಿಂದ ಯಾಕೆ ಕೆಲವೊಂದು ಪದಾರ್ಥಗಳನ್ನು ತಯಾರಿಸಬಾರದು ಎಂದೆನಿಸುತ್ತದೆ.


  ಮುಂಡಕಯಂ ಗೆ ತೆರಳಿದ ನಂತರ, ಈ ಹಣ್ಣುಗಳು ಮತ್ತು ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ನನಗೆ ತಿಳಿಯಿತು. ಹೀಗಾಗಿ ಅವುಗಳಿಂದ ಜಾಮ್ ಮತ್ತು ಉಪ್ಪಿನಕಾಯಿ ಮಾಡಲು ಯೋಚಿಸಿದೆ. ನಾನು ಕೇರಳದಲ್ಲಿ ಜನಪ್ರಿಯವಾಗಿರುವ ಬಾಳೆಹಣ್ಣಿನ ಜಾಮ್ ಮಾಡಲು ಪ್ರಯತ್ನಿಸಿದೆ. ನಾನು ಅದನ್ನು ಬೆಂಕಿಯಲ್ಲಿ ಬೇಯಿಸುವ ಸಾಂಪ್ರದಾಯಿಕ ವಿಧಾನವನ್ನು ಬಳಸಿ ಮಾಡಿದ್ದೇನೆ, ಅದು ಹೊಗೆಯ ರುಚಿಯನ್ನು ನೀಡುತ್ತದೆ ” ಎಂದು ಶೈಲಾ ಹೇಳುತ್ತಾರೆ.


  ಆದ್ದರಿಂದ ಸುಮಾರು ಒಂದು ದಶಕದ ಹಿಂದೆ, 65 ವರ್ಷ ವಯಸ್ಸಿನ ಶೈಲಾ ತಮ್ಮ ಮೊದಲ ಬ್ಯಾಚ್ ಬಾಳೆಹಣ್ಣಿನ ಜಾಮ್ ಅನ್ನು ತೆಗೆದುಕೊಂಡು ಕೊಚ್ಚಿಯ ಕೆಲವು ಸಣ್ಣ ಅಂಗಡಿಗಳು ಮತ್ತು ಬೇಕರಿಗಳಿಗೆ ನೀಡುತ್ತಾರೆ. ಒಂದು ವಾರದ ನಂತರ ಈ ಬಗ್ಗೆ ವಿಚಾರಿಸಲು ಹೋಗುತ್ತಾರೆ. "ಅವುಗಳೆಲ್ಲವೂ ಮಾರಾಟವಾಗಿವೆ ಎಂದು ಕೇಳಿ ನಾನು ಸಂಪೂರ್ಣವಾಗಿ ರೋಮಾಂಚನಗೊಂಡೆ. ಇಷ್ಟು ಜನ ಇಷ್ಟ ಪಡುತ್ತಾರೆ ಎಂದು ನಾನೂ ನಿರೀಕ್ಷಿಸಿರಲಿಲ್ಲ’ ಎಂದು ನಗುತ್ತಾರೆ ಶೈಲಾ.


  ತಿಂಗಳಿಗೆ ಒಂದೂವರೆ ಲಕ್ಷ ಆದಾಯ


  ಇದಾದ ನಂತರ ಶೈಲಾ ಹಿಂತಿರುಗಿ ನೋಡಲೇ ಇಲ್ಲ. ಅವರು ಶೈಲಾಸ್‌ ಅಂತ ಬ್ರಾಂಡ್‌ ನೇಮ್‌ ಮಾಡಿಕೊಂಡು ಅದಕ್ಕೆ ಮತ್ತಷ್ಟು ಉತ್ಪನ್ನಗಳನ್ನು ಸೇರಿಸಿದರು. ಅವರು 14 ಕ್ಕೂ ಹೆಚ್ಚು ಉಪ್ಪಿನಕಾಯಿ ಮತ್ತು ಜಾಮ್‌ ಗಳನ್ನು ಮಾರಾಟ ಮಾಡುತ್ತಾರೆ. ವಿಶೇಷವೆಂದರೆ ಇವುಗಳಲ್ಲಿ ಸೀಫುಡ್ ಉಪ್ಪಿನಕಾಯಿಗಳು ಕೂಡ ಸೇರಿವೆ. ಸಿಗಡಿ , ಸೀರ್ ಮೀನು ಮತ್ತು ವೇಲೂರಿ ಮೀನುಗಳ ಉಪ್ಪಿನಕಾಯಿಗಳೂ ಸೇರಿವೆ. ಹೀಗಾಗಿ ಶೈಲಾ ಅವರು ತಿಂಗಳಿಗೆ ಸುಮಾರು 1.5 ಲಕ್ಷ ರೂಪಾಯಿ ಆದಾಯ ಗಳಿಸುತ್ತಾರೆ.


  ಇಷ್ಟಕ್ಕೂ ಆಶ್ಚರ್ಯ ಪಡುವಂಥ ವಿಚಾರವೆಂದರೆ ಶೈಲಾ ಅವರು ಈ ಹಿಂದೆ ಯಾವತ್ತೂ ಉಪ್ಪಿನಕಾಯಿ ಹಾಗೂ ಜಾಮ್‌ ಗಳನ್ನು ಮಾಡಿರಲೇ ಇಲ್ಲ ಅನ್ನೋದು! ನನ್ನ ಮನೆಯಲ್ಲಿ, ನನ್ನ ಅಜ್ಜಿಯಿಂದ ಹಿಡಿದು ನನ್ನ ತಾಯಿ ಮತ್ತು ಅತ್ತೆಯವರೆಗೂ ಎಲ್ಲರೂ ಅಡಿಗೆಯಲ್ಲಿ ನಿಪುಣರು. ಹಾಗಾಗಿ ಜೀವನದಲ್ಲಿ ಹಿಂದೆಂದೂ ಉಪ್ಪಿನಕಾಯಿ ಮಾಡುವಂಥ ಸಂದರ್ಭವೇ ಬಂದಿರಲಿಲ್ಲ. ಆದರೆ ಈಗ ಗಂಡನ ಪ್ರೋತ್ಸಾಹದೊಂದಿಗೆ ನನಗೆ ಸಿಕ್ಕಿರುವ ಸಮಯದಲ್ಲಿ ಬಾಳೆಹಣ್ಣಿನ ಜಾಮ್‌ ಮಾಡೋಕೆ ಸಾಧ್ಯವಾಯ್ತು ಎನ್ನುತ್ತಾರೆ ಶೈಲಾ.


  ಸಾಂಪ್ರದಾಯಿಕ ವಿಧಾನ ಬಳಕೆ


  ಅಂದಹಾಗೆ ಶೈಲಾ ಅವರ ಹೆಚ್ಚಿನ ಪಾಕವಿಧಾನಗಳು ಸಾಂಪ್ರದಾಯಿಕವಾಗಿವೆ. ಜೊತೆಗೆ ಮನೆಯ ರುಚಿಗಳನ್ನು ಹಾಗೇ ಇರಿಸಿಕೊಳ್ಳಲು ಹಳೆಯ-ಶೈಲಿಯ ವಿಧಾನಗಳನ್ನು ಬಳಸಿ ತಯಾರಿಸಲಾಗುತ್ತೆ. ಅಡುಗೆ, ಪ್ಯಾಕೇಜಿಂಗ್ ಇತ್ಯಾದಿಗಳಲ್ಲಿ ಸಹಾಯ ಮಾಡುವುದಕ್ಕಾಗಿ ನಾಲ್ಕು ಮಹಿಳೆಯರ ತಂಡವನ್ನು ಶೈಲಾ ಅವರು ಹೊಂದಿದ್ದಾರೆ.


  “ನಾವು ಬಾಲ್ಯದಲ್ಲಿ ಸೇವಿಸಿದ ರುಚಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಎಲ್ಲವನ್ನೂ ಕೈಯಾರೆ ಮಾಡಲಾಗುತ್ತದೆ. ನಾವು ಮಿಕ್ಸರ್‌ ಗಳನ್ನು ಮತ್ತು ಗ್ರೈಂಡರ್‌ ಗಳನ್ನು ಬಳಸೋದಿಲ್ಲ. ಸಾಂಪ್ರದಾಯಿಕ ವಿಧಾನಗಳು ಶ್ರಮದಾಯಕ ಮತ್ತು ಸಮಯ ತೆಗೆದುಕೊಳ್ಳುತ್ತದೆ. ಆದರೆ ಅವು ಸುವಾಸನೆ ಹಾಗೂ ರುಚಿಯನ್ನು ಹಾಗೇ ಇರಿಸಿಕೊಳ್ಳುತ್ತವೆ ” ಎಂದು ಶೈಲಾ ಹೇಳುತ್ತಾರೆ.


  ಇನ್ನು, ಹೆಚ್ಚಿನ ಉತ್ಪನ್ನವನ್ನು ಅವರ ಮನೆಯಲ್ಲಿಯೇ ಬೆಳೆಯಲಾಗುತ್ತದೆ ಎಂಬುದೂ ಗಮನಾರ್ಹ. “ನಾವು ಬದನೆ, ಬಾಳೆ, ಪೇರಲ, ಕಂದರಿ ಮೆಣಸಿನಕಾಯಿ (ಹಕ್ಕಿಯ ಕಣ್ಣಿನ ಮೆಣಸಿನಕಾಯಿ), ವಿಲುಂಬಿ ಪುಲಿ (ಬಿಲಿಂಬಿ) ಬೆಳೆಯುತ್ತೇವೆ. ಅದನ್ನು ನಮ್ಮ ಉತ್ಪನ್ನಗಳನ್ನು ತಯಾರಿಸಲು ಬಳಸುತ್ತೇವೆ. ಯಾವುದೇ ರಾಸಾಯನಿಕ ಹಾಗೂ ರಸಗೊಬ್ಬರ ಹಾಕದೇ ಅದನ್ನು ನೈಸರ್ಗಿಕವಾಗಿ ಬೆಳೆಯಲಾಗುತ್ತದೆ. ಆದ್ರೆ ನಾವು ಸುಣ್ಣವನ್ನು ಮಾತ್ರ ಖರೀದಿಸುತ್ತೇವೆ. ಏಕೆಂದರೆ ನಾವು ಅದನ್ನು ಬೆಳೆಯುವುದಿಲ್ಲ. ನಾವು ಕೃತಕ ಸಂರಕ್ಷಕಗಳು, ಸೇರ್ಪಡೆಗಳು ಅಥವಾ ಬಣ್ಣವನ್ನು ಬಳಸುವುದಿಲ್ಲ. ಹೀಗೆ ನಾವು ಬಹಳ ನಿರ್ದಿಷ್ಟವಾದ ಗುಣಮಟ್ಟ-ಪರಿಶೀಲನಾ ಪ್ರಕ್ರಿಯೆಯನ್ನು ಹೊಂದಿದ್ದೇವೆ ಎನ್ನುತ್ತಾರೆ ಶೈಲಾ.


  "ನಾನು ಗುಣಮಟ್ಟ ಮತ್ತು ಸ್ಥಿರತೆಯ ಬಗ್ಗೆ ತುಂಬಾ ನಿರ್ದಿಷ್ಟವಾಗಿದ್ದೇನೆ. ಇದು ತುಂಬಾ ಮಸಾಲೆಯುಕ್ತ ಅಥವಾ ತುಂಬಾ ಸಿಹಿ ಅಥವಾ ತುಂಬಾ ಎಣ್ಣೆಯುಕ್ತವಾಗಿರಬಾರದು. ಯಾವುದಾದರೂ ಒಂದು ಪದಾರ್ಥದ 57 ಗ್ರಾಂ ಅಗತ್ಯವಿದ್ದರೆ, ಅದು 56 ಅಥವಾ 55 ಆಗಿರಬಾರದು ಎಂಬುದರ ಬಗ್ಗೆ ನಾನು ನಿರ್ದಿಷ್ಟವಾಗಿರುವುದಾಗಿ ಶೈಲಾ ಹೇಳುತ್ತಾರೆ.


  ಆನ್‌ ಲೈನ್‌ ನಲ್ಲಿ ಶೈಲಾಸ್‌ ಉಪ್ಪಿನಕಾಯಿ ಲಭ್ಯ


  ಕೊರೋನಾ ಸಾಂಕ್ರಾಮಿಕ ರೋಗವು ಈ ಸಣ್ಣ ವ್ಯಾಪಾರಕ್ಕೆ ದೊಡ್ಡ ಸವಾಲನ್ನು ಒಡ್ಡಿತು. 2020 ರ ಮೊದಲು, ಉಪ್ಪಿನಕಾಯಿಯನ್ನು ಕೇರಳ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಸಣ್ಣ ಅಂಗಡಿಗಳ ಮೂಲಕ ಮಾರಾಟ ಮಾಡಲಾಗುತ್ತಿತ್ತು. ಆದರೆ ಕೊರೋನಾ ಬಂದಾಗ ಅಂಗಡಿಗಳು ಮುಚ್ಚುತ್ತಿದ್ದಂತೆ, ಮಾರಾಟವೂ ಸಹ ಕಡಿಮೆಯಾಯಿತು.


  “ನಾವು ಮಾರಾಟ ಮಾಡುತ್ತಿದ್ದ ಹೆಚ್ಚಿನ ಅಂಗಡಿಗಳು ಮಾರ್ಚ್ 2020 ರಲ್ಲಿ ಮುಚ್ಚಲ್ಪಟ್ಟವು.ಹಾಗಾಗಿ ಆನ್‌ಲೈನ್‌ನಲ್ಲಿ ಮಾರಾಟ ಆರಂಭಿಸಿದೆವು. ಅಲ್ಲಿ ಸಾಕಷ್ಟು ಸ್ಪರ್ಧೆಯಿದೆ. ಅಲ್ದೇ ನನ್ನ ಆನ್‌ಲೈನ್ ಉಪಸ್ಥಿತಿಯನ್ನು ನಾನು ಸುಧಾರಿಸಬೇಕಾಗಿದೆ ಎಂದು ಶೈಲಾ ಅಭಿಪ್ರಾಯ ಪಡುತ್ತಾರೆ. ಸದ್ಯಕ್ಕೆ, ಆಕೆಯ ಉತ್ಪನ್ನಗಳನ್ನು ಕೇರಳದಲ್ಲಿ ಕೆಲವು ಅಂಗಡಿಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.


  ಬಾಲ್ಯವನ್ನು ನೆನಪಿಸುವ ಶೈಲಾಸ್‌ ಉತ್ಪನ್ನ


  ಸಾಮಾನ್ಯ ಗ್ರಾಹಕರಾದ ಟೀನಾ ಹೇಳುವ ಪ್ರಕಾರ, “ನಾನು ಶೈಲಾ ಅವರ ಬಾಳೆಹಣ್ಣಿನ ಜಾಮ್ ರುಚಿ ನೋಡಿದಾಗ, ನನಗೆ ತುಂಬ ಇಷ್ಟವಾಯ್ತು. ಸುಮಾರು ಎರಡು ದಶಕಗಳ ಹಿಂದೆ ತ್ರಿಶೂರ್‌ನಲ್ಲಿರುವ ನನ್ನ ಅಜ್ಜಿಯ ಮನೆಯಲ್ಲಿ ನಾನು ಉಪ್ಪಿನಕಾಯಿ ಸೇವಿಸಿದ ನೆನಪು ತರಿಸಿತು. ಆ ಜಾಮ್‌ನ ವಿಶಿಷ್ಟತೆಯೆಂದರೆ ಅದು ಸಾಂಪ್ರದಾಯಿಕ ಕೇರಳದ ರುಚಿಯನ್ನು ಹೊಂದಿದೆ ಎಂಬುದು”.ಹೆಚ್ಚಿನ ಉಪ್ಪಿನಕಾಯಿಗಳು ಕೇರಳದ ಸಾಂಪ್ರದಾಯಿಕ ಪಾಕವಿಧಾನಗಳಾಗಿದ್ದರೆ, ಶೀಲಾ ಅವರು ಬದನೆಕಾಯಿ, ವಿನೆಗರ್‌ನಲ್ಲಿರುವ ಬೆಳ್ಳುಳ್ಳಿ ಮತ್ತು ಒಣಗಿದ ಮಾವಿನಕಾಯಿಯಂತಹ ಕೆಲವು ವಿಭಿನ್ನ ಉಪ್ಪಿನಕಾಯಿಗಳನ್ನು ಪ್ರಯತ್ನಿಸಿದ್ದಾರೆ.


  “ಕೇರಳದಲ್ಲಿ ಸಾಮಾನ್ಯವಾಗಿ ಬದನೆಯನ್ನು ಬಳಸುವುದಿಲ್ಲ. ಆದರೆ ನಾನು ಈ ಬದನೆ ಪಾಕವಿಧಾನವನ್ನು ಸ್ನೇಹಿತನಿಂದ ಪಡೆದುಕೊಂಡೆ ಮತ್ತು ಅದನ್ನು ನನ್ನ ಇಚ್ಛೆಯಂತೆ ತಿರುಚಿದೆ. ಈ ಉಪ್ಪಿನಕಾಯಿ ರುಚಿ ಕೆಲವು ವರ್ಷಗಳ ಹಿಂದೆ ಹಿಂದುಳಿದಿದ್ದರೂ, ಇದು ಇಂದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈಗ ಸಾಂಪ್ರದಾಯಿಕವಲ್ಲದ ಉಪ್ಪಿನಕಾಯಿಗಳು ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ” ಎಂದು ಶೀಲಾ ಹೇಳುತ್ತಾರೆ.


  ಗ್ರಾಹಕರಿಂದ ಪ್ರೀತಿ ಮತ್ತು ಪ್ರತಿ ಉತ್ಪನ್ನದೊಂದಿಗೆ ಅವರು ತಮ್ಮ ಬಾಲ್ಯದ ಸಂತೋಷದ ನೆನಪುಗಳನ್ನು ನೆನಪಿಸಿಕೊಳ್ಳುವಾಗ ಅವರು ಅವರ ಮುಖದಲ್ಲಿ ನಗು ತರಬಹುದು ಎಂಬ ಅಂಶವೇ ಶೈಲಾರನ್ನು ಈ ವ್ಯಾಪಾರದಲ್ಲಿ ಮುಂದುವರಿಯುವಂತೆ ಮಾಡಿದೆ. ಒಟ್ಟಾರೆ, ಇಳಿವಯಸ್ಸಿನಲ್ಲೂ ಅವರ ಉತ್ಪಾಹ ಅನೇಕರಿಗೆ ಸ್ಪೂರ್ತಿಯಾಗುತ್ತದೆ.

  Published by:ಪಾವನ ಎಚ್ ಎಸ್
  First published: