• Home
  • »
  • News
  • »
  • business
  • »
  • Business Idea: ಮಣ್ಣಿಲ್ಲದೇ ಮಶ್ರೂಮ್‌ ಕೃಷಿ ಮಾಡಿ ಯಶಸ್ಸು ಕಂಡ 21 ವರ್ಷದ ವಿದ್ಯಾರ್ಥಿ

Business Idea: ಮಣ್ಣಿಲ್ಲದೇ ಮಶ್ರೂಮ್‌ ಕೃಷಿ ಮಾಡಿ ಯಶಸ್ಸು ಕಂಡ 21 ವರ್ಷದ ವಿದ್ಯಾರ್ಥಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Soil-Less Mushroom Farm: ತಮ್ಮ ಆಸಕ್ತಿಯ ಕ್ಷೇತ್ರದಲ್ಲೇ ಓದಿ ಅದರಲ್ಲೇ ಪ್ರಯೋಗ ಮಾಡಿ, ಯಶಸ್ವಿಯೂ ಆಗಿರುವ ಯಶ್‌ರಾಜ್‌ ನಮ್ಮಲ್ಲಿ ಅನೇಕರಿಗೆ ಸ್ಪೂರ್ತಿಯಾಗುತ್ತಾರೆ.

  • Share this:

ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ (Field) ಕೆಲವರಿಗೆ ಅತಿಯಾದ ಆಸಕ್ತಿ ಇರುತ್ತದೆ. ಅಂಥವರೇ ಹೆಚ್ಚಿನ ಸಂಶೋಧನೆಗಳನ್ನು(Research)  ಮಾಡೋದು, ಪ್ರಯೋಗಗಳನ್ನು ಮಾಡೋದು, ಹಾಗೇ ವಿಶೇಷವಾದದ್ದೇನೋ ಸಾಧಿಸುತ್ತಾರೆ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡುತ್ತಾರೆ. ಯಾರೂ ಅಂದುಕೊಳ್ಳದ್ದನ್ನು ಮಾಡಿ ತೋರಿಸುತ್ತಾರೆ. ತಮ್ಮ ಆಸಕ್ತಿಯ ಬೆನ್ನೇರಿ ಹೋದ ಯಶ್‌ರಾಜ್‌ (Yash Raj)  ಎಂಬುವವರು ಕೃಷಿಯಲ್ಲಿ ಸಾಧನೆ ಮಾಡಿ ಈಗ ಯಶಸ್ವಿ ಯುವ ಉದ್ಯಮಿ ಎನಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ (Uttar Pradesh) ಕೋಟಾ ನಿವಾಸಿಯಾದ ಯಶ್‌ರಾಜ್‌ ಸಾಹು ಅವರಿಗೆ ಕೃಷಿಯಲ್ಲಿ ತುಂಬಾನೇ ಆಸಕ್ತಿ. ಹೀಗಾಗಿ ಅವರು ತಮ್ಮ ಶಾಲಾ ದಿನಗಳಲ್ಲಿ ಅವರದೇ ಗ್ರಾಮದ ರೈತರೊಬ್ಬರಿಂದ ಅಣಬೆ ಕೃಷಿಯ ಬಗ್ಗೆ ತಿಳಿದುಕೊಂಡರು. ಅವರು ಅಣಬೆ ಕೃಷಿಯನ್ನು ಹತ್ತಿರದಿಂದ ನೋಡಿ ಕಲಿಯಲು ಆರಂಭಿಸಿದರು. ಇದರಿಂದ ಅವರ ಆಸಕ್ತಿ ಹಾಗೂ ಕುತೂಹಲ ಎರಡೂ ಹೆಚ್ಚಾಯ್ತು. ಆಗಲೇ ಅವರು ತಾವು ದೊಡ್ಡ ಪ್ರಮಾಣದ ಅಣಬೆ ಕೃಷಿಕರಾಗಲು ನಿರ್ಧರಿಸಿದರು.


ಅವರು ಕೇವಲ ಅಂದುಕೊಂಡಿದ್ದು ಮಾತ್ರವಲ್ಲ. ಹಾಗೆಯೇ ತಮ್ಮ ಕನಸನ್ನು ನನಸು ಮಾಡಿಕೊಂಡರು ಕೂಡ. ಯಶ್‌ರಾಜ್‌, ತಮ್ಮ ಹೈಯರ್ ಸೆಕೆಂಡರಿ ತರಗತಿಯಲ್ಲಿ ಕೃಷಿ ವಿಷಯವನ್ನೇ ಆಯ್ಕೆ ಮಾಡಿಕೊಂಡು, ಇದೀಗ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಯಾಗಿದ್ದಾರೆ. ತನ್ನ ಅಧ್ಯಯನ ಪೂರ್ಣಗೊಳ್ಳುವ ಮುನ್ನವೇ ಯಶ್‌ರಾಜ್‌, ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.


ಅಂದಹಾಗೆ ಇವರ ಪೋಷಕರು ದಿನಗೂಲಿ ಕಾರ್ಮಿಕರಾಗಿದ್ದಾರೆ. ಹೀಗೆ ಬಡತನದಿಂದ ಬಂದಿರುವ ಯಶ್‌ರಾಜ್‌, ತಮ್ಮದೇ ವ್ಯಾಪಾರ ಆರಂಭಿಸಲು ಹಾಗೂ ಅದರಲ್ಲಿ ಯಶಸ್ವಿಯಾಗುವ ಬಗ್ಗೆ ಕನಸಿಟ್ಟುಕೊಂಡಿದ್ದಾರೆ. 21 ವರ್ಷದ ಯಶ್‌ರಾಜ್‌ ಸ್ನೇಹಿತರಾದ ರಾಹುಲ್‌ ಹಾಗೂ ಮೀನಾ ಜೊತೆಗೂಡಿ ಈಗಾಗಲೇ ಆಗ್ರೋ ಸ್ಟೆಪ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಿದ್ದಾರೆ. ಅಂದಹಾಗೆ ಇದು ಸಿಂಪಿ ಅಣಬೆಗಳನ್ನು ಮಾರಾಟ ಮಾಡುವ ಕಂಪನಿಯಾಗಿದೆ.


ಮಶ್ರೂಮ್ ಫಾರ್ಮ್ ರಚಿಸಿದ್ದು ಹೇಗೆ?


ಅಂದಹಾಗೆ ಕಾಲೇಜಿಗೆ ಹೋಗುತ್ತಲೇ ಯಶ್‌ರಾಜ್‌ ಮಶ್ರೂಮ್‌ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಕಾಲೇಜು ಸಮಯ ಮುಗಿದ ಬಳಿಕ ಕೃಷಿ ಕೆಲಸ ಮಾಡುತ್ತೇನೆ ಎನ್ನುವ ಯಶ್‌ರಾಜ್‌, “ನಾನು ಮೊದಲು 625 ಚದರ ಅಡಿ ಪ್ಲಾಟ್‌ನಲ್ಲಿ ಫಾರ್ಮ್ ಅನ್ನು ನಿರ್ಮಿಸಿದೆ. ಬಿದಿರು, ಹಸಿರು ಬಲೆ ಮತ್ತು ಕಪ್ಪು ಪಾಲಿಥಿನ್‌ಗಳನ್ನು ಹಾಕಿರುವ ಚೀಲಗಳನ್ನು ತಯಾರಿಸಿದೆ. ಇದರಲ್ಲಿ ಅಣಬೆ ಬೀಜಗಳನ್ನು ಬಿತ್ತಿ ನೇತು ಹಾಕಿದೆ. ಈ ಫಾರ್ಮ್ ಅನ್ನು ಸಿದ್ಧಪಡಿಸಲು ನನಗೆ ಸುಮಾರು ಒಂದು ತಿಂಗಳು ಬೇಕಾಯ್ತು. ನಂತರ ಸತತವಾಗಿ 10 ದಿನಗಳ ಕಾಲ ರಾತ್ರಿ 9 ಗಂಟೆಯಿಂದ 1 ಗಂಟೆಯವರೆಗೆ ಕುಳಿತು ಸುಮಾರು 500 ಚೀಲಗಳನ್ನು ಕಟ್ಟಿರುವುದಾಗಿ ಹೇಳುತ್ತಾರೆ.


ಒಂದು ಗುಂಪಿನ ಅಣಬೆಗಳು ಮಾರಾಟಕ್ಕೆ ಸಿದ್ಧವಾಗಲು ಸುಮಾರು 45 ರಿಂದ 60 ದಿನಗಳು ಬೇಕು. ಅಲ್ಲದೇ ಒಳ್ಳೆಯ ಗ್ರಾಹಕರನ್ನು ಪಡೆಯುವ ಹಾಗೂ ಸಂಪರ್ಕವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಇವರು ಬೇರೆ ರೈತರಿಂದ ಕೂಡ ಅಣಬೆಗಳನ್ನು ಖರೀದಿಸಿದ್ದಾಗಿ ಹೇಳುತ್ತಾರೆ.


ಕಾಲೇಜು ಸೇರಿದ ನಂತರ ಅಣಬೆ ಕೃಷಿಯನ್ನು ಗಂಭೀರವಾಗಿ ತೆಗೆದುಕೊಂಡೆ ಎನ್ನುವ ಯಶ್‌ರಾಜ್‌, ಡೆಹ್ರಾಡೂನ್‌ನ ಕೃಷಿ ವಿದ್ಯಾಲಯದಿಂದ ಒಂದು ತಿಂಗಳ ಕೋರ್ಸ್ ಕೂಡ ಮಾಡಿರುವುದಾಗಿ ಹೇಳುತ್ತಾರೆ.


ನಂತರ 2018 ರಲ್ಲಿ 50 ಚೀಲಗಳಲ್ಲಿ ಅಣಬೆಗಳನ್ನು ಬೆಳೆಯಲು ಪ್ರಯತ್ನಿಸಿದೆ. ನಾನು ಈ ಚೀಲಗಳಿಂದ ಸುಮಾರು 80 ಕೆಜಿ ಉತ್ಪನ್ನಗಳನ್ನು ಕೊಯ್ಲು ಮಾಡಿದ್ದೇನೆ. ಅದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು ಎಂಬುದಾಗಿ ಅವರು ವಿವರಿಸುತ್ತಾರೆ. ಮೊದಲ ಪ್ರಯೋಗದಿಂದ ಪಡೆದ 80 ಕೆಜಿ ಅಣಬೆಯನ್ನು ಕೆಜಿಗೆ 100 ರೂ.ಗೆ ಮಾರಾಟ ಮಾಡಿದರೂ, ಸಾಂಕ್ರಾಮಿಕ ಕೋವಿಡ್‌ ರೋಗದಿಂದಾಗಿ ಯಶ್‌ರಾಜ್‌ ಮುಂದಿನ ಎರಡು ವರ್ಷಗಳವರೆಗೆ ಕೃಷಿಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.


ಮಣ್ಣಿಲ್ಲದೇ ಅಣಬೆ ಬೆಳೆಯುವ ಹೊಸ ವಿಧಾನ


ಕೋವಿಡ್‌ ಅವಧಿಯಲ್ಲಿ ಕೋಟಾದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ಸಂಪರ್ಕದಲ್ಲಿದ್ದೆ. ಅವರು ಮಣ್ಣಿನ ಬಳಕೆಯಿಲ್ಲದೆ ಅಣಬೆಗಳನ್ನು ಬೆಳೆಯುವ ಹೊಸ ವಿಧಾನವನ್ನು ಹೇಳಿಕೊಟ್ಟರು. ಜನವರಿ 2022 ರಲ್ಲಿ ಮತ್ತೆ ನನ್ನ 500 ಚೀಲದೊಂದಿಗೆ ಕೃಷಿಯನ್ನು ಪುನಃ ಆರಂಭಿಸಿದೆ. ಈ ವಿಧಾನದಿಂದ ಮಾಡಿದ ಕೃಷಿಯಿಂದ ನಾನು ಉತ್ತಮ ಫಸಲು ಪಡೆದಿದ್ದು, 80,000 ರೂ.ಗಿಂತ ಹೆಚ್ಚು ಗಳಿಸಿದ್ದೇನೆ ಎಂದು ಯಶ್‌ರಾಜ್ ಹೇಳಿಕೊಳ್ಳುತ್ತಾರೆ.


ಯಶ್‌ ರಾಜ್, ತಾಜಾ ಸಿಂಪಿ ಅಣಬೆಗಳನ್ನು ಕೆಜಿಗೆ 100–150 ರೂ.ಗೆ ಮಾರಾಟ ಮಾಡುತ್ತಾರೆ. ಆದರೆ ಅದೇ ಅಣಬೆಯನ್ನು ಪುಡಿ ರೂಪದಲ್ಲಿ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಬರುತ್ತದೆ. ಇದನ್ನು ಜನರು ಕೆಜಿಗೆ 1,500–2,000 ರೂ.ಗೆ ಖರೀದಿಸುತ್ತಾರೆ.


“10 ಕೆಜಿ ಅಣಬೆ ಪುಡಿಯನ್ನು ತಯಾರಿಸಲು, 100 ಕೆಜಿ ತಾಜಾ ಸಿಂಪಿ ಮಶ್ರೂಮ್ ಅಗತ್ಯವಿದೆ. ಇದೇ ಕಾರಣಕ್ಕೆ ಬೆಲೆ ಹೆಚ್ಚು. ನಾನು 500 ಸಾಗುವಳಿ ಚೀಲಗಳಿಂದ 60 ದಿನಗಳಲ್ಲಿ, 1 ಲಕ್ಷದವರೆಗೆ ಗಳಿಸಲು ಸಾಧ್ಯವಾಯಿತು‌ ಎಂಬುದಾಗಿಯೂ ಯಶ್‌ರಾಜ್‌ ಹೇಳುತ್ತಾರೆ.


ತಮ್ಮ ಯಶಸ್ಸಿನ ಹಿಂದಿರುವ ಸ್ನೇಹಿತರನ್ನು ನೆನೆಯುವ ಯಶ್‌ರಾಜ್‌, 24 ವರ್ಷದ ರಾಹುಲ್ ಕೂಡ ಈ ಅಣಬೆಗಳ ಬ್ಯಾಚ್ ಅನ್ನು ಸ್ಥಾಪಿಸಲು ಸಹಾಯ ಮಾಡಿದರು ಎಂಬುದಾಗಿ ಹೇಳುತ್ತಾರೆ. “ನಮ್ಮಲ್ಲಿ ಯಾರಾದರೂ ಒಬ್ಬರು ಯಾವಾಗಲೂ ಫಾರ್ಮ್‌ನಲ್ಲಿ ಉತ್ಪನ್ನಗಳ ಅಗತ್ಯತೆಗಳು ಮತ್ತು ಬೆಳವಣಿಗೆಯನ್ನು ನೋಡಿಕೊಳ್ಳುತ್ತೇವೆ. ಒಂದೇ ಚೀಲದಿಂದ ನಾವು 700 ಗ್ರಾಂ ಅಣಬೆಯನ್ನು ಇಳುವರಿ ಮಾಡಲು ಇದು ಒಂದು ಕಾರಣವಾಗಿರಬಹುದು. ಸಾಮಾನ್ಯವಾಗಿ, ಇದರ ಪ್ರಮಾಣವು ಎಂದಿಗೂ 400 ಗ್ರಾಂ ಗಿಂತ ಹೆಚ್ಚು ಹೋಗುವುದಿಲ್ಲ. ಆದ್ರೆ ನಾವು 700 ಗ್ರಾಂ ಇಳುವರಿ ಪಡೆಯುತ್ತಿರುವುದನ್ನು ನೋಡಿದರೆ ನಮಗೇ ಆಶ್ಚರ್ಯ ಹಾಗೂ ಸಂತೋಷ ಎರಡೂ ಆಗುತ್ತದೆ ಎಂಬುದಾಗಿ ಅವರು ಹೇಳುತ್ತಾರೆ.


ಇದನ್ನೂ ಓದಿ: ಮತ್ತೆ ಟ್ವಿಟರ್​ಗೆ ಮರಳುತ್ತಾರಾ ಟ್ರಂಪ್​? ಈ ಕುರಿತು ಏನಂದ್ರು ಎಲಾನ್ ಮಸ್ಕ್?


ಅಣಬೆಗಳನ್ನು ಬೆಳೆಯುವುದು ಹೇಗೆ?


“1000 ಕೆಜಿ ಸಿಂಪಿ ಅಣಬೆಗಳನ್ನು ಬೆಳೆಸಲು ಕನಿಷ್ಠ 500 ಚೀಲಗಳನ್ನು ಸಿದ್ಧಪಡಿಸಬೇಕು. ಈ ಚೀಲಗಳನ್ನು ತಯಾರಿಸಲು 600 ಕೆಜಿ ಹುಲ್ಲು, 100 ಕೆಜಿ ಬೀಜ, 200 ರೂ. ಮೌಲ್ಯದ ಕಪ್ಪು ಪಾಲಿಥಿನ್ ಮತ್ತು 800 ರೂ. ಮೌಲ್ಯದ ಹಗ್ಗದ ಅಗತ್ಯವಿರುತ್ತದೆ. ಬಿದಿರಿನ ರಚನೆಗಳನ್ನು ತಯಾರಿಸಲಾಗುತ್ತದೆ ಮತ್ತು ಸೂರ್ಯನ ಬೆಳಕು ರಚನೆಯನ್ನು ಪ್ರವೇಶಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಇದು ಅಣಬೆಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ, ಎಂದು ಯುವ ಕೃಷಿಕ ವಿವರಿಸುತ್ತಾರೆ.


ಹೀಗೆ ತಯಾರಿಸಲಾದ ಚೀಲಗಳನ್ನು 18 ದಿನಗಳವರೆಗೆ ಸೂರ್ಯನ ಬೆಳಕಿನಿಂದ ದೂರವಿಡಬೇಕು. ಈ ಅವಧಿಯಲ್ಲಿ ನೀರು ಹಾಕುವುದು ಕೂಡ ಅಗತ್ಯವಿಲ್ಲ. 18 ದಿನಗಳ ನಂತರ, ನಾವು ನೀರನ್ನು ಸಿಂಪಡಿಸಲು ಪ್ರಾರಂಭಿಸಬಹುದು ಮತ್ತು ಇದನ್ನು 45-60 ದಿನಗಳವರೆಗೆ ಮುಂದುವರಿಸಬೇಕು. ವಾರ್ಷಿಕವಾಗಿ, ಗರಿಷ್ಠ ಏಳು ಸುತ್ತಿನ ಕೃಷಿಯನ್ನು ಈ ರೀತಿ ಮಾಡಬಹುದು ಎಂಬುದಾಗಿ ಯಶ್‌ರಾಜ್‌ ವಿವರಿಸುತ್ತಾರೆ.


ಮಾರಾಟಕ್ಕೆ ಸಹಾಯ ಮಾಡಿದ ಯುಟ್ಯೂಬ್‌ ವಿಡಿಯೋ


ಆರಂಭದಲ್ಲಿ ತಮ್ಮ ಉತ್ಪನ್ನಗಳಿಗೆ ಖರೀದಿದಾರರನ್ನು ಹುಡುಕೋದಕ್ಕೆ ಯಶ್‌ರಾಜ್‌ ಸ್ವಲ್ಪ ಕಷ್ಟ ಪಟ್ಟರು ಅನ್ನೋದು ನಿಜ. ಆದ್ರೆ ಯೂಟ್ಯೂಬ್, ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವನ ಸಂಸ್ಥಾನದ ನೆರವಿನಿಂದ ಅವರು ಬೆಳೆದ ಅಣಬೆಗೆ ಸಾಕಷ್ಟು ಬೇಡಿಕೆ ಬಂದಿದೆ ಎನ್ನುತ್ತಾರೆ.


"ನಾವು ನಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಣಬೆ ಕೃಷಿ ಮತ್ತು ಕೊಯ್ಲಿನ ಬಗ್ಗೆ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತೇವೆ. ಇದು ಅಣಬೆ ಮಾರಾಟಕ್ಕೆ ಸಾಕಷ್ಟು ಸಹಾಯ ಮಾಡಿದೆ" ಎಂಬುದಾಗಿ ಅವರು ಹೇಳುತ್ತಾರೆ. ಇನ್ನು ತಾಜಾ ಅಣಬೆ ಉಪ್ಪಿನಕಾಯಿ, ಪಾಪಡ್, ಕ್ಯಾಪ್ಸುಲ್ ಮತ್ತು ಬಿಸ್ಕತ್ತುಗಳಂತಹ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟದ ಮೂಲಕ ಯಶ್‌ರಾಜ್‌ ಉತ್ತಮ ಆದಾಯವನ್ನೂ ಸಹ ಗಳಿಸುತ್ತಿದ್ದಾರೆ.


“ತಮ್ಮ ಕುಟುಂಬದಲ್ಲಿ ಯಾರೂ ಕೃಷಿಕರಲ್ಲ. ಜೊತೆಗೆ ಉದ್ಯಮಿಗಳೂ ಯಾರಿಲ್ಲ. ಹಾಗಾಗಿ ಈ ಕ್ಷೇತ್ರಕ್ಕೆ ಕಾಲಿಡಲು ನಾವು ಹಿಂದೇಟು ಹಾಕಿದ್ದೆವು. ಆದ್ರೆ ಇದೀಗ ನಮ್ಮ ಕಂಪನಿಯು ಒಂದು ಮಟ್ಟಕ್ಕೆ ಅಭಿವೃದ್ಧಿ ಕಂಡಿದ್ದು ಸಾಕಷ್ಟು ಆದಾಯವನ್ನೂ ಕಾಣುತ್ತಿದೆ. ಹೀಗಾಗಿ ನಮ್ಮ ಕುಟುಂಬಸ್ಥರು ಖುಷಿಯಾಗಿದ್ದಾರೆ”. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಣಬೆಗಳನ್ನು ಬೆಳೆಯಲು ಯೋಜಿಸಿರುವುದಾಗಿ ಹಂಚುಕೊಳ್ಳುತ್ತಾರೆ ಯುವ ಉದ್ಯಮಿ ಯಶ್‌ರಾಜ್‌.‌


ಇದನ್ನೂ ಓದಿ: ITR ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ಗಡುವು; ತಾಂತ್ರಿಕ ಜ್ಞಾನ ಇಲ್ಲದವರಿಗೂ ಈ ಸೌಲಭ್ಯದಿಂದ ಅನುಕೂಲ!


ಒಟ್ಟಾರೆ, ತಮ್ಮ ಆಸಕ್ತಿಯ ಕ್ಷೇತ್ರದಲ್ಲೇ ಓದಿ ಅದರಲ್ಲೇ ಪ್ರಯೋಗ ಮಾಡಿ, ಯಶಸ್ವಿಯೂ ಆಗಿರುವ ಯಶ್‌ರಾಜ್‌ ನಮ್ಮಲ್ಲಿ ಅನೇಕರಿಗೆ ಸ್ಪೂರ್ತಿಯಾಗುತ್ತಾರೆ. ಮಶ್ರೂಮ್‌ ಕೃಷಿಯಲ್ಲಿ ಅವರ ಕಠಿಣ ಶ್ರಮ, ಆತ್ಮವಿಶ್ವಾಸ ಹಾಗೂ ಬುದ್ದಿವಂತಿಕೆಯೇ ಅವರನ್ನು ಎತ್ತರಕ್ಕೆ ಕೊಂಡೊಯ್ದಿದೆ ಎನ್ನುವುದು ಸುಳ್ಳಲ್ಲ.

Published by:Sandhya M
First published: