ಬೆಂಗಳೂರು (ಸೆಪ್ಟೆಂಬರ್ 01); "ಬಿಜೆಪಿಯವರು ಮಾತು ಮಾತಿಗೆ ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಏನ್ ಮಾಡ್ತು? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಈಗ ಬಿಜೆಪಿ ಮಾರಾಟ ಮಾಡುತ್ತಿರುವ ಎಲ್ಲಾ ಆಸ್ತಿಗಳು ಯಾರ ಕಾಲದಲ್ಲಿ ಆಗಿದ್ದು? ಎಂಬುದನ್ನು ಬಿಜೆಪಿಗರು ಮೊದಲು ತಿಳಿಯಲಿದೆ. ಕಾಂಗ್ರೆಸ್ ಕಾಲದ ಎಲ್ಲ ಆಸ್ತಿಗಳನ್ನೂ ಮಾರಾಟ ಮಾಡಿ ಬಿಜೆಪಿ ಇಡೀ ದೇಶವನ್ನು ಸ್ಮಶಾನ ಮಾಡುತ್ತಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಇತ್ತೀಚೆಗೆ ಎಲ್ಲಾ ಸಾರ್ವಜನಿಕ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ಅಲ್ಲದೆ, ಇನ್ನೂ ಸುಮಾರು 8 ಲಕ್ಷ ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಮಾರಾಟ ಮಾಡಲು ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ರಾಜ್ಯ ಬಿಜೆಪಿ ನಾಯಕರು ಆಗಿಂದಾಗ್ಗೆ ಕಾಂಗ್ರೆಸ್ 70 ವರ್ಷದಲ್ಲಿ ಏನು ಮಾಡಿದೆ? ಎಂದು ಪ್ರಶ್ನೆಗಳನ್ನು ಕೇಳುತ್ತಿರುವುದು ಸಾಮಾನ್ಯವಾಗಿ ಡಿ.ಕೆ. ಶಿವಕುಮಾರ್ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಬಿಜೆಪಿ ನಾಯಕರ ಇಂತಹ ಹೇಳಿಕೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಡಿ.ಕೆ. ಶಿವಕುಮಾರ್, "ಯಾರೋ ಸಚಿವರು ಕಾಂಗ್ರೆಸ್ ನವರು ಇಷ್ಟು ವರ್ಷ ಏನ್ ಮಾಡಿದ್ದಾರೆ ಅಂತ ಕೇಳಿದ್ದಾರೆ. 2700 ಕಿ.ಮೀ ಹೈವೇ, 28 ಕಿ.ಮೀ ಟ್ರಾನ್ಸ್ ಮಿಷನ್, 800 ಕಿ.ಮೀ ಗ್ಯಾಸ್ ಪೈಪ್ ಲೈನ್, 2.86 ಕೇಬಲ್ ಲೈನ್ ಅನ್ನು ಬಿಜೆಪಿಗರು ಮಾರೋಕೆ ಹೊರಟಿದ್ದಾರೆ. ಇದನ್ನೆಲ್ಲಾ ಇವರು ಮಾಡಿದ್ರಾ? 60 ವರ್ಷದಲ್ಲಿ ಇದನ್ನೆಲ್ಲಾ ಮಾಡಿದ್ದು ಕಾಂಗ್ರೆಸ್. ಈಗ ಇವರು ಜನರಿಗೆ ಸ್ಮಶಾನದ ಬೂದಿ ಕೊಡೋಕೆ ಹೊರಟಿದ್ದಾರೆ" ಎಂದು ಕಿಡಿಕಾರಿದ್ದಾರೆ.
ಇನ್ನೂ ಚಾಮರಾಜನಗರದ ಡಿಸಿ ಅವರ ನೋ ವ್ಯಾಕ್ಸಿನೇಷನ್ ನೋ ರೇಷನ್ ಹೇಳಿಕೆ ವಿರುದ್ಧ ಕಿಡಿಕಾರಿರುವ ಡಿ.ಕೆ. ಶಿವಕುಮಾರ್, "ರಾಜ್ಯದಲ್ಲಿ ಬಿಜೆಪಿ ವಿಭಿನ್ನ ಆಡಳಿತ ನಡೆಸುತ್ತಿದೆ. 36 ಜನ ಆಕ್ಸಿಜನ್ ಇಲ್ಲದೆ ಸಾವನ್ನಪ್ಪಿದ್ರು ಸಹ ಯಾರು ಸತ್ತಿಲ್ಲವೆಂದು ಸಂಸತ್ ನಲ್ಲಿ ಉತ್ತರ ಕೊಡ್ತಾರೆ. ಹೈಕೋರ್ಟ್ ಕಮಿಟಿ ಕೂಡ ಸಾವನ್ನ ವಿವರಿಸಿದೆ. ಸತ್ತವರಿಗೆ 2 ಲಕ್ಷ ಪರಿಹಾರ ಸರ್ಕಾರ ನೀಡಿದೆ. ನಾವು ತಲಾ ಒಂದೊಂದು ಲಕ್ಷ ನೀಡಿದ್ದೇವೆ.
36 ಜನ ಸತ್ರೂ ಸರ್ಕಾರ ಒಬ್ಬರ ಮೇಲೂ ಕ್ರಮಕೈಗೊಂಡಿಲ್ಲ. ಅಲ್ಲಿನ ಡಿಸಿಯನ್ನ ಮೇಲಕ್ಕೇರಿಸಿಕೊಂಡು ಕುಳಿತಿದ್ದಾರೆ. ಇಡೀ ದೇಶಕ್ಕೆ ಕೇಂದ್ರ ಲಸಿಕೆ ನೀಡಬೇಕು. ಆದರೆ, ಲಸಿಕೆ ವಿತರಿಸೋದ್ರಲ್ಲೂ ಮೂರು ಭಾಗ ಮಾಡಿದ್ರು. ಬಡವರಿಗೆ ಫ್ರೀ ವ್ಯಾಕ್ಸಿನೇಶನ್ ಕೊಡಬೇಕು, ಆದರೆ ಈಗ ನೋ ವ್ಯಾಕ್ಸಿನೇಶನ್,ನೋ ರೇಷನ್,ನೋ ಪೆನ್ಶನ್ ಅಂತಾರೆ. ಮೊದಲು ಚಾಮರಾಜನಗರ ಜಿಲ್ಲಾಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು. ಆ ಡಿಸಿ ಮೇಲೆ ಕೂಡಲೇ ಕ್ರಮಕೈಗೊಳ್ಳಬೇಕು" ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿ ಆದೇಶದ ವಿರುದ್ಧವೂ ಕಿಡಿಕಾರಿರುವ ಡಿ.ಕೆ. ಶಿವಕುಮಾರ್, "ಮೈಸೂರು ವಿವಿ ಉಪಕುಲಪತಿ ಹೆಣ್ಣು ಮಕ್ಕಳು ಸಂಜೆ 6 ಗಂಟೆಯ ನತರ ಕ್ಯಾಂಪಸ್ನಲ್ಲಿ ಓಡಾಡಬಾರದು ಎಂದು ಆದೇಶ ಹೇರುತ್ತಾರೆ. ನಂತರ ಅದನ್ನು ಹಿಂಪಡೆಯುತ್ತಾರೆ. ಇವೆಲ್ಲ ಎಂಥಾ ಮನಸ್ಥಿತಿ? ಮರ್ಡರ್ ಮಾಡಿ ತಪ್ಪಾಯ್ತು ಅಂದ್ರೆ ಕ್ಷಮಿಸಬೇಕಾ? ಹೀಗಾಗಿ ಸರ್ಕಾರ ಕೂಡಲೇ ಉಪ ಕುಲಪತಿಯನ್ನು ಸಸ್ಪೆಂಡ್ ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ನೋ ವ್ಯಾಕ್ಸಿನೇಷನ್ ನೋ ರೇಷನ್; ವಿವಾದ ಭುಗಿಲೆದ್ದ ಬಳಿಕ ಹೇಳಿಕೆ ಹಿಂಪಡೆದ ಚಾಮರಾಜನಗರ ಡಿಸಿ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ