Mangaluru News: ಮನೆ ಬಾಗಿಲಿಗೆ ಬರುತ್ತೆ ಜನನ-ಮರಣ ಪ್ರಮಾಣಪತ್ರ! ಹೇಗೆ ತರಿಸಿಕೊಳ್ಳೋದು?

ದಕ್ಷಿಣ ಕನ್ನಡದ ಸಾರ್ವಜನಿಕರೇ, ಸ್ಥಳೀಯ ಸಂಸ್ಥೆ ಅಥವಾ ಸರಕಾರಿ ಆಸ್ಪತ್ರೆಗಳಿಂದ ನೇರವಾಗಿ ಸ್ಪೀಡ್ ಪೋಸ್ಟ್ ಮೂಲಕವೇ ಜನನ/ ಮರಣ ಪ್ರಮಾಣ ಪತ್ರ ಮನೆ ಬಾಗಿಲಿಗೆ ತರಿಸಿಕೊಳ್ಳಿ.

ಭಾರತೀಯ ಅಂಚೆ

ಭಾರತೀಯ ಅಂಚೆ

 • Share this:
  ಮಂಗಳೂರು: ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಮಾದರಿಯೆನಿಸಿಕೊಳ್ಳುವ ಯೋಜನೆಯೊಂದನ್ನು ಮಂಗಳೂರು ಅಂಚೆ ವಿಭಾಗವು ಹಮ್ಮಿಕೊಂಡಿತ್ತು. ಇದೀಗ ಈ ಸೇವೆಗೆ ಉತ್ತಮ ಸ್ಪಂದನೆಯೂ ವ್ಯಕ್ತವಾಗತೊಡಗಿದೆ. ಮುಂದೆ ರಾಜ್ಯಾದ್ಯಂತ ಈ ಸೇವೆ ಲಭ್ಯವಾಗುವ ದಿನಗಳು ಕೂಡಾ ದೂರವಿಲ್ಲ. ಅಷ್ಟಕ್ಕೂ ಮಂಗಳೂರು ಅಂಚೆ ವಿಭಾಗ (Mangaluru Post Division) ಆರಂಭಿಸಿರುವ ಈ ಸೇವೆ ಏನೆಂದರೆ, ಮನೆ ಬಾಗಿಲಿಗೆ ಜನನ ಹಾಗೂ ಮರಣ ಪ್ರಮಾಣ ಪತ್ರ ತಲುಪಿಸುವುದು. ಹಾಗಾಗಿ ಮಂಗಳೂರು (Mangaluru News) ಅಂಚೆ ವಿಭಾಗ ವ್ಯಾಪ್ತಿಯಲ್ಲಿ ಬರುವ ಯಾವುದೇ ಆಸ್ಪತ್ರೆಯಲ್ಲಿ ಜನಿಸಿದರೂ, ಅದಕ್ಕೆ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಂದ ಸುಲಭವಾಗಿ ಮನೆ ಬಾಗಿಲಿಗೆ ಜನನ/ ಮರಣ ಪ್ರಮಾಣ ಪತ್ರವನ್ನು ಸ್ಪೀಡ್ ಪೋಸ್ಟ್ (Speed Post) ಮೂಲಕ ಪಡೆಯಬಹುದಾಗಿದೆ.

  ಮಂಗಳೂರು ನಗರ ವೈದ್ಯಕೀಯ ಸೇವೆಗೆ ಹೆಸರುವಾಸಿ. ಹಾಗಾಗಿ ನೆರೆಯ ಕೇರಳ ರಾಜ್ಯದಿಂದ ಹಿಡಿದು ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದ ಭಾಗದ ಮಂದಿ ಹೆರಿಗೆಗಾಗಿ ಈ ಭಾಗಕ್ಕೆ ಆಗಮಿಸುವುದು ಸಾಮಾನ್ಯ.

  ಹೇಗಿದೆ ಈ ಸೇವೆ?
  ಹಾಗೆಯೇ ವಿವಿಧ ಕಾರಣಗಳಿಗಾಗಿ ಒಂದೊಮ್ಮೆ ಮರಣ ಸಂಭವಿಸಿದ್ದಲ್ಲಿ, ಅಂತಹವರು ಮರಣ ಪ್ರಮಾಣ ಪತ್ರಕ್ಕಾಗಿ ನಗರದ ಸ್ಥಳೀಯ ಸಂಸ್ಥೆಗಳಿಂದಲೋ ಅಥವಾ ಸರಕಾರಿ ಆಸ್ಪತ್ರೆಯಿಂದಲೋ ಪ್ರಮಾಣ ಪತ್ರಗಳನ್ನು ಪಡೆಯಬೇಕಾಗಿರುತ್ತದೆ.

  ಇನ್ಮುಂದೆ ಇರಲ್ಲ ಅಲೆದಾಟ
  ಆದರೆ ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗ ಇದಕ್ಕಾಗಿ ನಡೆಯುತ್ತಿದ್ದ ಅಲೆದಾಟವನ್ನು ತಪ್ಪಿಸಿದೆ. ಸುಲಭವಾಗಿ ಮನೆ ಬಾಗಿಲಿಗೆ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ವಿಳಾಸಕ್ಕೆ ಜನನ ಇಲ್ಲವೇ ಮರಣ ಪ್ರಮಾಣ ಪತ್ರಗಳನ್ನು ತಲುಪಿಸುತ್ತಿದೆ.

  ಅರ್ಜಿ ಸಲ್ಲಿಸುವುದು ಹೇಗೆ?
  ಜನನ ಅಥವಾ ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವವರು ಖಾಸಗಿ ಆಸ್ಪತ್ರೆಗಳಾದರೆ ಸ್ಥಳೀಯ ಸಂಸ್ಥೆ, ಸರಕಾರಿ ಆಸ್ಪತ್ರೆಗಳಲ್ಲಾದರೆ ಬಹುತೇಕ ಅಲ್ಲಿಯೇ ಜನನ/ಮರಣ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಅರ್ಜಿದಾರರು ಸಂಬಂಧಿಸಿದ ಪ್ರಮಾಣ ಪತ್ರಕ್ಕೆ ಅರ್ಜಿ ಭರ್ತಿ ಮಾಡಿ ಕೊಡುವ ವೇಳೆಯೇ ಸ್ಪೀಡ್ ಪೋಸ್ಟ್ ಮೂಲಕ ಪ್ರಮಾಣ ಪತ್ರ ಪಡೆಯುವುದಾಗಿ ಮತ್ತೊಂದು ಕಿರು ಅರ್ಜಿಯನ್ನು ಸಲ್ಲಿಸಬೇಕು. ಹಾಗಿದ್ದಲ್ಲಿ ನಿಗದಿತ ದಿನಗಳಲ್ಲಿ ಅಂಚೆ ಮೂಲಕ ನೀವು ಬಯಸಿದ ಪ್ರಮಾಣ ಪತ್ರ ಪಡೆಯಬಹುದಾಗಿದೆ.

  ಕನಿಷ್ಟ ಅಂಚೆ ವೆಚ್ಚ
  ಹೀಗೆ ಅರ್ಜಿ ತುಂಬಿ ಪ್ರಮಾಣ ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ ಬಯಸುವವರು ತಮ್ಮ ಪ್ರಮಾಣ ಪತ್ರ ಪಡೆಯುವ ವೇಳೆ ಪೋಸ್ಟ್ ಮ್ಯಾನ್ ಮೂಲಕ ನಿಗದಿಪಡಿಸಿದ ₹100 ಅನ್ನು ನೀಡಿ ಪಡೆಯಬೇಕಾಗುತ್ತದೆ.

  ಸ್ಪೀಡ್ ಪೋಸ್ಟ್​ನಿಂದ ಲಾಭವೇನು?
  ಸಾಮಾನ್ಯವಾಗಿ ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಮಗು ಜನಿಸಿದ್ದಲ್ಲಿ, ಜನನ ಪ್ರಮಾಣ ಪತ್ರವನ್ನು ಮಂಗಳೂರು ಮಹಾನಗರ ಪಾಲಿಕೆಯಿಂದ ಪಡೆಯಬೇಕಾಗುತ್ತದೆ.

  ಹಾಗೆ ಮಗುವಿನ ಜನನ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಎರಡೆರಡು ಬಾರಿ ಕಚೇರಿಗೆ ತೆರಳಬೇಕಿತ್ತು. ಏಕೆಂದರೆ, ಮೊದಲಿಗೆ ಒಮ್ಮೆ ಅರ್ಜಿ ಸಲ್ಲಿಸಿ ಹೋದರೆ, ಮತ್ತೊಮ್ಮೆ ಪ್ರಮಾಣ ಪತ್ರ ಪಡೆಯಲು ಆಗಮಿಸಬೇಕಿತ್ತು. ಅದರಲ್ಲೂ ಸರ್ವರ್ ಸಮಸ್ಯೆಗಳು ಉಂಟಾದರೆ ಮತ್ತೊಂದು ಬಾರಿ ಹೋಗುವ ಪ್ರಮೇಯವೂ ಎದುರಾಗುತ್ತಿತ್ತು. ಆದರೆ, ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕ ಶ್ರೀಹರ್ಷ ಇವರಿಂದ ಮೂಡಿದ ಅದ್ಭುತ ಪರಿಕಲ್ಪನೆ ಈಗ ಅನಗತ್ಯ ಅಲೆದಾಟವನ್ನು ತಪ್ಪಿಸಿದೆ.

  ಉತ್ತಮ ರೆಸ್ಪಾನ್ಸ್
  ಇದೇ ವರ್ಷದ ಮಾರ್ಚ್ 21ರಂದು ಈ ವಿನೂತನ ಸೇವೆಯನ್ನು ಮಂಗಳೂರು ಅಂಚೆ ವಿಭಾಗವು ಆರಂಭಿಸಿದ್ದು ಈಗಾಗಲೇ ಗುಜರಾತ್, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ಕರ್ನಾಟಕ, ತೆಲಂಗಾಣ ಹಾಗೂ ತಮಿಳುನಾಡು ಸೇರಿದಂತೆ 7 ರಾಜ್ಯಗಳ 34 ಜಿಲ್ಲೆಗಳಿಗೆ ಸಂಬಂಧಿಸಿದ 1048 ಜನನ/ ಮರಣ ಪ್ರಮಾಣ ಪತ್ರಗಳನ್ನು ಕಳುಹಿಸಿಕೊಡುವ ಮೂಲಕ ಮಂಗಳೂರು ಅಂಚೆ ವಿಭಾಗವು ದಾಖಲೆ ಬರೆದಿದೆ. ಜೊತೆಗೆ ಇದೇ ಮಾದರಿಯ ಸೇವೆ ಮುಂದೆ ರಾಜ್ಯಾದ್ಯಂತ ಆರಂಭಿಸುವಂತಾಗಲು ಅಂಚೆ ಇಲಾಖೆ ಮುಂದಾಗಿದ್ದಕ್ಕೂ ಸ್ಪೂರ್ತಿಯಾಗಿದೆ.

  ಇದನ್ನೂ ಓದಿ: Krishna River Origin Video: ಕೃಷ್ಣಾ ನದಿ ಉಗಮದ ಅಪರೂಪದ ವಿಡಿಯೋ ಇಲ್ಲಿದೆ, ಕಣ್ತುಂಬಿಸಿಕೊಳ್ಳಿ!

  ಎಲ್ಲೆಲ್ಲೆ ಸೇವೆ ಲಭ್ಯ?
  ಮಂಗಳೂರು ಅಂಚೆ ವಿಭಾಗವು ಆರಂಭಿಕ ಹಂತದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಜೊತೆ ಒಡಂಬಡಿಕೆ ನಡೆಸಿಕೊಳ್ಳುವ ಮೂಲಕ ಇಂತಹ ವಿನೂತನ ಕಾರ್ಯಕ್ರಮ ಆರಂಭಿಸಿತ್ತು. ಇದೀಗ ಈ ಸೇವೆಯು ಮಂಗಳೂರಿನ ಜಿಲ್ಲಾ ಆಸ್ಪತ್ರೆಗಳಾದ ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಲೇಡಿ ಗೋಶನ್ ಸರಕಾರಿ ಆಸ್ಪತ್ರೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಾದ ಕೋಟೆಕಾರ್ ಪಟ್ಟಣ ಪಂಚಾಯತ್, ಕಿನ್ನಿಗೋಳಿ ಪಟ್ಟಣ ಪಂಚಾಯತ್, ಬಜ್ಪೆ ಪಟ್ಟಣ ಪಂಚಾಯತ್, ಮುಲ್ಕಿ ಪಟ್ಟಣ ಪಂಚಾಯತ್, ಸೋಮೇಶ್ವರ ನಗರ ಪುರಸಭೆ ಹಾಗೂ ಉಳ್ಳಾಲ ನಗರ ಪುರಸಭೆಗಳಿಗೆ ವಿಸ್ತರಿಸಲಾಗಿದೆ.

  ಇದನ್ನೂ ಓದಿ: Belagavi Bags: ಯೂರೋಪ್​ ಮಹಿಳೆಯರ ಬೆನ್ನ ಮೇಲೆ ನಮ್ಮ ಬೆಳಗಾವಿ!

  ಪ್ರಸ್ತುತ ಈ ಸೇವೆಯನ್ನು ಪುತ್ತೂರು ಅಂಚೆ ವಿಭಾಗದ ವ್ಯಾಪ್ತಿಯಲ್ಲಿರುವ ಪುತ್ತೂರು ನಗರ ಸಭೆ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಹಾಗೂ ಸುಳ್ಯ ಪಟ್ಟಣ ಪಂಚಾಯತ್​ಗಳಲ್ಲೂ ಆರಂಭಿಸಿರುವುದು ಈ ಸೇವೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

  ಹೆಚ್ಚಿನ ಮಾಹಿತಿಗಾಗಿ
  ಆಸಕ್ತರು ಈ ಕುರಿತು ಯಾವುದೇ ಹೆಚ್ಚಿನ ಮಾಹಿತಿ ಪಡೆಯಲು ಮಂಗಳೂರು ಅಂಚೆ ವಿಭಾಗದ ಕಚೇರಿ ದೂರವಾಣಿ 0824-2218400 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
  Published by:guruganesh bhat
  First published: