ಪಾಟ್ನಾ: ಬಿಹಾರದ (Bihar) ಆರ್ಜೆಡಿ (RJD) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಅಬ್ದುಲ್ ಬಾರಿ ಸಿದ್ದಿಕಿ (Abdul Bari Siddiqui) ಅವರು ನಮ್ಮ ದೇಶದಲ್ಲಿ ವಾತವಾರಣ ಸರಿಯಿಲ್ಲದ ಕಾರಣ ತಮ್ಮ ಮಕ್ಕಳಿಗೆ ವಿದೇಶದಲ್ಲಿ ಕೆಲಸ ಮಾಡಿಕೊಂಡು, ಅಲ್ಲಿಯೇ ನೆಲೆಸುವಂತೆ ಸಲಹೆ ನೀಡಿರುವುದಾಗಿ ಹೇಳಿದ್ದರು. ಅಲ್ಲದೇ ದೇಶದಲ್ಲಿ ಮುಸ್ಲಿಮರ (Muslims) ವಿರುದ್ಧ ಪಕ್ಷಪಾತ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆ ಅಬ್ದುಲ್ ಬಾರಿ ಸಿದ್ದಿಕಿ ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ಅಲ್ಲದೇ ಈ ಹೇಳಿಕೆ ವಿರುದ್ಧ ಬಿಜೆಪಿ (BJP) ನಾಯಕ ವಕ್ತಾರ ನಿಖಿಲ್ ಆನಂದ್ (Nikhil Anand) ಅವರು, ಭಾರತದಲ್ಲಿ ರಾಜಕೀಯವಾಗಿ ಪಡೆಯುತ್ತಿರುವ ಸವಲತ್ತನ್ನು ಬಿಟ್ಟು ಬೇಕಾದ್ರೆ ಅಬ್ದುಲ್ ಬಾರಿ ಸಿದ್ದಿಕಿ ಅವರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ವ್ಯಂಗ್ಯವಾಡಿದ್ದಾರೆ.
ನನ್ನ ಮಕ್ಕಳಿಗೆ ವಿದೇಶದಲ್ಲಿಯೇ ಇರಲು ಹೇಳಿದ್ದೇನೆ
ಕಳೆದ ವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅಬ್ದುಲ್ ಬಾರಿ ಸಿದ್ದಿಕಿ ಮಾತನಾಡಿದರು. ಈ ವೇಳೆ ದೇಶದ ವಾತಾವರಣವನ್ನು ಉಲ್ಲೇಖಿಸುತ್ತಾ, ನನಗೆ ಹಾರ್ವರ್ಡ್ನಲ್ಲಿ ಓದುತ್ತಿರುವ ಒಬ್ಬ ಮಗ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಪದವಿದರೆಯಾಗಿರುವ ಮಗಳು ಇದ್ದಾರೆ. ಅವರಿಬ್ಬರಿಗೂ ಅಲ್ಲಿಯೇ ಕೆಲಸ ಹುಡುಕಿಕೊಂಡು, ಸಾಧ್ಯವಾದರೆ ಅಲ್ಲಿನ ಪೌರತ್ವವನ್ನು ಪಡೆದುಕೊಳ್ಳಿ ಎಂದು ತಿಳಿಸಿದ್ದೇನೆ ಎಂದಿದ್ದರು.
ನನ್ನ ಮಕ್ಕಳಿಗೆ ಇಲ್ಲಿ ನಿಭಾಯಿಸಿಕೊಂಡು ಹೋಗಲು ಸಾಧ್ಯವಿಲ್ಲ
ನನ್ನ ಮಕ್ಕಳಿಗೆ ಈ ಮಾತು ಹೇಳಿದಾಗ ಅವರು ನಂಬಲಿಲ್ಲ. ಆದರೆ ನಾನು ಇನ್ನೂ ಭಾರತದಲ್ಲಿದ್ದೇನೆ. ಆದರೆ ನನ್ನ ಮಕ್ಕಳಿಗೆ ಇಲ್ಲಿ ನಿಭಾಯಿಸಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಒಬ್ಬ ವ್ಯಕ್ತಿಗೆ ತನ್ನ ಸ್ವಂತ ಮಕ್ಕಳನ್ನು ತಾಯ್ನಾಡನ್ನು ಬಿಟ್ಟು ಹೋಗುವಂತೆ ಹೇಳುವುದು ಎಷ್ಟು ಕಷ್ಟ ಎಂದು ನೀವೇ ಊಹಿಸಬಹುದು ಎಂದು ಹೇಳಿದ್ದರು
ಅಬ್ದುಲ್ ಸಿದ್ದಿಕಿ ಬೇಕಾದ್ರೆ ಪಾಕಿಸ್ತಾನಕ್ಕೆ ಹೋಗಬಹುದು
ಮತ್ತೊಂದೆಡೆ ಅಬ್ದುಲ್ ಸಿದ್ದಿಕಿ ಹೇಳಿಕೆ ವಿರುದ್ಧ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ವಕ್ತಾರ ನಿಖಿಲ್ ಆನಂದ್, ಇದು ಭಾರತ ವಿರೋಧಿ ಹೇಳಿಕೆಯಾಗಿದೆ. ರಾಜಕೀಯ ನಾಯಕರಾಗಿ ಇಲ್ಲಿ ಅನುಭವಿಸುತ್ತಿರುವ ಸವಲತ್ತುಗಳನ್ನು ಬಿಟ್ಟು ಅವರು ಬೇಕಾದರೆ ಪಾಕಿಸ್ತಾನಕ್ಕೆ ಹೋಗಬೇಕು. ಯಾರೂ ಅವರನ್ನು ತಡೆಯುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಸಿದ್ದಿಕಿ ಅವರು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಆಪ್ತ ಸಹಾಯಕರಾಗಿದ್ದಾರೆ ಮತ್ತು ಅವರ ಮಾತುಗಳು ಅವರ ಪಕ್ಷದ ಮುಸ್ಲಿಂ ತುಷ್ಟೀಕರಣದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಟೀಕಿಸಿದ್ದಾರೆ.
ಇತ್ತೀಚಿನ ಛಪ್ರಾ ಹೂಚ್ನಲ್ಲಿ ಕಳ್ಳ ಬಟ್ಟಿ ದುರಂತ
ಇತ್ತೀಚೆಗಷ್ಟೇ ಬಿಹಾರದ ಛಪ್ರಾ ಹೂಚ್ನಲ್ಲಿ ಕಳ್ಳ ಬಟ್ಟಿ ಸಾರಾಯಿ ಕುಡಿದು ಅನೇಕ ಮಂದಿ ಸಾವನ್ನಪ್ಪಿದ್ದರು. ಈ ವೇಳೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಳ್ಳಬಟ್ಟಿ ಸಾರಾಯಿ ಕುಡಿದು ಸತ್ತವರಿಗೆ ಪರಿಹಾರ ನೀಡುವುದಿಲ್ಲ ಎಂದು ಘೋಷಿಸಿದ್ದರು. ನಾವು ಕುಡಿಯಬೇಡಿ ಎಂದು ಮನವಿ ಮಾಡುತ್ತಿದ್ದೇವೆ. ಕುಡಿದರೆ ಸಾಯುತ್ತೀರಾ. ಆದರೆ ಕುಡಿತದ ಪರವಾಗಿ ಮಾತನಾಡುವವರು ನಿಮಗೆ ಒಳ್ಳೆಯದನ್ನು ಮಾಡುವುದಿಲ್ಲ ಎಂದು ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: Nitish Kumar: ಕಳ್ಳಬಟ್ಟಿ ಕುಡಿದು ಸತ್ತವರಿಗೆ ಪರಿಹಾರ ಕೊಡಲ್ಲ: ನಿತೀಶ್ ಕುಮಾರ್
ಹೌದು, ಕಳ್ಳಬಟ್ಟಿ ಸೇವಿಸಿ ಸತ್ತವರಿಗೆ ಪರಿಹಾರ ನೀಡುವುದಿಲ್ಲ. ನಾವು ಕುಡಿಯಬೇಡಿ ಎಂದು ಮನವಿ ಮಾಡುತ್ತಿದ್ದೇವೆ. ಕುಡಿದರೆ ನೀವೇ ಸಾಯುತ್ತೀರಾ ಎಂದು ಹೇಳುತ್ತಿದ್ದೇವೆ. ಆದರೂ ಕುಡಿದು ಸತ್ತವರಿಗೆ ಪರಿಹಾರ ನೀಡುವುದಿಲ್ಲ ಎಂದು ನಿತೀಶ್ ಕುಮಾರ್ ತಿಳಿಸಿದ್ದರು. ಈ ಸುದ್ದಿ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು.