Headache Remedy: ನೆಮ್ಮದಿ ಹಾಳು ಮಾಡ್ತಿರೋ ತಲೆನೋವನ್ನು ಓಡಿಸಲು ಮನೆಮದ್ದು ಇಲ್ಲಿದೆ

Home Remedies for Headache: ಸಮರ್ಪಕ ಪ್ರಮಾಣದಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಎಲ್ಲ ರೀತಿಯಿಂದಲೂ ಉತ್ತಮ. ಒಮ್ಮೊಮ್ಮೆ ನಿರ್ಜಲೀಕರಣದಿಂದಲೂ ತಲೆ ನೋವು ಬರುತ್ತದೆ. ಹಾಗಾಗಿ ದೇಹಕ್ಕೆ ಅವಶ್ಯಕವಾದಷ್ಟು ಪ್ರಮಾಣದಲ್ಲಿ ನೀರು ಕುಡಿಯುತ್ತಿರಿ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಲೆ ನೋವು (Headache) ಎಂಬುದು ಇಂದಿನ ದಿನಮಾನಗಳಲ್ಲಿ ಸರ್ವೇ ಸಾಮಾನ್ಯವಾದ ಸಮಸ್ಯೆಯಾಗಿದೆ (Problem). ಪ್ರತಿಯೊಬ್ಬರೂ ಒಂದಾದರೂ ಒಂದು ದಿನ ತಲೆ ನೋವನ್ನು ಅನುಭವಿಸಿಯೇ ಇರುತ್ತಾರೆ. ಆದರೆ, ಯಾರೊಬ್ಬರೂ ನಮಗೆ ತಲೆ ನೋವು ಬರಬೇಕೆಂದು ಕಿಂಚಿತ್ತೂ ಬಯಸುವುದಿಲ್ಲ, ಕಾರಣ ಇದು ಬಂತೆಂದರೆ ಅ ಸಮಯದ ಕೆಲಸಗಳಿಗೆಲ್ಲ ತಿಲಾಂಜಲಿ ಇಟ್ಟ ಹಾಗೆಯೇ, ತಲೆನೋವು ನಿಮ್ಮ ದಿನಚರಿಯ ಚಟುವಟಿಕೆಗಳಿಗೆಲ್ಲ ಬ್ರೇಕ್​ (Break)  ಹಾಕಿಬಿಡುತ್ತದೆ, ಸಾಕಷ್ಟು ಕಿರಿಕಿರಿ ಉಂಟು ಮಾಡುವುದರಲ್ಲಿ ಸಂಶಯವೇ ಇಲ್ಲ.

ಆದರೆ, ಇಂದಿನ ರಭಸದ ಜೀವನದಲ್ಲಿ ಕೆಲಸ ಕಾರ್ಯಗಳ ಒತ್ತಡಗಳು ಎಷ್ಟಿರುತ್ತವೆ ಎಂದರೆ ತಲೆನೋವು ಬರದೆ ಇರಲಾರದು. ಆದರೆ, ತಲೆನೋವು ಬಂದಿದೆ ಎಂದು ಸುಮ್ಮನೆ ಕೂರಲು ಸಹ ಆಗುವುದಿಲ್ಲ. ಬದಲಾಗಿ ಅದನ್ನು ಶೀಘ್ರವಾಗಿ ಶಮನ ಮಾಡಿಕೊಂಡು ಮುಂದೆ ಸಾಗಬೇಕಾಗುತ್ತದೆ. ಆದರೆ ಅದನ್ನು ಶಮನ ಗೊಳಿಸುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಚಿಂತಿಸದಿರಿ, ಕೆಲವು ಮನೆಮದ್ದುಗಳಿಂದ ತಲೆ ನೋವಿಗೆ ಬೈಬೈ ಹೇಳಬಹುದು, ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕವೂ ತಲೆನೋವನ್ನು ಹೋಗಲಾಡಿಸಬಹುದು. ಹಾಗಾದರೆ, ಬನ್ನಿ ಈ ಲೇಖನದಲ್ಲಿ ತಲೆನೋವು ಹಾಗೂ ಅದನ್ನು ಬಗೆಹರಿಸಿಕೊಳ್ಳಬಹುದಾದ ವಿಧಾನಗಳ ಕುರಿತು ತಿಳಿಯೋಣ.

ತಲೆ ನೋವುಗಳಲ್ಲಿನ ಪ್ರಕಾರಗಳು

ಪ್ರಮುಖವಾಗಿ ಮೂರು ರೀತಿಯ ತಲೆನೋವುಗಳನ್ನು ಮನುಷ್ಯ ಸಾಮಾನ್ಯವಾಗಿ ಅನುಭವಿಸುತ್ತಾನೆ. ಅವುಗಳೆಂದರೆ

ಒತ್ತಡಗಳಿಂದ ಬರುವ ತಲೆನೋವು : ಇದು ಎಲ್ಲೆಡೆ ಕಂಡುಬರುವ ಬಹುತೇಕ ಜನರು ಅನುಭವಿಸುವ ಸಾಮಾನ್ಯ ತಲೆನೋವು. ಕೆಲಸದ ಒತ್ತಡಗಳು ಅಥವಾ ಇನ್ನೀತರೆ ಒತ್ತಡಗಳಿಂದ ಸಾಂದರ್ಭಿಕವಾಗಿ ಇದು ಬರುತ್ತದೆ. 

ಮೈಗ್ರೇನ್ : ಈ ರೀತಿಯ ತಲೆನೋವು ಸಂವೇದನಾಶೀಲವಾಗಿರುತ್ತದೆ. ವಾಂತಿ, ದೊಡ್ಡದಾದ ಸದ್ದು ಅಥವಾ ಕೆಲವೊಮ್ಮೆ ಪ್ರಖರವಾದ ಬೆಳಕುಗಳಿಂದಲೂ ಪ್ರಚೋದನೆಗೊಂಡು ಇದು ನಿರಂತರವಾಗಿ ಬರುತ್ತಿರುತ್ತದೆ. 

ಕ್ಲಸ್ಟರ್ ತಲೆನೋವು : ಇದು ನಿಯಮಿತವಾಗಿ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಪುನರಾವರ್ತಿತವಾಗುವಂತಹ ತಲೆನೋವಾಗಿದೆ.

ತಲೆನೋವು ಬರಲು ಕಾರಣಗಳು

ತಲೆನೋವು ಇಂಥದ್ದೆ ನಿರ್ದಿಷ್ಟ ಕಾರಣಗಳಂತೇನಿಲ್ಲ. ಇದು ಹಲವು ಸ್ಥಿತಿಗತಿಗಳಿಗನುಸಾರವಾಗಿ ಬರುತ್ತದೆ

* ಸಾಕಷ್ಟು ದಿನನಿತ್ಯದ ಒತ್ತಡಗಳಿಂದ ಅಥವಾ ದೀರ್ಘವಾದ ಚಿಂತೆಗಳಿಂದ ಸಾಮಾನ್ಯವಾಗಿ ತಲೆನೋವು ಬರುತ್ತದೆ

* ಮೆದುಳಿನಲ್ಲಿ ಕೆಲವು ಮಾನಸಿಕವಾದ ಬದಲಾವಣೆಗಳಿಂದಾಗಿ ತಲೆನೋವು ಬರುತ್ತದೆ

* ರಕ್ತ ನಾಳಗಳ ಹಿಗ್ಗುವಿಕೆ ಹಾಗೂ ಕುಗ್ಗುವಿಕೆಗಳಿಂದಲೂ ತಲೆನೋವು ಬರಬಹುದು

* ಕೆಲವು ನ್ಯೂರಾನುಗಳ ಅಸಮರ್ಪಕ ವ್ಯವಹಾರಗಳಿಂದಲೂ ತಲೆನೋವು ಬರಬಹುದು

* ಮೈಗ್ರೇನ್ ಗಳಿಗೆ ಅನುವಂಶೀಯ ಕಾರಣಗಳು ಇರಬಹುದು

* ಸಿಗರೆಟ್ ಸೇದುವುದು ಹಾಗೂ ಮದ್ಯ ಸೇವನೆ ಕ್ಲಸ್ಟರ್ ಪ್ರಕಾರದ ತಲೆನೋವು ಬರಲು ಕಾರಣವಾಗಬಹುದು

ತಲೆನೋವಿಗಾಗಿ ತ್ವರಿತ ಮನೆಮದ್ದುಗಳು

ಕ್ಯಾರೇವೆ ಬೀಜಗಳು : ಒಣಗಿದ ಕ್ಯಾರೇವೆ ಬೀಜಗಳನ್ನು ಚೆನ್ನಾಗಿ ಹುರಿದು ಅದನ್ನು ಮುಸ್ಲೀನ್ ಅಥವಾ ಕೈವಸ್ತ್ರದಲ್ಲಿ ಹಾಕಿ ಚೆನ್ನಾಗಿ ಬೀಗಿಯಿರಿ. ನಂತರ ಅದರ ಘಾಟನ್ನು ಮೂಗಿನಿಂದ ತೆಗೆದುಕೊಳ್ಳಿ. ಇದರಿಂದ ತಲೆನೋವು ಮಾಯವಾಗುವುದು.

ದಾಲ್ಚಿನಿ ಪುಡಿ : ಎರಡು ಚಮಚಗಳಷ್ಟು ದಾಲ್ಚಿನಿ/ಚಕ್ಕೆಯ ಪುಡಿಯನ್ನು ತೆಗೆದುಕೊಂಡು ಅದನ್ನು ಒಂದುವರೆ ಕಪ್ಪಿನಷ್ಟು ಹಾಲಿನಲ್ಲಿ ಬೆರೆಸಿ ಎರಡು ನಿಮಿಷಗಳ ವರೆಗೆ ಕುದಿಸಿ. ಅದರಲ್ಲಿ ಒಂದು ಚಮಚ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಕಲಿಸಿ. ನಂತರ ಇದನ್ನು ದಿನಕ್ಕೆ ಎರಡು ಬಾರಿ ಸೇವಿಸಿ. ತಲೆನೋವಿನಿಂದ ಮುಕ್ತಿ ದೊರೆಯುತ್ತದೆ.

ಸೇಬು : ನಿಮಗೆ ಅತಿಯಾದ ತಲೆನೋವಿತ್ತೆಂದರೆ ಇದನ್ನು ಮಾಡಬಹುದು. ಚೆನ್ನಾಗಿ ತೊಳೆದ ಸೇಬು ಹಣ್ಣನ್ನು ಕತ್ತರಿಸಿ ಅದರ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ ತಿನ್ನಿ. ನಿತ್ಯ ಬೆಳಗ್ಗೆ ಇದರ ಸೇವನೆಯನ್ನು ಕನಿಷ್ಠ ಒಂದು ವಾರದವರೆಗೆ ಮಾಡುವುದರಿಂದ ತಲೆ ನೋವು ಕಡಿಮೆಯಾಗುತ್ತದೆ.

ಇದನ್ನೂ ಓದಿ: ಟ್ರಾವೆಲ್​ ಸಮಯದಲ್ಲಿ ಹೀಗೆ ಮಾಡಿದ್ರೆ ನಿಮಗೆ ತಲೆನೋವು ಕಾಡಲ್ಲ

ಎಣ್ಣೆ ಹಚ್ಚಿಕೊಳ್ಳುವುದು : ರೋದ್ ಮೆರಿ ಎಣ್ಣೆಯು ತಲೆ ನೋವಿಗೆ ಉತ್ತಮ ಪರಿಹಾರ ಎಂದು ಹೇಳಲಾಗಿದೆ. ಈ ಎಣ್ಣೆಯನ್ನು ಇಲ್ಲವೆ ಯಾವುದಾದರೂ ಪೇನ್ ಬಾಲ್ಮ್ ಅನ್ನು ತಲೆ ನೋವಿರುವ ಜಾಗಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಇದರಿಂದ ತಲೆ ನೋವು ಬೇಗನೆ ಮಾಯವಾಗುತ್ತದೆ. ಮೈಗ್ರೇನ್ ಇರುವವರು ಇದನ್ನು ಸರಳವಾಗಿ ಬಳಸಬಹುದು.

ಶುಂಠಿ: ಶುಂಠಿಯು ತನ್ನ ಉರಿಯೂತ ವಿರೋಧಿ ತತ್ವಗಳಿಗೆ ಹೆಸರುವಾಸಿಯಾಗಿದೆ. ಇದನ್ನು ತಲೆನೋವು ಪರಿಹರಿಸುವ ಚಿಕಿತ್ಸೆಯಲ್ಲೂ ಬಳಸಬಹುದಾಗಿದೆ. ಕುದಿಯುತ್ತಿರುವ ನೀರಿಗೆ ಸ್ವಲ್ಪ ಚಹಾದ ಎಲೆಗಳು ಹಾಗೂ ಶುಂಠಿಯನ್ನು ಸೇರಿಸಿ. ಅದು ಚೆನ್ನಾಗಿ ಕುದ್ದ ನಂತರ ಅದನ್ನು ಶೋಧಿಸಿಡಿ. ಅದು ತಂಪಾದ ನಂತರ ಆ ದ್ರಾವಣವನ್ನು ಕುಡಿಯಿರಿ. ತಲೆ ನೋವು ಮಾಯವಾಗುತ್ತದೆ.

ಲ್ಯಾವೆಂಡರ್ ಎಣ್ಣೆ: ಸಾಮಾನ್ಯವಾಗಿ ಬರುವ ತಲೆನೋವು ಹಾಗೂ ಮೈಗ್ರೇನ್ ತಲೆನೋವಿಗೆ ಇದನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಈ ಎಣ್ಣೆಯ ತತ್ವವನ್ನು ಮೂಗಿನಿಂದ ಒಳಗೆಳೆದುಕೊಳ್ಳಿ ಇಲ್ಲವೆ ನೋವಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಇದನ್ನು ಮೂಗಿನಿಂದ ಒಳಗೆಳೆದುಕೊಳ್ಳಬೇಕೆಂದರೆ ಈ ಎಣ್ಣೆಯ ಎರಡರಿಂದ ಮೂರು ಹನಿಗಳನ್ನು ಬಿಸಿ ನೀರಿನಲ್ಲಿ ಹಾಕಿ ಅದರ ಹಬೆಯನ್ನು ತೆಗೆದುಕೊಳ್ಳಿ.

ತುಳಸಿ : ಆಯುರ್ವೇದದಲ್ಲಿ ತುಳಸಿಗೆ ಸಾಕಷ್ಟು ಮಹತ್ವ ನೀಡಲಾಗಿದೆ. ತುಳಸಿಯು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು ಹಲವು ಬಗೆಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಅದರಂತೆ ತಲೆನೋವನ್ನು ಪರಿಹರಿಸಲೂ ಸಹ ತುಳಸಿಯನ್ನು ಬಳಸಬಹುದಾಗಿದೆ. ಮಸಲ್ ಗಳು ಬಿಗಿಯಾಗುವುದರಿಂದಲೂ ತಲೆನೋವು ಬರುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ತುಳಸಿಯ ಎಣ್ಣೆಯು ಬಿಗಿಯಾದ ಮಸಲ್ ಗಳು ರಿಲ್ಯಾಕ್ಸ್ ಆಗುವಂತೆ ಮಾಡುವ ಮೂಲಕ ತಲೆ ನೋವನ್ನು ಪರಿಹರಿಸುತ್ತದೆ.

ಸಾಧ್ಯವಾದಷ್ಟು ಇವುಗಳನ್ನು ಸೇವಿಸದಿರಿ: ಚೊಕೊಲೇಟ್, ಹುಳಿ ಕೆನೆ, ಪೀನಟ್ ಬಟರ್ ಹಾಗೂ ಕ್ಯಾಫಿನೇಟೆಡ್ ಪಾನೀಯಗಳಾದ ಕೋಲಾ, ಚಹಾ, ಕಾಫಿ ತಲೆ ನೋವು ಬರಲು ಪ್ರಚೋದಿಸುತ್ತವೆ. ನಿಮಗೆ ಅವುಗಳಿಂದೇನಾದರೂ ತಲೆ ನೋವು ಬರುತ್ತಿದ್ದರೆ, ಅವುಗಳ ಸೇವನೆ ನಿಲ್ಲಿಸಿ.

ಆಪಲ್ ಸೈಡರ್ ವಿನೆಗಾರ್ : ಅರ್ಧ ಕಪ್ಪಿನಷ್ಟು ಆಪಲ್ ಸೈಡರ್ ವಿನೆಗಾರ್ ಅನ್ನು ಅರ್ಧ ಕಪ್ಪಿನಷ್ಟು ನೀರಿಗೆ ಬೆರೆಸಿ ಪಾತ್ರೆಯಲ್ಲಿ ಹಾಕಿ ಮುಚ್ಚಳದಿಂದ ಮುಚ್ಚಿ ಕುದಿಸಿ. ಅದು ಬಿಸಿಯಾದ ನಂತರ ಉರಿಯನ್ನು ನಿಲ್ಲಿಸಿ ಒಂದು ನಿಮಿಷ ಹಾಗೇ ಇಡಿ. ನಂತರ ನಿಧಾನವಾಗಿ ಮುಚ್ಚಳ ಸರಿಸುತ್ತ ಅದರಿಂದ ಬರುವ ಹಬೆಯನ್ನು ಮೂಗಿನಿಂದ ಒಳಗೆಳೆದುಕೊಳ್ಳಿ. ನಿಮಗೆ ಸೈನಸ್ ತಲೆನೋವಿದ್ದರೆ ಇದರಿಂದ ತ್ವರಿತವಾಗಿ ಉಪಶಮನ ಸಿಗುತ್ತದೆ.

ಸೂಪ್ : ಸೂಪನ್ನು ತಯಾರಿಸಿ ಅದರಲ್ಲಿ ಕರಿಮೆಣಸಿನ ಪುಡಿಯನ್ನು ಬೆರೆಸಿ ಅದನ್ನು ಸೇವಿಸಿ. ಅದು ನಿಮ್ಮ ಮುಚ್ಚಿರುವ ಮೂಗು ತ್ವರಿತವಾಗಿ ತೆಗೆಯುವಂತೆ ಮಾಡಿ ಅದರಿಂದುಂಟಾಗಿರುವ ತಲೆ ನೋವನ್ನು ಬೇಗನೆ ಪರಿಹರಿಸುತ್ತದೆ.

ಇದನ್ನೂ ಓದಿ: ಆರೋಗ್ಯಕ್ಕೆ ಒಳ್ಳೆಯದು ಅಂತ ಇವುಗಳನ್ನು ಅತಿಯಾಗಿ ತಿಂದ್ರೆ ಅಪಾಯವೇ ಜಾಸ್ತಿ

ವಿಶ್ರಾಂತಿ : ಸಾಕಷ್ಟು ಜನರಲ್ಲಿ ಅದರಲ್ಲೂ ವಿಶೇಷವಾಗಿ ಗರ್ಭವತಿಯರಲ್ಲಿ ದಣಿವು/ಆಯಾಸ ಹಾಗೂ ನಿದ್ರೆಯ ಕೊರತೆ ತಲೆ ನೋವು ಬರಲು ಕಾರಣವಾಗುತ್ತದೆ. ಹಾಗಾಗಿ ಹೆಚ್ಚು ವಿಶ್ರಾಂತಿ ಪಡೆಯಿರಿ ಮತ್ತು ಸಮರ್ಪಕವಾಗಿ ನಿದ್ರೆ ಮಾಡಿ. ಇದರಿಂದ ತಲೆನೋವು ಕಡಿಮೆಯಾಗುತ್ತದೆ.

ನೀರು ಕುಡಿಯಿರಿ : ಸಮರ್ಪಕ ಪ್ರಮಾಣದಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಎಲ್ಲ ರೀತಿಯಿಂದಲೂ ಉತ್ತಮ. ಒಮ್ಮೊಮ್ಮೆ ನಿರ್ಜಲೀಕರಣದಿಂದಲೂ ತಲೆ ನೋವು ಬರುತ್ತದೆ. ಹಾಗಾಗಿ ದೇಹಕ್ಕೆ ಅವಶ್ಯಕವಾದಷ್ಟು ಪ್ರಮಾಣದಲ್ಲಿ ನೀರು ಕುಡಿಯುತ್ತಿರಿ. 

ಕೆಲವು ಕ್ರಮಗಳು

* ಅಪಚನದಿಂದಲೂ ಸಾಕಷ್ಟು ಜನರಿಗೆ ತಲೆನೋವು ಬರುತ್ತದೆ. ಹಾಗಾಗಿ ಹೆಚ್ಚು ತರಕಾರಿ ಹಾಗೂ ಫೈಬರ್ ಅಂಶವಿರುವ ಆಹಾರ ಸೇರಿಸಿ ಪಾಚನ ಕ್ರಿಯೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಿ. ಇದರಿಂದಲೂ ತಲೆನೋವು ಹೋಗುತ್ತದೆ.   

* ವ್ಯಾಯಾಮ, ನಡಿಗೆ ಅಂತಹ ದೈಹಿಕ ಚಟುವಟಿಕೆಗಳನ್ನು ನಿಯಮಿತವಾಗಿ ಮಾಡುತ್ತಿರಿ. ಇದರಿಂದಲೂ ತಲೆ ನೋವು ಬರುವುದಿಲ್ಲ.

* ನಿಯಮಿತವಾಗಿ ಆರೋಗ್ಯಕರವಾದ ಅದರಲ್ಲೂ ಆರ್ಗ್ಯಾನಿಕ್ ಆಹಾರ ಸೇವಿಸುತ್ತಿರಿ. ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಸಮತೋಲನದಲ್ಲಿರಿಸುತ್ತದೆ. ಇದರಿಂದಲೂ ತಲೆ ನೋವು ಬರುವುದಿಲ್ಲ.  
Published by:Sandhya M
First published: