ಹೊಸವರ್ಷ 2023 ಸಾಕಷ್ಟು ಐಟಿ ಉದ್ಯೋಗಿಗಳಿಗೆ (IT Employees) ಒಳ್ಳೆಯ ಆರಂಭವಾಗಿಲ್ಲ. ಏಕೆಂದರೆ ತಂತ್ರಜ್ಞಾನ ಕ್ಷೇತ್ರವು ಜಾಗತಿಕವಾಗಿ (Global Tech Industry) ಸಾಮೂಹಿಕ ಉದ್ಯೋಗ ಕಡಿತ (Layoffs) ಅನುಭವಿಸುತ್ತಿದೆ. ದೊಡ್ಡ ದೊಡ್ಡ ಕಂಪನಿಗಳು ನೂರಾರು, ಸಾವಿರಾರು ಉದ್ಯೋಗಿಗಳನ್ನು ರಾತ್ರೋ ರಾತ್ರಿ ಮನೆಗೆ ಕಳುಹಿಸುತ್ತಿವೆ. ವರದಿಯೊಂದರ ಪ್ರಕಾರ ಹೊಸ ವರ್ಷದ ಮೊದಲ 15 ದಿನಗಳಲ್ಲಿ ಇದುವರೆಗೆ 91 ಕಂಪನಿಗಳು 24,000 ಟೆಕ್ ಉದ್ಯೋಗಿಗಳನ್ನು ವಜಾಗೊಳಿಸಿವೆ.
ಅನೇಕ ವರದಿಗಳು ಮುಂದೆ ಕೆಟ್ಟ ದಿನಗಳನ್ನು ಸೂಚಿಸುತ್ತಿವೆ. ಭಾರತದಲ್ಲಿಯೂ ಸಹ, ದೊಡ್ಡ ಇಂಟರ್ನೆಟ್ ಕಂಪನಿಗಳು ವೆಚ್ಚವನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿವೆ. ಇದರ ಭಾಗವಾಗಿ ಹೆಚ್ಚುವರಿ ಉದ್ಯೋಗ ಕಡಿತ ಮಾಡಲು ಯೋಜಿಸುತ್ತಿವೆ.
ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿತದ ಪರ್ವ
ಭಾರತದಲ್ಲಿನ ಅನೇಕ ಸ್ಟಾರ್ಟ್ಅಪ್ಗಳು ಉದ್ಯೋಗಗಳನ್ನು ಕಡಿತಗೊಳಿಸಿವೆ. ಓಲಾ ಈಗಾಗಲೇ 200 ಉದ್ಯೋಗಿಗಳನ್ನು ವಜಾಗೊಳಿಸಿದೆ. ಧ್ವನಿ ಸ್ವಯಂಚಾಲಿತ ಸ್ಟಾರ್ಟ್ಅಪ್ Skit.ai ನಂತಹ ಕಂಪನಿಗಳು ಕೂಡ ಇದೇ ದಾರಿಯಲ್ಲಿ ಸಾಗಿವೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಸುಮಾರು 17,000ಕ್ಕೂ ಹೆಚ್ಚು ಟೆಕ್ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆ. ಅಮೆಜಾನ್ ಇಂಡಿಯಾ ಸುಮಾರು 1000 ಉದ್ಯೋಗಿಗಳನ್ನು ಕಡಿತಗೊಳಿಸಿದೆ. ಅಲ್ಲದೇ ಜಾಗತಿಕವಾಗಿ ಅಮೆಜಾನ್ನಿಂದ ವಜಾಗೊಳಿಸುವ ಸಂಖ್ಯೆ 18,000 ಆಗಿದೆ.
ಗೋಲ್ಮನ್ ಸ್ಯಾಕ್ಸ್ ಕೂಡ ಜಾಗತಿಕವಾಗಿ 3,200 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಹೇಳಲಾಗುತ್ತಿದೆ. ಭಾರತದ ಅನೇಕ ಕಂಪನಿಗಳಲ್ಲೂ ವಜಾಗೊಳಿಸುವಿಕೆ ನಡೆದಿದ್ದರೂ ಅದರ ಬಗ್ಗೆ ಸ್ಪಷ್ಟವಾದ ಅಂಕಿ ಅಂಶಗಳು ಬೆಳಕಿಗೆ ಬಂದಿಲ್ಲ. ರಿಲಯನ್ಸ್ ರಿಟೇಲ್ ಬೆಂಬಲಿತ ಡುಂಜೊ ಕಳೆದ ವಾರ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ. ಅಲ್ಲದೇ ವೆಚ್ಚಗಳನ್ನೂ ಕಡಿತಗೊಳಿಸಲಾಗುತ್ತಿದೆ.
ಇದನ್ನೂ ಓದಿ: Job Market 2023: ಸಾಲು ಸಾಲು ಉದ್ಯೋಗಿಗಳ ವಜಾ ಮಧ್ಯೆ ಹೊಸ ಕೆಲಸ ಸಿಗಬೇಕೆಂದರೆ 5 ಸಲಹೆಗಳನ್ನು ಪಾಲಿಸಿ
ಅಲ್ಲದೇ ಕಂಪನಿಯ ಬೇರೆ ಬೇರೆ ವಿಭಾಗಗಳಲ್ಲಿ ಕನಿಷ್ಠ 60-80 ಉದ್ಯೋಗಗಳನ್ನು ಕಡಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ರೆಬೆಲ್ ಫುಡ್ಸ್, ಕ್ಲೌಡ್ ಕಿಚನ್, ಬೆಹ್ರೂಜ್ ಬಿರಿಯಾನಿ, ಓವನ್ ಸ್ಟೋರಿ ಮುಂತಾದವುಗಳಲ್ಲಿಯೂ ಉದ್ಯೋಗ ಕಡಿತ ಮಾಡಲಾಗಿದೆ. ಇಷ್ಟಲ್ಲದೇ ಕ್ಯಾಶ್ಫ್ರೀ, ಮೊಗ್ಲಿಕ್ಸ್ ಮುಂತಾದ ಸ್ಟಾರ್ಟಪ್ಗಳು ಕೂಡ ಹೊಸ ವರ್ಷದ ಹೊಸ್ತಿಲಲ್ಲೇ ಉದ್ಯೋಗಿಗಳನ್ನು ವಜಾಗೊಳಿಸಿವೆ.
ಜಗತ್ತಿನೆಲ್ಲೆಡೆ ನಡೆಯುತ್ತಿದೆ ಉದ್ಯೋಗ ಕಡಿತ
ಲೇಆಫ್ ಟ್ರ್ಯಾಕಿಂಗ್ ವೆಬ್ಸೈಟ್ Layoffs.fyi ಪ್ರಕಾರ, ಮೆಟಾ, ಟ್ವಿಟ್ಟರ್, ಒರಾಕಲ್, ನ್ವಿಡಿಯಾ, ಸ್ನಾಪ್, ಉಬರ್, ಸ್ಪೋಟಿಫೈ, ಇಂಟೆಲ್, ಸೇಲ್ಸ್ಫೋರ್ಸ್ ನಂಥ ದೈತ್ಯ ಕಂಪನಿಗಳು 2022 ರಲ್ಲಿ ಸರಿಸುಮಾರು 153,110 ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ.
ಉದ್ಯೋಗಿಗಳನ್ನು ಸಾಮೂಹಿಕ ವಜಾಗೊಳಿಸುತ್ತಿರುವ ಕಂಪನಿಗಳ ಸಾಲಿಗೆ ಅಗ್ರಿಟೆಕ್ ಸ್ಟಾರ್ಟ್ಅಪ್ಗಳು ಕೂಡ ಸೇರಿಕೊಂಡಿವೆ. ಗ್ರಾಮೋಫೋನ್ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಸುಮಾರು 75 ಉದ್ಯೋಗಿಗಳನ್ನು ಕೈಬಿಟ್ಟಿತು. ಕ್ಯಾಪ್ಟನ್ ಫ್ರೆಶ್ ಮತ್ತು ಭಾರತ್ ಅಗ್ರಿ ಕೂಡ ಉದ್ಯೋಗಿಗಳನ್ನು ವಜಾ ಮಾಡಿದ್ದಾರೆ.
ಗೂಗಲ್ನಲ್ಲೂ ನಡೆಯಲಿದೆ ಉದ್ಯೋಗ ಕಡಿತ?
ಗೂಗಲ್ ಜಗತ್ತಿನ ಬಹುದೊಡ್ಡ ಟೆಕ್ ಕಂಪನಿಯಾಗಿದ್ದು, 2023 ರ ಆರಂಭದಲ್ಲಿ ತನ್ನ ಹೆಡ್ಕೌಂಟ್ ಅನ್ನು ಕಡಿಮೆ ಮಾಡಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಹುದು ಎನ್ನಲಾಗಿದೆ. ಸರಿಸುಮಾರು 6 ಪ್ರತಿಶತದಷ್ಟು ಗೂಗಲ್ ಉದ್ಯೋಗಿಗಳನ್ನು "ಸಾಕಷ್ಟು ಪ್ರಭಾವವನ್ನು ಹೊಂದಿಲ್ಲ" ಎಂದು ವಜಾಗೊಳಿಸಬಹುದು ಎಂದು ದಿ ಇನ್ಫಾರ್ಮೇಶನ್ನ ವರದಿ ಹೇಳಿದೆ.
2023ರಲ್ಲಿ ಗೂಗಲ್ ವಜಾಗೊಳಿಸುವಿಕೆಯಿಂದ 11,000 ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಬಹುದು ಎನ್ನಲಾಗಿದೆ. ಅಂದಹಾಗೆ ಈ ತಿಂಗಳ ಕೊನೆಯಲ್ಲಿ ಹೊರಬೀಳಲಿರುವ ಬಿಗ್ ಟೆಕ್ ತ್ರೈಮಾಸಿಕ ಫಲಿತಾಂಶಗಳ ಮೇಲೆ ಈಗ ಎಲ್ಲರ ದೃಷ್ಟಿ ನೆಟ್ಟಿದೆ.
ಒಟ್ಟಾರೆ ಒಳ್ಳೆಯ ಸಂಬಳ ತೆಗೆದುಕೊಂಡು, ಒಂದು ಲೈಫ್ಸ್ಟೈಲ್ಗೆ ಸೆಟ್ ಆಗಿ, ಸಾಕಷ್ಟು ಕಮಿಟ್ಮೆಂಟ್ನ ಹೊಂದಿರುವ ಸಾಕಷ್ಟು ಐಟಿ ಉದ್ಯೋಗಿಗಳ ಎದೆಯಲ್ಲಿ ಢವಢವ ಆರಂಭವಾಗಿರುವುದಂತೂ ಸತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ