ಬೆಂಗಳೂರು(ಆ.28): ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತಾಗಿ ಡಿಜಿಪಿ ಪ್ರವೀಣ್ ಸೂದ್ ಪತ್ರಿಕಾಗೋಷ್ಠಿ ನಡೆಸಿ ಎಳೆ-ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಅಭಿನಂದನೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ನಮ್ಮ ಪೊಲೀಸರು ಯಶಸ್ವಿಯಾಗಿ ಕಾರ್ಯಚರಣೆ ನಡೆಸಿ ಐದು ಜನರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನ ಈಗಾಗಲೇ ಡಿಜಿ ಪ್ರವೀಣ್ ಸೂದ್ ಹೇಳಿದ್ದಾರೆ. ನಾನು ನಮ್ಮ ಪೊಲೀಸರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರದ ಪರವಾಗಿ ಪೊಲೀಸ್ ಇಲಾಖೆಯನ್ನು ಹೃತ್ಪೂರ್ವಕವಾಗಿ ಅಭಿನಂದಿಸ್ತೇನೆ ಎಂದು ಹೇಳಿದರು.
ಮುಂದುವರೆದ ಅವರು, ಇದೊಂದು ಅಮಾನವೀಯ ಕೃತ್ಯ. ಘಟನೆ ನಡೆದಾಗ ಆತಂಕ ಮನೆ ಮಾಡಿತ್ತು. ಸಿಎಂ ಮತ್ತು ನಾನು ಪೊಲೀಸರಿಗೆ ಸೂಚನೆ ಕೊಟ್ಟು, ಆರೋಪಿಗಳ ಶೀಘ್ರ ಬಂಧನಕ್ಕೆ ಸೂಚಿಸಿದ್ದೆವು. ಆರೋಪಿಗಳನ್ನು ಶೀಘ್ರ ಬಂಧಿಸ್ತಾರೆಂಬ ವಿಶ್ವಾಸ ನಮಗೆ ಇತ್ತು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ತಂಡಗಳಿಗೆ ಐದು ಲಕ್ಷ ಬಹುಮಾನ ನೀಡಲಾಗಿದೆ. ಇಂಥ ವಿಕೃತ ಮನಸಿನ ವ್ಯಕ್ತಿಗಳಿಗೆ ಪೊಲೀಸ್ ಇಲಾಖೆ ಒಳ್ಳೆಯ ಸಂದೇಶ ರವಾನೆ ಮಾಡಿದೆ ಎಂದರು.
ಇದನ್ನೂ ಓದಿ:Mysuru Gang Rape Case: ಮೈಸೂರು ಗ್ಯಾಂಗ್ ರೇಪ್ ಪ್ರಕರಣ; ಐವರು ಆರೋಪಿಗಳು ಅರೆಸ್ಟ್, ಮಾಹಿತಿ ಬಿಚ್ಚಿಟ್ಟ ಡಿಜಿಪಿ
ಸಂತ್ರಸ್ತೆ ಹೇಳಿಕೆ ಕೊಡುವ ಪರಿಸ್ಥಿತಿಯಲ್ಲಿಲ್ಲ. ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಪೊಲೀಸರು ತನಿಖೆ ನಡೆಸಿದ್ದಾರೆ. ನಾನು ಮೈಸೂರಲ್ಲಿ ಸಭೆಗಳನ್ನೇ ಮಾಡುತ್ತಿದ್ದರೆ, ಪೊಲೀಸರು ತನಿಖೆ ಮಾಡಲು ಆಗ್ತಿರಲಿಲ್ಲ. ತಮಿಳುನಾಡಿನಿಂದ ಆರೋಪಿಗಳು ನಿತ್ಯ ಬಂದು ಹೋಗ್ತಿದ್ರು ಎಂದು ಹೇಳಿದರು.
ಅತ್ಯಾಚಾರ ಪ್ರಕರಣ ಮರುಕಳಿಸದಂತೆ ವಿಶೇಷ ಬಂದೋಬಸ್ತ್ ಮಾಡುತ್ತೇವೆ. ಮುಂದೆ ಚಾಮುಂಡಿ ಬೆಟ್ಟದ ಸುತ್ತಮುತ್ತ ಪೊಲೀಸ್ ಗಸ್ತು ವ್ಯವಸ್ಥೆ ಮಾಡುತ್ತೇವೆ. ಚಾಮುಂಡಿ ಬೆಟ್ಟದಲ್ಲಿ ವಿಶೇಷ ಗಸ್ತು ವಾಹನ ನಿಯೋಜಿಸಲು ಸೂಚನೆ ನೀಡಿದ್ದೇನೆ. ಪ್ರತಿ ನಿತ್ಯ ಗಸ್ತು ವಾಹನ ಒಡಾಡಲಿದೆ. ಚಾಮುಂಡಿ ಬೆಟ್ಟದಲ್ಲಿ ರಾತ್ರಿ 7 ಗಂಟೆ ನಂತರ ಸಂಚಾರ ಮಾಡುವವರಿಗೆ ರಕ್ಷಣೆ ಕೊಡುವಂತೆ ಸೂಚಿಸಲಾಗಿದೆ ಎಂದರು.
ಇನ್ನು, ಸಂತ್ರಸ್ಥ ಯುವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮಹಾರಾಷ್ಟ್ರಕ್ಕೆ ತೆರಳಿರುವ ವಿಚಾರ ನನಗೆ ಗೊತ್ತಿಲ್ಲ ಎಂದು ಗೃಹ ಸಚಿವರು ಹೇಳಿದರು. ಜೊತೆಗೆ ಸಂತ್ರಸ್ತೆಯ ಕುಟುಂಬದ ಸದಸ್ಯರಿಗೆ ಹೇಳಿಕೆ ಕೊಡುವಂತೆ ಮನವೊಲಿಕೆ ಮಾಡ್ತಿದ್ದೇವೆ ಎಂದು ಹೇಳಿದರು.
ಮೈಸೂರಿಗೆ ತಮಿಳುನಾಡು, ಕೇರಳದಿಂದ ಬರುವವರ ಸಂಖ್ಯೆ ಜಾಸ್ತಿ ಇದೆ. ಆದರೆ ಬಾರ್ಡರ್ನಲ್ಲಿ ಬರೋರನ್ನ ಹೋಗೋರನ್ನ ತಡಯೋದಕ್ಕೆ ಆಗೋದಿಲ್ಲ. ಮೈಸೂರಿನ ಕಾಲೇಜು ಕ್ಯಾಂಪಸ್ಗಳಲ್ಲಿ 6 ಗಂಟೆ ನಂತರ ವಿದ್ಯಾರ್ಥಿಗಳು ಓಡಾಡುವ ವಿಚಾರಕ್ಕೆ, ಮೈಸೂರಿನ ಪೊಲೀಸರು ಈ ಬಗ್ಗೆ ಮಾಹಿತಿ ನೀಡುತ್ತಾರೆ ಎಂದರು.
ಇದನ್ನೂ ಓದಿ:Mysuru Gang Rape Case: ರೇಪ್ ಕೇಸ್ ಸಂಬಂಧ ನಾಲ್ವರು ಶಂಕಿತರು ವಶಕ್ಕೆ; ಅಜ್ಞಾತ ಸ್ಥಳದಲ್ಲಿ ವಿಚಾರಣೆ
’’ಪ್ರಕರಣವನ್ನು ಭೇದಿಸಲು ಏಳು ತಂಡಗಳನ್ನು ರಚಿಸಿ, ಕಾರ್ಯಾಚರಣೆಗೆ ಇಳಿಸಲಾಗಿತ್ತು. ಸಂತ್ರಸ್ಥೆಯಿಂದ ಯಾವುದೇ ಹೇಳಿಕೆ ಸಿಕ್ಕಿಲ್ಲ. ಆಕೆಯ ಸ್ನೇಹಿತನಿಂದ ಸ್ವಲ್ಪ ಮಾಹಿತಿ ಸಿಕ್ಕಿತ್ತು. ಆದರೆ ಅದು ಅಪೂರ್ಣವಾಗಿತ್ತು. ಬಳಿಕ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದೆವು. ಆಗ ಆರೋಪಿಗಳು ಸಿಕ್ಕಿ ಬಿದ್ದರು. ನನಗೆ ಇದನ್ನು ಘೋಷಣೆ ಮಾಡೋಕೆ ಖುಷಿ ಆಗ್ತಿದೆ ಅಂತ ಹೇಳೋಕೆ ಆಗಲ್ಲ. ಈ ಕೇಸ್ನಲ್ಲಿ ಒಟ್ಟು 5 ಮಂದಿಯನ್ನು ಬಂಧಿಸಲಾಗಿದೆ. ಹೈಕೋರ್ಟ್ ಆರ್ಡರ್ ಆಗಿರುವ ಕಾರಣಕ್ಕೆ ಈ ಸಂಬಂಧ ಹೆಚ್ಚು ಹೇಳಲು ಸಾಧ್ಯವಿಲ್ಲ’’ ಎಂದು ಡಿಜಿಪಿ ಪ್ರವೀಣ್ ಸೂದ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ