ನಮ್ಮ ಕರ್ನಾಟಕದಲ್ಲಿ (Karnataka) ತುಂಬಾನೇ ಪ್ರೇಕ್ಷಣೀಯ ಸ್ಥಳಗಳಿದ್ದು (Tourist Place) ಮತ್ತು ಭವ್ಯವಾದ ಕೋಟೆಗಳು (Forts) ಸಹ ಇವೆ. ಕೆಲವು ಇನ್ನೂ ಒಳ್ಳೆಯ ಸ್ಥಿತಿಯಲ್ಲಿದ್ದರೆ, ಇನ್ನೂ ಕೆಲವು ಸ್ಥಳಗಳು ಸರಿಯಾದ ಸೌಲಭ್ಯಗಳಿಲ್ಲದೆ ಮತ್ತು ಅವುಗಳನ್ನು ಹೆಚ್ಚು ಪ್ರವಾಸಿಗರು ನೋಡಲು ಬಾರದೇ ಹಾಗೆಯೇ ಅವನತಿಯ ಅಂಚಿಗೆ ಹೋಗುತ್ತಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲಿಯೂ ಸಹ ನಾವು ಅಂತಹ ಒಂದು ಭವ್ಯವಾದ ಕೋಟೆಯ ಬಗ್ಗೆ ಹೇಳಲಿದ್ದೇವೆ ನೋಡಿ. ಚಳಿಗಾಲದ (Winter) ಶುರುವಾಯಿತು ಎಂದರೆ ಸಾಕು ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ಇತರ ರಾಜ್ಯಗಳಿಂದ ಪ್ರವಾಸಿಗರು ಭವ್ಯವಾದ ಚಿತ್ರದುರ್ಗ ಕೋಟೆಯನ್ನು(Chitradurga Fort) ನೋಡಲು ಇಲ್ಲಿಗೆ ಬರಲು ಪ್ರಾರಂಭಿಸುತ್ತಾರೆ.
ಹೌದು.. ಚಿತ್ರದುರ್ಗದ ಕೋಟೆ ಭವ್ಯವಾದ ಕೋಟೆಯಾಗಿದ್ದು, ನೋಡಲು ತುಂಬಾನೇ ಸ್ಥಳಗಳನ್ನು ಒಳಗೊಂಡಿದೆ ಅಂತ ಹೇಳಬಹುದು. ಇದನ್ನು ಸ್ಥಳೀಯವಾಗಿ ಕಲ್ಲಿನ ಕೋಟೆ ಎಂದು ಕರೆಯಲಾಗುತ್ತದೆ.
ಕೋಟೆಯಲ್ಲಿನ ಸೌಲಭ್ಯಗಳು ಪ್ರವಾಸಿಸ್ನೇಹಿ ಆಗಿಲ್ಲವಂತೆ!
ಸುಮಾರು 11ನೇ ಶತಮಾನದಲ್ಲಿ ನಿರ್ಮಿಸಲಾದ ಕೋಟೆಯ ನಿರ್ವಹಣೆಯು ಪ್ರವಾಸಿ ಸ್ನೇಹಿಯಾಗಿಲ್ಲ. ದಿನ ಬೆಳಗಾದರೆ ಸಾಕು ಕೋಟೆಯ ದ್ವಾರದ ಬಳಿಯೇ ಅನೇಕ ಪ್ರವಾಸಿಗರು ಪ್ರವೇಶ ಟಿಕೆಟ್ ಅನ್ನು ಪಡೆದುಕೊಳ್ಳುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ.
ಕೋಟೆಯನ್ನು ನೋಡಿಕೊಳ್ಳುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ), ಕಲ್ಲಿನ ಕೋಟೆಯ ಪ್ರವೇಶದ್ವಾರದಲ್ಲಿ ಪ್ರವಾಸಿಗರು 20 ರೂಪಾಯಿ ಕೊಟ್ಟು ಪ್ರವೇಶ ಟಿಕೆಟ್ ಪಡೆಯಲು ಕ್ಯೂಆರ್(QR) ಕೋಡ್ ಅನ್ನು ಸ್ಕ್ಯಾನ್ ಮಾಡಲು ಕೇಳುವ ಬೋರ್ಡ್ ಅನ್ನು ಹಾಕಿದ್ದಾರೆ.
ಡಿಜಿಟಲ್ ಪಾವತಿ ವ್ಯವಸ್ಥೆ
ಭ್ರಷ್ಟಾಚಾರವನ್ನು ತಡೆಯಲು ಡಿಜಿಟಲ್ ಪಾವತಿ ವಿಧಾನವನ್ನು ಪರಿಚಯಿಸಲಾಗಿದ್ದರೂ, ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪ್ರವೇಶ ಟಿಕೆಟ್ಗಳನ್ನು ಭದ್ರಪಡಿಸುವುದು ಅನೇಕ ಪ್ರವಾಸಿಗರನ್ನು, ವಿಶೇಷವಾಗಿ ಗ್ರಾಮೀಣ ಪ್ರದೇಶದವರನ್ನು ನಿರಾಶೆಗೊಳಿಸಿದೆ.
ಅವರು ಸ್ಮಾರ್ಟ್ಫೋನ್ಗಳನ್ನು ಹೊಂದಿಲ್ಲದ ಕಾರಣ ಟಿಕೆಟ್ಗಳನ್ನು ಪಡೆದುಕೊಳ್ಳಲು ತುಂಬಾನೇ ಕಷ್ಟಪಡುತ್ತಾರೆ ಎಂದು ದೂರುತ್ತಾರೆ.
ಈ ಸಮಸ್ಯೆಯ ಬಗ್ಗೆ ಪ್ರವಾಸಿಗರು ಏನ್ ಹೇಳ್ತಾರೆ?
ಸ್ಮಾರ್ಟ್ಫೋನ್ ಹೊಂದಿರುವವರಿಗೂ ಇದು ಸುಲಭವಾದ ಕೆಲಸವಾಗುತ್ತಿಲ್ಲ ಬಿಡಿ. ಅನೇಕ ಪ್ರವಾಸಿಗರು ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಯಿಂದ ಬೆಂಬಲವನ್ನು ಪಡೆಯುವುದನ್ನು ನೋಡಬಹುದು.
ಕೋಟೆಯಲ್ಲಿ ಅಂತರ್ಜಾಲದ ಅಲಭ್ಯತೆ ಮತ್ತು ಕಳಪೆ ನೆಟ್ ಸಂಪರ್ಕ ಮತ್ತು ಟಿಕೆಟ್ ಡೌನ್ಲೋಡ್ ಮಾಡಲು ಭದ್ರತಾ ಸಿಬ್ಬಂದಿಗಳ ಬೆಂಬಲವನ್ನು ಪಡೆಯಬೇಕಾಗಿರುವುದರಿಂದ ಪ್ರವಾಸಿಗರು ಕೋಟೆಗೆ ಪ್ರವೇಶಿಸಲು ವಿಳಂಬವಾಗುತ್ತಿದೆ ಎಂದು ಕೋಲಾರದ ಪ್ರವಾಸಿ ಕೆ.ರಮೇಶ್ ಹೇಳುತ್ತಾರೆ.
ಮುದ್ರಿ ತ್ ಟಿಕೆಟ್ ನೀಡಲು ಮನವಿ
"ಎಲ್ಲಾ ರೀತಿಯ ಪ್ರವಾಸಿಗರ ಅನುಕೂಲಕ್ಕಾಗಿ ಅಧಿಕಾರಿಗಳು ಕಂಪ್ಯೂಟರ್ ಬಳಕೆ ಮಾಡಿ ಮುದ್ರಿತ ಟಿಕೆಟ್ ನೀಡಬೇಕು’’ ಎಂದು ಶಿವಮೊಗ್ಗದ ಪ್ರವಾಸಿಗರೊಬ್ಬರು ಹೇಳುತ್ತಾರೆ.
ಪ್ರವಾಸಿಗರ ನೂಕುನುಗ್ಗಲು ಇದ್ದಾಗ ಮಾತ್ರ ಟಿಕೆಟ್ ನೀಡಲು ಕಂಪ್ಯೂಟರ್ ಬಳಸುತ್ತಾರೆ ಎಂದು ಎಎಸ್ಐ ಅಧಿಕಾರಿಗಳು ಸಮರ್ಥಿಸಿಕೊಂಡರು.
ಈ ಅಧಿಕಾರಿಗಳ ಪ್ರಕಾರ, ಪ್ರವಾಸಿಗರ ಸಂಖ್ಯೆ ವಾರದ ದಿನಗಳಲ್ಲಿ 500 ರಿಂದ 1,000 ಮತ್ತು ರಜಾದಿನಗಳು ಮತ್ತು ವಾರಾಂತ್ಯಗಳಲ್ಲಿ 1,500 ಕ್ಕಿಂತ ಹೆಚ್ಚು ಇರುತ್ತದೆ.
ಇದನ್ನೂ ಓದಿ: Kolar: ಬೈಕ್ಗೆ MLC ರವಿಕುಮಾರ್ ಕಾರ್ ಡಿಕ್ಕಿ; ಮಾನವೀಯತೆ ಇಲ್ಲವಾ? ಸ್ಥಳೀಯರಿಂದ ಕ್ಲಾಸ್
ಕೋಟೆಯಲ್ಲಿ ಕುಡಿಯುವ ನೀರು ಮತ್ತು ಇತರ ಸೌಕರ್ಯಗಳು ಹೇಗಿವೆ?
ವಿಶಾಲವಾದ ಕೋಟೆಯಲ್ಲಿ ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿಗಳಿಗೆ ಮತ್ತು ಅಲ್ಲಿಗೆ ಬರುವ ಪ್ರವಾಸಿಗರಿಗೆ ಕುಡಿಯುವ ನೀರಿನ ಸೌಲಭ್ಯ ಸಹ ಅಷ್ಟಾಗಿಲ್ಲ.
ಕೋಟೆಯು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ ಮತ್ತು ಒಳಗೆ ಭೇಟಿ ನೀಡಲು ಎರಡು ಡಜನ್ಗಿಂತಲೂ ಹೆಚ್ಚು ಸ್ಥಳಗಳಿದ್ದು, ಅಧಿಕಾರಿಗಳು ಕೋಟೆಯೊಳಗೆ ಕೆಲವು ಸ್ಥಳಗಳಲ್ಲಿ ನೀರಿನ ಫಿಲ್ಟರ್ ಕ್ಯಾನ್ಗಳನ್ನು ಹಾಕಿದ್ದಾರೆ, ಆದರೆ ಅದರಲ್ಲಿ ಅನೇಕ ಕ್ಯಾನ್ ಗಳು ಖಾಲಿ ಇರುತ್ತವೆ ಎಂದು ಪ್ರವಾಸಿಗರು ಹೇಳುತ್ತಾರೆ.
ನೀರಿನ ಸೌಲಭ್ಯದ ಕೊರತೆ
“ಕೋಟೆಯ ಮೆಟ್ಟಿಲುಗಳನ್ನು ಹತ್ತಿದ ನಂತರ ಪ್ರವಾಸಿಗರು ನೀರು ಕೇಳುತ್ತಾರೆ. ಆದರೆ ಅನೇಕ ಸಾರಿ ಅವರಿಗೆ ನೀರು ಕೊಡಲಾಗದೆ ನಿರಾಸೆ ಮೂಡಿಸಿದ್ದೇವೆ’ ಎಂದು ಭದ್ರತಾ ಸಿಬ್ಬಂದಿಯೊಬ್ಬರು ತಿಳಿಸಿದರು.
ಇದನ್ನೂ ಓದಿ: Basanagowda Patil Yatnal: ಜೋಕರ್ ಮಾತನ್ನು ಜೋಕ್ ಆಗಿ ತೆಗೆದುಕೊಳ್ಳಿ; ಯತ್ನಾಳ್ಗೆ ವಚನಾನಂದ ಸ್ವಾಮೀಜಿ ತಿರುಗೇಟು
ಒಟ್ಟು 14 ಭದ್ರತಾ ಸಿಬ್ಬಂದಿ ಮೂರು ಪಾಳಿಯಲ್ಲಿ ಕೋಟೆಯನ್ನು ಹಗಲು-ರಾತ್ರಿ ಕಾವಲು ಕಾಯುತ್ತಿದ್ದಾರೆ. ಕೋಟೆಯೊಳಗೆ ಹಿಡಿಂಬೇಶ್ವರ ದೇವಾಲಯ, ಗಣೇಶ ದೇವಾಲಯ, ವೇಣುಗೋಪಾಲ ಸ್ವಾಮಿ ದೇವಾಲಯ ಮತ್ತು ಏಕನಾಥೇಶ್ವರಿ ದೇವಿಯ ದೇವಾಲಯಗಳಿವೆ.
“ಈ ದೇವಾಲಯಗಳಲ್ಲಿ ಅರ್ಚಕರಿಲ್ಲ ಮತ್ತು ದೇವಾಲಯಗಳನ್ನು ಮುಚ್ಚಿರುವುದು ನಿರಾಶಾದಾಯಕವಾಗಿದೆ" ಎಂದು ಮಂಗಳೂರಿನ ಪ್ರವಾಸಿಗರೊಬ್ಬರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ