ಕೆಲವೊಮ್ಮೆ ನಾವು ನಮ್ಮ ಸ್ನೇಹಿತರೊಂದಿಗೆ ಅಥವಾ ಮನೆಯವರೊಂದಿಗೆ ಊಟಕ್ಕೆ ಅಂತ ದೊಡ್ಡ ಹೊಟೇಲ್ (Hotel) ಅಥವಾ ರೆಸ್ಟೋರೆಂಟ್ ಗೆ ಹೋದಾಗ ನಾವು ಅವಸರದಲ್ಲಿ ಮೆನು ನೋಡದೆ ಆಹಾರ ಪದಾರ್ಥಗಳನ್ನು ಆರ್ಡರ್ (Order) ಮಾಡಿರುತ್ತೇವೆ. ಆದರೆ ಊಟ ಮುಗಿದ ನಂತರ ಕೊನೆಯಲ್ಲಿ ಬರುವ ಬಿಲ್ ಅನ್ನು ನೋಡಿ ನಮಗೆ ‘ಇಷ್ಟೊಂದು ಬಿಲ್ ಆಗಿದೆಯೇ’ ಅಂತ ಆಶ್ಚರ್ಯವಾಗಿರುತ್ತದೆ. ಎಂದರೆ ಬಿಲ್ ನಲ್ಲಿ ಅದು ಇದು ಅಂತ ಏನೇನೋ ಶುಲ್ಕಗಳನ್ನು ಸೇರಿಸಿ ಬಿಲ್ (Hotel Bill) ಇನ್ನಷ್ಟು ದುಬಾರಿಯಾಗಿರುತ್ತದೆ ಅಂತ ಹೇಳಬಹುದು. ಇನ್ನೂ ಕೆಲವೊಂದು ಸಂದರ್ಭದಲ್ಲಿ ಹೊಟೇಲ್ ನವರು ಮಾಡುವ ತಪ್ಪುಗಳಿಂದ ಅಥವಾ ಹಣದ ವಹಿವಾಟು ನಡೆಸುವ ಯಂತ್ರಗಳಲ್ಲಾಗುವ ಸಮಸ್ಯೆಯಿಂದಲೂ ಈ ರೀತಿ ಆಗುತ್ತವೆ. ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ.
ದಂಪತಿಗಳು ಆರ್ಡರ್ ಮಾಡಿದ 2 ಕಪ್ ಕಾಫಿಗೆ ಬ್ಯಾಂಕ್ ಖಾತೆ ಖಾಲಿ ಮಾಡಿಕೊಂಡಿದ್ದಾರೆ..
ಅಮೆರಿಕದ ದಂಪತಿಗಳಾದ ಜೆಸ್ಸಿ ಮತ್ತು ಡೀಡಿ ಒಡೆಲ್ ಅವರು ಇತ್ತೀಚೆಗೆ ತಮ್ಮ ನೆರೆಹೊರೆಯಲ್ಲಿರುವ ಸ್ಟಾರ್‌ಬಕ್ಸ್ ನಲ್ಲಿ ಎರಡು ಕಪ್ ಕಾಫಿಗೆ 4,000 ಡಾಲರ್ ಎಂದರೆ ಭಾರತೀಯ ಬೆಲೆಯಲ್ಲಿ 3,66,915 ರೂಪಾಯಿಗಿಂತಲೂ ಹೆಚ್ಚು ಬಿಲ್ ಪಡೆದಿದ್ದಾರೆ. ಸಿಬಿಎಸ್ ನ್ಯೂಸ್ ಪ್ರಕಾರ, ಕಾರ್ಡ್ ನಲ್ಲಿ ತುಂಬಾನೇ ಹಣ ಖಾಲಿಯಾಗಿರುವುದನ್ನು ನೋಡಿದಾಗ ಈ ದಂಪತಿಗಳಿಗೆ ಇದರ ಬಗ್ಗೆ ಮತ್ತೊಂದು ಶಾಪಿಂಗ್ ಮಾಡುವ ಸಮಯದಲ್ಲಿ ಗಮನಕ್ಕೆ ಬಂದಿದೆ.
"ಸಾಮಾನ್ಯವಾಗಿ ನಾವು ಕಳೆದ 16 ವರ್ಷಗಳಿಂದ ಪ್ರತಿದಿನವೂ ಹೀಗೆ ಕಾಫಿ ಕುಡಿಯುತ್ತೇವೆ. ನಾವು 10 ಡಾಲರ್ ಬೆಲೆಯ ಕಾಫಿಯನ್ನು ಕುಡಿಯುತ್ತೇವೆ" ಎಂದು ಜೆಸ್ಸಿ ಹೇಳಿದರು.
"ನಾನು ಐಸ್ಡ್ ಅಮೇರಿಕಾನೊವನ್ನು ಆರ್ಡರ್ ಮಾಡಿದ್ದೇನೆ ಮತ್ತು ನನ್ನ ಹೆಂಡತಿ ಯಾವಾಗಲೂ ಹೆಚ್ಚುವರಿ ಶಾಟ್ ನೊಂದಿಗೆ ವೆಂಟಿ ಕ್ಯಾರಮೆಲ್ ಫ್ರಾಪ್ಪುಸಿನೊವನ್ನು ಆರ್ಡರ್ ಮಾಡಿದ್ದಳು. ಇದು ಸಾಮಾನ್ಯವಾಗಿ ಸುಮಾರು 9 ರಿಂದ 10 ಡಾಲರ್ ಬಿಲ್ ಆಗುತ್ತದೆ” ಎಂದು ಜೆಸ್ಸಿ ಹೇಳಿದರು.
ಇದನ್ನೂ ಓದಿ: ChatGPT ರಚಿಸಿದ ಭಾರತೀಯ ಮಹಿಳೆ! ಇವರ ಹಿನ್ನಲೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ
ಮಕ್ಕಳನ್ನು ಶಾಪಿಂಗ್ ಗೆ ಕರೆದುಕೊಂಡು ಹೋದಾಗ ಇದರ ಬಗ್ಗೆ ಗಮನಕ್ಕೆ ಬಂದಿದೆ..
ಕೆಲವು ದಿನಗಳ ನಂತರ, ಜೆಸ್ಸಿಯ ಪತ್ನಿ ಡೀಡಿ ಮಕ್ಕಳನ್ನು ಶಾಪಿಂಗ್ ಗೆ ಕರೆದೊಯ್ದಳು. ಅವಳು ಅದೇ ಕಾರ್ಡ್ ನೊಂದಿಗೆ ವಹಿವಾಟು ಮಾಡಲು ಪ್ರಯತ್ನಿಸಿದಳು, ಆದರೆ ಕಡಿಮೆ ಬ್ಯಾಲೆನ್ಸ್ ಇರುವುದರಿಂದ ಆ ವಹಿವಾಟನ್ನು ನಿರಾಕರಿಸಲಾಯಿತು.
"ನಾನು ಅದನ್ನು ಮತ್ತೆ ಪ್ರಯತ್ನಿಸಿದೆ, ಏಕೆಂದರೆ ನನ್ನ ಖಾತೆಯಲ್ಲಿ ಹಣವಿದೆ ಎಂದು ನನಗೆ ತಿಳಿದಿತ್ತು" ಎಂದು ಡೀಡಿ ಹೇಳಿದರು. "ಈ ಕಾರ್ಡ್ ಗೆ ಏನಾಗಿದೆ ಅಂತ ಮತ್ತೆ ಮತ್ತೆ ಹಾಗೆ ವಹಿವಾಟು ಮಾಡಲು ನೋಡಿದೆ, ಆದರೆ ಖಾತೆಯಲ್ಲಿ ಅಷ್ಟೊಂದು ಹಣವಿಲ್ಲ ಅಂತಾನೆ ಮೆಸೇಜ್ ಬಂತು.
ಅದು ನನಗೆ ತುಂಬಾನೇ ಮುಜುಗರದ ಸಂಗತಿಯಾಗಿತ್ತು. ಆದ್ದರಿಂದ ನಾನು ಅಂಗಡಿಯಿಂದ ಹೊರ ಬಂದು ಮನೆಗೆ ಹಿಂತಿರುಗಿದೆ ಮತ್ತು ನಾನು ನನ್ನ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದೆ" ಎಂದು ಹೇಳಿದರು.
"ಖಾತೆಯಲ್ಲಿರುವ ಹಣ ಹೇಗೆ ಖಾಲಿ ಆಯಿತು ಅನ್ನೋದು ನನಗೆ ನಿಜವಾಗಿಯೂ ಒಂದು ದೊಡ್ಡ ಆಘಾತವಾಗಿತ್ತು. ನಂತರ ನನ್ನ ಗಂಡ ಜೆಸ್ಸಿಗೆ ಈ ವಿಷಯ ತಿಳಿಸಿದೆ, ನಾವಿಬ್ಬರೂ ಬ್ಯಾಂಕ್ ಖಾತೆಯ ವಹಿವಾಟನ್ನು ಸರಿಯಾಗಿ ಪರಿಶೀಲಿಸಿದ ನಂತರ, ಸ್ಟಾರ್‌ಬಕ್ಸ್ ನಿಂದ 4,444.44 ಡಾಲರ್ ಎಂದರೆ 3,66,915 ರೂಪಾಯಿ ಶುಲ್ಕ ವಿಧಿಸಲಾಗಿದೆ ಎಂದು ಕಂಡುಕೊಂಡೆವು” ಎಂದು ಹೇಳಿದರು.
ನಂತರ ಇದರ ಬಗ್ಗೆ ಸ್ಟಾರ್‌ಬಕ್ಸ್ ವ್ಯವಸ್ಥಾಪಕರಲ್ಲಿ ವಿಚಾರಿಸಿದ ಜೆಸ್ಸಿ
ಜೆಸ್ಸಿ ಸ್ಟಾರ್‌ಬಕ್ಸ್ ವ್ಯವಸ್ಥಾಪಕರೊಂದಿಗೆ ಈ ವಿಷಯದ ಬಗ್ಗೆ ವಿಚಾರಿಸಿದರು. "ಅವರು ತಮ್ಮ ನೆಟ್ವರ್ಕ್ ನೊಂದಿಗೆ ಸಮಸ್ಯೆ ಹೊಂದಿದ್ದಾರೆ ಎಂದು ಅವರು ನನಗೆ ಹೇಳಿದರು.
ಯಂತ್ರದಲ್ಲಿ ಸಂಖ್ಯೆಗಳನ್ನು ಟೈಪ್ ಮಾಡುವಾಗ ಅವು ಅಂಟಿಕೊಳ್ಳುವ ಬಟನ್ ಸಮಸ್ಯೆ ಸಹ ಇದೆ ಎಂದು ನಾನು ಕೇಳಲ್ಪಟ್ಟೆ" ಎಂದು ಜೆಸ್ಸಿ ಹೇಳಿದರು.
ಸ್ಟಾರ್‌ಬಕ್ಸ್ ಪ್ರತಿನಿಧಿಯ ಪ್ರಕಾರ, ಸಂಸ್ಥೆಗೆ ಈ ವಿಷಯದ ಬಗ್ಗೆ ತಿಳಿದಿದೆ ಮತ್ತು ಘಟನೆಯಲ್ಲಿ ಏನೋ ತಾಂತ್ರಿಕ ಸಮಸ್ಯೆ ಆಗಿರಬಹುದೆಂದು ಭಾವಿಸಲಾಗಿದೆ. ಆದಾಗ್ಯೂ, ಸ್ಟಾರ್‌ಬಕ್ಸ್ ನಂತರ ತೆಗೆದುಕೊಂಡ ಹೆಚ್ಚುವರಿ ಹಣಕ್ಕೆ ಪರಿಹಾರವಾಗಿ ಒಟ್ಟು 4,444.44 ಮೊತ್ತಕ್ಕೆ ಎರಡು ಪ್ರತ್ಯೇಕ ಚೆಕ್ ಗಳನ್ನು ಅವರಿಗೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ