ಹೆಚ್ಚಿನ ಹೊಸ ವ್ಯಾಪಾರಸ್ಥರು (New Business People) ತಮ್ಮ ವ್ಯಾಪಾರ ಅಥವಾ ಉದ್ಯಮದಲ್ಲಿ ಕೆಲವು ಹಂತದಲ್ಲಿ ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಾರೆ. ಆರಂಭದಲ್ಲಿ ಅವರು ನಿರೀಕ್ಷಿಸಿದಂತೆ ನಗದು ಹೇರಳವಾಗಿ ಹರಿದುಬರುವುದಿಲ್ಲ. ಇದು ಸಾಮಾನ್ಯ. ಇಂತ ಸಮಯದಲ್ಲಿ ಉದ್ದಿಮೆದಾರರು ನೇರ ಕಾರ್ಯಾಚರಣೆಗಳ ಮೇಲೆ ಗಮನ ಕೇಂದ್ರೀಕರಿಸಬೇಕು. ಜೊತೆಗೆ ದೃಢವಾದ ಬಜೆಟ್‌ಗೆ (Budget) ಅಂಟಿಕೊಳ್ಳಬೇಕು. ಈ ಕ್ರಮಗಳನ್ನು ತೆಗೆದುಕೊಂಡ ನಂತರವೂ, ಉದ್ದಿಮೆದಾರರು ತಮ್ಮ ವ್ಯವಹಾರವನ್ನು ಮುಂದುವರಿಸಲು ಸಾಕಷ್ಟು ಹಣವನ್ನು ಹೊಂದಿರುವ ಬಗ್ಗೆ ಚಿಂತಿತರಾಗುತ್ತಾರೆ. ಬಹಳಷ್ಟು ಬ್ಯುಸಿನೆಸ್‌ಗಳಲ್ಲಿ (Business) ಇದು ಸಂಭವಿಸುತ್ತದೆ.
ಇಂಥ ಸಮಸ್ಯೆಗಳು ಬಂದಾಗ ಏನು ಮಾಡಬೇಕು... ಯಾವುದರ ಬಗ್ಗೆ ನಮ್ಮ ಲಕ್ಷ್ಯವಿರಬೇಕು ಎಂಬುದರ ಬಗ್ಗೆ ಈ ಕ್ಷೇತ್ರದಲ್ಲಿನ ತಜ್ಞರು ಕೆಲವಷ್ಟು ಸಲಹೆ ನೀಡಿದ್ದಾರೆ.
1. ಹಣವು ನಿಮಗೆ ಏನನ್ನು ನೀಡಬಲ್ಲದು ಎಂಬುದನ್ನು ಯೋಚಿಸಿ: ಈ ಕ್ಷಣದಲ್ಲಿ ನೀವು ನಿಮ್ಮ ವ್ಯವಹಾರದಲ್ಲಿ ಹಣದ ಸ್ಥಿತಿಯನ್ನು ಬದಲಿಸಲು ಸಾಧ್ಯವಿಲ್ಲದೇ ಹೋದರೂ ನಿಮ್ಮ ವ್ಯವಹಾರದಲ್ಲಿ ಸಾಕಷ್ಟು ಹಣ ಬಂದರೆ ನಿಮಗೆ ಹೇಗೆ ಭಾಸವಾಗುತ್ತದೆ ಎಂಬುದನ್ನು ಯೋಚಿಸಿ. ಅಲ್ಲದೇ ನಿಮ್ಮ ದೃಷ್ಟಿಯಲ್ಲಿ ಹಣವು ಏನನ್ನು ಪ್ರತಿನಿಧಿಸುತ್ತದೆ ಎಂಬುದನ್ನು ನಿಮಗೆ ನೀವೇ ಕೇಳಿಕೊಳ್ಳಿ. ಉದಾಹರಣೆಗೆ, ಸ್ವಾತಂತ್ರ್ಯ, ಆಯ್ಕೆ, ಹೆಚ್ಚಿನ ಖರ್ಚು ಮಾಡುವ ಶಕ್ತಿ ಅಥವಾ ವಿಶ್ರಾಂತಿ ಹೀಗೆ. ನೀವು ಈ ರೀತಿಯಲ್ಲಿ ಗಮನಹರಿಸಿದಾಗ ಚಿಂತೆ ಇರುವುದಿಲ್ಲ ಎಂಬುದಾಗಿ ಕ್ರಿಸ್ಟಿನ್ ಮೆಯೆರ್ ಕೋಚಿಂಗ್‌ನ ಕ್ರಿಸ್ಟಿನ್ ಮೆಯೆರ್ ಅವರು ಹೇಳುತ್ತಾರೆ.
2. ಫಲಿತಾಂಶಗಳನ್ನು ಪಡೆಯುವ ಮಾರ್ಗದ ಮೇಲೆ ಗಮನ ಹರಿಸಿ: ಯಶಸ್ಸಿನ ರಹಸ್ಯವು ಎಂದಿಗೂ ಫಲಿತಾಂಶಗಳ ಮೇಲೆ ಕೇಂದ್ರೀಕರಿಸುವುದಿಲ್ಲ. ಬದಲಿಗೆ ಅದನ್ನು ಪಡೆಯುವ ಮಾರ್ಗದ ಮೇಲೆ ನಿಮ್ಮ ಗಮನವಿರಲಿ. ನೀವು ಮಾರಾಟ ಮಾಡುವ ಸಾಧ್ಯತೆ ಹೆಚ್ಚು ಎಂದು ಖಚಿತಪಡಿಸಿಕೊಳ್ಳಲು ಬಯಸುವಿರಾದರೆ ಗ್ರಾಹಕರ ಅನುಭವ ಕೇಳಿ ತಿಳಿದುಕೊಳ್ಳಿ. ನಿಮ್ಮ ಉತ್ಪನ್ನಗಳ ಬಗ್ಗೆ ತಿಳಿದುಕೊಳ್ಳಲು ಬಯಸುವಿರಾದರೆ, ಗ್ರಾಹಕರು ಅಭಿಪ್ರಾಯಗಳನ್ನು ಕೇಳಿ ಅದಕ್ಕೆ ಅನುಗುಣವಾಗಿ ಉತ್ಪನ್ನವನ್ನು ತಯಾರಿಸಿ. ಗ್ರಾಹಕರ ಫೀಡ್‌ಬ್ಯಾಕ್ ಸರಿಯಾಗಿ ಪಡೆಯುವತ್ತ ಗಮನಹರಿಸಿದರೆ ಹಣವು ನಿಮ್ಮನ್ನು ಅನುಸರಿಸುತ್ತದೆ ಎಂಬುದಾಗಿ ಕ್ರಿಸ್ಟನ್ ಕೋಚಿಂಗ್ ಮತ್ತು ಕನ್ಸಲ್ಟಿಂಗ್ LLCಯ ಲಿಸಾ ಕ್ರಿಸ್ಟನ್ ಅವರು ಸಲಹೆ ನೀಡುತ್ತಾರೆ.
3. ಯಾವುದೇ ಕೆಲಸವನ್ನು ಸರಿಯಾಗಿ ಮಾಡುವುದರ ಮೇಲೆ ಗಮನ ಕೇಂದ್ರೀಕರಿಸಿ: ಸಂಬಂಧಗಳನ್ನು ನಿರ್ಮಿಸಿ ಮತ್ತು ನಿಮ್ಮ ಬ್ರ್ಯಾಂಡ್ ಅನ್ನು ಸ್ಥಾಪಿಸಿ. ನೀವು ಎಷ್ಟು ಹೆಚ್ಚು ನೀಡುತ್ತೀರೋ ಅಷ್ಟು ಪ್ರತಿಯಾಗಿ ನೀವು ಅಷ್ಟೇ ಪಡೆಯುತ್ತೀರಿ ಎಂಬುದನ್ನು ನೆನಪಿಡಿ. ಹೊಸ ವ್ಯವಹಾರದಲ್ಲಿ, ಹಣದ ಕೊರತೆ ಸಾಮಾನ್ಯವಾಗಿರುತ್ತದೆ. ಆದರೆ ನಿಮ್ಮದೇ ಆದ ಸ್ವಂತ ಉದ್ದಿಮೆ ಆರಂಭಿಸುವ ಮೊದಲು ಪೂರ್ಣ ವರ್ಷಕ್ಕೆ ಸಾಕಾಗುವಷ್ಟು ಉಳಿತಾಯ ಮಾಡುವುದು ನನ್ನ ಶಿಫಾರಸು ಎಂಬುದಾಗಿ ಜೇ ಗಾರ್ಸಿಯಾ, ಜೇ ಗಾರ್ಸಿಯಾ ಗ್ರೂಪ್ ಅಭಿಪ್ರಾಯ ಪಡುತ್ತಾರೆ.
4. ಬಜೆಟ್ ಮತ್ತು ನಗದು ಹರಿವಿನ ನಿರ್ವಹಣೆಯನ್ನು ಅರ್ಥಮಾಡಿಕೊಳ್ಳಿ: ಯಾವುದೇ ವ್ಯವಹಾರಕ್ಕೆ ಹಣವೇ ಜೀವಾಳ. ಹೊಸ ವ್ಯಾಪಾರವನ್ನು ನಡೆಸುವುದು ಮತ್ತು ಅದರ ಅತ್ಯಂತ ಆತಂಕಕಾರಿ ಅಂಶವೆಂದರೆ ವ್ಯವಹಾರಕ್ಕಾಗಿ ಸಾಕಷ್ಟು ಹಣವನ್ನು ಹೊಂದಿರುವುದು. ಅದಕ್ಕಾಗಿ ಬ್ಯುಸಿನೆಸ್‌ನ ಬಗ್ಗೆ ಸರಿಯಾದ ಬಜೆಟ್ ಮತ್ತು ಹಣದ ಸರಿಯಾದ ನಿರ್ವಹಣೆಯ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ವೆಚ್ಚವನ್ನು ಕಡಿತಗೊಳಿಸುವುದು ಮತ್ತು ಹಣಕಾಸಿನ ಆಯ್ಕೆಗಳನ್ನು ಹುಡುಕುವುದು ಮುಖ್ಯ ಎಂಬುದಾಗಿ ಬ್ರೇಕ್ ಫ್ರೀ ಅಕಾಡೆಮಿಯ ರಯಾನ್ ಸ್ಟೀವ್ಮನ್ ಅವರು ಹೇಳುತ್ತಾರೆ.
5. ನಿಮ್ಮ ಕನಿಷ್ಠ ಲಾಭವನ್ನು ಹೊಂದಿಸಿ: ಪ್ರತಿಯೊಂದು ಡೀಲ್‌ನಲ್ಲಿನ ಒಟ್ಟು ಲಾಭವನ್ನು ಎಚ್ಚರಿಕೆಯಿಂದ ಲೆಕ್ಕಾಚಾರ ಮಾಡಿ. ನಿಮ್ಮ ಕನಿಷ್ಟ ಲಾಭವನ್ನು ಹೊಂದಿಸಿ. ನೀವು ಆದಾಯವನ್ನು ತರುತ್ತಿದ್ದೀರಿ ಎಂದ ಮಾತ್ರಕ್ಕೆ ನೀವು ಹಣವನ್ನು ಗಳಿಸುತ್ತಿದ್ದೀರಿ ಎಂದರ್ಥವಲ್ಲ. ಪ್ರತಿಯೊಂದು ವ್ಯವಹಾರವು ನಿಜವಾಗಿಯೂ ಹಣವನ್ನು ಗಳಿಸುತ್ತಿದೆ ಎಂಬುದನ್ನು ನೀವು ಖಚಿತಪಡಿಸಿಕೊಂಡಲ್ಲಿ ಮಾತ್ರ ನೀವು ಸರಿಯಾದ ಕೆಲಸವನ್ನು ಮಾಡುತ್ತಿದ್ದೀರಿ ಎಂದುಕೊಳ್ಳಬಹುದು ಎಂಬುದಾಗಿ ಗ್ಲೆನ್ ಗ್ರಾಂಟ್, ಸೆಲ್ಫ್‌ಅಸೆಂಬಲ್ಡ್ ವೆಂಚರ್ಸ್ ಹೇಳುತ್ತಾರೆ.
6. ವೆಚ್ಚ ಮತ್ತು ಹೂಡಿಕೆ ಮಧ್ಯದ ವ್ಯತ್ಯಾಸ ಗುರುತಿಸಿ: ವ್ಯವಹಾರದಲ್ಲಿನ ಹೂಡಿಕೆಗಳ ಹಾಗೂ ವ್ಯಾಪಾರ ವೆಚ್ಚಗಳನ್ನು ಪ್ರತ್ಯೇಕಿಸುವದನ್ನು ಕಲಿಯಿರಿ. ಏಕೆಂದರೆ ಕೆಲವೊಮ್ಮೆ ವ್ಯಾಪಾರದ ವೆಚ್ಚಗಳು ಹೆಚ್ಚಾದಾಗ ನಿಮಗೆ ಆತಂಕವಾಗಬಹುದು. ಆದರೆ ಇದರಿಂದ ನೀವು ಅಲ್ಲಿ ಏಕೆ ಹೂಡಿಕೆ ಮಾಡುತ್ತಿದ್ದೀರಿ ಎಂಬುದನನು ನೆನಪಿಸಿಕೊಳ್ಳಬಹುದು. ಇದರಿಂದ ನೀವು ನಿರಾಳರಾಗಬಹುದು ಎಂಬುದಾಗಿ ಶಮಿಲಾ ಎಂ. ಲಿಮಿಟೆಡ್‌ನ ಶಮಿಲಾ ಮೆಹೆರ್ಬನ್ ಅಭಿಪ್ರಾಯ ಪಡುತ್ತಾರೆ.
7. ನಿಮ್ಮ ಎಲ್ಲಾ ಸಂಪನ್ಮೂಲಗಳನ್ನು ಬುದ್ಧಿವಂತಿಕೆಯಿಂದ ನಿಯಂತ್ರಿಸಿ: ನಿಮ್ಮ ವ್ಯವಹಾರದಲ್ಲಿ ಲಾಭ ಪಡೆಯಲು ನೀವು ನಾಲ್ಕು ಸಂಪನ್ಮೂಲಗಳನ್ನು ಹೊಂದಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳಿ: ಹಣ, ತಂತ್ರಜ್ಞಾನ, ಕೆಲಸಗಾರರು ಮತ್ತು ಸಮಯ. ನಿಮ್ಮ ಸಮಯವನ್ನು ಲೆಕ್ಕಹಾಕುವುದು ನಿಮ್ಮ ಖರ್ಚುಗಳನ್ನು ಲೆಕ್ಕ ಹಾಕುವುದರಷ್ಟೇ ಮುಖ್ಯವಾಗಿದೆ. ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದು ನಿಮ್ಮ ಸಮಯವನ್ನು ಹೆಚ್ಚು ಬುದ್ಧಿವಂತಿಕೆಯಿಂದ ಕಳೆಯಲು ಸಹಾಯ ಮಾಡುತ್ತದೆ ಎಂಬುದಾಗಿ ಶೆರ್ರೆ ಡೆಮಾವೊ, ಬಿಜ್‌ಗ್ರೋತ್ ಇಂಕ್ ಅಭಿಪ್ರಾಯ ಪಡುತ್ತಾರೆ.
8. ಚಿಂತೆಗಳನ್ನು ಆಕ್ಷನ್ ಆಗಿ ಬದಲಾಯಿಸಿ: ವ್ಯವಹಾರದಲ್ಲಿ ಯಾವ ವೆಚ್ಚಗಳನ್ನು ತಪ್ಪಿಸಬಹುದು ಎಂಬುದಾಗಿ ನೋಡಿಕೊಳ್ಳಿ. ಹಾಗೆ ತಪ್ಪಿಸುವಾಗ ಆದಾಯ ಮತ್ತು ಗ್ರಾಹಕರ ನೆಲೆಯನ್ನು ಹೆಚ್ಚಿಸುವ ಮಾರ್ಕೆಟಿಂಗ್ ಯೋಜನೆಯನ್ನು ರಚಿಸಿ. ಅಲ್ಲದೆ, ಹಣದ ಕೊರತೆಯ ಪರಿಣಾಮವನ್ನು ನಿವಾರಿಸಲು ನೀವು ಒಂದಿಷ್ಟು ಹಣವನ್ನು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂಬುದಾಗಿ EZ37 ಸೊಲ್ಯೂಷನ್‌ನ ಅಡೋರಾ ಅಯೋಡೆ ಹೇಳುತ್ತಾರೆ.
9. ಮೂಲ ಕಾರಣವನ್ನು ತಿಳಿದುಕೊಳ್ಳಿ: ಹಣದ ಸಮಸ್ಯೆ ಏಕೆ ಕಾಡುತ್ತಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿ. ನಿಮ್ಮ ಉತ್ಪನ್ನ ಸಾಕಷ್ಟು ಮಾರಾಟವಾಗಿಲ್ಲವೇ? ಸಾಕಷ್ಟು ಲಾಭವಿಲ್ಲವೇ? ಅಥವಾ ನಿಮ್ಮ ಖಾತೆಗಳಲ್ಲಿ ಸಾಕಷ್ಟು ಹಣವಿಲ್ಲವೇ? ಎಂಬುದರ ಬಗ್ಗೆ ಯೋಚಿಸಿ. ಪ್ರತಿ ಬಾರಿಯೂ ನಿಮ್ಮ ಲಾಭದ ಶೇಕಡಾವಾರು ಪ್ರಮಾಣವನ್ನು ತೆಗೆದುಕೊಂಡು ಅವುಗಳನ್ನು ತುರ್ತು ಖಾತೆಯಲ್ಲಿ ಇರಿಸಿ. ಇದು ಭವಿಷ್ಯದಲ್ಲಿ ನಿಮಗೆ ಭದ್ರತೆ ನೀಡುತ್ತದೆ ಎಂಬುದಾಗಿ ಕ್ರಿಮುಲೇನ್ ಡಾಟ್ ಒಆರ್‌ಜಿ ಯ ಕ್ರಿಸ್ಟೋಫರ್ ಮುಲ್ಲೆನ್ ಅಭಿಪ್ರಾಯ ಪಡುತ್ತಾರೆ.
10. ಆರ್ಥಿಕವಾಗಿ ಬುದ್ಧಿವಂತರಾಗಿರಿ: ಆರ್ಥಿಕವಾಗಿ ಬುದ್ಧಿವಂತರಾಗಿರುವುದರಿಂದ ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಏನನ್ನು ಪಡೆಯಬೇಕು ಮತ್ತು ಅದಕ್ಕೆ ಬೇಕಾದ ಹಣವನ್ನು ಆಯಕಟ್ಟಿನ ಮತ್ತು ತಂತ್ರಗಾರಿಕೆಯಿಂದ ಯೋಜಿಸಿ. ಅದರ ನಂತರ, ನಿಮ್ಮ ನಗದು ಹರಿವಿನ ಅಗತ್ಯಗಳಿಗೆ ಆದ್ಯತೆ ನೀಡಿ ಮತ್ತು ಸಮಯವನ್ನು ನೀಡಿ. ಆತಂಕವು ಅಜ್ಞಾತದಿಂದ ಬರುತ್ತದೆ ಎಂಬುದನ್ನು ನೆನಪಿಡಿ ಎಂದು ಪ್ರೇರಣಾ ಅಡ್ವೈಸರಿಯ ಅರ್ಥಿ ರಾಬಿಕ್ರಿಸನ್ ಹೇಳುತ್ತಾರೆ.
11. ಮಾಸ್ ಮಾರ್ಕೆಟ್ ಪ್ರೊಡಕ್ಟ್ ತಯಾರಿಸಿ: ಯಾವುದೇ ವ್ಯವಹಾರವು ನಡೆಯಲು ಆದಾಯವು ಮುಖ್ಯವಾಗಿದೆ. ಹಣದ ಬಗ್ಗೆ ಕಡಿಮೆ ಚಿಂತಿಸುವ ಒಂದು ಮಾರ್ಗವೆಂದರೆ, ವಿಶೇಷವಾಗಿ ಪ್ರೀಮಿಯಂ ಕ್ಲೈಂಟ್‌ಗಳಿಗೆ ಸೇವೆ ಸಲ್ಲಿಸುವಂಥ ವ್ಯಾಪಾರ ಮಾಡುವುದು ಎನ್ನಬಹುದು. ಅದಕ್ಕಾಗಿ ಸ್ಥಿರವಾದ ಆದಾಯವನ್ನು ತರುವ ಸಮೂಹ-ಮಾರುಕಟ್ಟೆ ಉತ್ಪನ್ನವನ್ನು ತಯಾರಿಸುವುದು ಅತ್ಯುತ್ತಮ. ಇದರಿಂದ ಹಣದ ಹರಿವು ಸಾಧ್ಯವಾಗುತ್ತದೆ ಎಂಬುದಾಗಿ ತಜ್ಞರು ಅಭಿಪ್ರಾಯ ಪಡುತ್ತಾರೆ.
12. ನಿಮ್ಮ ಹಣವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿ: "ನನ್ನ ಬಳಿ ಇರುವ ಹಣವನ್ನು ಹೆಚ್ಚು ಪರಿಣಾಮಕಾರಿಯಾಗಿ ಹೇಗೆ ಬಳಸಬಹುದು?" ಎಂದು ನಿಮ್ಮನ್ನು ಕೇಳಿಕೊಳ್ಳಿ. ಇದಕ್ಕಾಗಿ ನೀವು ಮಾಡಬಹುದಾದ ಕಾರ್ಯಗಳನ್ನು ಗುರುತಿಸಿ. ನೀವು ಕಾರ್ಯರೂಪಕ್ಕೆ ತರಬಹುದಾದ ಯೋಜನೆಗಳನ್ನು ಗುರುತಿಸಿ. ಕಾರ್ಯತಂತ್ರದ ಕೆಲಸದ ಮೇಲೆ ಕೇಂದ್ರೀಕರಿಸಲು ನಿಮ್ಮ ಸಮಯವನ್ನು ವಿನಿಯೋಗಿಸಿ. ಅನೇಕ ವ್ಯಾಪಾರಸ್ಥರು ದಕ್ಷತೆ ಮತ್ತು ಕಾರ್ಯತಂತ್ರದ ಮೇಲೆ ಕೇಂದ್ರೀಕರಿಸಬೇಕಾದಾಗ ಅವರು ಎಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಗಮನ ನೀಡುತ್ತಾರೆ. ಎಂಬುದಾಗಿ ಲೀಡರ್‌ಶಿಪ್ ಕೋಚಿಂಗ್‌ನ ಸವನ್ನಾ ರಾಯತ್ ಹೇಳುತ್ತಾರೆ.
13. ಭವಿಷ್ಯದ ದೃಷ್ಟಿಕೋನಕ್ಕೆ ಫಾಸ್ಟ್-ಫಾರ್ವರ್ಡ್: ಹಣದ ಹರಿವು ಅಥವಾ ಗ್ರಾಹಕರ ಬಗ್ಗೆ ಚಿಂತೆ ಮಾಡುವುದಕ್ಕಿಂತ ಮುಂದೇನು ಮಾಡಬಹುದು ಎಂಬ ಬಗ್ಗೆ ಯೋಚಿಸಿ. ಇಲ್ಲಿಯವರೆಗೆ ವ್ಯಾಪಾರದಲ್ಲಿ ತೆಗೆದುಕೊಂಡಿರುವಂಥ ಕ್ರಮಗಳನ್ನು ಹಾಗೂ ನಿರ್ಧಾರಗಳನ್ನು ನೆನಪು ಮಾಡಿಕೊಳ್ಳಿ. ಅದನ್ನು ಅಳೆದು ತೂಗಿ ಮುಂದಿನ ಭವಿಷ್ಯದ ಬಗ್ಗೆ ಏನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಲೋಚಿಸಿ. ಇದರಿಂದ ಉದ್ಯಮದ ಮುಂದಿನ ಉತ್ತಮ ಹಂತಗಳನ್ನು ಅವರು ಲೆಕ್ಕಾಚಾರ ಮಾಡಬಹುದು ಎಂದು ಬ್ರಿಡ್ಜ್‌ವೆಲ್ LLC ಪ್ರೊಫೆಶನಲ್ ಸರ್ವೀಸ್‌ನ ಏಷ್ಯಾ ಬ್ರಿಬಿಸ್ಕಾ ಅಭಿಪ್ರಾಯ ಪಡುತ್ತಾರೆ.
14. ಹಣಕಾಸಿನ ಹೊರತಾದ ಗುರಿಗಳನ್ನು ಒಳಗೊಂಡಿರುವ ಯೋಜನೆ ರಚಿಸಿ: ಹಣದ ಚಿಂತೆ ನಿರಂತರವಾಗಿರುತ್ತದೆ ಎಂಬುದನ್ನು ಮನಗಾಣಿ. ಹಾಗಾಗಿ ಸರಳವಾದ ಯೋಜನೆಯನ್ನು ರಚಿಸುವುದರ ಮೇಲೆ ಗಮನಹರಿಸಿ. ಅದು ನಿಮಗೆ ಹಣಕಾಸಿನ ಹೊರತಾಗಿಯೂ ಹಲವು ಗುರಿಗಳನ್ನು ನೀಡುತ್ತದೆ. ಹಣವು ನಿಮ್ಮ ವ್ಯವಹಾರದ ಇತರ ಅಂಶಗಳಿಗೆ ಹೇಗೆ ಸಂಬಂಧಿಸಿದೆ ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ನೋಡಲು ಸಹಾಯ ಮಾಡುತ್ತದೆ. ಗ್ರಾಹಕರು, ಮಾರಾಟ, ಮಾರ್ಕೆಟಿಂಗ್, ಉತ್ಪನ್ನ ಮತ್ತು ಸೇವೆ, ಕಾರ್ಯಾಚರಣೆಗಳು ಮತ್ತು ಹಣಕಾಸು ಸೇರಿದಂತೆ 12-ತಿಂಗಳ ಯೋಜನೆಯನ್ನು ರಚಿಸುವ ಮೂಲಕ ಪ್ರಾರಂಭಿಸಿ ಎಂಬುದಾಗಿ ಕ್ರಿಸ್ ಅವೆರಿಲ್, ನಾರ್ತ್‌ಫೋರ್ಡ್ ಕ್ಯಾಪಿಟಲ್ ಸಲಹೆ ನೀಡುತ್ತಾರೆ.
15. ಖರ್ಚು ವೆಚ್ಚದ ಪತ್ತೆದಾರಿಕೆ ಮಾಡಿ: ನೀವು ಹಣದ ಬಗ್ಗೆ ಚಿಂತೆ ಮಾಡುತ್ತಿದ್ದರೆ ನಿಮ್ಮ ವ್ಯವಹಾರದಲ್ಲಿ ಪ್ರಸ್ತುತ ಏನಾಗುತ್ತಿದೆ ಎಂಬುದರ ತಿಳಿದುಕೊಳ್ಳಲು ಅದು ಸರಿಯಾದ ಸಮಯವಾಗಿದೆ. ಯಾವುದೇ ಕ್ರಮ ಕೈಗೊಳ್ಳುವ ಮೊದಲು ಮೂಲ ಕಾರಣಗಳ ಬಗ್ಗೆ ಸ್ಪಷ್ಟತೆ ಪಡೆಯುವುದು ಅತಿಮುಖ್ಯ. ಏನಾಗುತ್ತಿದೆ? ಯಾಕಾಗುತ್ತಿದೆ? ಯಾವಾಗ ಖರ್ಚಾಗುತ್ತಿದೆ? ಎಂಬುದರ ಬಗ್ಗೆ ಪತ್ತೆದಾರಿಕೆ ಕೆಲಸ ಮಾಡಿ. ಗಂಭೀರ ನಿರ್ಧಾರ ತೆಗದುಕೊಳ್ಳುವ ಮೊದಲು ಈ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳಿ ಎಂದು ಜೋಶುವಾ ಮಿಲ್ಲರ್ ಎಕ್ಸಿಕ್ಯೂಟಿವ್ ಕೋಚಿಂಗ್ ಜೋಶುವಾ ಮಿಲ್ಲರ ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ